ಅಗ್ನಿಪಥ ಯೋಜನೆ, ಸೇನಾ ಶಿಸ್ತಿನೊಂದಿಗೆ ರಾಜಿ ಮಾಡಿಕೊಳ್ಳಬೇಡಿ: ರಾಹುಲ್ ಟೀಕೆ
* ಅಗ್ನಿಪಥ ಯೋಜನೆಗೆ ಭಾರೀ ವಿರೋಧ
* ಯೋಜನೆ ವಿರೋಧಿಸಿ ಭುಗಿಲೆದ್ದ ಪ್ರತಿಭಟನೆ
* ಕೇಂದ್ರದ ಈ ಯೋಜನೆಗೆ ರಾಹುಲ್, ಪ್ರಿಯಾಂಕಾ ಕಿಡಿ
ನವದೆಹಲಿ(ಜೂ.16/): ಮೂರು ಸೇವೆಗಳಲ್ಲಿ ನೇಮಕಾತಿಗಾಗಿ ಅಗ್ನಿ ಪಥ ಯೋಜನೆಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿತ್ತು. ಈ ಯೋಜನೆಯಡಿ ಯುವಕರನ್ನು ಸೇನೆಯಲ್ಲಿ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಇದರೊಂದಿಗೆ ಕೆಲವು ವಿಶೇಷ ಪ್ಯಾಕೇಜ್, ವೇತನ, ವಯಸ್ಸು ಮುಂತಾದ ಎಲ್ಲ ಮಾಹಿತಿ ಲಭ್ಯವಾಗುವಂತೆ ಮಾಡಲಾಗಿತ್ತು. ಈ ಯೋಜನೆ ಘೋಷಣೆಯಾದಾಗಿನಿಂದ ಪ್ರತಿಪಕ್ಷಗಳು ಮತ್ತು ರಕ್ಷಣಾ ತಜ್ಞರು ಇದನ್ನು ಪ್ರಶ್ನಿಸುತ್ತಿದ್ದು, ಇದೀಗ ರಾಹುಲ್ ಗಾಂಧಿ ಕೂಡ ವಿರೋಧಿಸಿದ್ದಾರೆ. ಇದು ಸೇನೆಯ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
ಬುಧವಾರ ಅಗ್ನಿಪಥ್ ಯೋಜನೆಯನ್ನು ಟೀಕಿಸಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ದೇಶ ಪಾಕಿಸ್ತಾನ ಹಾಗೂ ಚೀನಾದಿಂದ ಬೆದರಿಕೆ ಎದುರಿಸುತ್ತಿದೆ. ಆದರೆ ಅಗ್ನಿಪಥ ಯೋಜನೆಯಿಂದ ಸೇನಾಪಡೆಗಳ ಕಾರ್ಯವಿಧಾನದ ಮೇಲೆ ಪರಿಣಾಮ ಬೀರುತ್ತದೆ. ದೇಶದ ಗೌರವ, ಸಂಪ್ರದಾಯ, ಪಡೆಗಳ ಶಿಸ್ತಿನೊಂದಿಗೆ ಸರ್ಕಾರವು ರಾಜಿ ಮಾಡಿಕೊಳ್ಳುವುದನ್ನು ಬಿಡಬೇಕು’ ಎಂದಿದ್ದಾರೆ.
