ಕರ್ನಾಟಕದ ಪೇಸಿಎಂ ರೀತಿ ಮಧ್ಯಪ್ರದೇಶದಲ್ಲಿ ಫೋನ್‌ಪೆ ಅಭಿಯಾನ: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶೇ. 50 ಲಂಚ ಆರೋಪ
ಕರ್ನಾಟಕ ಸರ್ಕಾರದ ವಿರುದ್ಧ ಶೇ.40 ರಷ್ಟು ಕಮಿಷನ್ ಆರೋಪಕ್ಕೆ ಪೇಸಿಎಂ ಅಭಿಯಾನ ನಡೆಸಿದ್ದ ಕಾಂಗ್ರೆಸ್, ಮಧ್ಯಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಶೇ.50 ರಷ್ಟು ಕಮಿಷನ್ ಆರೋಪ ಮಾಡಿದ್ದು, ಅದಕ್ಕೆ ಫೋನ್‌ಪೆ ಎಂಬ ಅಭಿಯಾನ ಆರಂಭಿಸಿದೆ.
ಭೋಪಾಲ್ (ಜೂನ್ 27, 2023): ಕರ್ನಾಟಕದ ಬಿಜೆಪಿ ಸರ್ಕಾರ ಭಾರೀ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ ವಿಧಾನಸಭಾ ಚುನಾವಣೆಗೂ ಮುನ್ನ ಪೇಸಿಎಂ ಅಭಿಯಾನ ನಡೆಸಿ ಯಶಸ್ವಿಯಾಗಿದ್ದ ಕಾಂಗ್ರೆಸ್, ಇದೀಗ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಮಧ್ಯಪ್ರದೇಶದಲ್ಲೂ ಇದೇ ಮಾದರಿಯ ಅಭಿಯಾನ ಆರಂಭಿಸಿದೆ.
ಕರ್ನಾಟಕ ಸರ್ಕಾರದ ವಿರುದ್ಧ ಶೇ.40 ರಷ್ಟು ಕಮಿಷನ್ ಆರೋಪಕ್ಕೆ ಪೇಸಿಎಂ ಅಭಿಯಾನ ನಡೆಸಿದ್ದ ಕಾಂಗ್ರೆಸ್, ಮಧ್ಯಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಶೇ.50 ರಷ್ಟು ಕಮಿಷನ್ ಆರೋಪ ಮಾಡಿದ್ದು, ಅದಕ್ಕೆ ಫೋನ್‌ಪೆ ಎಂಬ ಅಭಿಯಾನ ಆರಂಭಿಸಿದೆ. ಈ ಕುರಿತು ರಾಜ್ಯದ ಹಲವು ನಗರಗಳಲ್ಲಿ ರಸ್ತೆಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ್ದರೆ, ಜಾಲತಾಣದಲ್ಲಿ ಈ ಪೋಸ್ಟರ್‌ಗಳ ಕುರಿತು ಭರ್ಜರಿ ಅಭಿಯಾನ ಆರಂಭಿಸಿದೆ.
ಇದನ್ನು ಓದಿ: 400 ಕಾರಿನ ಬೆಂಗಾವಲು ಪಡೆ ಜತೆ 300 ಕಿ.ಮೀ. ಪ್ರಯಾಣ ಮಾಡಿ ಬಿಜೆಪಿಯಿಂದ ಮರಳಿ ಕಾಂಗ್ರೆಸ್ ಸೇರಿದ ನಾಯಕ
ಈ ಪೋಸ್ಟರ್‌ಗಳಲ್ಲಿ ‘50% ಲಾವೋ, ಫೋನ್‌ಪೆ ಕಾಮ್ ಕರಾವೋ’ (50% ಕಮಿಷನ್ ಕೊಡಿ, ಫೋನ್‌ನಲ್ಲಿ ಕೆಲಸ ಮಾಡಿಸಿಕೊಳ್ಳಿ) ಎಂಬ ಅಂಶಗಳನ್ನು ದಾಖಲಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೋನ್‌ಪೇ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ನಾವು ಈ ರೀತಿಯ ಯಾವುದೇ ಕಾರ್ಯ ನಡೆಸಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ವಿರುದ್ಧ ಆರಂಭಿಸಿದ್ದ ಪೇಸಿಎಂ ಅಭಿಯಾನ ಫಲ ಕೊಟ್ಟಿತ್ತು. ಅದರ ಜೊತೆಗೆ ಗ್ಯಾರಂಟಿ ಯೋಜನೆಗಳು ಕೂಡಾ ನೆರವಾಗಿದ್ದವು. ಹೀಗಾಗಿ ಬಹುತೇಕ ಅದೇ ಮಾದರಿಯನ್ನು ಕಾಂಗ್ರೆಸ್ ಮಧ್ಯಪ್ರದೇಶದಲ್ಲೂ ಆರಂಭಿಸಿದೆ. ಕರ್ನಾಟಕದ ಮಾದರಿಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಮಹಿಳೆಯರಿಗೆ 1500 ರೂ. ಭತ್ಯೆ, ಅಡುಗೆ ಸಿಲಿಂಡರ್‌ಗೆ 500 ರೂ. ಸಬ್ಸಿಡಿ ಹಾಗೂ 100 ಯುನಿಟ್ ವಿದ್ಯುತ್ ಉಚಿತ ಗ್ಯಾರಂಟಿ ಘೋಷಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 'ಕೈ' ದಿಗ್ವಿಜಯ ಬೆನ್ನಲ್ಲೇ ಮಧ್ಯ ಪ್ರದೇಶದಲ್ಲೂ ಗೆಲುವಿಗೆ ಪ್ಲ್ಯಾನ್: ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಚಾಲನೆ
ಪೋಸ್ಟರ್‌ನಲ್ಲಿ ಏನಿದೆ?
ಕರ್ನಾಟಕದಲ್ಲಿ ಪೇಟಿಎಂ ಮಾದರಿಯಲ್ಲಿ ಪೇಸಿಎಂ ಅಭಿಯಾನ ಆರಂಭಿಸಿದ್ದರೆ, ಮಧ್ಯಪ್ರದೇಶದಲ್ಲಿ ಫೋನ್‌ಪೇ ಮಾದರಿಯಲ್ಲಿ ಫೋನ್‌ಪೆ ಅಭಿಯಾನ ನಡೆಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಫೋಟೋ, ಪಕ್ಕದಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ. ಜೊತೆಗೆ ‘50% ಲಾವೋ, ಫೋನ್‌ಪೆ ಕಾಮ್ ಕರಾವೋ’ (50% ಕಮಿಷನ್ ಕೊಡಿ, ಫೋನ್‌ನಲ್ಲಿ ಕೆಲಸ ಮಾಡಿಸಿಕೊಳ್ಳಿ) ಎಂದು ಬರೆಯಲಾಗಿದೆ.
ಇದನ್ನೂ ಓದಿ: ಮುಳುಗುವ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್ ‘ಕೈ’ ಹಿಡಿದ ಕರ್ನಾಟಕ ಮತದಾರ: ಲೋಕಸಭೆ ಚುನಾವಣೆಗೂ ಬೂಸ್ಟರ್ ಡೋಸ್!