ನವದೆಹಲಿ(ನ.21): ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚಿರುವುದರಿಂದ ತೀವ್ರ ಹೃದಯದ ಸೋಂಕಿನಿಂದ ಬಳಲುತ್ತಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೆಲ ದಿನಗಳ ಕಾಲ ದೆಹಲಿಯಿಂದ ಹೊರಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಪುತ್ರ ರಾಹುಲ್‌ ಗಾಂಧಿ ಜೊತೆಗೂಡಿ ಗೋವಾಕ್ಕೆ ಆಗಮಿಸಿದ್ದಾರೆ.

'ಇಲ್ಲಿ ಇರಲು ಆಗದಿದ್ದರೆ ಹೊರಗೆ ಹೋಗಬಹುದು' ಕಾಂಗ್ರೆಸ್ VS ಕಾಂಗ್ರೆಸ್

ಕಳೆದ ಆಗಸ್ಟ್‌ನಲ್ಲಿ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆದ ನಂತರ ಸೋನಿಯಾ ನಿತ್ಯ ಔಷಧಿ ಸೇವಿಸುತ್ತಿದ್ದಾರೆ. ದೆಹಲಿಯಲ್ಲಿರುವ ವಾಯುಮಾಲಿನ್ಯದಿಂದಾಗಿ ಅವರ ಹೃದಯದ ಸೋಂಕು ಇನ್ನೂ ಪೂರ್ತಿ ಕಡಿಮೆಯಾಗಿಲ್ಲ. ಹೀಗಾಗಿ ಅಸ್ತಮಾ ಹಾಗೂ ಹೃದಯದ ಸಮಸ್ಯೆ ಕಡಿಮೆಯಾಗಲು ದೆಹಲಿಯಿಂದ ಕೆಲ ಕಾಲ ಹೊರಗಿರುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

'ಆರ್ಥಿಕ ಹಿಂಜರಿತದ ಕಡೆ ಭಾರತ' ರಾಹುಲ್ ಹೇಳಿದ ಕತೆ

ಬಿಹಾರ ಚುನಾವಣೆಯ ಸೋಲಿನ ನಂತರ ಪಕ್ಷದ ಹಿರಿಯ ನಾಯಕರು ನಾಯಕತ್ವದ ವಿರುದ್ಧ ಮಾತನಾಡುತ್ತಿರುವ ಸಂದಿಗ್ಧದ ಸಮಯದಲ್ಲೇ ಅವರು ದೆಹಲಿಯಿಂದ ಹೊರಹೋಗುತ್ತಿರುವುದು ಗಮನಾರ್ಹವಾಗಿದೆ. ಜುಲೈ ಅಂತ್ಯದ ವೇಳೆಗೆ ಸೋನಿಯಾ ಶ್ರೀ ಗಂಗಾರಾಂ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಸೆಪ್ಟೆಂಬರ್‌ನಲ್ಲಿ ಕೆಲ ದಿನ ವಿದೇಶಕ್ಕೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಆ ಕಾರಣದಿಂದ ಅವರು ಹಾಗೂ ರಾಹುಲ್‌ ಸಂಸತ್ತಿನ ಮುಂಗಾರು ಅಧಿವೇಶನದಲ್ಲೂ ಪಾಲ್ಗೊಂಡಿರಲಿಲ್ಲ. ಕಳೆದ ವರ್ಷದ ಜನವರಿಯಲ್ಲೂ ಅವರು ಗೋವಾದಲ್ಲಿ ಕೆಲ ಕಾಲ ತಂಗಿದ್ದರು. ಆ ವೇಳೆ ಅವರು ಸೈಕ್ಲಿಂಗ್‌ ಮಾಡುತ್ತಿದ್ದ ಫೋಟೋಗಳು ವೈರಲ್‌ ಆಗಿದ್ದವು.