ರಾಹುಲ್‌ ವಿಚಾರಣೆ: ದೇಶಾದ್ಯಂತ ರಾಜಭವನ ಚಲೋ- ಇಡಿ, ಪೊಲೀಸ್‌ ವಿರುದ್ಧ ಕಾಂಗ್ರೆಸ್‌ ರೋಷಾವೇಷ

*  ಹೈದರಾಬಾದ್‌ನಲ್ಲಿ ಬೈಕ್‌ ಭಸ್ಮ, ಬಸ್‌ಗಳಿಗೆ ಕಲ್ಲೆಸೆತ
*  ಇಂದು ದೇಶಾದ್ಯಂತ ಡೀಸಿ ಕಚೇರಿ ಬಳಿ ಪ್ರತಿಭಟನೆ
*  ಪೊಲೀಸ್‌ ಕಾಲರ್‌ ಹಿಡಿದ ರೇಣುಕಾ 
 

Congress Held Protest Entire India Against Delhi Police grg

ನವದೆಹಲಿ(ಜೂ.17): ಜಾರಿ ನಿರ್ದೇಶನಾಲಯ (ಇ.ಡಿ.)ದಿಂದ ತನ್ನ ನಾಯಕ ರಾಹುಲ್‌ ಗಾಂಧಿ ವಿಚಾರಣೆ ವಿರೋಧಿಸಿ, ಎಐಸಿಸಿ ಕೇಂದ್ರ ಕಚೇರಿಗೆ ಬುಧವಾರ ಪೊಲೀಸರ ಬಲವಂತದ ಪ್ರವೇಶ ಮಾಡಿದ್ದಾರೆ ಮತ್ತು ಸಂಸದರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಗುರುವಾರ ಕರ್ನಾಟಕ ಸೇರಿ ದೇಶವ್ಯಾಪಿ ಪ್ರತಿಭಟನೆ ನಡೆಸಿದೆ. 

ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್‌ ನಾಯಕರು ರಾಜಭವನಕ್ಕೆ ಮುತ್ತಿಗೆ ಹಾಕಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಪ್ರತಿಭಟನೆ ವೇಳೆ ಹೈದರಾಬಾದ್‌ನಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದ ಮತ್ತು ಮಾಜಿ ಕೇಂದ್ರ ಸಚಿವೆ ರೇಣುಕಾ ಚೌಧರಿ ಅವರು ಪೊಲೀಸರೊಬ್ಬರ ಕೊರಳಪಟ್ಟಿಗೆ ಕೈಹಾಕಿದ ಘಟನೆ ನಡೆದಿದೆ. ಉಳಿದಂತೆ ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದು ಹೊರತುಪಡಿಸಿದರೆ ಎಲ್ಲೆಡೆ ಪ್ರತಿಭಟನೆ ಶಾಂತಿಯುತವಾಗಿತ್ತು.
ಇನ್ನು ಇದೇ ಪ್ರತಿಭಟನೆಯ ಮುಂದಿನ ಭಾಗವಾಗಿ ಶುಕ್ರವಾರ ದೇಶವ್ಯಾಪಿ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಕಾಂಗ್ರೆಸ್‌ ಹಮ್ಮಿಕೊಂಡಿದೆ. ಈ ಮೂಲಕ ದೆಹಲಿ ಮತ್ತು ರಾಜ್ಯಗಳ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಶಕ್ತಿ ಪ್ರದರ್ಶನವನ್ನು ಜಿಲ್ಲೆಗಳಿಗೂ ವಿಸ್ತರಿಸುವ ಯತ್ನ ಮಾಡಿದೆ.

ಅಗ್ನಿಪಥ ಯೋಜನೆ, ಸೇನಾ ಶಿಸ್ತಿನೊಂದಿಗೆ ರಾಜಿ ಮಾಡಿಕೊಳ್ಳಬೇಡಿ: ರಾಹುಲ್‌ ಟೀಕೆ

ರಾಜಭವನಕ್ಕೆ ಮುತ್ತಿಗೆ:

