IAS Santosh Verma Sparks Row Over Reservation Remark on Brahmin Daughter Marriage ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದು, ಬ್ರಾಹ್ಮಣ ಸಂಘಗಳು ಐಎಎಸ್‌ ಅಧಿಕಾರಿ ಸಂತೋಚ್‌ ವರ್ಮಾ ಅವರ ಹೇಳಿಕೆಗೆ ಭಾರೀ ಆಕ್ಷೇಪ ವ್ಯಕ್ತಪಡಿಸಿವೆ.

ಭೋಪಾಲ್‌ (ನ.25): ಮಧ್ಯಪ್ರದೇಶದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿದ ನೌಕರರ ಸಂಘವಾದ AJAKS ನ ಹೊಸದಾಗಿ ಆಯ್ಕೆಯಾದ ಪ್ರಾಂತೀಯ ಅಧ್ಯಕ್ಷ, ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ, ಭಾನುವಾರ ನಡೆದ ಸಂಘಟನೆಯ ಸಮಾವೇಶದಲ್ಲಿ ನೀಡಿದ ಹೇಳಿಕೆಯು ಕೋಲಾಹಲ ಎಬ್ಬಿಸಿದೆ. ವಿವಾದಿತ ಹೇಳಿಕೆಗಳಿಗಾಗಿ ಪ್ರತಿಬಾರಿಯೂ ಸುದ್ದಿಯಲ್ಲಿರುವ ಸಂತೋಷ್‌ ವರ್ಮಾ ಮತ್ತೊಮ್ಮೆ ದೊಡ್ಡ ವೇದಿಕೆಯಲ್ಲಿ ತಮ್ಮ ಬಾಯಿಚಪಲ ತೋರಿದ್ದಾರೆ.

'ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಅಥವಾ ಅವನೊಂದಿಗೆ ಸಂಬಂಧ ಹೊಂದುವವರೆಗೂ ಮೀಸಲಾತಿ ಮುಂದುವರಿಯಬೇಕು..' ಎಂದು ಭೋಪಾಲ್‌ನ ಅಂಬೇಡ್ಕರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಮಾ ಹೇಳಿದರು.

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಡುತ್ತಿದ್ದಂತೆ, ಬ್ರಾಹ್ಮಣ ಸಂಘಟನೆಗಳು ವರ್ಮಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದವು, ಇದು "ಅಸಭ್ಯ, ಜಾತಿವಾದಿ ಮತ್ತು ಬ್ರಾಹ್ಮಣ ಹೆಣ್ಣುಮಕ್ಕಳಿಗೆ ತೀವ್ರ ಅವಮಾನಕರ" ಎಂದು ಕರೆದಿವೆ.

"ಬ್ರಾಹ್ಮಣ ಹೆಣ್ಣುಮಕ್ಕಳ ವಿರುದ್ಧ ಮಾಡಿದ ಟೀಕೆಗಳಿಗೆ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು. ಐಎಎಸ್ ಅಧಿಕಾರಿಯ ಹೇಳಿಕೆಗಳು ಅಸಭ್ಯ, ಆಕ್ಷೇಪಾರ್ಹ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅವಮಾನ. ಶೀಘ್ರದಲ್ಲೇ ಕ್ರಿಮಿನಲ್ ಮೊಕದ್ದಮೆ ಹೂಡದಿದ್ದರೆ, ಬ್ರಾಹ್ಮಣ ಸಮಾಜವು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ" ಎಂದು ಅಖಿಲ ಭಾರತ ಬ್ರಾಹ್ಮಣ ಸಮಾಜದ ರಾಜ್ಯ ಅಧ್ಯಕ್ಷ ಪುಷ್ಪೇಂದ್ರ ಮಿಶ್ರಾ ಹೇಳಿದ್ದಾರೆ.

ಯುವತಿಯರು ಮತ್ತು ಮಹಿಳೆಯರ ಘನತೆ ಮತ್ತು ಕಲ್ಯಾಣವನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಲಾಡ್ಲಿ ಲಕ್ಷ್ಮಿ, ಲಾಡ್ಲಿ ಬೆಹ್ನಾ, ಮತ್ತು ಬೇಟಿ ಬಚಾವೋ, ಬೇಟಿ ಪಡಾವೋ ಮುಂತಾದ ಯೋಜನೆಗಳನ್ನು ಸರ್ಕಾರ ಸಕ್ರಿಯವಾಗಿ ಪ್ರಚಾರ ಮಾಡುತ್ತಿರುವ ಸಮಯದಲ್ಲಿ, ಈ ಕಾಮೆಂಟ್‌ಗಳು ಅಖಿಲ ಭಾರತ ಸೇವಾ ನಡವಳಿಕೆ ನಿಯಮಗಳನ್ನು ಉಲ್ಲಂಘಿಸುತ್ತವೆ ಎಂದು ಮಿಶ್ರಾ ಹೇಳಿದ್ದಾರೆ.

Scroll to load tweet…

ಹಲವು ವಿವಾದಗಳ ಸರದಾರ ಸಂತೋಷ್‌ ವರ್ಮಾ

ಸಂತೋಷ್ ವರ್ಮಾ ವಿವಾದದಲ್ಲಿ ಸಿಲುಕುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿನ ಘಟನೆಯ ನಂತರ ಅವರ ಹಳೆಯ ಹೇಳಿಕೆಗಳು ಮತ್ತೊಮ್ಮೆ ವೈರಲ್‌ ಆಗಿದೆ.ಮೂಲತಃ ಮಧ್ಯಪ್ರದೇಶ ರಾಜ್ಯ ಆಡಳಿತ ಸೇವೆಯ ಅಧಿಕಾರಿಯಾಗಿದ್ದ ವರ್ಮಾ, ಈ ಹಿಂದೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಪರಿಹಾರ ಪಡೆಯಲು ಸುಳ್ಳು ನ್ಯಾಯಾಲಯದ ಆದೇಶಗಳನ್ನು ಮತ್ತು ಸಿಬಿಐ ನ್ಯಾಯಾಧೀಶರ ನಕಲಿ ಸಹಿಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಸುದ್ದಿಯಾಗಿದ್ದರು.

ಇಂದೋರ್‌ನಲ್ಲಿ, ಮಹಿಳೆಯೊಬ್ಬರಿಗೆ ಕ್ರಿಮಿನಲ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ನ್ಯಾಯಾಲಯದ ಆದೇಶಗಳನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಧೀಶರು ದೂರು ದಾಖಲಿಸಿದ ನಂತರ ಅವರನ್ನು ಬಂಧಿಸಲಾಗಿತ್ತು.

ರಾಜ್ಯ ಕೇಡರ್‌ನಿಂದ ಭಾರತೀಯ ಆಡಳಿತ ಸೇವೆ (ಐಎಎಸ್) ಗೆ ಬಡ್ತಿ ಪಡೆಯಲು ವರ್ಮಾ ಈ ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಎರಡು ಶೋಷಣೆ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸಿದ್ದಾರೆ, ಇದರಲ್ಲಿ ಅವರು ಮದುವೆಯ ಭರವಸೆ ನೀಡಿ ನಂತರ ಬೆದರಿಸಿದ್ದಾರೆ ಅಥವಾ ವಂಚಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದರು.