DK Shivakumar ನಿಗಮ- ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿರ್ದೇಶಕರುಗಳ ಹೆಸರುಗಳನ್ನು ಅಂತಿಮ ಮಾಡಿ ಹೈಕಮಾಂಡ್ಗೆ ಕೊಟ್ಟಿದ್ದೇವೆ. ಅದರಲ್ಲಿ 500 ಜನರ ಹೆಸರಿದೆ. ಹೊಸಬರಿಗೆ ಅವಕಾಶ ನೀಡಲು ಹೈಕಮಾಂಡ್ಗೆ ಕೋರಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ನವದೆಹಲಿ (ಅ.23): ನಿಗಮ- ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿರ್ದೇಶಕರುಗಳ ಹೆಸರುಗಳನ್ನು ಅಂತಿಮ ಮಾಡಿ ಹೈಕಮಾಂಡ್ಗೆ ಕೊಟ್ಟಿದ್ದೇವೆ. ಅದರಲ್ಲಿ 500 ಜನರ ಹೆಸರಿದೆ. ಹೊಸಬರಿಗೆ ಅವಕಾಶ ನೀಡಲು ಹೈಕಮಾಂಡ್ಗೆ ಕೋರಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಹೊಸಬರಿಗೆ ಅವಕಾಶ ನೀಡಲು ಕೋರಿದ್ದೇನೆ: ಸಿಎಂ
ದೆಹಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ದೆಹಲಿಗೆ ಬಂದ ಮೇಲೆ ಹೈಕಮಾಂಡ್ ಭೇಟಿ ಸಹಜ. ಕೆ.ಸಿ.ವೇಣುಗೋಪಾಲ್ ಅವರ ಜೊತೆ ನಿಗಮ-ಮಂಡಳಿ ನೇಮಕ ವಿಚಾರವಾಗಿ ಚರ್ಚೆ ಮಾಡಿದ್ದೇವೆ.
ಹೊಸಬರಿಗೆ ಅವಕಾಶ ನೀಡಲು ಕೋರಿದ್ದೇನೆ. ಸಂಪುಟ ಭರ್ತಿ ಮಾಡುವ ವಿಚಾರವನ್ನು ಅವರ ಗಮನಕ್ಕೆ ತಂದಿದ್ದೇನೆ. ನೀತಿ ಸಂಹಿತೆ ಇರುವ ಕಾರಣ ನಿಗಮ ಮಂಡಳಿ ನಿರ್ದೇಶಕರ ಹೆಸರುಗಳನ್ನು ಘೋಷಣೆ ಮಾಡಿಲ್ಲ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ವಿಚಾರವಾಗಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು.
ಹೆಚ್ಡಿ ಕುಮಾರಸ್ವಾಮಿ ಪತ್ರಕ್ಕೆ ಟಾಂಗ್
ನನ್ನ ಸಿಎಂ ಅಂತ ಒಪ್ಪದವ್ರು‘ಟೀಕೆ’ಶಿ - ಮಾನ್ಯ ಮುಖ್ಯಮಂತ್ರಿಗಳೇ ಅಂತ ಬರೆದಿದ್ದಾರೆ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಮುಖ್ಯಮಂತ್ರಿ ಅಂತಲೇ ಒಪ್ಪಿಕೊಳ್ಳಲು ತಯಾರೇ ಇರಲಿಲ್ಲ. ಆದರೆ ಇವತ್ತು ‘ಮಾನ್ಯ ಮುಖ್ಯಮಂತ್ರಿಗಳೇ’ ಅಂತ ಪತ್ರ ಬರೆದಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವ್ಯಂಗ್ಯವಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಬರೆದಿರುವ ಪತ್ರದ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಬರೆದಿರುವ ಪತ್ರದ ವಿಚಾರ ನನಗೆ ಈಗ ತಿಳಿದಿದೆ. ಗುರುವಾರ ಪತ್ರ ಬರೆದಿದ್ದಾರೆ. ನಾನು ಆ ಪತ್ರವನ್ನು ನೋಡಿಲ್ಲ. ಆ ಪತ್ರದಲ್ಲಿ ಏನಿದೆ ಎಂದು ನೋಡಿ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.


