ರಾಜಕೀಯ ಬೆಳವಣಿಗೆ ನಡುವೆ ಕಾಂಗ್ರೆಸ್‌‌ನಲ್ಲಿ ಮೇಜರ್ ಸರ್ಜರಿ, 7 ಪ್ರಮುಖ ನಾಯಕರ ಉಚ್ಚಾಟನೆ ಮಾಡಲಾಗಿದೆ. ಅಶಿಸ್ತು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಶಿಸ್ತು ಸಮಿತಿ ಈ ಕ್ರಮ ತೆಗೆದುಕೊಂಡಿದೆ. 

ನವದೆಹಲಿ (ನ.25) ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಗಾಗಿ ಎರಡು ಬಣದ ನಾಯಕರು ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ. ಹೈಕಮಾಂಡ್ ಮೇಲೆ ಪಟ್ಟು ಬಿಗಿಗೊಳಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬಿಹಾರ ಚುನಾವಣೆಯ ಹೀನಾಯ ಸೋಲಿನಿಂದ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಚೇತರಿಸಿಕೊಂಡಿಲ್ಲ. ಮಾಡಿದ ಎಲ್ಲಾ ಪ್ಲಾನ್ ನೀರ ಮೇಲಿನ ಹೋಮದಂತಾಗಿದೆ. ಬಿಹಾರ ಚುನಾವಣೆಯ ಹೀನಾಯ ಸೋಲಿಗೆ ಹೊಣೆ ಹೊರಲು ಕಾಂಗ್ರೆಸ್‌ನಲ್ಲಿ ಯಾರೂ ತಯಾರಿಲ್ಲ. ಇದರ ನಡುವೆ ಕಾಂಗ್ರೆಸ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಬಿಹಾರ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ, ಅಶಿಸ್ತಿನ ನಡವಳಿಕೆಗೆ ಗುರಿಯಾದ ಬಿಹಾರ ಕಾಂಗ್ರೆಸ್ ಪಕ್ಷದ 7 ನಾಯಕರನ್ನು ಉಚ್ಚಾಟಿಸಿದೆ.

6 ವರ್ಷಗಳ ಶಿಕ್ಷೆ, ವಿವಾದಕ್ಕೆ ಕಾರಣವಾದ ನಿರ್ಧಾರ

ಪಕ್ಷದಿಂದ ಉಚ್ಚಾಟಿತ ಕಾಂಗ್ರೆಸ್ ನಾಯಕರ ಕಾಂಗ್ರೆಸ್ ಪ್ರಾಥಮಿಕ ಸದಸ್ಯವನ್ನು 6 ವರ್ಷದ ವರೆಗೆ ರದ್ದುಗೊಳಿಸಲಾಗಿದೆ. ಪ್ರಮುಖ 7 ನಾಯಕರನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತಿದ್ದಂತೆ ಬಿಹಾರ ಕಾಂಗ್ರೆಸ್‌ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಸೋಲನ್ನು ಮುಚ್ಚಿಕೊಳ್ಳಲು, ಸೋಲಿನ ಹೊಣೆಯಿಂದ ಜಾರಿಗೊಳ್ಳಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾವುದೇ ಪುರಾವೆಗಳಿಲ್ಲದೆ ತಮ್ಮ ಮೇಲೆ ಬಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದು ಉಚ್ಚಾಟಿತ ನಾಯಕರು ಹೇಳಿದ್ದಾರೆ.

ಉಚ್ಚಾಟನೆಗೆ ನೀಡಿದ ಕಾರಣವೇನು?

ಬಿಹಾರ ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿಯ ಚೇರ್ಮೆನ್ ಕಪಿಲ್‌ಡಿಯೋ ಪ್ರಸಾದ್ ಯಾದವ್ 7 ನಾಯಕರನ್ನು ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ. 7 ನಾಯಕರು ಪಕ್ಷದ ಮೂಲ ಸಿದ್ಧಾಂತಕ್ಕೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಚೌಕಟ್ಟಿನೊಳಗೆ ಚರ್ಚಿಸುವ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಿದ್ದಾರೆ. ಹೇಳಿಕೆ ನೀಡಿ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಈ ನಾಯಕರು ಪಕ್ಷದ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಈ ನಾಯಕರ ನಡೆಯಿಂದ ಪಾರ್ಟಿಗೆ ತೀವ್ರ ನಷ್ಟವಾಗಿದೆ. ಪಾರ್ಟಿಗೆ ಆದ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಮಯಗಳೇ ಬೇಕಾಗಬಹುದು. ಈ ನಾಯಕರ ತಪ್ಪು ಹೆಜ್ಜೆಯಿಂದ ಹಂತ ಹಂತದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಶಿಸ್ತು ಸಮಿತಿಯ ಚೇರ್ಮನ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಬಿಹಾರ ಕಾಂಗ್ರೆಸ್ ಹಾಗೂ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಶಿಸ್ತು ಸಮಿತಿ ಸದಸ್ಯರು, ಪ್ರಮುಖ ನಾಯಕರು ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡ 7 ನಾಯಕರ ಪಟ್ಟಿ ಇಲ್ಲಿದೆ.

  • ಆದಿತ್ಯ ಪಾಸ್ವಾನ್, ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಸೇವಾದಳ
  • ಶಾಕೀಲೂರ್ ರಹೆಮಾನ್, ಮಾಜಿ ಉಪಾಧ್ಯಕ್ಷ, ಬಿಹಾರ ಕಾಂಗ್ರೆಸ್
  • ರಾಜ್ ಕುಮಾರ್ ಶರ್ಮಾ, ಮಾಜಿ ಅಧ್ಯಕ್ಷ, ಕಿಸಾನ್ ಕಾಂಗ್ರೆಸ್
  • ರಾಜ್ ಕುಮಾರ್ ರಾಜನ್, ಮಾಜಿ ಅಧ್ಯಕ್ಷ, ರಾಜ್ಯ ಯೂಥ್ ಕಾಂಗ್ರೆಸ್
  • ಕುಂದನ್ ಗುಪ್ತಾ, ಮಾಜಿ ಅಧ್ಯಕ್ಷ, ಹಿಂದುಳಿದ ಆಯೋಗ ವಿಭಾಗ
  • ಕಾಂಚನ ಕುಮಾರಿ, ಅಧ್ಯಕ್ಷೆ, ಬಂಕಾ ಜಿಲ್ಲಾ ಕಾಂಗ್ರೆಸ್ ಕಮಿಟಿ
  • ರವಿ ಗೋಲ್ಡನ್, ನಳಂದ ಜಿಲ್ಲಾ ಮುಖಂಡ