ಅರ್ಜೆಂಟೀನಾ ಗೆಲುವಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಫುಟ್ಬಾಲ್ ಜಗತ್ತು ಮೆಸ್ಸಿ ಜೊತೆಗೆ ಮತ್ತೋರ್ವ ಫುಟ್ಬಾಲ್ ಪಟುವಿನ ಸಾಹಸವನ್ನು ಕೊಂಡಾಡಿದೆ. ಈತ ಫ್ರಾನ್ಸ್ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಿಕೊಡುವ ಸೂಚನೆಯನ್ನು ನೀಡಿದ್ದ. ಆದರೆ ಅಂತಿಮ ಕ್ಷಣದಲ್ಲಿ ಅದೃಷ್ಠ ಕೈಕೊಟ್ಟಿತ್ತು. ವಿಶ್ವಕಪ್ ಗೆದ್ದು ಮೆಸ್ಸಿ ಹೀರೋ ಆಗಿದ್ದರೆ. ಫೈನಲ್ ಪಂದ್ಯ ಸೋತರೂ ಫ್ರಾನ್ಸ್ ಈ ಆಟಗಾರ ಜಗತ್ತನ್ನೇ ಗೆದ್ದಿದ್ದಾನೆ.

ಶೋಭಾ ಎಂಸಿ
ಔಟ್‌ಪುಡ್ ಹೆಡ್, ಏಷ್ಯಾನೆಟ್ ಸುವರ್ಣನ್ಯೂಸ್

ಇಡೀ ಜಗತ್ತೇ ವರ್ಲ್ಡ್ ಕಪ್ ಫುಟ್ಬಾಲ್ ಗೆದ್ದ ಅರ್ಜೆಂಟೀನಾ ಆಟಗಾರ ಮೆಸ್ಸಿಯನ್ನು ತಲೆ ಮೇಲೆ ಹೊತ್ತು ಮರೆಸುತ್ತಿದೆ. 36 ವರ್ಷಗಳ ಬಳಿಕ ತನ್ನ ದೇಶಕ್ಕೆ ವಿಶ್ವಕಪ್ ಗೆದ್ದುಕೊಂಡ ಮೆಸ್ಸಿ, ಈಗ ಅರ್ಜೆಂಟೀನಾ ಜನರ ಕಣ್ಣಲ್ಲಿ ಕಣ್ಮಣಿ. ಅವನೊಂದು ದಂತಕಥೆಯಾಗಿಬಿಟ್ಟಿದ್ದಾರೆ. ನಿನ್ನೆ ರಾತ್ರಿಯಿಡೀ ತುದಿಗಾಲಲ್ಲಿ ನಿಂತು ಫುಟ್ಬಾಲ್ ಫೈನಲ್ ನೋಡಿದ ಫುಟ್ಬಾಲ್ ಪ್ರೇಮಿಗಳು, ಮೆಸ್ಸಿಯಷ್ಟೇ ಅವನನ್ನೂ ಕಣ್ಣರಳಿಸಿ ನೋಡಿದ್ರು. ಆತನ ಆಟಕ್ಕೆ ಮೆಸ್ಸಿಯಂಥ ಮೆಸ್ಸಿಯೇ ಕೆಲ ಹೊತ್ತು ಗಾಬರಿಯಾಗಿದ್ದ ಅಂದ್ರೆ ಸುಳ್ಳಲ್ಲ. ಅವನೊಬ್ಬನೇ ತನ್ನ ಟೀಂ ಗೆಲ್ಲಿಸಿಬಿಡ್ತಾನಾ ಅಂತ ಇಡೀ ಜಗತ್ತೇ ಕೆಲ ಹೊತ್ತು ಅಂದುಕೊಳ್ಳದಿದ್ರೆ ಕೇಳಿ ನೋಡಿ. ಪ್ರತಿ ಫುಟ್ಬಾಲ್ ಪ್ರಿಯರ ಕಣ್ಣಲ್ಲೂ ಅವನೇ ಹೀರೋ. 

