ಅಮರಾವತಿ[ಡಿ.18]: ಬರೋಬ್ಬರಿ ಐದು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದ್ದ ