ಕೊರೋನಾ ಶುರುವಾದಾಗ ಅತಿ ಹೆಚ್ಚು ಸೋಂಕು ಹರಡುವ ಭಯ ಇದ್ದಿದ್ದು ಜನಸಾಂದ್ರತೆ ಜಾಸ್ತಿ ಇರುವ ಉತ್ತರ ಪ್ರದೇಶದಲ್ಲಿ. ಆದರೆ ಸೋಂಕು ಹರಡುವುದನ್ನು ತಡೆದು ಸಮರ್ಥವಾಗಿ ನಿಭಾಯಿಸಿದ್ದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌. ಯೋಗಿ ಬಗ್ಗೆ ವಿರೋಧಿಗಳಿಂದ ಕೂಡ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಯೋಗಿ ಆದಿತ್ಯನಾಥ್‌ ಜೊತೆಗೆ ‘ಕನ್ನಡಪ್ರಭ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಉತ್ತರಪ್ರದೇಶ ದೇಶದಲ್ಲೇ ಅತಿ ದೊಡ್ಡ ಮತ್ತು ಜನನಿಬಿಡ ರಾಜ್ಯ. ಆದರೂ ಅಲ್ಲಿ ಕೊರೋನಾ ಸೋಂಕು ಇಲ್ಲಿಯವರೆಗೆ ನಿಯಂತ್ರಣದಲ್ಲಿದೆ. ಅದು ಹೇಗೆ ಸಾಧ್ಯವಾಯಿತು?

ಉತ್ತರ ಪ್ರದೇಶದಲ್ಲಿ ಮಾಚ್‌ರ್‍ ಮೊದಲ ವಾರದಲ್ಲಿ ಮೊದಲ ಸೋಂಕು ಕಾಣಿಸಿಕೊಳ್ಳುತ್ತಲೇ ಮಾರ್ಚ್ 12 ರಂದು ಉನ್ನತ ಮಟ್ಟದ ಸಭೆ ನಡೆಸಿ ಮಾಚ್‌ರ್‍ 15ರಿಂದಲೇ ಶಾಲೆ ಕಾಲೇಜು ಬಂದ್‌ ಮಾಡಿದ್ದೆವು. ಮೊದಲು ಕೋವಿಡ್‌ ಟೆಸ್ಟಿಂಗ್‌ನ ಒಂದು ಲ್ಯಾಬ್‌ ಸ್ಥಾಪಿಸಿ ದಿನಕ್ಕೆ 50 ಪರೀಕ್ಷೆ ನಡೆಸುತ್ತಿದ್ದ ನಾವು, ಈಗ ಮೇ 15ರಿಂದ 30 ಲ್ಯಾಬ್‌ಗಳಲ್ಲಿ ಪ್ರತಿ ದಿನ 10 ಸಾವಿರ ಟೆಸ್ಟಿಂಗ್‌ ಮಾಡುತ್ತಿದ್ದೇವೆ. ಜೂನ್‌ 30 ರೊಳಗೆ ದಿನಕ್ಕೆ 20 ಸಾವಿರ ಟೆಸ್ಟ್‌ ಮಾಡುವಷ್ಟು ಸಾಮರ್ಥ್ಯ ಹೆಚ್ಚಿಸಲಿದ್ದೇವೆ.

