ಬೆಳಗಾವಿಯ ಗೌಸಸಾಬ್ ಬಾಗೇವಾಡಿ ಅವರ ಮಗ ಹಾಗೂ ಕರ್ನಲ್ ಸೋಫಿಯಾ ಖುರೇಶಿ ದಂಪತಿ. ತವಗದ ಬಾಳಯ್ಯ ಆಶೀರ್ವಾದದಿಂದ ಮಗುವಾದ ಮಗ ಈಗ ಕರ್ನಲ್ ಆಗಿದ್ದಾನೆ. ಆಪರೇಷನ್ ಸಿಂದೂರದ ಬಗ್ಗೆ ಮಾಹಿತಿ ನೀಡಿದ ಸೊಸೆ ಕರ್ನಲ್ ಸೋಫಿಯಾ ಖುರೇಶಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದ ಮಗ ದೇಶಸೇವೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.

ಬೆಳಗಾವಿ (ಮೇ 10): ನನಗೆ ಮಕ್ಕಳಾಗದ ಸಂದರ್ಭದಲ್ಲಿ ತವಗದ ಬಾಳಯ್ಯ ಆಶೀರ್ವಾದದಿಂದ ನನಗೆ ಮಕ್ಕಳಾದರು. ಅದೇ ಮಗ ಈಗ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ. ಇನ್ನು ಸೊಸೆ ಬಂದು ಮನೆ ಬೆಳಗಬೇಕು ಎನ್ನುವ ವಾಡಿಕೆ ಇದೆ. ಆದರೆ ನನ್ನ ಸೊಸೆ ಬಂದು ಇಡೀ ದೇಶವನ್ನೇ ಬೆಳಗಿದಳು. ಕರ್ನಲ್ ಸೋಫಿಯಾ ಖುರೇಶಿ (Sofia Qureshi) ನಮ್ಮ ಸೊಸೆ ಎನ್ನುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ ಎಂದು ಕರ್ನಲ್ ಸೋಫಿಯಾ ಖುರೇಶಿ ಮಾವ ಗೌಸಸಾಬ್ ಬಾಗೇವಾಡಿ ಹೇಳಿದರು.

Add Asianetnews Kannada as a Preferred SourcegooglePreferred

ಶನಿವಾರ ಕೊಣ್ಣೂರನಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕೊಣ್ಣೂರ ಮರಡಿಮಠದ ಶ್ರೀ ಡಾ. ಪವಾಡೇಶ್ವರ ಸ್ವಾಮೀಜಿಯವರು ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ಜಾತಿಯಲ್ಲಿ ಮುಸ್ಲಿಮ್ ಇರಬಹುದು. ಆದರೆ ನಾನು ಮಠದ ಪರಿಸರದಲ್ಲಿ ನನಗೆ ಮಕ್ಕಳಾಗದ ಸಂದರ್ಭದಲ್ಲಿ ತವಗದ ಬಾಳಯ್ಯ ಮಠದ ಆಶೀರ್ವಾದದಿಂದ ನನಗೆ ಮಕ್ಕಳಾದರು. ಅದೇ ನನ್ನ ಮಗ ತಾಜುದ್ದೀನ್ ಬಾಗೇವಾಡಿ ಇದೀಗ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ. ಅವನ ಹೆಂಡತಿಯಾಗಿ ನಮ್ಮನೆ ಸೊಸೆಯಾಗಿ ಸೋಫಿಯಾ ಖುರೇಷಿ ಬಂದಿದ್ದಾರೆ. ನಮ್ಮನೆ ಬೆಳಗಲು ಬಂದ ಸೊಸೆ ಇದೀಗ ದೇಶವನ್ನು ಬೆಳಗುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ನಾವೆಲ್ಲರೂ ಕೂಡ ದೇಶ ಭಕ್ತರಾಗುವುದು ಅತ್ಯಾವಶ್ಯಕ ಆಗಿದೆ ಎಂದು ಹೇಳಿದರು.

