Asianet Suvarna News Asianet Suvarna News

ಆಂಧ್ರಪ್ರದೇಶಕ್ಕೆ ವಿಶಾಖಪಟ್ಟಣಂ ನೂತನ ರಾಜಧಾನಿ: ಮುಖ್ಯಮಂತ್ರಿ ಜಗನ್‌

ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಘೋಷಣೆಯನ್ನು ಮಾಡಿದ್ದಾರೆ. ಆಂಧ್ರಪ್ರದೇಶ ರಾಜ್ಯದಿಂದ ತೆಲಂಗಾಣ ವಿಭಜನೆ ಆದ ಬಳಿಕ ಹೈದರಾಬಾದ್‌ ಈ ಎರಡೂ ರಾಜ್ಯಗಳಿಗೆ ಈವರೆಗೂ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿತ್ತು.
 

Chief Minister Y S Jagan Mohan Reddy announced Visakhapatnam to be capital of Andhra Pradesh san
Author
First Published Jan 31, 2023, 3:05 PM IST

ನವದೆಹಲಿ (ಜ.31): ಇನ್ನು ಕೆಲವೇ ತಿಂಗಳುಗಳಲ್ಲಿ ಆಂಧ್ರಪ್ರದೇಶದ ನೂತನ ರಾಜಧಾನಿಯಾಗಿ ವಿಶಾಖಪಟ್ಟಣಂ ಕಾರ್ಯನಿರ್ವಹಿಸಲಿದೆ. ಎಲ್ಲಾ ಕಾರ್ಯಕಲಾಪಗಳು ಅಲ್ಲಿಗೆ ವರ್ಗಾವಣೆ ಆಗಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ಘೋಷಣೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತಾದ ಪ್ರಕರಣ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಮಾರ್ಚ್‌ನಲ್ಲಿ ವಿಶಾಖಪಟ್ಟಣದಲ್ಲಿ ಆಯೋಜಿಸಲಾಗಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ ಮಂಗಳವಾರ ಹೊಸದಿಲ್ಲಿಯಲ್ಲಿ ಆಯೋಜಿಸಲಾದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. “ನಮ್ಮ ರಾಜಧಾನಿಯಾಗಿರುವ ವಿಶಾಖಪಟ್ಟಣಕ್ಕೆ ನಿಮ್ಮನ್ನು ಆಹ್ವಾನಿಸಲು ನಾನು ಇಲ್ಲಿದ್ದೇನೆ. ಮುಂದಿನ ತಿಂಗಳುಗಳಲ್ಲಿ ನಾನು ಕೂಡ ವೈಜಾಗ್‌ಗೆ ಶಿಫ್ಟ್ ಆಗುತ್ತೇನೆ. ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭ ಎಂದು ನೀವೇ ನೋಡಲು ನಾನು ನಿಮ್ಮನ್ನು ಮತ್ತು ನಿಮ್ಮ ಸಹೋದ್ಯೋಗಿಗಳನ್ನು ಆಹ್ವಾನಿಸುತ್ತೇನೆ' ಎಂದು ಅವರು ಹೇಳಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದ ಹಿನ್ನೆಲೆಯಲ್ಲಿ ಜಗನ್ ಅವರ ಈ ಮಾತುಗಳು ಬಂದಿದೆ. ಸುಪ್ರೀಂ ಕೋರ್ಟ್ ಮಂಗಳವಾರ ಪ್ರಕರಣದ ವಿಚಾರಣೆ ನಡೆಸಲಿದೆ.