ಕೊರೋನಾ ಹೋರಾಟದಲ್ಲಿ ಯುರೋಪ್‌ನ್ನು ಮೀರಿಸಿದ ಉತ್ತರ ಪ್ರದೇಶ: ಯೋಗಿ

ಇವತ್ತಿನವರೆಗೆ ಯುಪಿಯಲ್ಲಿ 3 ಲಕ್ಷದ 15 ಸಾವಿರ ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದೇವೆ. ರಾಜ್ಯದಲ್ಲಿ ಮೂರು ಸ್ತರದ ಆಸ್ಪತ್ರೆ ವ್ಯವಸ್ಥೆ ಮಾಡಿದ್ದೇವೆ. ಲೆವೆಲ್‌-1ನಲ್ಲಿ ಸಾಮಾನ್ಯ ಬೆಡ್‌ ಮತ್ತು ಆಕ್ಸಿಜನ್‌ ವ್ಯವಸ್ಥೆ, ಲೆವೆಲ್ -2ನಲ್ಲಿ ಕೋವಿಡ್‌ ರೋಗಿಗಳಿಗೆ ವೆಂಟಿಲೇಟರ್‌ ವ್ಯವಸ್ಥೆ ಕೂಡ ಮಾಡಿದ್ದೇವೆ. ಲೆವೆಲ್ -3ನಲ್ಲಿ ಆಕ್ಸಿಜನ್‌ ವೆಂಟಿಲೇಟರ್‌ ಜೊತೆಗೆ ಡಯಾಲಿಸಿಸ್‌ ಸೇರಿದಂತೆ ಬೇರೆ ಎಲ್ಲಾ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿದ್ದೇವೆ. ಲೆವೆಲ್ -1ರ 403 ಆಸ್ಪತ್ರೆಗಳು, ಲೆವೆಲ್ -2 ರ 75 ಆಸ್ಪತ್ರೆಗಳು, ಲೆವೆಲ್ -3ನಲ್ಲಿ ಒಟ್ಟು 25 ಆಸ್ಪತ್ರೆಗಳಲ್ಲಿ ಇವತ್ತಿಗೆ ಒಟ್ಟು 1,01,236 ಬೆಡ್‌ಗಳು ಸಿದ್ಧವಾಗಿವೆ. ಕರಾರುವಾಕ್ಕಾದ ಪರೀಕ್ಷೆ ಮತ್ತು ಕ್ವಾರಂಟೈನ್‌ ಕಾರಣದಿಂದ ಇಷ್ಟೊಂದು ದೊಡ್ಡ ರಾಜ್ಯವಾದರೂ ಕೊರೋನಾ ನಿಯಂತ್ರಣದಲ್ಲಿದೆ.

ಉತ್ತರ ಪ್ರದೇಶ ಮೂಲದ ಬಹಳಷ್ಟುಕಾರ್ಮಿಕರು ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದರು. ಅವರ ವಿಷಯದಲ್ಲಿ ಕೇಂದ್ರ ಸರ್ಕಾರ ಎಡವಿತು ಎಂಬ ಟೀಕೆ ಸಾರ್ವತ್ರಿಕವಾಗಿದೆ ಅಲ್ಲವೇ?

ಲಾಕ್‌ಡೌನ್‌ ಅವಧಿಯಲ್ಲಿ ನಮಗಿದ್ದ ದೊಡ್ಡ ಸವಾಲು ದಿಲ್ಲಿ ಮತ್ತು ಹರಾರ‍ಯಣಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ವಾಪಸ್‌ ಕರೆತರುವುದಾಗಿತ್ತು. ನಡೆದುಕೊಂಡೇ ಊರಿನ ಕಡೆ ಬರುತ್ತಿದ್ದವರನ್ನು ಕರೆತರಲು ಬಸ್‌ಗಳನ್ನು ಕಳುಹಿಸಿ ಊರಿಗೆ ಕರೆತಂದೆವು. ಆಮೇಲೆ ತಬ್ಲೀಘಿ ಜಮಾತ್‌ ಸಭೆಯಲ್ಲಿ ಭಾಗವಹಿಸಿ ಬಂದವರನ್ನು ಕ್ವಾರಂಟೈನ್‌ ಮಾಡುವ ಸವಾಲನ್ನು ಎದುರಿಸಿದ್ದೇವೆ.

ನಾವು ಸರ್ಕಾರಿ ಖರ್ಚಿನಲ್ಲಿ 28 ಲಕ್ಷ ಕಾರ್ಮಿಕರನ್ನು ಮರಳಿ ರಾಜ್ಯಕ್ಕೆ ಕರೆತಂದಿದ್ದೇವೆ. ಇದರ ಜೊತೆಗೆ 4 ಲಕ್ಷ ಕಾರ್ಮಿಕರು ತಮ್ಮ ಖರ್ಚಿನಲ್ಲಿ ಮರಳಿ ಊರಿಗೆ ಬಂದಿದ್ದಾರೆ. ಈ 32 ಲಕ್ಷ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಇಲ್ಲಿಯೇ ಉದ್ಯೋಗ ಕೊಡಬೇಕು, ಅವರ ಕೈಯಲ್ಲಿ ಹಣ ಬರಬೇಕು. ಅದನ್ನು ಮಾಡುವುದರತ್ತ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಟೀಕೆ-ಟಿಪ್ಪಣಿ ರಾಜಕೀಯದಲ್ಲಿ ನಡೆಯುತ್ತದೆ.

