Viral Video: Little Boy Asks CM Yogi Adityanath for 'Chips'; Internet Fida ಪುಟ್ಟ ಮಗುವಿನ ಮುಗ್ಧ ಬೇಡಿಕೆಯನ್ನು ಕೇಳಿದ ನಂತರ ಸಿಎಂ ಯೋಗಿ ಆದಿತ್ಯನಾಥ್ ಕೂಡ ನಗಲು ಆರಂಭಿಸಿದರು.
ಲಕ್ನೋ (ಜ.15): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಎದುರಲ್ಲಿ ಪುಟ್ಟ ಬಾಲಕ ಮಾಡಿದ ಮುಗ್ಧ ವಿನಂತಿ ಕೇಳಿ ನಕ್ಕು ಹಗುರಾದ ಸನ್ನಿವೇಶ ಎದುರಾಯಿತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯೋಗಿ ಆದಿತ್ಯನಾಥ್ ಖರ್ಚಿಯಲ್ಲಿ ಕುಳಿತಿದ್ದು, ಅವರ ಪಕ್ಕದಲ್ಲಿ ನಿಂತಿದ್ದ ಮಗುವಿಗೆ ನಿನಗೆ ಏನು ಬೇಕು ಎಂದು ಮೃದುವಾಗಿ ಕೇಳುತ್ತಿರುವುದನ್ನು ತೋರಿಸಲಾಗಿದೆ. ಈ ಹಂತದಲ್ಲಿ ಪುಟ್ಟ ಬಾಲಕ ಯೋಗಿ ಆದಿತ್ಯನಾಥ್ ಅವರ ಕಿವಿಯಲ್ಲಿ ಏನೋ ಪಿಸುಗುಟ್ಟಿದ್ದಾರೆ. ಆರಂಭದಲ್ಲಿ ಇದು ಸಿಎಂಗೆ ಕೇಳಿಸೋದಿಲ್ಲ. ಕೊನೆಗೆ ಪುಟ್ಟ ಬಾಲಕ ಏನು ಹೇಳುತ್ತಿದ್ದಾನೆ ಎಂದು ಅರ್ಥಮಾಡಿಕೊಂಡ ನಂತರ ಮುಖ್ಯಮಂತ್ರಿ ಮನಸಾರೆ ನಕ್ಕಿದ್ದು ಕಂಡಿದೆ.
ವೈರಲ್ ಆಗಿರುವ ಕ್ಲಿಪ್‌ನಲ್ಲಿ ಯೋಗಿ ಆದಿತ್ಯನಾಥ್, 'ಔರ್ ಕ್ಯಾ ಚಾಹಿಯೇ ಬತಾವ್..' (ಮತ್ತಿನ್ನೇನು ಬೇಕು ಕೇಳು.) ಎಂದು ಹೇಳುತ್ತಾರೆ. ಈ ವೇಳೆ ಮುಖ್ಯಮಂತ್ರಿಯತ್ತ ವಾಲುವ ಪುಟ್ಟ ಹುಡುಗ ಕಿವಿಯಲ್ಲಿ 'ಚಿಪ್ಸ್' ಎಂದು ಹೇಳಿದ್ದಾನೆ. ಇದು ಸಿಎಂ ಯೋಗಿ ಆದಿತ್ಯನಾಥ್ ನಗುವಿಗೆ ಕಾರಣವಾಯಿತು. ಹಿನ್ನಲೆಯಲ್ಲಿ ಇತರರು ಕೂಡ ಪುಟ್ಟ ಬಾಲಕನ ಮುಗ್ದ ಮನವಿ ಕೇಳಿ ಎಲ್ಲರೂ ನಕ್ಕಿದ್ದು ಕಂಡಿದೆ. ಎಕ್ಸ್‌ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, 'ಚಿಪ್ಸ್ ಮಾಂಗ್ ರಹಾ ಹೇ..' ಚಿಪ್ಸ್ ಕೇಳುತ್ತಿದ್ದಾನೆ ಎಂದು ಹಂಚಿಕೊಳ್ಳಲಾಗಿದೆ.
ಇದನ್ನ ಕ್ಲಿಯರ್ ಥಿಂಕಿಂಗ್ ಎನ್ನುತ್ತಾರೆ ಎಂದ ನೆಟ್ಟಿಗರು
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಪುಟ್ಟ ಬಾಲಕ ನೀಡಿದ ಒಂದೇ ಶಬ್ದದ ಪ್ರತಿಕ್ರಿಯೆ ಹಾಗೂ ಆತ ಬೇಡಿಕೆ ಇಟ್ಟ ರೀತಿ ಎಲ್ಲರಿಗೂ ಮೆಚ್ಚುಗೆಯಾಗಿದೆ. ಹೆಚ್ಚಿನವರು ಪುಟ್ಟ ಬಾಲಕನ ಪ್ರತಿಕ್ರಿಯೆಯನ್ನು ಮೆಚ್ಚಿದ್ದಾರೆ. 'ಇದನ್ನು ಕ್ಲಿಯರ್ ಥಿಂಕಿಂಗ್ ಎಂದು ಹೇಳ್ತಾರೆ' ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು, ಬಾಲಕನ ಅಗತ್ಯ ಎಲ್ಲವೂ ಪೂರೈಸಿದಂತಾಗಿ ಎಂದು ಬರೆದಿದ್ದಾರೆ.
