ನ್ಯೂಸ್‌ಕ್ಲಿಕ್ ವಿರುದ್ಧ ದೆಹಲಿ ಪೊಲೀಸ್ ಸ್ಪೆಷಲ್‌ ಸೆಲ್‌ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿದೆ.

ನವದೆಹಲಿ (ಅ.3): ಚೀನಾದಿಂದ ಫಂಡ್‌ ಪಡೆದು ಭಾರತ ವಿರೋಧಿ ಹಾಗೂ ಚೀನಾ ನೀತಿಗಳಿಗೆ ಸಂಬಂದಪಟ್ಟಂತೆ ವ್ಯಾಪಕವಾಗಿ ಸುದ್ದಿ ಪೋಸ್ಟ್‌ ಮಾಡುತ್ತಿದ್ದ ನ್ಯೂಸ್‌ಕ್ಲಿಕ್‌ ವೆಬ್‌ಸೈಟ್‌ನ ಟ್ವಿಟರ್‌ ಪೇಜ್‌ಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಅಮಾನತು ಮಾಡಿದೆ. ಇದರ ನಡುವೆ ಗುರುವಾರ ನ್ಯೂಸ್‌ಕ್ಲಿಕ್‌ಗೆ ಚೀನಾ ಫಂಡಿಂಗ್‌ ವಿಚಾರಕ್ಕೆ ಸಂಬಂಧಪಟ್ಟಂತೆ ದೆಹಲಿಯಲ್ಲಿ 35 ಪ್ರದೇಶಗಳಲ್ಲಿ ದಾಳಿ ಮಾಡಿದ್ದು, ಇದರಲ್ಲಿ ನ್ಯೂಸ್‌ಕ್ಲಿಕ್‌ನಲ್ಲಿ ಕೆಲಸ ಮಾಡುತ್ತಿದ್ದ 7 ಮಂದಿ ಪತ್ರಕರ್ತರ ಮನೆಗಳು ಸೇರಿವೆ. ಅದರೊಂದಿಗೆ ನ್ಯೂಸ್‌ಕ್ಲಿಕ್‌ಗೆ ಸಂಬಂಧಿಸಿದ ಇತರ ಪ್ರದೇಶಗಳಲ್ಲೂ ದಾಳಿ ನಡೆಸಿದೆ. ಕಟ್ಟುನಿಟ್ಟಾದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದೆಹಲಿ ಪೊಲೀಸ್ ಸ್ಪೆಷಲ್‌ ಸೆಲ್‌, ನ್ಯೂಸ್‌ ಪೋರ್ಟಲ್ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಿದೆ. ಸಂಸ್ಥೆಯು ಚೀನಾದಿಂದ ಹಣವನ್ನು ಪಡೆದ ಆರೋಪದ ನಡುವೆ ದೆಹಲಿ ಪೊಲೀಸ್ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಆರ್ಥಿಕ ಅಪರಾಧ ವಿಭಾಗದ (ಇಒಡಬ್ಲ್ಯು) ಕೆಂಗಣ್ಣಿಗೆ ಗುರಿಯಾಗಿದೆ. ಅಕ್ರಮವಾಗಿ ಈ ವೆಬ್‌ಸೈಟ್‌ ಹಣ ಪಡೆದಿದ್ದು, ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಪತ್ರಕರ್ತರಲ್ಲಿ ಒಬ್ಬರಾದ ಅಭಿಸರ್ ಶರ್ಮಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು “ದೆಹಲಿ ಪೊಲೀಸರು ನನ್ನ ಮನೆಗೆ ಬಂದಿಳಿದರು. ನನ್ನ ಲ್ಯಾಪ್‌ಟಾಪ್ ಮತ್ತು ಫೋನ್ ಅನ್ನು ತೆಗೆದುಕೊಂಡು ಹೋಗುತ್ತಿದ್ದಾರೆ' ಎಂದು ಬರೆದಿದ್ದಾರೆ. ಮಂಗಳವಾರ ಬೆಳಿಗ್ಗೆ, ದೆಹಲಿ ಪೊಲೀಸರು ತಮ್ಮ ವಿಶೇಷ ಸೆಲ್ ತಂಡಗಳನ್ನು ಸಂಸ್ಥೆಗೆ ಸಂಬಂಧಿಸಿದ ಹಲವಾರು ಪತ್ರಕರ್ತರ ನಿವಾಸಗಳಿಗೆ ಕಳುಹಿಸಿದ್ದಾರೆ. ಪತ್ರಕರ್ತರ ಬಳಿಯಿದ್ದ ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಲವಾರು ಪತ್ರಕರ್ತರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ನ್ಯೂಸ್‌ ಪೋರ್ಟಲ್ ಮತ್ತು ಅದರ ಸಂಸ್ಥಾಪಕರು/ಸಂಪಾದಕರ ನಿವಾಸಗಳು ಮತ್ತು ಕಟ್ಟಡಗಳ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ತೀಸ್ತಾ ಸೆಟಲ್ವಾಡ್ ಅವರ ಮನೆ ಸೇರಿದಂತೆ ಮುಂಬೈನಲ್ಲೂ ದಾಳಿ ನಡೆಸಲಾಗಿದೆ. ಇದೇ ವೇಳೆ ಹಾಸ್ಯನಟ ಸಂಜಯ ರಾಜೂರ ಅವರನ್ನು ವಿಚಾರಣೆಗಾಗಿ ಲೋಧಿ ಕಾಲೋನಿಯಲ್ಲಿರುವ ಸ್ಪೆಷಲ್‌ ಸೆಲ್‌ ಕಚೇರಿಗೆ ಕರೆದುಕೊಂಡುಹೋಗಲಾಗಿದೆ. ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ, ತನಿಖೆಯ ಆಧಾರದ ಮೇಲೆ ಕೆಲವು ಜನರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಡಿ ತನಿಖೆಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗುತ್ತಿದೆ.