ಆತ ಬೇರಾರೂ ಅಲ್ಲ ಫ್ರಾನ್ಸ್ ದೇಶದ ಯುವ ಆಟಗಾರ ಎಂಬಾಪೆ. ಕಿಲಿಯನ್ ಎಂಬಾಪೆ ಅವನ ಪೂರ್ತಿ ಹೆಸರು. 90 ಸೆಕೆಂಡುಗಳ ಅಂತರದಲ್ಲಿ ಎರಡೆರಡು ಗೋಲು ಗಳಿಸಿ, ಅರ್ಜೆಂಟೀನಾದಂಥ ಅರ್ಜೆಂಟೀನಾವನ್ನೇ ಕಂಗಾಲಾಗಿಸಿದವನು ಫ್ರಾನ್ಸ್ ಸ್ಟ್ರೈಕರ್. ಜಸ್ಟ್ 23 ವರ್ಷದ ಕಪ್ಪು ಶಿಲೆಯಂಥ ಎಂಬಾಪೆ, ಒಮ್ಮೆ ತಣ್ಣಗೆ, ಮತ್ತೊಮ್ಮೆ ಯುದ್ಧಕ್ಕಿಳಿದ ಪರಾಕ್ರಮಿಯಂತೆ, ಗೋಲ್ ಮೇಲೆ ಗೋಲ್ ಹೊಡೆಯುತ್ತಾ, ಗೆಲ್ಲಲ್ಲೇ ಬೇಕೆಂದು ಹಸಿದ ಹುಲಿಯಂತೆ ಚಲಿಸುತ್ತಿದ್ದರೆ, ಇಡೀ ಮೈದಾನದ ತುಂಬಾ ಕಪ್ಪು ಮಿಂಚು, ನೋಡುವವರ ಉಸಿರು ನಿಂತಂಥ ಅನುಭವ.

Pic of the Day: ಎಂಬಾಪೆಗೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌ ಸಮಾಧಾನ..!

ಫೈನಲ್‌ನಲ್ಲಿ ಫ್ರಾನ್ಸ್ ಫಾರ್ವರ್ಡ್ ಪ್ಲೇಯರ್, ಹ್ಯಾಟ್ರಿಕ್‌ ಗೋಲು ಗಳಿಸಿದ್ರೂ, ಜಗತ್ತಿನ ಫುಲ್ಬಾಲ್ ಪ್ರಿಯರ ಹೃದಯ ಗೆದ್ದುಬಿಟ್ಟ. ಫ್ರಾನ್ಸ್ ಸೋತಾಗ ಅಭಿಮಾನಿಗಳ ಹೃದಯ ಚೂರಾದರೂ, ಎಂಬಾಪೆಗಾಗಿ ಹೃದಯ ಅರಳಿತ್ತು. 

2018ರ ವಿಶ್ವಕಪ್‌ನಲ್ಲಿ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ್ದ ಎಂಬಾಪೆ, ವಿಶ್ವದ ಫುಟ್ಬಾಲ್ ಪ್ರೇಮಿಗಳ ಭವಿಷ್ಯದ ಹೀರೋ ಆಗಿ ನಿಂತಿಬಿಟ್ಟಿದ್ದಾನೆ. 1998ರಲ್ಲಿ ಫ್ರಾನ್ ಮೊದಲ ಬಾರಿಗೆ ಫಿಫಾ ವಿಶ್ವಕಪ್‌ ಗೆದ್ದಾಗ, ಎಂಬಾಪೆ ಆರು ತಿಂಗಳ ಹಸುಗೂಸು.
ಎಂಬಾಪೆಯ ತಂದೆ, ವೈಲ್ಫೆಡ್ ಎಂಬಾಪೆ, ಕ್ಯಾಮರೂನ್‌ನವರು. ತಾಯಿ ಫಾಯ್ಜಾ ಲಾಮರಿ ಎಂಬಾಪೆ. ಫ್ರಾನ್ಸ್‌ನ ಬಾಂಡಿಯಲ್ಲಿ ಸಾಮಾನ್ಯ ಕಾರ್ಮಿಕ ಕುಟುಂಬದಲ್ಲಿ ಜನಿಸಿದ ಗೋಲ್ಡನ್ ಬೂಟ್ ಸರದಾರನ ಬಾಲ್ಯ ಅಷ್ಟೊಂದು ಸಹನೀಯವಾಗಿರಲಿಲ್ಲ. 

ಪ್ಯಾರಿಸ್‌ನ ಬಾಂಡಿ ಪ್ರದೇಶ ಕೋಮು ಸಂಘರ್ಷಕ್ಕೆ ಹೆಸರುವಾಸಿ. ಸದಾ ಗಲಭೆ, ಸಂಘರ್ಷದ ವಾತಾವರಣ. ‘ಅಪರಾಧಿಗಳ ಜನ್ಮಸ್ಥಾನ’ (crime breeding ground) ಎಂಬ ಕುಖ್ಯಾತಿ ಗಳಿಸಿದ್ದ, ದ್ವೇಷಾಗ್ನಿಯಿಂದ ಹೊತ್ತುಉರಿಯುತ್ತಿದ್ದ ಬಾಂಡಿಯಲ್ಲೇ ತನ್ನ ಬಾಲ್ಯ ಕಳೆದ ಎಂಬಾಪೆಗೆ ಆರನೇ ವಯಸ್ಸಿನಲ್ಲೇ ಚೆಂಡು ಕಾಲ ಲಯಕ್ಕೆ ತಕ್ಕಂತೆ ವರ್ತಿಸುತ್ತಿತ್ತು. 