ಕೊರೋನಾ ಅಟ್ಟಹಾಸ: ದಿನಗೂಲಿ ಕಾರ್ಮಿಕರಿಗೆ ಸರ್ಕಾರದಿಂದ ಪ್ರತಿದಿನ 1000 ರೂ.!

ಬೇರೆ ರಾಜ್ಯಗಳಲ್ಲಿ ಉದ್ಯೋಗ ಕಳೆದುಕೊಂಡು ಕಷ್ಟದಲ್ಲಿ, ಹಸಿವಿನಲ್ಲಿ ಬಳಲಿ ಮರಳಿ ಬಂದವರಿಗೆ ಹೇಗೆ, ಎಲ್ಲಿ ಉದ್ಯೋಗದ ವ್ಯವಸ್ಥೆ ಮಾಡುತ್ತೀರಿ?

ಯುಪಿಯಲ್ಲಿ 119 ಸಕ್ಕರೆ ಕಾರ್ಖಾನೆಗಳು, 12 ಸಾವಿರ ಇಟ್ಟಿಗೆ ಭಟ್ಟಿಗಳು ಮತ್ತು 2500 ಶೀತಲೀಕರಣದ ಘಟಕಗಳು ಕೆಲಸ ನಿರ್ವಹಿಸುತ್ತಿವೆ. ಇವು ಲಾಕ್‌ಡೌನ್‌ನಲ್ಲೂ ಕೆಲಸ ಮಾಡುತ್ತಿದ್ದವು. ಲಾಕ್‌ಡೌನ್‌ 2ನೇ ಹಂತದಿಂದಲೇ 850 ದೊಡ್ಡ ಕಾರ್ಖಾನೆಗಳನ್ನು ಶುರು ಮಾಡಿಸಿದ್ದು, ಅಲ್ಲಿ 65 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ 3.25 ಲಕ್ಷ ಘಟಕಗಳು ಆರಂಭವಾಗಿದ್ದು, ಅಲ್ಲಿ 25 ಲಕ್ಷ ಕಾರ್ಮಿಕರು 3 ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಸೂಕ್ಷ್ಮ ಶ್ರೇಣಿಯ 80 ಸಾವಿರಕ್ಕೂ ಅಧಿಕ ಯೂನಿಟ್‌ಗಳಲ್ಲಿ 2.5 ಲಕ್ಷ ಕಾರ್ಮಿಕರು ಕೆಲಸ ಶುರು ಮಾಡಿದ್ದಾರೆ. ಮನರೇಗಾದಲ್ಲಿ 40 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲ್ಲೇ ಇದ್ದವರಿಗೆ ಕೆಲಸದ ಕೊರತೆ ಇಲ್ಲ. ಹೊರಗಿನಿಂದ ಬಂದವರಿಗೂ ಕೆಲಸ ಹಂತ ಹಂತವಾಗಿ ಸಿಗುತ್ತದೆ. ಇಲ್ಲಿ ಕೆಲಸ ಮಾಡುತ್ತಿರುವ, ಆದರೆ ಕೆಲಸ ಕಳೆದುಕೊಂಡಿರುವ ಕಾರ್ಮಿಕರು ಮತ್ತು ಹೊರಗಿನಿಂದ ಬಂದು ಕೆಲಸ ಸಿಗದೇ ನಿರಾಶ್ರಿತರಾದ ಕಾರ್ಮಿಕರಿಗೆ ಉಚಿತ ಪಡಿತರ ಮತ್ತು ಪೋಷಣೆಗೆಂದು ಒಂದು ಸಾವಿರ ರುಪಾಯಿ ಹಣ ಬ್ಯಾಂಕ್‌ ಖಾತೆಗೆ ಹಾಕುತ್ತಿದ್ದೇವೆ.