I.N.D.I.A ಒಕ್ಕೂಟಕ್ಕೆ ಶಾಕ್: ಸಿಪಿಐ-ಎಂ ನಾಯಕ ಸೀತಾರಾಮ್ ಯೆಚೂರಿ ನಿವಾಸದ ಮೇಲೆ ಪೊಲೀಸರ ರೇಡ್‌!

ಕೇಂದ್ರ ವಾರ್ತಾ ಮತ್ತು ಮಾಹಿತಿ ಸಚಿವ ಅನುರಾಗ್ ಠಾಕೂರ್, "ತನಿಖಾ ಸಂಸ್ಥೆಗಳು ಸ್ವತಂತ್ರವಾಗಿವೆ ಮತ್ತು ಅವರು ನಿಯಮಗಳನ್ನು ಅನುಸರಿಸುವ ಮೂಲಕ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ. “ನಾನು ದಾಳಿಗಳನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಯಾರಾದರೂ ತಪ್ಪು ಮಾಡಿದ್ದರೆ, ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತವೆ. ತನಿಖಾ ಸಂಸ್ಥೆಗಳು ನಿಮಗೆ ತಪ್ಪು ಮೂಲಗಳಿಂದ ಹಣ ಬಂದಿದ್ದರೆ ಅಥವಾ ಆಕ್ಷೇಪಾರ್ಹ ಏನಾದರೂ ನಡೆದಿದ್ದರೆ, ಕ್ರಮ ಕೈಗೊಳ್ಳಬಾರದು ಎಂದು ಎಲ್ಲೂ ಬರೆದಿಲ್ಲವಲ್ಲ ”ಎಂದು ಭುವನೇಶ್ವರದಲ್ಲಿ ಸುದ್ದಿಗಾರರು ನ್ಯೂಸ್‌ಕ್ಲಿಕ್ ವಿರುದ್ಧದ ದಾಳಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿಕೆಯಲ್ಲಿ, ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ, ಅವರು ಪತ್ರಕರ್ತರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದೇವೆ ಮತ್ತು ಈ ಬಗ್ಗೆ ಸರ್ಕಾರ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಹೇಳಿದೆ.

NewsClick Row: ನ್ಯೂಸ್‌ಕ್ಲಿಕ್‌ ಮಾಧ್ಯಮದ ಟ್ವಿಟರ್‌ ಖಾತೆ ಅಮಾನತು!

ಏನಿದು ನ್ಯೂಸ್‌ಕ್ಲಿಕ್‌ ಮೇಲಿನ ಆರೋಪ: ನ್ಯೂಸ್‌ಕ್ಲಿಕ್‌ನ ಚೀನಾದ ನಂಟಿನ ಬಗ್ಗೆ ಸುದ್ದಿ ಮಾಡಿದ್ದು ಯಾವುದೇ ಭಾರತೀಯ ಪತ್ರಿಕೆಯಾಗಲಿ ಭಾರತದ ಏಜೆನ್ಸಿಗಳಾಗಲಿ ಅಲ್ಲ. ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಇದರ ಬಗ್ಗೆ ವಿಸ್ತ್ರತ ವರದಿ ಮಾಡಿತ್ತು. ಈ ವರ್ಷದ ಆಗಸ್ಟ್‌ನಲ್ಲಿ, ದಿ ನ್ಯೂಯಾರ್ಕ್ ಟೈಮ್ಸ್ ತನಿಖೆಯನ್ನು ಪ್ರಕಟಿಸಿತು, ನ್ಯೂಸ್‌ಕ್ಲಿಕ್ ಚೀನಾ ಪ್ರೇರಿತ ಪ್ರಚಾರಕ್ಕಾಗಿ ಮಿಲಿಯನೇರ್ ನೆವಿಲ್ಲೆ ರಾಯ್ ಸಿಂಘಮ್‌ಗೆ ಸಂಬಂಧಿಸಿರುವ ನೆಟ್‌ವರ್ಕ್‌ನಿಂದ ಹಣ ಪಡೆದ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಹೇಳಿತ್ತು. ಆಪಾದಿತ ವಿದೇಶಿ ರವಾನೆಗಳ ತನಿಖೆಯ ಭಾಗವಾಗಿ ನ್ಯೂಸ್‌ಕ್ಲಿಕ್‌ನ ಮೇಲೆ ಆರೋಪ ಬಂದಿದ್ದು ಇದು ಮೊದಲೇನಲ್ಲ. 2021ರಲ್ಲಿ ಇಡಿ ತನಿಖೆ ನಡೆಸಿದ್ದಾಗ ಮೊದಲ ಬಾರಿಗೆ ಇದರ ಮಾಹಿತಿ ಸಿಕ್ಕಿತ್ತು. ವರದಿಗೆ ಪ್ರತಿಕ್ರಿಯಿಸಿದ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ, “ಇವು ಹೊಸ ಆರೋಪಗಳಲ್ಲ. ಅವುಗಳನ್ನು ಹಿಂದೆಯೇ ಮಾಡಲಾಗಿದೆ. ವಿಷಯವು ನ್ಯಾಯಾಧಿಕರಣವಾಗಿರುವುದರಿಂದ ನಾವು ಸೂಕ್ತ ವೇದಿಕೆಯಲ್ಲಿ, ಅಂದರೆ ನ್ಯಾಯಾಲಯದಲ್ಲಿ ಅವರಿಗೆ ಪ್ರತಿಕ್ರಿಯಿಸುತ್ತೇವೆ' ಎಂದಿದ್ದಾರೆ.