ಮಧ್ಯ ಪ್ರದೇಶ ಸಿಎಂ ‘ಶಿವರಾಜ’ನ ವಿರುದ್ಧ ‘ಹನುಮಂತ’ನ ಸ್ಪರ್ಧೆ’: ಕಾಂಗ್ರೆಸ್ ಪಟ್ಟಿಯಲ್ಲಿ ಬಿಜೆಪಿ ಮಾಜಿ ನಾಯಕರು!
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಾಂಗ್ರೆಸ್ ಜನಪ್ರಿಯ ನಟ ವಿಕ್ರಮ್ ಮಸ್ತಲ್ ಅವರನ್ನು ಕಣಕ್ಕಿಳಿಸಿದೆ.
ಭೋಪಾಲ್ (ಅಕ್ಟೋಬರ್ 15, 2023): ಪಂಚರಾಜ್ಯ ಚುನಾವಣೆಗೆ ಈಗಾಗಲೇ ಚುನಾವಣಾ ಆಯೋಗ ದಿನಾಂಕಗಳನ್ನು ಪ್ರಕಟಿಸಿದೆ. ಈ ಹಿನ್ನೆಲೆ ಇಂದು ಕಾಂಗ್ರೆಸ್ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಈ ಪೈಕಿ, ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಮಾಯಣ ಧಾರಾವಾಹಿಯ ಹನುಮಂತ ಪಾತ್ರ ಮಾಡ್ತಿದ್ದ ನಟನ್ನು ಅಖಾಡಕ್ಕಿಳಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಾಂಗ್ರೆಸ್ ಜನಪ್ರಿಯ ನಟ ವಿಕ್ರಮ್ ಮಸ್ತಲ್ ಅವರನ್ನು ಕಣಕ್ಕಿಳಿಸಿದೆ. ಆನಂದ್ ಸಾಗರ್ ಅವರ 2008 ರ ದೂರದರ್ಶನ ಕಾರ್ಯಕ್ರಮ ರಾಮಾಯಣದಲ್ಲಿ ಹನುಮಾನ್ ಪಾತ್ರಕ್ಕಾಗಿ ವಿಕ್ರಮ್ ಮಸ್ತಲ್ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಇದನ್ನು ಓದಿ: ಈ ರಾಜ್ಯದಲ್ಲಿ ಶೀಘ್ರದಲ್ಲೇ 500 ರೂ. ಗೆ ಸಿಗುತ್ತೆ ಎಲ್‌ಪಿಜಿ ಸಿಲಿಂಡರ್!
ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಪ್ರಕಟಿಸಿದೆ. ಈ ಪೈಕಿ, ಪ್ರಮುಖವಾಗಿ
ಮಧ್ಯಪ್ರದೇಶದಲ್ಲಿ ಕೈ ಪಕ್ಷವು ಚಿಂದ್ವಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಮತ್ತು ಪಿಸಿಸಿ ಮುಖ್ಯಸ್ಥ ಕಮಲ್ ನಾಥ್ ಅವರನ್ನು ಕಣಕ್ಕಿಳಿಸಿದೆ. ಹಾಗೂ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ಪುತ್ರ ಜೈವರ್ಧನ್ ಸಿಂಗ್ ರಘೀಗತ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇವರು ಕಮಲ್ ನಾಥ್ ಸರ್ಕಾರದಲ್ಲಿ ಸಚಿವರಾಗಿದ್ದರು.
ಇನ್ನು, ಬುಧ್ನಿ ಕ್ಷೇತ್ರದಲ್ಲಿ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ವಿಕ್ರಮ್ ಮಸ್ತಲ್ ಕಣಕ್ಕಿಳಿಯಲಿದ್ದಾರೆ. ಹಾಗೂ, ರಾಜ್ಯದ ಮಾಜಿ ರಾಜ್ಯಸಭಾ ಸದಸ್ಯೆ ಹಾಗೂ ಮಾಜಿ ಸಚಿವೆ ವಿಜಯ್ ಲಕ್ಷ್ಮೀ ಸಾಧೋ ಅವರನ್ನು ಮಹೇಶ್ವರ್ - ಎಸ್‌ಸಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಅಲ್ಲದೆ, ಮಾಜಿ ಕ್ಯಾಬಿನೆಟ್ ಸಚಿವ ಜಿತು ಪಟ್ವಾರಿ ಅವರನ್ನು ರಾವು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ: ಕಾಲು ತೊಳೆದು ಸನ್ಮಾನ ಮಾಡಿದ ಮಧ್ಯ ಪ್ರದೇಶ ಸಿಎಂ
ಈ ಪಟ್ಟಿಯಲ್ಲಿ ಸಾಮಾನ್ಯ ವರ್ಗದಿಂದ 47, ಒಬಿಸಿ ವರ್ಗದಿಂದ 39, ಎಸ್‌ಟಿ ವರ್ಗದಿಂದ 30, ಎಸ್‌ಸಿ ವರ್ಗದಿಂದ 22, ಒಬ್ಬ ಮುಸ್ಲಿಂ ಮತ್ತು 19 ಮಹಿಳೆಯರು ಸೇರಿದ್ದಾರೆ. ಹಾಗೂ 65 ಅಭ್ಯರ್ಥಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ವಿಶೇಷ. ಬಿಜೆಪಿ ಈಗಾಗಲೇ ಮಧ್ಯಪ್ರದೇಶದ ಅರ್ಧದಷ್ಟು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, 230 ಸ್ಥಾನಗಳ ಪೈಕಿ 136 ಸ್ಥಾನಗಳ ಪಟ್ಟಿಯನ್ನು ಹೊಂದಿದೆ.
ಮಧ್ಯಪ್ರದೇಶ ತನ್ನ 230 ಕ್ಷೇತ್ರಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನವೆಂಬರ್ 17 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ಎಲೆಕ್ಷನ್ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.
ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ ಬಂಧನ: ಆರೋಪಿ ಮೇಲೆ ಕಠಿಣ ಕ್ರಮ ಎಂದ ಸಿಎಂ
ಇನ್ನೊಂದೆಡೆ, ಮುಂಬರುವ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕನಿಷ್ಠ ನಾಲ್ವರು ಬಿಜೆಪಿ ಮಾಜಿ ನಾಯಕರು ಇದ್ದಾರೆ. ಅವರೆಂದರೆ ಅವಧೇಶ್ ನಾಯಕ್ (ದಾಟಿಯಾ), ರಾವ್ ಯದ್ವೇಂದ್ರ ಸಿಂಗ್ (ಮುಂಗೋಲಿ), ಬಿಜೆಪಿಯ ಮಾಜಿ ಸಂಸದ ಬೋಧ್ ಸಿಂಗ್ ಭಗತ್ (ಕಟಾಂಗಿ), ಮತ್ತು ನೀರಜ್ ಶರ್ಮಾ (ಸುರ್ಖಿ). ಮಾಜಿ ಸ್ಪೀಕರ್ ಎನ್‌ಪಿ ಪ್ರಜಾಪತಿ ಸೇರಿದಂತೆ ಮೂವರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.