ಬಾಲ್ಯದ ಕೋಚ್‌ ಎ.ಎಸ್‌ ಬಾಂಡಿ ಬಳಿಕ ತರಬೇತಿ ಪಡೆದ ಎಂಬಾಪೆ, ಫ್ರೆಂಚ್‌ ಫುಟ್‌ಬಾಲ್‌ ಫೆಡರೇಶನ್‌ ನಡೆಸುವ ಕ್ಲಾರಿಫೌಂಟೈನ್‌ ಆಕಾಡೆಮಿ ಸೇರಿದ. ಎಂಬಾಪೆ ಫುಟ್ಬಾಲ್ ಜೀವನಕ್ಕೆ ದೊಡ್ಡ ತಿರುವು ನೀಡಿದ್ದೇ ಈ ಅಕಾಡೆಮಿ. ಆತನಿಗೆ ಫುಟ್ಬಾಲ್ ಕೇವಲ ಆಟವಾಗಿರಲಿಲ್ಲ. ಆತನ ಕಾಲಲ್ಲಿ ಅದೆಂಥದ್ದೋ ಮ್ಯಾಜಿಕ್ ಇತ್ತು. ಆತನ ಆಟದ ಸ್ಟೈಲ್‌ಗೆ ಫಿದಾ ಆಗದವರಿಲ್ಲ. ರಿಯಲ್‌ ಮ್ಯಾಡ್ರಿಡ್‌, ಚೆಲ್‌ಸಿ, ಲಿವರ್‌ಪೂಲ್‌, ಮ್ಯಾಂಚೆಸ್ಟರ್‌ ಸಿಟಿ ಹಾಗೂ ಬೈರನ್‌ ಮ್ಯೂನಿಚ್‌ ಮುಂತಾದ ಶ್ರೀಮಂತ ಕ್ಲಬ್‌ಗಳು ಎಂಬಾಪೆಗಾಗಿ ಹಾತೊರೆಯುತ್ತಿದ್ದವು. 

FIFA World cup 25 ವರ್ಷದ ಇತಿಹಾಸದಲ್ಲಿ ಗೂಗಲ್‌ನಲ್ಲಿ ಹೊಸ ದಾಖಲೆ ಬರೆದ ಫೈನಲ್ ಪಂದ್ಯ!

ಎಂಬಾಪೆಯ ಆಟಕ್ಕೆ ಸ್ವಂತ ಕೋಚ್‌ ಎ.ಎಸ್‌ ಬಾಂಡಿ ಮನಸೋತಿದ್ದ. ‘ನಾನು ಟ್ರೈನಿಂಗ್ ನೀಡುತ್ತಿದ್ದವರ ಪೈಕಿ, ಎಂಬಾಪೆ ಎಲ್ಲರಿಗಿಂತಲೂ ವಿಭಿನ್ನ ಆಟಗಾರನಾಗಿದ್ದ. ಫುಟ್ಬಾಲ್ ಆತನಿಗೆ ಬದುಕಾಗಿತ್ತು. ದಿನದ 24 ಗಂಟೆಯೂ ಫುಟ್ಬಾಲ್‌ನ್ನೇ ಧ್ಯಾನಿಸುತ್ತಿದ್ದ. 15 ವರ್ಷದ ನನ್ನ ಕೋಚಿಂಗ್‌ ಅವಧಿಯಲ್ಲಿ ಎಂಬಾಪೆಯಂತ ಪ್ರತಿಭೆಯನ್ನು ನಾನು ಕಂಡಿಲ್ಲ’ ಅಂತಾನೆ ಕೋಚ್ ಬಾಂಡಿ. 