ನ್ಯಾಷನಲ್‌ ಹೆರಾಲ್ಡ್‌ ಕೇಸಲ್ಲಿ ರಾಹುಲ್‌ ಗಾಂಧಿ ವಿಚಾರಣೆ ವಿರೋಧಿಸಿ ಬುಧವಾರ ನಡೆದ ಪ್ರತಿಭಟನೆ ವೇಳೆ ದಿಲ್ಲಿ ಪೊಲೀಸರು ಎಐಸಿಸಿ ಕಚೇರಿ ಪ್ರವೇಶಿಸಿದ್ದಾರೆ. ಜೊತೆಗೆ ಪ್ರತಿಭಟನಾ ನಿರತ ಸಂಸದರು, ನಾಯಕರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಗುರುವಾರ ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆಯಾ ರಾಜ್ಯಗಳ ನಾಯಕರು ರಾಜಭವನಕ್ಕೆ ಮುತ್ತಿಗೆ ಹಾಕಿ ದಿಲ್ಲಿ ಪೊಲೀಸರು, ಇ.ಡಿ. ಮತ್ತು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದಲ್ಲದೇ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಮಹಾರಾಷ್ಟ್ರ, ಅಸ್ಸಾಂ, ಪುದುಚೇರಿ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ, ರಾಜಸ್ಥಾನ, ಗೋವಾ, ಹಿಮಾಚಲ ಪ್ರದೇಶಗಳಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ ಬೀಳಿಸಿ ರಾಜಭವನ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಕೆಲ ಸಮಯದ ನಂತರ ಬಿಡುಗಡೆ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾಜ್‌ರ್‍ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕರ್ನಾಟಕ, ಗುಜರಾತ್‌, ನಾಗಾಲ್ಯಾಂಡ್‌ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪ್ರತಿಭಟನೆ ಶಾಂತಿಯುತವಾಗಿತ್ತು.

ಹೈದರಾಬಾದ್‌ನಲ್ಲಿ ಹಿಂಸಾಚಾರ:

ಎಐಸಿಸಿ ಕಚೇರಿಗೆ ಪೊಲೀಸರ ಪ್ರವೇಶ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಹೈದರಾಬಾದ್‌ನಲ್ಲಿ ಹಿಂಸಾಚಾರ ಸಂಭವಿಸಿದೆ. ಪ್ರತಿಭಟನಾಕಾರರು ರಾಜಭವನದ ಎದುರು ಬೈಕಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಸ್‌ಗಳ ಮೇಲೆ ಹತ್ತು ನಿಂತು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಗಳಲ್ಲಿ ಹಲವು ವಾಹನಗಳು ಜಖಂಗೊಂಡಿವೆ.

ಪ್ರತಿಭಟನೆ ವೇಳೆ ಪೊಲೀಸರ ಕಾಲರ್ ಹಿಡಿದು ಎಳೆದಾಡಿದ ಕೈ ನಾಯಕಿ ರೇಣುಕಾ ಚೌಧರಿ

ವಿಚಾರಣೆಗೆ 3 ದಿನ ವಿನಾಯಿತಿ ಕೇಳಿದ ರಾಹುಲ್‌ ಗಾಂಧಿ

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಮೂರು ದಿನಗಳ ವಿಚಾರಣೆ ಎದುರಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ನಡೆಯಬೇಕಿರುವ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಎಂದು ಇ.ಡಿ.ಗೆ ಮನವಿ ಮಾಡಿದ್ದಾರೆ. ತಾವು ತಾಯಿಯ ಆರೈಕೆ ಮಾಡಬೇಕಾಗಿದೆ ಎಂಬ ಕಾರಣ ನೀಡಿದ್ದಾರೆ.

ಪೊಲೀಸರ ವಿರುದ್ಧ ಸ್ಪೀಕರ್‌, ಸಭಾಪತಿಗೆ ಕಾಂಗ್ರೆಸ್ಸಿಗರ ದೂರು

ನವದೆಹಲಿ: ಪ್ರತಿಭಟನಾನಿರತ ಸಂಸದರ ಮೇಲೆ ದೆಹಲಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಲೋಕಸಭೆ ಸ್ಪೀಕರ್‌ ಹಾಗೂ ರಾಜ್ಯಸಭೆ ಸಭಾಪತಿಗಳಿಗೆ ಕಾಂಗ್ರೆಸ್‌ ದೂರು ಸಲ್ಲಿಸಿದೆ. ಶುಕ್ರವಾರ ಈ ಬಗ್ಗೆ ರಾಷ್ಟ್ರಪತಿ ಅವರನ್ನೂ ಭೇಟಿ ಮಾಡಲು ತೀರ್ಮಾನಿಸಿದೆ.

ಪೊಲೀಸ್‌ ಕಾಲರ್‌ ಹಿಡಿದ ರೇಣುಕಾ!

ಹೈದರಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್‌ ಹಿರಿಯ ನಾಯಕಿ ರೇಣುಕಾ ಚೌಧರಿ ಪೊಲೀಸ್‌ ಅಧಿಕಾರಿಯೊಬ್ಬರ ಕಾಲರ್‌ ಹಿಡಿದದ್ದು ವಿವಾದಕ್ಕೀಡಾಗಿದೆ. ಆದರೆ, ಸಮತೋಲನ ತಪ್ಪಿದ್ದರಿಂದ ಪೊಲೀಸರ ಅಂಗಿ ಹಿಡಿದೆ ಎಂದು ರೇಣುಕಾ ಸ್ಪಷ್ಟನೆ ನೀಡಿದ್ದಾರೆ.
 

Latest Videos
Follow Us:
Download App:
  • android
  • ios