ಹೆಂಡ್ತಿಗೆ ನೀಡಬೇಕಾದ ಪರಿಹಾರ ಹಣ 1-2 ರೂ. ನಾಣ್ಯದ ರೂಪದಲ್ಲಿ ನೀಡಿದ ಪತಿ: ಕೋರ್ಟ್ ಮಾಡಿದ್ದೇನು
ಕೌಟುಂಬಿಕ ನ್ಯಾಯಾಲಯದಲ್ಲಿ ಪತ್ನಿಗೆ ಪರಿಹಾರ ನೀಡಲು ಗಂಡ 80 ಸಾವಿರ ರೂಪಾಯಿಗಳನ್ನು 1 ಮತ್ತು 2 ರೂಪಾಯಿ ನಾಣ್ಯಗಳಲ್ಲಿ ತಂದ ವಿಚಿತ್ರ ಘಟನೆ ನಡೆದಿದೆ. ಇದನ್ನು ನೋಡಿ ನ್ಯಾಯಾಧೀಶರು ಏನು ಹೇಳಿದ್ರು ನೋಡಿ...
ಸ್ಕೂಟಿ ಬೈಕ್ ಖರೀದಿಸುವ ವೇಳೆ ಒಂದು ರೂ ನಾಣ್ಯ ಅಥವಾ ಎರಡು ರೂ ನಾಣ್ಯದ ನೋಟುಗಳನ್ನು ನೀಡಿ ವಾಹನಗಳನ್ನು ಖರೀದಿಸಿದಂತಹ ಹಲವು ಘಟನೆಗಳು ನಡೆದಿವೆ. ಆದರೆ ಇಲ್ಲೊಬ್ಬ ಕೌಟುಂಬಿಕ ನ್ಯಾಯಾಲಯದಲ್ಲಿ ಪತ್ನಿಗೆ ಪರಿಹಾರ ನೀಡುವುದಕ್ಕಾಗಿ 80 ಸಾವಿರ ರೂಪಾಯಿ ಮೊತ್ತವನ್ನು ಒಂದು ರೂ ಹಾಗೂ 2 ರೂ ನಾಣ್ಯದ ರೂಪದಲ್ಲಿ ನೀಡಿದ ವಿಚಿತ್ರ ಘಟನೆ ನಡೆದಿದೆ.
ಗಂಡ ಹೆಂಡತಿ ದೂರಾದ ಮೇಲೆ ಹಗೆ ಸಾಮಾನ್ಯ. ಬಹುಶಃ ಈತ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಮೊತ್ತ ಕೇಳಿದ ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ನಾಣ್ಯದ ರೂಪದಲ್ಲಿ ಪರಿಹಾರ ನೀಡಲು ಮುಂದಾಗಿದ್ದಾನೆ. ಆದರೆ ನ್ಯಾಯಾಧೀಶರು ಈತನ ಸೇಡು ತೀರಿಸುವ ಆಸೆಗೆ ತಣ್ಣೀರೆರಚಿದ್ದು, ನೋಟುಗಳ ರೂಪದಲ್ಲಿ ಪರಿಹಾರ ನೀಡುವಂತೆ ಹೇಳಿ ಆತ ತಂದ ನೋಟನ್ನು ಆತನ ಜೊತೆಗೆ ಕಳುಹಿಸಿದ್ದಾರೆ. ತಮಿಳುನಾಡಿನ ಕೌಟುಂಬಿಕ ನ್ಯಾಯಾಲಯವೊಂದರಲ್ಲಿ ಈ ರೀತಿಯ ವಿಚಿತ್ರ ಘಟನೆ ನಡೆದಿದೆ. ಕೊಯಂಬತ್ತೂರಿನ ವಡವಲ್ಲಿ ಪ್ರದೇಶದ 37 ವರ್ಷದ ವ್ಯಕ್ತಿಗೆ ವಿಚ್ಚೇದನ ಪ್ರಕರಣದಲ್ಲಿ 2 ಲಕ್ಷ ರೂಪಾಯಿ ಪರಿಹಾರವನ್ನು ತನ್ನ ಮಾಜಿ ಪತ್ನಿಗೆ ನೀಡಲು ಕೋರ್ಟ್ ಆದೇಶ ಮಾಡಿತ್ತು. ಹೀಗಾಗಿ 2 ಲಕ್ಷದಲ್ಲಿ 80 ಸಾವಿರ ರೂಪಾಯಿಯನ್ನು 2 ಹಾಗೂ 1 ರೂಪಾಯಿ ನಾಣ್ಯದ ರೂಪದಲ್ಲಿ ಈತ ನೀಡಲು ಬಯಸಿದ್ದ ಉಳಿದ ಮೊತ್ತವನ್ನು ಆತ ಮುಂದಿನ ಹಂತದಲ್ಲಿ ನೀಡಲು ಮುಂದಾಗಿದ್ದ. ಈತನ ಪತ್ನಿ ಕಳೆದ ವರ್ಷ ಈತನಿಂದ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದಾದ ನಂತರ ನ್ಯಾಯಾಲಯ ಪತ್ನಿಗೆ ಪರಿಹಾರ ನೀಡುವಂತೆ ಈತನಿಗೆ ಆದೇಶ ನೀಡಿತ್ತು.
