ನವದೆಹಲಿ(ನ.19)  ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ್ದ  ಹಿರಿಯ ನಾಯಕ ಕಪಿಲ್ ಸಿಬಲ್ ಕಡೆಯಿಂದ ಮತ್ತೊಂದು ವಿಚಾರ ಸ್ಫೋಟವಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ  ಬಹಿರಂಗವಾಗಿದೆ. ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದಿದ್ದರೂ ಕಪಿಲ್ ಸಿಬಲ್ ತಮ್ಮ ಆಪ್ತರ ಬಳಿ ಅಸಮಾಧಾನ  ಹೊರಹಾಕಿದ್ದಾರೆ ಎನ್ನಲಾಗಿದೆ.

ಕಪಿಲ್ ಸಿಬಲ್  ಬಗ್ಗೆ ಮಾತನಾಡಿರುವ ಲೋಕಸಭೆ ಕಾಂಗ್ರೆಸ್ ಅಧೀರ್ ಚೌಧರಿ,   ಇಲ್ಲಿ ನಿಮಗೆ ಆಗದಿದ್ದರೆ ಹೊರಗೆ ಹೋಗಬಹುದು ಎಂಬ ದಾಟಿಯಲ್ಲಿ ಮಾತನಾಡಿದ್ದಾರೆ. ಬಿಹಾರ ಚುನಾವಣೆ ಫಲಿತಾಂಶದ ನಂತರ ಗುದ್ದಾಟ ಮತ್ತಷ್ಟು ಜೋರಾಗಿದೆ.

ಕಾಂಗ್ರೆಸ್ ನಾಯಕತ್ವದ ವಿರುದ್ಧ ದನಿ ಎತ್ತಿದ ಕಪಿಲ್ ಸಿಬಲ್ ಗೆ ಒಂದಿಷ್ಟು ನಾಯಕರಿಂದ ಬೆಂಬಲ ವ್ಯಕ್ತವಾಗಿದೆ.  ರಾಜ್ಯಸಭೆ ಸದಸ್ಯ ವಿವೇಕ್ ಟಂಖಾ ಇದು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಸಮಯ ಎಂದಿದ್ದಾರೆ.

ಅಂದು ನಾಯಕತ್ವ ಬದಲಾವಣೆ  ಹೋರಾಟ, ಇಂದು ಹಿರಿಯರ ಕಿತ್ತಾಟ

ತಮಿಳುನಾಡಿನ ಸಿವಗಂಗಾ ಎಂಪಿ ಕಾರ್ತಿ ಚಿದಂಬರಂ ಸಿಬಲ್  ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.  ಪಕ್ಷವನ್ನು ಬಲಪಡಿಸುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಆದರೆ ಇದೆಲ್ಲದಕ್ಕೂ ಪ್ರತಿಕ್ರಿಯೆ ರೀತಿ ಮಾತನಾಡಿರುವ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ಚೌಧರಿ, ಸಾರ್ವಜನಿಕ ವಲಯದಲ್ಲಿ ಹೇಳಿಕೆ ನೀಡಿ ಮುಜುಗರ ತರುವ ಬದಲು ಇಲ್ಲಿ ಸಲ್ಲದವರು ಹೊರಗೆ ನಡೆಯಬಹುದು ಎಂಬ ದಾಟಿಯಲ್ಲಿ ಮಾತನಾಡಿದ್ದು ಇನ್ನು ಮುಂದೆ ಯಾವ ಬದಲಾವಣೆ ತರಲಿದೆ ಎಂಬುದನ್ನು ನೋಡಬೇಕು.

ಗಾಂಧಿ ಕುಟುಂಬದವರು ಹೊರತುಪಡಿಸಿ ಬೇರೆಯವರು ಅಧ್ಯಕ್ಷರಾಗಬೇಕು ಎಂದು ಬರೆದಿದ್ದ ಪತ್ರದ ನಂತರ ಕಾಂಗ್ರೆಸ್ ಸಭೆ ಮೇಲೆ ಸಭೆ ನಡೆಸಿತ್ತು. ಆದರೆ ಅಂತಿಮವಾಗಿ ಸೋನಿಯಾ ಗಾಂಧಿಯವರೆ ಅಧ್ಯಕ್ಷೆಯಾಗಿದ್ದರು. 

ಆದರೆ  ಕರ್ನಾಟಕದ ನಾಯಕರು ಗಾಂಧಿ ಕುಟುಂಬಕ್ಕೆ  ಜೈ ಎಂದಿದ್ದರು. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹ  ಗಾಂಧಿಗಳ ಪರವಾಗಿ ನಿಂತಿದ್ದರು. ಈಗ ಸಹ  ಅದೆ  ಮಾತನ್ನು ಆಡಿದ್ದಾರೆ.