ರಾಷ್ಟ್ರ ರಾಜಧಾನಿಯಲ್ಲಿ ನಡೆದ ರಾಜ್ಯ ಸರ್ಕಾರದ ರಾಜತಾಂತ್ರಿಕ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ್ದ ಹಲವಾರು ಅಂತಾರಾಷ್ಟ್ರೀಯ ಗಣ್ಯರ ಸಮ್ಮುಖದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಶೃಂಗಸಭೆಯಲ್ಲಿ ಕೊರಿಯಾದ ಕಿಯಾ ಮೋಟಾರ್ಸ್‌ನ ಎಂಡಿ ಹಾಗೂ ಸಿಇಒ ಟೇ ಜಿನ್ ಪಾರ್ಕ್, ಜಪಾನ್‌ನ ಟೋರೇ ಇಂಡಸ್ಟ್ರೀಸ್‌ನ ಎಂಡಿ ಹಾಗೂ ಸಿಇಒ ಯಮಗುಚಿ, ಅಮೆರಿಕ ಮೂಲದ ಕಂಪನಿ ಕ್ಯಾಡ್ಬರಿಯ ಭಾರೀಯ ವಿಭಾಗದ ಅಧ್ಯಕ್ಷ ದೀಪಕ್ ಧರ್ನರಾಜನ್ ಅಯ್ಯರ್, ಇಟಲಿಯ ಎವರ್ಟನ್ ಟೀ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ರೋಶನ್‌ ಗುಣವರ್ಧನ, ತೈವಾನ್‌ನ ಅಪಾಚೆ ಮತ್ತು ಹಿಲ್‌ ಟಾಪ್‌ ಗ್ರೂಪ್‌ನ ನಿರ್ದೇಶಕ ಸರ್ಗಿಯೋ ಲೀ, ಫ್ರಾನ್ಸ್‌ ನ ಸೇಂಟ್-ಗೋಬೈನ್ ಇಂಡಸ್ಟ್ರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಂಡಿ ಫಣಿ ಕುನಾರ್‌ ಈ ವೇಳೆ ಹಾಜರಿದ್ದರು.

ವಿಶಾಖಪಟ್ಟಣಂನಲ್ಲಿ ಮಾರ್ಚ್ 3 ಮತ್ತು 4 ರಂದು ನಡೆಯಲಿರುವ ಮುಂಬರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ ಈವೆಂಟ್ ಪೂರ್ವಭಾವಿಯಾಗಿತ್ತು, ಅಲ್ಲಿ ಹಲವಾರು ಉನ್ನತ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯಕ್ಕೆ ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವ ಉಪಕ್ರಮವಾಗಿ ಶೃಂಗಸಭೆಯನ್ನು ಯೋಜಿಸಲಾಗಿದೆ.

ಜಗನ್‌ ಅವರ ಈ ಘೋಷಣೆಯೊಂದಿಗೆ ಕೃಷ್ಣಾ ನದಿಯ ದಂಡೆಯ ಮೇಲೆ ಅಮರಾವತಿ ಹೆಸರಿನಲ್ಲಿ ನಿರ್ಮಾಣವಾಗಬೇಕಿದ್ದ ರಾಜಧಾನಿ ಯೋಜನೆ ನೆನೆಗುದಿಗೆ ಬಿದ್ದಂತಾಗಿದೆ. ಆಂಧ್ರಪ್ರದೇಶ ರಾಜ್ಯದಿಂದ ತೆಲಂಗಾಣ ಬೇರ್ಪಟ್ಟು, ತನ್ನ ರಾಜಧಾನಿಯನ್ನಾಗಿ ಹೈದರಾಬಾದ್‌ಅನ್ನು ಘೋಷಣೆ ಮಾಡಿಕೊಂಡ 9 ವರ್ಷಗಳ ಬಳಿಕ ಆಂಧ್ರಪ್ರದೇಶ ಹೊಸ ರಾಜಧಾನಿಯನ್ನು ಕಂಡುಕೊಂಡಂತಾಗಿದೆ.

ಅಮರಾವತಿಯ ಹೆಸರಿನಲ್ಲಿ ಹೊಸ ರಾಜಧಾನಿಯನ್ನು ನಿರ್ಮಾಣ ಂಅಡುವ ಯೋಜನೆಗೆ 33 ಸಾವಿರ ಎಕರೆ ಭೂಮಿಯನ್ನು ಅಮರಾವತಿ ಸುತ್ತಮುತ್ತಲಿನ ರೈತರಿಂದ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, ಇದು ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಕಾನೂನು, ಆರ್ಥಿಕ ಮತ್ತು ರಾಜಕೀಯ ಘರ್ಷಣೆಯ ಮೂಲವಾಗಿತ್ತು.

