- ಸಿಎಂ ಬೊಮ್ಮಾಯಿಗೆ ಅಮಿತ್‌ ಶಾ ಸೂಚನೆ- ನಾಯಕತ್ವ ಬದಲಿಲ್ಲ ಪರೋಕ್ಷ ಸಂದೇಶ ರವಾನೆ- ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲುಸೂಚನೆ

ಬೆಂಗಳೂರು(ಮೇ.04): ‘ನೀವು ನಿರಾತಂಕವಾಗಿ ಉತ್ತಮ ಆಡಳಿತ ನೀಡುವತ್ತ ಗಮನಹರಿಸಿ. ಅಭಿವೃದ್ಧಿಯ ವೇಗ ಹೆಚ್ಚಿಸಿ. ಎಲೆಕ್ಷನ್‌, ರಾಜಕೀಯದಂತ ಬಾಕಿ ವಿಚಾರಗಳನ್ನು ನಮಗೆ ಬಿಡಿ. ಅವುಗಳನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರ ತಡರಾತ್ರಿ ಅಮಿತ್‌ ಶಾ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲೇ ಖಾಸಗಿ ಹೋಟೆಲ್‌ನಲ್ಲಿ ಬೊಮ್ಮಾಯಿ ಅವರೊಂದಿಗೆ ಸುಮಾರು ಅರ್ಧ ಗಂಟೆ ಕಾಲ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ಬಳಿಕ ಬೊಮ್ಮಾಯಿ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು ಎನ್ನಲಾಗಿದೆ.

ಬೆಳ್ಳಂ ಬೆಳಗ್ಗೆ ಅಮಿತ್‌ ಶಾ ಜತೆ ಸಿಎಂ ಬೊಮ್ಮಾಯಿ ಮಾತುಕತೆ: ಭಾರೀ ಕುತೂಹಲ ಮೂಡಿಸಿದ ಸಭೆ

ನಾಯಕತ್ವ ಕುರಿತಂತೆ ಇತ್ತೀಚೆಗೆ ಊಹಾಪೋಹದ ಸುದ್ದಿಗಳು ಹರಿದಾಡುತ್ತಿರುವ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮದೇನಿದ್ದರೂ ಆಡಳಿತದ ಕಡೆಗೆ ಗಮನವಿರಲಿ. ನಿಮ್ಮ ಆಡಳಿತದಿಂದ ಪಕ್ಷದ ಇಮೇಜು ಹೆಚ್ಚಬೇಕು. ಜನರಿಗೆ ವಿಶ್ವಾಸ ಮೂಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ಸರಿಯಾಗಿ ತಲುಪುವಂತೆ ನೋಡಿಕೊಳ್ಳಿ. ಕೇವಲ ಯೋಜನೆಗಳನ್ನು ಜಾರಿಗೆ ತಂದರಷ್ಟೇ ಸಾಲದು. ಅವುಗಳ ಸಮರ್ಪಕ ಅನುಷ್ಠಾನದ ಬಗ್ಗೆಯೂ ಒತ್ತು ನೀಡಬೇಕು ಎಂಬ ಸಲಹೆಯನ್ನು ಅಮಿತ್‌ ಶಾ ನೀಡಿದರು ಎಂದು ತಿಳಿದು ಬಂದಿದೆ.

