ನವದೆಹಲಿ(ಮಾ.21): ಭಾರತಕ್ಕೂ ಕೊರೋನಾ ಐರಸ್ ಲಗ್ಗೆ ಇಟ್ಟಿದ್ದು, ಸದ್ಯ ೨೭೦ ಕ್ಕೂ ಅಧಿಕ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಒಂದೆಡೆ ಸರ್ಕಾರಗಳು ಮುಂಜಾಗೃತಾ ಕ್ರಮ ವಹಿಸಿದ್ದರೆ, ಮತ್ತೊಂದೆಡೆ ಜನರು ಮನೆಯೊಳಗೆ ಸೇರಿಕೊಂಡಿದ್ದಾರೆ. ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಇದರಿಂದ ಸಹಜವಾಗಿ ಬೀದಿ ವ್ಯಾಪಾರಿಗಳಿಗೆ, ದಿನಗೂಲಿ ಕಾರ್ಮಿಕರ ದೈನಂದಿನ ಬದುಕು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಕೊರೋನಾ ಅಬ್ಬರಕ್ಕೆ ಜೀವನ ಶೈಲಿ ಬದಲಾಗಿದೆ. ಹೀಗಿರುವಾಗ ಉತ್ತರ ಪ್ರದೇಶ ಸರ್ಕಾರ ಸುಮಾರು 35 ಲಕ್ಷ ಮಂದಿ ಕಾರ್ಮಿಕರಿಗೆ ಪ್ರತಿನಿತ್ಯ ಸಾವಿರ ರೂ. ನೀಡುವುದಾಗಿ ಘೋಷಿಸಿದೆ. 

ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸರ್ಕಾರ ಸುಮಾರು 35 ಲಕ್ಷ ದಿನಗೂಲಿ ಹಾಗೂ ನಿರ್ಮಾಣ ಕಾರ್ಮಿಕರ ದೈನಂದಿನ ಜೀವನಕ್ಕೆ ಅಗತ್ಯವಾದ ವಸ್ತುಗಳನ್ನು ಪೂರೈಸಲು ಪ್ರತಿ ದಿನಕ್ಕೆ ಸಾವಿರ ರೂಪಾಯಿ ಪರಿಹಾರವಾಗಿ ನೀಡಲು ನಿರ್ಧರಿಸಿದೆ. ಈವರೆಗೂ ಭಾರತದಲ್ಲಿ ಒಟ್ಟು 270ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಒಟ್ಟು 23 ಕೇಸ್‌ಗಳು ದಾಖಲಾಗಿದೆ, ಅದರಲ್ಲಿ 9 ಜನರು ಚೇತರಿಸಿಕೊಂಡಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಪಿಎಂ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿ, ಭಾನುವಾರ ಮನೆಯಲ್ಲೇ ಉಳಿದುಕೊಂಡು ಕೊರೋನಾ ವಿರುದ್ಧ ಒಟ್ಟಾಗಿ ಹೋರಾಡಬೇಕಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.