ಅಮರನಾಥ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಭಕ್ತರಿದ್ದ ಬಸ್ಸೊಂದು ಭೀಕರ ಅಪಘಾತಕ್ಕೀಡಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಕಂಗನ್ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಶ್ರೀನಗರ: ಅಮರನಾಥ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಭಕ್ತರಿದ್ದ ಬಸ್ಸೊಂದು ಭೀಕರ ಅಪಘಾತಕ್ಕೀಡಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಕಂಗನ್ ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ವೇಗವಾಗಿ ಬಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಮನೆಯೊಂದರ ಮೇಲೆ ಬಿದ್ದಿದ್ದು, ಕನಿಷ್ಠ 39 ಯಾತ್ರಿಕರು ಗಾಯಗೊಂಡಿದ್ದಾರೆ.
ನದಿಗೆ ಬೀಳಬೇಕಿದ್ದ ಬಸ್ಸನ್ನು ತಡೆದ ಮನೆ!
ಹರಿಗನ್ವಾನ್ ಎಂಬಲ್ಲಿ ತೀಕ್ಷ್ಣವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದಾಗ ಬಸ್ ರಸ್ತೆಯಿಂದ ಕೆಳಕ್ಕೆ ಉರುಳಿದೆ. ಅದೃಷ್ಟವಶಾತ್ ಬಸ್ ಪಕ್ಕದಲ್ಲೇ ಇದ್ದ ಮನೆಯೊಂದರ ಮೇಲೆ ಬಿದ್ದಿದೆ. ಇದರಿಂದ ಮನೆಗೆ ತೀವ್ರ ಹಾನಿಯಾಗಿದೆಯಾದರೂ, ಬಸ್ ಪಕ್ಕದಲ್ಲೇ ಇದ್ದ ಸಿಂಧೂ ನದಿಗೆ ಉರುಳದಂತೆ ಈ ಮನೆ ತಡೆದಿದೆ. ಒಂದು ವೇಳೆ ಬಸ್ ನದಿಗೆ ಬಿದ್ದಿದ್ದರೆ ದೊಡ್ಡ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು. ಅಪಘಾತದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪವಿತ್ರ ಅಮರನಾಥ ಗುಹೆಯಲ್ಲಿ ದರ್ಶನ ಪಡೆದು ಹಿಂತಿರುಗುತ್ತಿದ್ದ 39 ಯಾತ್ರಿಕರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳೀಯ ನಿವಾಸಿಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಸಿಆರ್‌ಪಿಎಫ್ (CRPF) ಮತ್ತು ಭಾರತೀಯ ಸೇನೆಯ ತಂಡಗಳು ಜಂಟಿಯಾಗಿ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸಿದವು.
ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮನೋಜ್ ಸಿನ್ಹಾ ಕಳವಳ
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಗಂದರ್‌ಬಾಲ್ ಜಿಲ್ಲಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ಮತ್ತು ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ. ಗಾಯಗೊಂಡ ಭಕ್ತರು ಶೀಘ್ರವಾಗಿ ಗುಣಮುಖರಾಗಲಿ ಎಂದು ಶಿವನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜುಲೈ 2 ರಿಂದ ಆರಂಭವಾದ ಈ ವರ್ಷದ ಅಮರನಾಥ ಯಾತ್ರೆಯಲ್ಲಿ ಇದುವರೆಗೆ ಸುಮಾರು 4.15 ಲಕ್ಷಕ್ಕೂ ಹೆಚ್ಚು ಭಕ್ತರು ಹಿಮಲಿಂಗದ ದರ್ಶನ ಪಡೆದಿದ್ದಾರೆ. 57 ದಿನಗಳ ಈ ವಾರ್ಷಿಕ ಯಾತ್ರೆಯು ಆಗಸ್ಟ್ 28 ರಂದು ಮುಕ್ತಾಯಗೊಳ್ಳಲಿದೆ.