ಆದರೆ ಮುಂಬೈ, ಅಹಮದಾಬಾದ್‌ನಿಂದ ಬಂದವರು ಸೋಂಕು ತೆಗೆದುಕೊಂಡೇ ಬರುತ್ತಿದ್ದಾರೆ. ಇದಕ್ಕಾಗಿ ಏನು ಮಾಡುತ್ತಿದ್ದೀರಿ?

ಯುಪಿಯಲ್ಲಿ ನಮ್ಮ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರಿಂದಲೇ ಇಷ್ಟುದೊಡ್ಡ ರಾಜ್ಯವಾದರೂ ಸೋಂಕಿತರ ಸಂಖ್ಯೆಯೀಗ 3000ದ ಆಸುಪಾಸಿನಲ್ಲಿದೆ. 5000ಕ್ಕೂ ಹೆಚ್ಚು ಜನ ಗುಣ ಮುಖರಾಗಿದ್ದಾರೆ. 140 ಟ್ರೈನ್‌ಗಳು ಯುಪಿ ಮೂಲಕ ಹಾದುಹೋಗಿವೆ. ಸುಮಾರು 40 ರೈಲುಗಳು ಯುಪಿಯ ನಗರಗಳಿಗೆ ಕಾರ್ಮಿಕರನ್ನು ಹೊತ್ತು ತಂದಿವೆ. ಪ್ಲಾಟ್‌ ಫಾಮ್‌ರ್‍ನಲ್ಲಿ ಸ್ಕ್ರೀನಿಂಗ್‌ ಮಾಡುತ್ತಿದ್ದು, ಶಂಕೆ ಬಂದರೆ ನೇರವಾಗಿ ಕ್ವಾರಂಟೈನ್‌ಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ. ವಿಮಾನಗಳಲ್ಲಿ ಬಂದವರಿಗೆ ಕಡ್ಡಾಯವಾಗಿ ಸೀಲ್ ಹಾಕಿ 14 ದಿನ ಮನೆಯಲ್ಲೇ ಕ್ವಾರಂಟೈನ್‌ಗೆ ಕಳುಹಿಸುತ್ತೇವೆ. 6 ದಿನದಲ್ಲಿ ಕೋವಿಡ್‌ ಪರೀಕ್ಷೆಯ ಪರಿಣಾಮ ಬರುತ್ತದೆ.

ಲಾಕ್‌ಡೌನ್‌ನಿಂದ ಲಾಕ್ಆಗಿದ್ದ ವಲಸಿಗರನ್ನು ಮನೆಗೆ ಕಳುಹಿಸಿದ ಯುಪಿ ಸರ್ಕಾರ!

ಪಾಸಿಟಿವ್‌ ಬಂದರೆ ಆಸ್ಪತ್ರೆಗೆ ಕಳುಹಿಸುತ್ತೇವೆ. ಟೆಸ್ಟಿಂಗ್‌ ಮತ್ತು ಕ್ವಾರಂಟೈನ್‌ಅನ್ನು ಕಡ್ಡಾಯ ಮಾಡಿರುವುದರಿಂದ ಸೋಂಕು ನಿಯಂತ್ರಣದಲ್ಲಿದೆ. ಕೊರೋನಾ ಕಾಲದಲ್ಲಿ ನನ್ನ ಕಾರ್ಯಾಲಯದಿಂದಲೇ ನಾನು ದಿನಾಲೂ ಸಮೀಕ್ಷಾ ಬೈಠಕ್‌ ನಡೆಸುತ್ತಿದ್ದು, ವೈದ್ಯರು ಸರಿಯಾಗಿ ರೌಂಡ್ಸ್‌ ಬರುತ್ತಾರೋ ಇಲ್ಲವೋ, ಸ್ವಚ್ಛತೆ ಪ್ರಮಾಣ ಹೇಗಿದೆ, ಔಷಧಿ ಸಮಯಕ್ಕೆ ಸರಿಯಾಗಿ ತಲುಪುತ್ತದೆಯೋ ಇಲ್ಲವೋ ಎಂಬ ಬಗ್ಗೆ ಖುದ್ದು ವರದಿ ತೆಗೆದುಕೊಳ್ಳುತ್ತೇನೆ. ಕ್ವಾರಂಟೈನ್‌ ಕೇಂದ್ರಗಳ ಉಸ್ತುವಾರಿಗಾಗಿ ಕೂಡ ರಾಜಧಾನಿ ಲಖನೌದಿಂದ ಎಲ್ಲಾ ಜಿಲ್ಲೆಗಳಿಗೆ ವಿಶೇಷ ಅಧಿಕಾರಿಗಳನ್ನು ಕಳುಹಿಸಿದ್ದು, ಅವರಿಂದ ನೇರವಾಗಿ ನನ್ನ ಕಾರ್ಯಾಲಯ ವರದಿ ತೆಗೆದುಕೊಳ್ಳುತ್ತದೆ.

ನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ಜಿಲ್ಲೆಗಳಿಗೆ ತಪಾಸಣೆಗೆ ಕಳುಹಿಸಿದ್ದು, ಅವರಿಂದ ಬಂದ ವರದಿಯನ್ನು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಪರಿಶೀಲಿಸಿ ನನಗೆ ವರದಿ ನೀಡುತ್ತಾರೆ. ಕೊರೋನಾ ನಿಯಂತ್ರಣಕ್ಕಾಗಿ ಯುಪಿಯಲ್ಲಿ ಒಂದು ಸಿಸ್ಟಮ್‌ ಜಾರಿಗೆ ತಂದಿದ್ದೇವೆ. ಯುಪಿಯಲ್ಲಿ ಗುಣಮುಖರಾಗುವ ಸರಾಸರಿ ಚೆನ್ನಾಗಿದೆ, ಜನರಲ್ಲೂ ಜಾಗೃತಿ ಬಂದಿದೆ.

ಪರಿಣತರ ಪ್ರಕಾರ ಸೋಂಕು ವಿಪರೀತಕ್ಕೆ ಹೋಗುವುದು ಇನ್ನೂ ಬಾಕಿ ಇದೆ. ಈಗಂತೂ ಲಾಕ್‌ಡೌನ್‌ ಮುಗಿದಿದೆ. ಸೋಂಕು ಇನ್ನೂ ಗರಿಷ್ಠಕ್ಕೆ ಹೋಗಬಹುದು ಅಲ್ವಾ?

ನೋಡಿ, ಮೇ ಅಂತ್ಯದವರೆಗೆ ಉತ್ತರಪ್ರದೇಶದಲ್ಲೇ 80 ಸಾವಿರ ಜನರಿಗೆ ಸೋಂಕು ಬರಬಹುದು ಎಂದು ರಿಪೋರ್ಟ್‌ ಇತ್ತು. ಅದನ್ನು ಸರ್ಕಾರ ಮತ್ತು ಜನರ ಸಾಂಘಿಕ ಪ್ರಯತ್ನದಿಂದ 8 ಸಾವಿರಕ್ಕೆ ತಗ್ಗಿಸಿದ್ದೇವೆ. ಇದಕ್ಕೆ ಪ್ರಧಾನಿ ಮೋದಿ ಸಮಯೋಚಿತವಾಗಿ ತೆಗೆದುಕೊಂಡ ಪೂರ್ಣ ಲಾಕ್‌ಡೌನ್‌ ನಿರ್ಧಾರವೇ ಕಾರಣ. ಆ ನಿರ್ಧಾರಕ್ಕೆ ಮುಖ್ಯ ಕಾರಣ ನಮ್ಮ ಜನರಲ್ಲಿ ಸೋಂಕು ಮತ್ತು ಸ್ವಚ್ಛತೆ ಬಗ್ಗೆ ಜಾಗರೂಕತೆ ತರುವುದು.

ವಲಸೆ ಕಾರ್ಮಿಕರ ಮುಂದಿಟ್ಟು ರಾಜಕೀಯದಾಟ ನಿಲ್ಲಿಸಿ; ಕಾಂಗ್ರೆಸ್‌ಗೆ ಯೋಗಿ ಆದಿತ್ಯನಾಥ್ ಎಚ್ಚರಿಕೆ!