'ಉತ್ತರ ಪರದೇಶಕ್ಕೆ ಆತ ನ್ಯಾನೋ ಚಿಪ್ಸ್ ಕೇಳ್ತಿದ್ದಾನೆ..' ಎಂದು ಒಬ್ಬರು ಬರೆದಿದ್ದರೆ, 'ಹಸಿರು ಲೇಯ್ಸ್ ಕೊಡಬೇಡಿ, ಕೆಂಪು ಬಣ್ಣದ ಲೇಯ್ಸ್ ಕೊಡಿ..' ಎಂದು ಮತ್ತೊಬ್ಬರು ಬರೆದಿದ್ದಾರೆ.
ಇನ್ನೊಬ್ಬ ವ್ಯಕ್ತಿ, 'ನೀನು ಯೋಗಿ ಅವರ ಬಳಿ ಒಂದು ಜಿಲ್ಲೆಯನ್ನು ಕೇಳಬಹುದಿತ್ತು. ಆದರೆ, ಒಂದು ಚಿಪ್ಸ್ ಕೇಳಿದ್ದೀಯ.. ಎಂಥಾ ಕ್ಯೂಟ್ ವಿಡಿಯೋ' ಎಂದು ಕಾಮೆಂಟ್ ಮಾಡಲಾಗಿದೆ.
ಗೋರಖ್‌ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ, ಜನವರಿ 15 ರ ಗುರುವಾರದಂದು ಗೋರಖ್‌ನಾಥ್ ದೇವಸ್ಥಾನದಲ್ಲಿ ಯೋಗಿ ಆದಿತ್ಯನಾಥ್ ಸಾಂಪ್ರದಾಯಿಕ "ಖಿಚಡಿ"ಯನ್ನು ಅರ್ಪಿಸಿದರು, ಇದು ವಾರ್ಷಿಕ ಖಿಚಡಿ ಮೇಳದ ಆರಂಭವನ್ನು ಸೂಚಿಸುತ್ತದೆ. ಗೋರಖ್ ಪೀಠಾಧೀಶ್ವರರೂ ಆಗಿರುವ ಬಿಜೆಪಿ ನಾಯಕ, ನಾಥ ಪಂಥದ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳಿಗೆ ಅನುಗುಣವಾಗಿ ಬೆಳಿಗ್ಗೆ 4 ಗಂಟೆ ಸುಮಾರಿಗೆ ಮಹಾಯೋಗಿ ಗುರು ಗೋರಖ್ನಾಥರಿಗೆ ಖಿಚಡಿಯನ್ನು ಅರ್ಪಿಸಿದರು.
ಪಿಟಿಐ ವರದಿಯ ಪ್ರಕಾರ, ಆದಿತ್ಯನಾಥ್ ಅವರು ಸಾರ್ವಜನಿಕ ಕಲ್ಯಾಣದ ಜೊತೆಗೆ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು, ಎಲ್ಲರಿಗೂ ಸಮೃದ್ಧ ಮತ್ತು ಸಂತೋಷದ ಜೀವನಕ್ಕಾಗಿ ಆಶೀರ್ವಾದವನ್ನು ಕೋರಿದರು. ಗೋರಕ್ಷಪೀಠಾಧೀಶ್ವರ ಸಂಪ್ರದಾಯದಲ್ಲಿ ಭಾಗವಹಿಸುವುದು ತಮಗೆ ದೊರೆತ ದೊಡ್ಡ ಸೌಭಾಗ್ಯ ಎಂದು ಮುಖ್ಯಮಂತ್ರಿಗಳು ಹೇಳಿದರು. ಭಾರತದಾದ್ಯಂತ ಮಕರ ಸಂಕ್ರಾಂತಿಯನ್ನು ವಿವಿಧ ರೂಪಗಳಲ್ಲಿ ಹೇಗೆ ಆಚರಿಸಲಾಗುತ್ತದೆ ಎಂಬುದನ್ನು ಆದಿತ್ಯನಾಥ್ ವಿವರಿಸಿದರು ಮತ್ತು ಹಬ್ಬದ ಮಹತ್ವವನ್ನು ಎತ್ತಿ ತೋರಿಸಿದರು.
ಸೂರ್ಯನನ್ನು "ವಿಶ್ವದ ಆತ್ಮ" ಎಂದು ಬಣ್ಣಿಸಿದ ಮುಖ್ಯಮಂತ್ರಿಗಳು, ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯನ ಆರಾಧನೆಗೆ ವಿಶೇಷ ಮಹತ್ವವಿದೆ ಎಂದು ಹೇಳಿದರು. ಗೋರಖನಾಥ ದೇವಾಲಯವು ಗುರು ಗೋರಖನಾಥರು ಸ್ಥಾಪಿಸಿದ ಪ್ರಾಚೀನ ಶೈವ ಯೋಗ ಸಂಪ್ರದಾಯವಾದ ನಾಥ ಪರಂಪರೆಯ ಮುಖ್ಯ ಸ್ಥಾನವಾಗಿದೆ, ಇದು ಸ್ವಯಂ ಶಿಸ್ತು, ಯೋಗ, ಆಂತರಿಕ ಜಾಗೃತಿ ಮತ್ತು ಸಾಮಾಜಿಕ ಸಮಾನತೆಗೆ ಒತ್ತು ನೀಡುತ್ತದೆ. ಸಂಪ್ರದಾಯದ ಪ್ರಕಾರ, ಗುರು ಗೋರಖನಾಥರಿಗೆ ದ್ವಿದಳ ಧಾನ್ಯಗಳು ಮತ್ತು ಅಕ್ಕಿಯನ್ನು ಅರ್ಪಿಸುವುದು ಶತಮಾನಗಳಿಂದ ಖಿಚಡಿಯಾಗಿ ವಿಕಸನಗೊಂಡಿತು.