ಮೊನಾಕೊದ ‘ಬಿ’ ಟೀಂನ ಸದಸ್ಯನಾಗಿ ಫುಟ್‌ಬಾಲ್‌ ವೃತ್ತಿ ಆರಂಭಿಸಿದಾಗ ಎಂಬಾಪೆಗೆ ಜಸ್ಟ್ 16 ವರ್ಷ. ಆ ತಂಡದಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬುದೇ ಹೈಲೈಟ್ಸ್. ಮೊನಾಕೊ ಕ್ಲಬ್‌ ಪರವಾಗಿ ಗಳಿಸಿದ ಮೊದಲ ಗೋಲು, ಅತ್ಯಂತ ಕಿರಿಯ ಆಟಗಾರನಿಂದ ದಾಖಲಾದ ಗೋಲು ಎಂದು ದಾಖಲೆ ಇದೆ. 17 ಹಾಗೂ 19 ನೇ ವರ್ಷದೊಳಗೆ ಎಂಬಾಪೆ ದಾಖಲೆ ಮೇಲೆ ದಾಖಲೆ ಬರೆದ. ಫ್ರೆಂಚ್‌ ಡೊಮೆಸ್ಟಿಕ್‌ ಕಪ್‌, ಲೀಗ್‌ 1, ಯುಇಎಫ್‌ಎ ಚಾಂಪಿಯನ್‌ ಲೀಗ್‌ನಲ್ಲಿ ಗೋಲು ದಾಖಲಿಸಿದ ಅತ್ಯಂತ ಕಿರಿಯ ಫ್ರೆಂಚ್ ಆಟಗಾರ. 

ಈವರೆಗೂ ಫ್ರಾನ್ಸ್ಗಾಗಿ 36 ಗೋಲ್ ದಾಖಲಿಸಿರುವ ಎಂಬಾಪೆ, 
ಚಾಂಪಿಯನ್‌ ಲೀಗ್‌ನಲ್ಲಿ 10 ಗೋಲು ಬಾರಿಸಿದ ಅತೀ ಕಿರಿಯ ಆಟಗಾರ, ಲೀಗ್‌ ಪ್ರಶಸ್ತಿ ಗೆದ್ದ ಅತೀ ಕಿರಿಯ ಆಟಗಾರ, ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಅತೀ ಕಿರಿಯ ಫ್ರೆಂಚ್ ಆಟಗಾರ..‌ ಹೀಗೆ ದಾಖಲೆಗಳ ಮೇಲೆ ದಾಖಲೆ ಬರೆದವನು ಎಂಬಾಪೆ. 

19ನೇ ವರ್ಷಕ್ಕೆ ಫುಟ್‌ಬಾಲ್‌ ಜಗತ್ತಿನ ಧ್ರುವತಾರೆಯಾದ ಎಂಬಾಪೆ, 2022ರಲ್ಲಿ 13 ಪಂದ್ಯಗಳಲ್ಲಿ 12 ಗೋಲ್ ದಾಖಲಿಸಿದ. 2018ರ ವಿಶ್ವಕಪ್‌ನಲ್ಲಿ ಒಟ್ಟು 4 ಗೋಲ್ ಗಳೊಂದಿಗೆ ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಎರಡನೇ ಅತಿ ಕಿರಿಯ ಎಂಬ ಕೀರ್ತಿಗೆ ಪಾತ್ರನಾದ. ಆದರೆ ಗೋಲ್ಡನ್ ಬೂಟ್ ಗಿಟ್ಟಿಸೋದರಲ್ಲಿ ಜಸ್ಟ್ ಮಿಸ್ ಆಗಿದ್ದ. ಹೀಗೆ ಸಾಗುತ್ತದೆ ಎಂಬಾಪೆ ದಾಖಲೆಗಳ ಸರಮಾಲೆ. 

ಇದೀಗ 2022ರ ವಿಶ್ವಕಪ್ನಲ್ಲಿ ಅರ್ಜೆಂಟೀನಾ ಎದುರು ಫ್ರಾನ್ಸ್ ಸೋತಿದ್ದರೂ, ಎಂಬಾಪೆ ದಾಖಲಿಸಿದ 3 ಗೋಲ್, ಫುಟ್ಬಾಲ್ ಪ್ರಿಯರನ್ನು ಹುಚ್ಚೆಬ್ಬಿಸಿದೆ. ಫುಟ್ಬಾಲ್ ಅನ್ನೇ ಉಸಿರಾಗಿಸಿಕೊಂಡಿರೋ ಎಂಬಾಪೆ ಫುಟ್ಬಾಲ್ ಜಗತ್ತಿನ ‘ಬ್ಲಾಕ್ ಪರ್ಲ್’ (Black purle ) ಆಗುತ್ತಾನೆಂದು ಫುಟ್ಬಾಲ್ ಪ್ರೇಮಿಗಳು ಭವಿಷ್ಯ ನುಡಿದಿದ್ದಾರೆ. ನೋಡ್ತಾ ಇರಿ, ಇನ್ನೆರಡು- ಮೂರು ವಿಶ್ವಕಪ್ ಗಳಲ್ಲಿ ಇವನೇ ವಿಜೃಂಭಿಸುತ್ತಾನೆ. ಎಲ್ಲ ದಾಖಲೆಗಳನ್ನು ಪುಡಿ, ಪುಡಿ ಮಾಡ್ತಾನೆ.