ಪ್ರಿಯಾಂಕಾ ಗಾಂಧಿಯಿಂದಲೂ ವಿರೋಧ
ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಮೋದಿ ಸರ್ಕಾರವನ್ನು ಗುರಿಯಾಗಿಸುತ್ತಾ, "ಬಿಜೆಪಿ ಸರ್ಕಾರವು ಸೈನ್ಯದ ನೇಮಕಾತಿಯನ್ನು ಏಕೆ ತನ್ನ ಪ್ರಯೋಗಾಲಯವನ್ನಾಗಿ ಮಾಡುತ್ತಿದೆ? ಸೈನಿಕರ ಸುದೀರ್ಘ ಕೆಲಸ ಸರ್ಕಾರಕ್ಕೆ ಹೊರೆಯಾಗಿದೆಯೇ? ಈ 4 ವರ್ಷಗಳ ಆಡಳಿತವು ನೆಪವಾಗಿದೆ ಎಂದು ಯುವಕರು ಹೇಳುತ್ತಿದ್ದಾರೆ. ಮಾಜಿ ಸೈನಿಕರೂ ಇದನ್ನು ಒಪ್ಪುವುದಿಲ್ಲ.ಸೇನಾ ನೇಮಕಾತಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರದ ಬಗ್ಗೆ ಚರ್ಚೆ,ಗಂಭೀರ ಚಿಂತನೆ ಇಲ್ಲ ಕೇವಲ ಸ್ವೇಚ್ಛಾಚಾರ? ಎಂದು ಪ್ರಶ್ನಿಸಿದ್ದಾರೆ
ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟನೆ
ಈ ಹಿಂದೆ ಯೋಜನೆಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಈ ಹೇಳಿಕೆ ಮುನ್ನೆಲೆಗೆ ಬರುತ್ತಿದೆ. ಬಿಹಾರದ ಹಲವು ಪ್ರದೇಶಗಳಲ್ಲಿ ಯುವಕರು ಸೇನಾ ನೇಮಕಾತಿ ನಿಟ್ಟಿನಲ್ಲಿ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಅಷ್ಟೇ ಅಲ್ಲ, ಬಕ್ಸಾರ್‌ನಲ್ಲಿ ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿರುವ ಯುವಕರು ರೈಲಿನ ಸಂಚಾರಕ್ಕೂ ಅಡ್ಡಿಪಡಿಸುತ್ತಿದ್ದಾರೆ.
ಅಗ್ನಿಪಥ್ ಯೋಜನೆ ಎದ್ದ ಸವಾಲುಗಳು
ಸೇನೆಯಲ್ಲಿ 15 ವರ್ಷ ಕೆಲಸ ಮಾಡಿ ನಿವೃತ್ತಿಯಾಗುವ ಯೋಧನಿಗೆ ಬ್ಯಾಂಕ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಸಿಗುತ್ತದೆ. ಹಾಗಾದರೆ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸುವ ಅಗ್ನಿವೀರರ ಗತಿ ಏನು? ಅವರಿಗೆ ಯಾವ ಕೆಲಸ ಕೊಡಿಸುತ್ತಾರೆಂಬ ಪ್ರಶ್ನೆ ಕೇಳಿ ಬಂದಿದೆ.
6 ತಿಂಗಳ ತರಬೇತಿಯಲ್ಲಿ ಯುವಕರಿಗೆ ಹೇಗೆ ತರಬೇತಿ ನೀಡಲಾಗುವುದು ಎಂಬ ಪ್ರಶ್ನೆಗಳೂ ಉದ್ಭವಿಸುತ್ತಿವೆ. ಏಕೆಂದರೆ ಸೈನ್ಯದಲ್ಲಿ ಶಸ್ತ್ರಾಸ್ತ್ರಗಳು, ಟ್ಯಾಂಕ್‌ಗಳು, ಫಿರಂಗಿ ಮತ್ತು ಕ್ಷಿಪಣಿ ಘಟಕಗಳ ಜೊತೆಗೆ, ಅನೇಕ ತಂತ್ರಗಳನ್ನು ಕಲಿಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.
ಗೃಹ ಸಚಿವಾಲಯದ ಪ್ರಕಟಣೆ
ಅಗ್ನಿಪಥ್ ಯೋಜನೆಯ ಮೇಲೆ ಇಂತಹ ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ಪ್ರಶ್ನೆಗಳ ನಡುವೆ ಇಂದು ಗೃಹ ಸಚಿವ ಅಮಿತ್ ಶಾ ದೊಡ್ಡ ಘೋಷಣೆ ಮಾಡಿದ್ದು, 4 ವರ್ಷಗಳ ಸೇವೆಯ ನಂತರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲಿ ಅಗ್ನಿವೀರ್ ಅವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.