ನನ್ನ ಮಗ ಮತ್ತು ಸೊಸೆ ಒಂದೇ ಕಡೆಗೆ ಕೆಲಸ ಮಾಡುತ್ತಿದ್ದರು. ಅವರಿಬ್ಬರಿಗೂ ಪರಿಚಯ ಆಗಿ ಇಬ್ಬರು ಪ್ರೀತಿಸಿ ಬಳಿಕ ಮನೆಯವರ ಒಪ್ಪಿಗೆ ಪಡೆದು 2015ರಲ್ಲಿ ಗುಜರಾತ ರಾಜ್ಯದ ಬಡೋದರಾದಲ್ಲಿ ವಿವಾಹವಾದರು. ನಿನ್ನೆ ನಡೆದ ಘಟನೆ ಕುರಿತು ನಾನು ಸೊಸೆ ಜೊತೆಗೆ ಮಾತನಾಡಿಲ್ಲ. ಮಗನ ಜೊತೆಗೆ ಮಾತನಾಡಿದ್ದೇನೆ. ಆತನೇ ನಮಗೆ ಎಲ್ಲ ಮಾಹಿತಿ ಹೇಳಿದ. ನಮ್ಮ ಮನೆ ಮಂದಿಗೆ ಯಾರಿಗೂ ನಿದ್ದೆ ಹತ್ತಿಲ್ಲ.ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಭಯೋತ್ಪಾದಕರಂತಹ ಮೂರ್ಖರು ಯಾರೂ ಇಲ್ಲ. ಧರ್ಮ ನೋಡಿ ಹತ್ಯೆ ಮಾಡುವ ಕೆಲಸ ಅವರು ಮಾಡಿದರು. ನನ್ನ ಮಗ ಮರಡಿಮಠ ಗ್ರಾಮದಲ್ಲಿ ಕನ್ನಡ ಮಾಧ್ಯಮದಲ್ಲಿ ಕಷ್ಟಪಟ್ಟು ಓದಿ ಕರ್ನಲ್‌ ಆಗಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಮಕ್ಕಳ ಬಗ್ಗೆ ನಮಗೆ ಹೆಮ್ಮೆಯಿದೆ ಎಂದರು.

ಪಾಕಿಸ್ತಾನ ಮೇಲೆ ದಾಳಿ ನಡೆಸಿದ ಆಪರೇಷನ್ ಸಿಂದೂರ ಬಗ್ಗೆ ನಮ್ಮ ಸೊಸೆ ಕರ್ನಲ್ ಸೋಫಿಯಾ ಕುರೇಶಿಗೆ ಜೋಳದ ರೊಟ್ಟಿ ಹಾಗೂ ನಾಟಿ ಕೋಳಿ ತುಂಬಾ ಇಷ್ಟ. ಅವರ ಧೀರತದನ ಬಗ್ಗೆ ನಮಗೆ ಹೆಮ್ಮೆ ಇದೆ. ಕೊಣ್ಣೂರ ಗ್ರಾಮಕ್ಕೆ ಸೊಸೆ ಮತ್ತು ಮಗ ಬರುತ್ತಾರೆ. ಇಲ್ಲಿ ಬಂದಾಗ ಅರಾಮಾಗಿ ಇರುತ್ತಾರೆ. ನನ್ನ ಸೊಸೆಗೆ ಜವಾರಿ ರೊಟ್ಟಿ, ಕೋಳಿ ಬಹಳ ಇಷ್ಟ. ನಿಮ್ಮ ಊರು ಚೆನ್ನಾಗಿದೆ ಅಂತಾ ಸೊಸೆ ಹೇಳುತ್ತಿರುತ್ತಾರೆ. ನಮ್ಮ ಆರೋಗ್ಯದ ಬಗ್ಗೆಯೂ ಸೊಸೆ ಕಾಳಜಿ ಮಾಡುತ್ತಿರುತ್ತಾರೆ. ರಂಜಾನ್ ಹಬ್ಬಕ್ಕೆ ಬರಬೇಕಿತ್ತು. ಬರಲಿಲ್ಲ. ಬಕ್ರೀದ್ ಹಬ್ಬಕ್ಕೆ ಬರುತ್ತಾರೆ ಎಂದು ಸೋಫಿಯಾ ಖುರೇಶಿ ಮಾವ ಗೌಸಸಾಬ್ ಹೇಳಿದರು.

ಆಪರೇಷನ್‌ ಸಿಂದೂರ ಬಗ್ಗೆ ತಿಳಿಸಿದ್ದು ಬೆಳಗಾವಿ ಸೊಸೆ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ದಲ್ಲಿ 26 ಭಾರತೀಯರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಕುರಿತು ಜಗತ್ತಿಗೆ ಎಳೆಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿ ಸೊಸೆ ಎನ್ನುವುದು ಹೆಮ್ಮೆ ಮೂಡಿಸಿದೆ. ಈ ಮೂಲಕ ವೀರವನಿತೆ ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಬೆಳವಡಿ ಮಲ್ಲಮ್ಮನವರ ನಾಡಿಗೆ ಮತ್ತೊಂದು ಹೆಮ್ಮೆ ಮೂಡಿದಂತಾಗಿದೆ ಎಂದು ತಿಳಿಸಿದ್ದರು.