ವಿಶಾಖಪಟ್ಟಣಂ ಗ್ಯಾಸ್ ಲೀಕ್; 100ಕ್ಕೂ ಹೆಚ್ಚು ಜೀವ ಉಳಿಸಿದ ಪೊಲೀಸ್ ಸಾಹಸವೇ ರೋಚಕ!

ಮೂರು ರಾಜಧಾನಿ ಪ್ರಸ್ತಾಪ ಮಾಡಿದ್ದ ಚಂದ್ರಬಾಬು ನಾಯ್ಡು: 2015 ರಲ್ಲಿ ಆಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮರಾವತಿ ರಾಜಧಾನಿಯಾಗಲಿದೆ ಎಂದು ಹೇಳಿದ್ದರು ಆದರೆ, ಐದು ವರ್ಷಗಳ ನಂತರ, ಮೂರು ರಾಜಧಾನಿ ನಗರಗಳ ಪ್ರಸ್ತಾಪವನ್ನು ಹರಿಬಿಡಲಾಗಿತ್ತು. ಇದರ ಅನುಸಾರ ಅಮರಾವತಿ ಅಲ್ಲದೆ, ವಿಶಾಖಪಟ್ಟಣಂ ಹಾಗೂ ಕರ್ನೂಲ್‌ ಕೂಡ ಆಂಧ್ರಪ್ರದೇಶದ ರಾಜಧಾನಿಯಾಗಲಿದೆ ಎಂದು ಹೇಳಲಾಗಿತ್ತು. ಅಮರಾವತಿ ಶಾಸಕಾಂಗದ ರಾಜಧಾನಿಯಾಗಿರಲಿದ್ದರೆ, ಕರ್ನೂಲ್‌ ನ್ಯಾಯಾಂಗದ ರಾಜಧಾನಿ ಹಾಗೂ ವಿಶಾಂಖಪಟ್ಟಣ ಕಾರ್ಯಾಂಗದ ರಾಜಧಾನಿ ಆಗಿರಲಿದೆ ಎಂದು ತಿಳಿಸಲಾಗಿತ್ತು.

5 ಉಪಮುಖ್ಯಮಂತ್ರಿಗಳ ಆಂಧ್ರಕ್ಕಿನ್ನು 3 ರಾಜಧಾನಿ?

ಆದರೆ, ಕಳೆದ ವರ್ಷದ ಮಾರ್ಚ್‌ನಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌, ಮೂರು ರಾಜಧಾನಿ ನಿರ್ಮಾಣ ಮಾಡುವ ಯೋಜನೆಗೆ ವಿರೋಧಿಸಿ, ಅಮರಾವತಿಯನ್ನೇ ಅಭಿವೃದ್ಧಿ ಮಾಡುವಂತೆ ತಿಳಿಸಿತ್ತು. ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಶಾಸಕಾಂಗಕ್ಕೆ ಸಾಮರ್ಥ್ಯದ ಕೊರತೆಯಿದೆ ಎಂದು ನ್ಯಾಯಾಲಯ ಹೇಳಿತ್ತು. ನವೆಂಬರ್‌ನಲ್ಲಿ ರಾಜ್ಯವು ಮೂರು ರಾಜಧಾನಿಗಳನ್ನು ಸ್ಥಾಪಿಸಲು ಉದ್ದೇಶಿಸಿರುವ ಕಾನೂನನ್ನು ರದ್ದುಗೊಳಿಸಿತು ಮತ್ತು 'ಸಮಗ್ರ, ಸಂಪೂರ್ಣ ಮತ್ತು ಉತ್ತಮ' ಪ್ರಸ್ತಾಪವನ್ನು ಭರವಸೆ ನೀಡಿತ್ತು.

Follow Us:
Download App:
  • android
  • ios