ಭಾರತ ಮತ್ತು ಅಮೆರಿಕದಲ್ಲಿ ಒಂದೇ ಕಾಲಕ್ಕೆ ಸೋಂಕು ಆರಂಭವಾಗಿತ್ತು. ಇವತ್ತು ಅಮೆರಿಕದಲ್ಲಿ 17 ಲಕ್ಷ ಜನರಿಗೆ ಸೋಂಕು ತಗುಲಿದೆ. ಭಾರತದಲ್ಲಿ ಕೇವಲ 2.5 ಲಕ್ಷ ಸೋಂಕು ಇದೆ. ಅದರಲ್ಲೂ ಅರ್ಧ ಜನ ಗುಣಮುಖರಾಗಿದ್ದಾರೆ. ಉಳಿದವರಿಗೆ ಹೋಲಿಸಿದರೆ ಮರಣದ ಪ್ರಮಾಣವೂ ಕಡಿಮೆಯಿದೆ. ಇದಕ್ಕೆ ಮ್ಯಾನೇಜ್ಮೆಂಟ್‌ ಜೊತೆಗೆ ಸಮಯಕ್ಕೆ ಸರಿಯಾಗಿ ತೆಗೆದುಕೊಂಡ ನಿರ್ಣಯವೇ ಕಾರಣ.

ಮೋದಿಯವರಂತಹ ವಿಶ್ವಾಸಾರ್ಹ ನೇತೃತ್ವ ಇರುವುದರಿಂದ ಜನ ಸ್ವಯಂಪ್ರೇರಿತರಾಗಿ ಅವರು ಹೇಳಿದ್ದನ್ನು ಪಾಲಿಸುತ್ತಾರೆ. ಹೀಗಾಗಿ ನಾವು ಸೋಂಕಿನ ಪ್ರಮಾಣ ತಗ್ಗಿಸಿದ್ದೇವೆ. ಮೋದಿ ಹೇಳಿದ್ದರಿಂದಲೇ ಇವತ್ತು ಪ್ರತಿಯೊಬ್ಬ ಭಾರತೀಯ ಮನೆಯಿಂದ ಹೊರಗೆ ಬೀಳುವಾಗ ಮಾಸ್ಕ್‌ ಹಾಕುತ್ತಾನೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾನೆ. ಸ್ಯಾನಿಟೈಸರ್‌ ಬಳಸುತ್ತಾನೆ. ಇವತ್ತು ಎಲ್ಲರಿಗೂ ಗೊತ್ತಿದೆ; ಜಾಗರೂಕತೆ ಇದ್ದರೆ ಮಾತ್ರ ಸೋಂಕನ್ನು ತಡೆಯಬಲ್ಲೆವು ಎಂದು.

ಮೋದಿ ಸರ್ಕಾರ ಮತ್ತು ಬಿಜೆಪಿ ಕೊರೋನಾ ಸಂಕಟ ಸರಿಯಾಗಿ ನಿಭಾಯಿಸಿಲ್ಲ ಎಂದು ಕಾಂಗ್ರೆಸ್‌ ಹೇಳುತ್ತಿದೆ?

ಕಾಂಗ್ರೆಸ್‌ನವರಿಗೆ ಗ್ರೌಂಡ್‌ನಲ್ಲಿನ ಸ್ಥಿತಿಗತಿ ಗೊತ್ತಿಲ್ಲ. ಅಥವಾ ಹೀಗೂ ಹೇಳಬಹುದು; ಕಾಂಗ್ರೆಸ್‌ನವರು ತಳಮಟ್ಟದ ಪರಿಸ್ಥಿತಿಯ ಅಧ್ಯಯನಕ್ಕೆ ಹೋಗದೇ ಟೀಕೆಗಾಗಿ ಟೀಕೆ ಮಾಡುತ್ತಾರೆ. ನಾವೇ ಯುಪಿಯಲ್ಲಿ ವಲಸೆ ಕಾರ್ಮಿಕರಿಗೆಂದೇ ಮೊದಲ ಬಾರಿ ವಲಸೆ ಕಾರ್ಮಿಕರ ಆಯೋಗ ಸ್ಥಾಪನೆ ಮಾಡಿದ್ದೇವೆ. ಅವರ ಕೌಶಲ್ಯ ನೋಡಿ ಉದ್ಯೋಗ ಕೊಡುತ್ತೇವೆ. ನಮ್ಮ ಕೆಲಸ ನೋಡಬೇಕೆಂದರೆ ಸ್ವಲ್ಪ ತಳಮಟ್ಟಕ್ಕೆ ಹೋಗಬೇಕು. ಅದು ಕಾಂಗ್ರೆಸ್‌ನವರಿಗೆ ಸಾಧ್ಯವಾಗೋದಿಲ್ಲ.