ಹೀಗಾಗಿ ಈತ 80 ಸಾವಿರ ರೂಪಾಯಿ ಮೊತ್ತದ ಹಣವನ್ನು 1 ಹಾಗೂ 2 ರೂಪಾಯಿ ನಾಣ್ಯದ ರೂಪದಲ್ಲಿ ನೀಡಲು ಬಯಸಿ ಒಟ್ಟು 20 ಚೀಲಗಳಲ್ಲಿ ನಾಣ್ಯಗಳನ್ನು ತುಂಬಿಸಿಕೊಂಡು ನ್ಯಾಯಾಲಯಕ್ಕೆ ಬಂದಿದ್ದ. ಸ್ವತಃ ಟಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಈತ ಕಾರಿನಲ್ಲಿ ಈ ನಾಣ್ಯಗಳಿರುವ 20 ಚೀಲಗಳನ್ನು ತುಂಬಿಸಿಕೊಂಡು ಬಂದಿದ್ದ. ಡಿಸೆಂಬರ್ 18ರಂದು ಈ ಘಟನೆ ನಡೆದಿದ್ದು, ಕೋರ್ಟ್ ರೂಮ್‌ಗೆ ಹೀಗೆ ನಾಣ್ಯದ ಚೀಲಗಳನ್ನು ಹಿಡಿದುಕೊಂಡು ಬಂದ ಈತನಿಗೆ ನ್ಯಾಯಾಧೀಶರು, ಈ ಪರಿಹಾರ ಮೊತ್ತವನ್ನು ನೋಟಿನ ರೂಪದಲ್ಲಿ ನೀಡುವಂತೆ ಸೂಚಿಸಿದ್ದಾರೆ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಈತ ಈ 80 ಸಾವಿರದ ನಾಣ್ಯಗಳನ್ನು ನೋಟುಗಳಿಗೆ ಬದಲಿಸಿಕೊಂಡು ಬಂದು ಕೋರ್ಟ್ ಮುಂದೆ 80 ಸಾವಿರ ರೂಪಾಯಿಯನ್ನು ಪರಿಹಾರ ನೀಡಿದ್ದಾರೆ. ಅಲ್ಲದೇ ಉಳಿದ ಮೊತ್ತವನ್ನು ಮುಂದಿನ ಹಂತದಲ್ಲಿ ನೀಡುವುದಾಗಿ ಅವರು ಹೇಳಿದ್ದಾರೆ.
2023ರ ಜೂನ್‌ನಲ್ಲಿ ರಾಜಸ್ಥಾನದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ನೀಡಬೇಕಾದ 55 ಸಾವಿರ ರೂಪಾಯಿ ಪರಿಹಾರವನ್ನು ನಾಣ್ಯದ ರೂಪದಲ್ಲಿ ನೀಡಿದ ಬಗ್ಗೆ ವರದಿಯಾಗಿತ್ತು. ಜೈಪುರ ಮೂಲದ ದಶರಥ್ ಎಂಬಾತ 11 ತಿಂಗಳ ಪರಿಹಾರ ಮೊತ್ತವನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಆತನ ಬಂಧನವಾಗಿತ್ತು. ಹೀಗಾಗಿ ವಿಚಾರಣೆ ದಿನ ಆತನ ಸಂಬಂಧಿಗಳು 1 ಹಾಗೂ 2 ರೂಪಾಯಿಯ ನಾಣ್ಯಗಳನ್ನು ಒಟ್ಟು ಸೇರಿಸಿ 7 ಬ್ಯಾಗ್‌ಗಳಲ್ಲಿ ಪರಿಹಾರ ಮೊತ್ತವನ್ನು ತುಂಬಿ ಕೋರ್ಟ್‌ಗೆ ತಂದಿದ್ದರು. ಈ ವೇಳೆ ದಶರತ್ ಅವರ ಪತ್ನಿ ಸೀಮಾ ಕುಮಾವತ್ ಪರ ವಕೀಲರು ಈ 50 ಸಾವಿರ ಬೆಲೆಯ ನಾಣ್ಯಗಳನ್ನು ಲೆಕ್ಕ ಹಾಕುವುದು ಮಾನಸಿಕ ಕಿರುಕುಳವಾಗಿದೆ ಎಂದು ವಾದ ಮಾಡಿದ್ದರು. ಹೀಗಾಗಿ ನ್ಯಾಯಾಧೀಶರು ಪತಿಯ ಚೇಷ್ಟೆಗಳನ್ನು ಗಮನಿಸಿ ಸ್ವತಃ ಅವರೇ ನ್ಯಾಯಾಲಯದಲ್ಲಿ ಈ ನಾಣ್ಯಗಳನ್ನು ಲೆಕ್ಕ ಮಾಡುವಂತೆ ಸೂಚಿಸಿದ್ದರು. ಅಲ್ಲದೇ ದಶರತ್ ಅವರ ಬಳಿಯಿಂದ 1000 ರೂಪಾಯಿಗಳ 55 ಸೆಟ್ ಮಾಡುವಂತೆ ಕೇಳಿದ್ದರು. ಅಲ್ಲದೇ ಮುಂದಿನ ವಿಚಾರಣೆ ವೇಳೆ ಆ ಹಣವನ್ನು ಸೀಮಾಗೆ ನೀಡುವಂತೆ ಸೂಚಿಸಿದ್ದರು.