ಮುಂದಿನ ವಿಧಾನಸಭಾ ಚುನಾವಣೆಯನ್ನು ನಿಮ್ಮ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲೇ ನಡೆಸುತ್ತೇವೆ. ಚುನಾವಣೆ ನಡೆಸುವ ಬಗ್ಗೆ ನೀವು ಚಿಂತಿತರಾಗಬೇಕಿಲ್ಲ. ಅದನ್ನು ನಾವು ನಿಭಾಯಿಸುತ್ತೇವೆ. ಸಾಧ್ಯವಾದಷ್ಟುಪಕ್ಷ ಸಂಘಟನೆಗೆ ನಿಮ್ಮ ಸಮಯ ನೀಡಿ. ಮುಂದಿನ ದಿನಗಳು ಉತ್ತಮ ಆಡಳಿತ ಮತ್ತು ಪಕ್ಷ ಸಂಘಟನೆ ನಿಮ್ಮ ಮಂತ್ರವಾಗಲಿ ಎಂಬ ಮಾತನ್ನು ಹೇಳಿದರು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ:
ಇದೇ ವೇಳೆ ಅಮಿತ್‌ ಶಾ ಅವರು ರಾಜ್ಯದಲ್ಲಿ ಸದ್ಯ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಪ್ರತಿಪಕ್ಷಗಳು ಭ್ರಷ್ಟಾಚಾರ ಆರೋಪಗಳನ್ನು ಮಾಡುವ ಅವಕಾಶ ಕೊಡಬೇಡಿ. ಆಡಳಿತದ ಯಾವುದೇ ಹಂತದಲ್ಲೂ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಸಂಪೂರ್ಣ ಕಡಿವಾಣ ಹಾಕಿ. ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರತಿಪಕ್ಷಗಳ ಟೀಕೆಗೆ ಆಹಾರವಾಗುವುದು ಬೇಡ ಎಂಬ ಕಿವಿಮಾತನ್ನೂ ಹೇಳಿದ್ದಾರೆ ಎನ್ನಲಾಗಿದೆ

'ರಾಜ್ಯಕ್ಕೆ ಬಂದಿರೋ ಅಮಿತ್ ಶಾ ಗೃಹ ಇಲಾಖೆಯ ಅವಾಂತರ ನೋಡಲಿ'

150 ಸ್ಥಾನ ಗೆಲ್ಲಲು ಶಕ್ತಿ ಮೀರಿ ಪ್ರಯತ್ನ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನ ನಡೆಸುವುದಾಗಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹೇಳಿದಂತೆ ರಾಜ್ಯ ಪ್ರವಾಸ ಪ್ರಾರಂಭವಾಗುತ್ತಿದೆ. 150 ಕ್ಷೇತ್ರದಲ್ಲಿ ಗೆಲ್ಲಲ್ಲೇ ಬೇಕು. ಈ ವಿಚಾರವನ್ನು ಮುಂದಿಟ್ಟುಕೊಂಡು ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆ. ವಾರಕ್ಕೊಮ್ಮೆ ಪ್ರತಿ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಅಲ್ಲಿಯ ಪಕ್ಷದ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿ ಪಕ್ಷದ ಸಂಘಟನೆ ಬಲಪಡಿಸುವುದಾಗಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಒಳ್ಳೆಯ ಕೆಲಸ, ಯೋಜನೆಗಳ ಆಧಾರದ ಮೇಲೆ ಮುಂದಿನ ಚುನಾವಣೆಯಲ್ಲಿ ಸ್ಪಷ್ಟಬಹುಮತ ದೊರೆಯಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 6 ಸ್ಥಾನದ ಜೊತೆಗೆ ಭದ್ರಾವತಿ ಕ್ಷೇತ್ರದಲ್ಲೂ ನಾವು ಗೆಲ್ಲುತ್ತೇವೆ. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಹೇಳಿದರು. ಶಿವಮೊಗ್ಗ ವಿಮಾನ ನಿಲ್ದಾಣದಕ್ಕೂ ನನ್ನ ಹೆಸರು ಇಡುವುದು ಸೂಕ್ತವಲ್ಲ ಎಂದು ಈಗಾಗಲೇ ತಿಳಿಸಿದ್ದೇನೆ. ಸ್ವಾತಂತ್ರ್ಯ ಹೋರಾಟಗಾರ ಹೆಸರು ಸೇರಿದಂತೆ ಮಹಾನೀಯರ ಹೆಸರು ಇಡುವಂತೆ ಈಗಾಗಲೇ ಹೇಳಿದ್ದೇನೆ ಎಂದರು. ಪಿಎಸ್‌ಐ ನೇಮಕಾತಿ ಹಗರಣ ಕುರಿತು ಮುಖ್ಯಮಂತ್ರಿ ಕ್ರಮ ಕೈಗೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಹೇಳಿದರು.