Asianet Suvarna News Asianet Suvarna News

90 ದಿನದಲ್ಲಿ ಸ್ಮಶಾನವಾಗುತ್ತಾ ಚೀನಾ? ಕರ್ಮ ಬಿಡೋಲ್ಲ ಬಿಡಿ!

ಕೊರೋನಾ ಹೇಗೆ ಹುಟ್ಟಿತು ಎಂಬ ಬಗ್ಗೆ ಹತ್ತು ಹಲವು ಗೊಂದಲಗಳಿವೆ. ಆದರೆ, ಚೀನಾದ ಕೂಸು ಎಂಬ ಆರೋಪವೂ ಇದೆ. ವಿಶ್ವವೇ ಈ ರೋಗದಿಂದ ಮುಕ್ತವಾದರೂ ಚೀನಾ ಮಾತ್ರ ಇನ್ನೂ ಒದ್ದಾಡುತ್ತಿದೆ. ಜನರು ಸಾಯುತ್ತಿದ್ದಾರೆ. ಇದಕ್ಕೆ ಮಾಡಿದ್ದುಣ್ಣೋ ಮಹಾರಾಯ ಅನ್ನೋದು ಅಲ್ವಾ?

China reports massive surge in Covid cases expert estimates 60 percent of  population likely to be infected next 90 days ckm
Author
First Published Dec 20, 2022, 4:26 PM IST

ಶೋಭಾ. ಎಂ.ಸಿ, ಔಟ್‌ಪುಟ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್

'ಮಾಡಿದ್ದುಣ್ಣೋ ಮಾರಾಯ', 'ಉಪ್ಪು ತಿಂದವನು ನೀರು ಕುಡಿಯಲೇ ಬೇಕು', ಕರ್ಮ ರಿಟರ್ನ್ಸ್...! ಈ ಎಲ್ಲ ಮಾತುಗಳು ಡ್ರ್ಯಾಗನ್ ದೇಶ ಚೀನಾಗೆ ಅನ್ವಯಿಸುತ್ತೆ. ಇಡೀ ಜಗತ್ತಿಗೇ ಕೊರೊನಾ ಹಂಚಿ, ಮುಸಿಮುಸಿ ನಕ್ಕಿದ್ದ ಚೀನಾ, ಈಗ ತಾನೇ ಸಾಕಿದ ಗಿಣಿಯಿಂದ ಹಿಗ್ಗಾಮುಗ್ಗಾ ಕಚ್ಚಿಸಿಕೊಳ್ಳುವ ಸ್ಥಿತಿ ಬಂದಿದೆ. ಚೀನಾದಲ್ಲಿ ಕೊರೊನಾ ಮಹಾಮಾರಿಯ ಮರಣ ಮೃದಂಗ ಶುರುವಾಗಿ ಬಿಟ್ಟಿದೆ. ಕೊರೊನಾ ಹುಟ್ಟಿಗೆ ಕಾರಣವಾಗಿದ್ದ ಡ್ರ್ಯಾಗನ್ ದೇಶವೇ, ಈಗ ವೈರಸ್‌ನಿಂದಾನೇ ವಿಲ ವಿಲ ಒದ್ದಾಡುತ್ತಿದೆ. 

ಮುಂದಿನ 90 ದಿನಗಳಲ್ಲಿ ಚೀನಾದ ಶೇ.60ರಷ್ಟು ಜನತೆ ಕೊರೊನಾ ಸೋಂಕಿಗೆ ಒಳಗಾಗಬಹುದು, ಲಕ್ಷಾಂತರ ಮಂದಿ ಸಾಯಬಹುದು ಅಂತ ತಜ್ಞರು ಷರಾ ಬರೆದು ಬಿಟ್ಟಿದ್ದಾರೆ. ಇದು, ವಿಶ್ವದ ಬಲಿಷ್ಠ ದೇಶ ಎಂದು ಬೀಗುತ್ತಿದ್ದ ಚೀನಾವನ್ನು ತತ್ತರಿಸುವಂತೆ ಮಾಡಿಬಿಟ್ಟಿದೆ. ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಎರಿಕ್ ಫೀಗಲ್ ಪ್ರಕಾರ, 90 ದಿನಗಳಲ್ಲಿ ಶೇ.60 ರಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಲಕ್ಷಾಂತರ ಜನರು ಜೀವ ಕಳೆದುಕೊಳ್ಳುತ್ತಾರಂತೆ. 

ಎಂಬಾಪೆ ಎಂಬ ಎಂಟೆದೆಯ ಭಂಟ, ಸೋತವರನ್ನು ಆಲಿಂಗಿಸುವುದೇ ನೈಜ ಗೆಲುವು!

ಚೀನಾದ ರಾಜಧಾನಿ ಮೂಲಕ ವೈರಸ್ ದೇಶವ್ಯಾಪಿ ವ್ಯಾಪಿಸುತ್ತಿದೆ. ನಿರ್ಬಂಧ ಸಡಿಸಿದ್ದೇ ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ಲಾಕ್‌ಡೌನ್ ವಿರುದ್ಧ ಬೀದಿಗಿಳಿದಿದ್ದ ಚೀನಿಯರು, ಜಿಂಗ್ಪಿನ್ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ರು. ನಿರಂತರ ಲಾಕ್ಡೌನ್‌ನಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದ ಚೀನಿಯರು, ಮತ್ತಷ್ಟು ನಿರ್ಬಂಧಗಳಿಂದ ರೋಸಿ ಹೋಗಿದ್ದರು. ಸರ್ಕಾರದ ವಿರುದ್ಧ ಬೀದಿಗಿಳಿದಿದ್ರು.  ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆದಿತ್ತು. ಜನರ ಸಿಟ್ಟಿಗೆ ಬೆದರಿದ ಚೀನಾ ಸರ್ಕಾರ ನಿರ್ಬಂಧ ಸಡಿಲಿಸಿತ್ತು. ಈ ನಿರ್ಧಾರವೇ ಈಗ ಚೀನಾವನ್ನು ಮತ್ತೊಂದು ಸಂಕಷ್ಟಕ್ಕೆ ದೂಡಿದೆ.

ಇದೀಗ ಕೊರೊನಾ ಸ್ಫೋಟದಿಂದ ಬೆಚ್ಚಿಬಿದ್ದ ಚೀನಾ, ತಜ್ಞರ ವರದಿ ಆಧರಿಸಿ, ಕೊರೊನಾ ಎದುರಿಸಲು ಸಿದ್ಧತೆ ಆರಂಭಿಸಿದೆ. ಕೊರೊನಾದಿಂದಾಗಿ ಶಾಂಘೈ, ಬೀಜಿಂಗ್, ಷಿಯಾನ್ ಸೇರಿ ಹಲವು ನಗರಗಳು ನಲುಗಿಬಿಟ್ಟಿವೆ. ವ್ಯಾಪಾರ, ವಹಿವಾಟು ಕುಸಿಯತೊಡಗಿದೆ. ಜನಜೀವನದ ಮೇಲೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ. 

ತನ್ನ ವೈಫಲ್ಯಗಳನ್ನು ಜಗತ್ತಿನ ಎದುರು ಮುಚ್ಚಿಡುತ್ತಿರುವುದರಲ್ಲಿ ಚೀನಾ ಎತ್ತಿದ ಕೈ. ಕೊರೊನಾ ಆರಂಭದಿಂದಲೂ, ಯಾವ ಗುಟ್ಟು ಬಿಟ್ಟುಕೊಡದೇ, ಎಲ್ಲವನ್ನೂ ಗುಟ್ಟು ಗುಟ್ಟಾಗಿ ಮಾಡುತ್ತಿದ್ದ ಡ್ರ್ಯಾಗನ್, ಸೋಂಕಿತರು, ಸತ್ತವರ ಸಂಖ್ಯೆಯ ಯಾವ ಲೆಕ್ಕವನ್ನೂ ಜಗತ್ತಿಗೆ ತೋರಿಸದೇ ಮರೆ ಮಾಚಿತ್ತು. WHO ಎದುರೂ ಸುಳ್ಳು, ಸುಳ್ಳೇ ಲೆಕ್ಕ ಕೊಟ್ಟಿತ್ತು. ವುಹಾನ್‌ನಲ್ಲಿ ಮೊದಲ ಬಾರಿಗೆ ಸ್ಪೋಟಗೊಂಡ ಕೊರೊನಾ, ಚೀನಾ ಹುಟ್ಟಿಸಿದ ವೈರಸ್ ಎಂದೇ ಹೇಳಲಾಗಿತ್ತು. ಆದರೆ, ಒಂದೂ ಬಾರಿಯೂ ಈ ಸತ್ಯವನ್ನು ಚೀನಾ ಒಪ್ಪಿಕೊಳ್ಳಲೇ ಇಲ್ಲ.

 

Covid Cases: ಕೋವಿಡ್‌ ಅಬ್ಬರ, ಚೀನಾದಲ್ಲಿ ಶವಸಂಸ್ಕಾರಕ್ಕೂ 3 ದಿನ ಕ್ಯೂ!

ಈಗಲೂ, ಚೀನಾ ಕೋವಿಡ್‌ನಿಂದ ಸಾವಿಗೀಡಾದವರ ಅಧಿಕೃತ ಅಂಕಿಸಂಖ್ಯೆ ನೀಡುತ್ತಿಲ್ಲ. ಒಂದು ತಿಂಗಳಿಂದ ಹೆಲ್ತ್ ಬುಲೆಟಿನ್ ರಿಲೀಸ್ ಮಾಡುವುದನ್ನೇ  ನಿಲ್ಲಿಸಿಬಿಟ್ಟಿದೆ.  ಬೀಜಿಂಗ್‌ ಹಾಗೂ ಚೀನಾದ ಇತರ ನಗರಗಳ ಬೀದಿ, ರುದ್ರಭೂಮಿಗಳಲ್ಲಿ ಆಗಲೇ ಕೊರೋನಾ ಅಟ್ಟಹಾಸ ಶುರು ಮಾಡಿಬಿಟ್ಟಿದೆ. ಬೀಜಿಂಗ್‌ನ ಮೈಯುನ್‌ ಚಿತಾಗಾರದಲ್ಲಿ ಶವಗಳ ಸಾಲು ಸಾಲು ಕಂಡು ಮಾಧ್ಯಮಗಳೂ ಬೆಚ್ಚಿ ಬಿದ್ದಿವೆ.  ಶವಗಳನ್ನು ಸುಡಲು ಶವಾಗಾರದ ಸಿಬ್ಬಂದಿ ಹಗಲು, ರಾತ್ರಿ ನಿರಂತರ ಕೆಲಸ ಮಾಡುತ್ತಲೇ ಇದ್ದಾರೆ. 

ಲಿಸಿಕೆಯೂ ಫೇಲ್:
ಕೊರೊನಾ ಮಹಾಮಾರಿ ತಡೆಗಟ್ಟುವಲ್ಲಿ ವಿಫಲವಾಗಿ, ಜಗತ್ತಿನ ಎದುರು ತಲೆತಗ್ಗಿಸಿದ್ದ ಡ್ರ್ಯಾಗನ್, ತರಾತುರಿಯಲ್ಲಿ ಲಸಿಕೆ ಸಂಶೋಧಿಸಿತ್ತು. ಈ ಲಸಿಕೆಯೇ ಈಗ ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ರೋಗ ನಿರೋಧಕ ಶಕ್ತಿ (Immunity Power) ಇಲ್ಲದೇ ಚೀನಿಯರು ಸೋಂಕಿಗೆ ತುತ್ತಾಗುತ್ತಿದ್ದಾರೆ ಅನ್ನುತಾರೆ ತಜ್ಞರು. ಭಾರತದೊಂದಿಗೆ ರೇಸಿಗೆ ಬಿದ್ದಂತೆ ಚೀನಾ ತಯಾರಿಸಿದ ಲಸಿಕೆ, ಅಂಥ ಪರಿಣಾಮಕಾರಿಯಲ್ಲ ಎಂಬ ಮಾತಿದೆ. 

ಕೋವಿಡ್‌ ಸೋಂಕು ಆರಂಭವಾಗಿ ಮೂರು ವರ್ಷದಿಂದ ಈವರೆಗೂ ಮಹಾಮಾರಿಗೆ ಬಲಿಯಾದವರು ಕೇವಲ ಕೇವಲ 5,235 ಜನರು ಮಾತ್ರ ಎನ್ನುತ್ತಿದೆ ಚೀನಾದ ದಾಖಲೆಗಳು. ಭಾರತ ಸೇರಿ, ವಿಶ್ವದೆಲ್ಲಡೆ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಂಡಿವೆ. ಆದರೆ, ಚೀನಾದಲ್ಲಿ ಮಾತ್ರ ಮತ್ತೊಂದು ಸುತ್ತಿನ ಮರಣ ಮೃದಂಗಕ್ಕೆ ವೇದಿಕೆ ಸಿದ್ಧವಾಗಿದೆ. ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ದೂರಿದ್ದ ಚೀನಾ, ಈಗ ಮಹಾಮಾರಿಯ ಎದುರು ಒಂಟಿಯಾಗಿ, ತನ್ನ ದೇಶದ ಜನರನ್ನು ಅಪಾಯಕ್ಕೊಡ್ಡಿ ನಿಂತಿದೆ.

ಇದನ್ನೇ ಏನೋ Karma Returns ಅನ್ನೋದು..!
 

Follow Us:
Download App:
  • android
  • ios