ಚಾಲಕರಿಗೆ ಹೃದಯಘಾತವಾಗುತ್ತಿರುವ ಘಟನೆಗಳೂ ಹೆಚ್ಚುತ್ತಿದ್ದು, ಬಸ್​ ಪ್ರಯಾಣವೂ ಭಯಪಡುವಂತಾಗಿದೆ. ಇದೀಗ ಇನ್ನೊಂದು ಘಟನೆಯಲ್ಲಿ ವಾಹನ ಚಲಾಯಿಸುವಾಗಲೇ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ!

ಈಗ ಎಲ್ಲಿ ನೋಡಿದರೂ ಹೃದಯಾಘಾತಗಳ ವರದಿಗಳೇ ಹೆಚ್ಚಾಗುತ್ತಿವೆ. ಅದರಲ್ಲಿಯೂ ಚಿಕ್ಕ ಪ್ರಾಯದಲ್ಲಿಯೇ ಸಾಯುವವರ ಸಂಖ್ಯೆ ಏರುತ್ತಲೇ ಇದೆ. ಹೀಗೆ ಹೃದಯಾಘಾತದಿಂದ ಏಕಾಏಕಿ ಸತ್ತರೆ ಅವರನ್ನೇ ನಂಬಿರುವ ಅವರ ಕುಟುಂಬಗಳ ಪಾಡು ಶೋಚನೀಯವೇ ಸರಿ. ಆದರೆ ಅದೇ ಬಸ್​ ಅಥವಾ ಇನ್ನಾವುದೋ ವಾಹನ ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತವಾಗಿಬಿಟ್ಟರೆ ಚಾಲಕನ ಜೊತೆ, ಪ್ರಯಾಣಿಕರ ಜೀವಕ್ಕೂ ಅಪಾಯ ತಪ್ಪಿದ್ದಲ್ಲ. ಮಾತ್ರವಲ್ಲದೇ ಬಸ್​ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಹೋಗುತ್ತಿರುವವರ ಜೀವವನ್ನೂ ತೆಗೆಯಬಹುದು. ಆದರೆ ಅದೃಷ್ಟವೊಂದಿದ್ದರೆ, ದೇವರ ರೂಪದಲ್ಲಿ ಯಾರಾದರೂ ಬಂದು ಪ್ರಾಣವನ್ನು ಕಾಪಾಡುವುದು ಇದ್ದೇ ಇದೆ.

ಅಂಥದ್ದೇ ಒಂದು ವಿಡಿಯೋ ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಬಸ್‌ ಪಳನಿ ಬಸ್‌ ನಿಲ್ದಾಣದಿಂದ ಪುದುಕೊಟ್ಟೈಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಚಾಲಕನಿಗೆ ಹೃದಯಾಘಾತವಾಗಿದೆ. ಅವರು ಕುಸಿದು ಬಿದ್ದಿದ್ದಾರೆ. ಆ ಕ್ಷಣದಲ್ಲಿ ಯಾರಿಗೂ ಹೇಳಲಾಗದ ಸ್ಥಿತಿ, ಇದು ಹೃದಯಾಘಾತದ ಅತಿ ದೊಡ್ಡ ದುರಂತೇ ಸರಿ. ಆದರೆ ಪ್ರಯಾಣಿಕರ ಅದೃಷ್ಟ ಚೆನ್ನಾಗಿತ್ತು. ಪಕ್ಕದಲ್ಲಿಯೇ ಕಂಡಕ್ಟರ್​ ಇದ್ದರು. ಅವರು ಇದನ್ನು ನೋಡಿ ಸಮಯಪ್ರಜ್ಞೆಯಿಂದ ಬಸ್‌ ನಿಲ್ಲಿಸಿದ್ದಾರೆ. ಕಂಡಕ್ಟರ್​ಗೂ ಚಾಲನೆ ಗೊತ್ತಿರುವ ಕಾರಣ ಬಸ್​ ನಿಲ್ಲಿಸಲು ಅನುಕೂಲ ಆಗಿದೆ. ಈ ಮೂಲಕ ಬಸ್ಸಿನಲ್ಲಿದ್ದ 35 ಪ್ರಯಾಣಿಕರ ಪ್ರಾಣ ಉಳಿದಿದೆ.

ಆದರೆ, ಚಾಲಕ ಪ್ರಭು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ದೃಶ್ಯ ಬಸ್ಸಿನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರನ್ನು ರಕ್ಷಿಸಲು ಪ್ರಯಾಣಿಕರು ಬಂದರೂ ಅದು ಸಾಧ್ಯವಾಗಲಿಲ್ಲ. ಆದರೆ ಬಸ್​ ನಿಯಂತ್ರಣ ತಪ್ಪುತ್ತಿದ್ದಂತೆ, ಬಸ್‌ನ ನಿರ್ವಾಹಕ ಬ್ರೇಕ್‌ ಹಾಕಿ ಬಸ್ಸನ್ನು ನಿಲ್ಲಿಸಿ, ಪ್ರಯಾಣಿಕರ ಜೀವವನ್ನು ಉಳಿಸಿರುವುದಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಅವರು ಹೀಗೆ ಮಾಡದೇ ಹೋಗಿದ್ದರೆ 35 ಪ್ರಯಾಣಿಕರ ಜೊತೆ ರಸ್ತೆಯ ಮೇಲಿದ್ದ ಮತ್ತೊಂದಿಷ್ಟು ಮಂದಿಯೂ ಬಲಿಯಾಗು ಸಾಧ್ಯತೆ ಇತ್ತು!

ಕೆಲ ದಿನಗಳ ಹಿಂದೆ ಎಸ್‌ಆರ್‌ಟಿಸಿ ಬಸ್‌ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾಗಿದ್ದು, ಬಸ್‌ ನಿಯಂತ್ರಣ ತಪ್ಪಿ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದಿಯಗಯು. ಸ್ಥಳದಲ್ಲಿಯೇ ಚಾಲಕ ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆ ಎಚ್‌ಡಿ ಕೋಟೆ ತಾಲೂಕಿನಲ್ಲಿ ಈ ಘಟನೆ ನಡೆದಿತ್ತು. ಹೆಚ್ ಡಿ‌ ಕೋಟೆ ತಾಲೂಕಿನ ದಮ್ಮನಕಟ್ಟೆ ಬಳಿ ಮೈಸೂರು ವಿಭಾಗದ ಬಸ್‌ ತೆರಳುತ್ತಿದ್ದಾಗ ಚಾಲಕನಿಗೆ ಹಠಾತ್ ಹೃದಯಾಘಾತವಾಗಿತ್ತು. ಚಾಲಕ ಬಸ್‌ ಸ್ಟೇರಿಂಗ್‌ ಮೇಲೆಯೇ ನಿಯಂತ್ರಣ ತಪ್ಪಿ ಮಲಗಿದ್ದಾಗ ಬಸ್‌ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆ ಮೇಲೆ ಹರಿದು ಅವರು ಮೃತಪಟ್ಟಿದ್ದಾರೆ. ಆದರೆ ಪ್ರಯಾಣಿಕರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

View post on Instagram