ಲಾಕ್‌ಡೌನ್‌ನಿಂದ ಸರ್ಕಾರದ ಆದಾಯ ಇಳಿಮುಖವಾಗಿದೆ. ಇದಕ್ಕಾಗಿ ಯುಪಿ ಸರ್ಕಾರದ ಯೋಜನೆ ಏನು?

ಲಾಕ್‌ಡೌನ್‌ನಿಂದ ಅಂಗಡಿ-ಮುಂಗಟ್ಟು, ವ್ಯಾಪಾರ-ವಹಿವಾಟು ಬಂದ್‌ ಆಗಿದ್ದರಿಂದ ಸರ್ಕಾರದ ಆದಾಯದ ಮೇಲೂ ಪರಿಣಾಮ ಬೀಳುವುದು ಸ್ವಾಭಾವಿಕ. ಆದರೆ ಯುಪಿ ಸರ್ಕಾರ ಸಮಯಕ್ಕೆ ಸರಿಯಾಗಿ 100 ಪ್ರತಿಶತ ಸಂಬಳ ಕೊಟ್ಟಿದೆ, ಪಿಂಚಣಿ ಕೊಟ್ಟಿದ್ದೇವೆ. ಇದಕ್ಕಾಗಿ ಅನವಶ್ಯಕ ಖರ್ಚು ವೆಚ್ಚ ಬಂದ್‌ ಮಾಡಿಸಿದ್ದೇವೆ. ಯುಪಿ ಸರ್ಕಾರಕ್ಕೆ ತಿಂಗಳಿಗೆ 15 ಸಾವಿರ ಕೋಟಿ ಖರ್ಚು ಇದೆ.

ಲಾಕ್‌ಡೌನ್ ನಡುವೆ ಹೀಗೆ ನಡೆಯಿತು ಸಿಎಂ ಯೋಗಿ ತಂದೆ ಅಂತಿಮ ಕ್ರಿಯೆ!

ಕೊರೋನಾದಿಂದ ಚೈನಾ ಉದ್ಯಮಗಳು ಭಾರತಕ್ಕೆ ಬರುತ್ತವೆಯೇ?

ಬರೀ ಚೀನಾ ಏಕೆ, ಜಪಾನ್‌ನಿಂದಲೂ ದೊಡ್ಡ ದೊಡ್ಡ ಕಾರ್ಖಾನೆಗಳು ಭಾರತಕ್ಕೆ ಶಿಫ್ಟ್‌ ಆಗುತ್ತಿವೆ. ನಾವು ಈ ಉದ್ಯಮಗಳೊಂದಿಗೆ ಮಾತುಕತೆ ನಡೆಸಲು ಅಧಿಕಾರಿಗಳ ಟೀಮ್‌ ರಚಿಸಿದ್ದು, ಬಂಡವಾಳ ಹೂಡಲು ಉತ್ತರ ಪ್ರದೇಶದಲ್ಲಿ ಪೂರಕ ವಾತಾವರಣ ಕೂಡ ಕೊಡುತ್ತೇವೆ. ಯುಪಿಯ ಉದ್ಯೋಗ ನೀತಿಯಲ್ಲಿ ಸಾಕಷ್ಟುಬದಲಾವಣೆ ತಂದಿದ್ದೇವೆ.

- ಸಂದರ್ಶನ: ಪ್ರಶಾಂತ್‌ ನಾತು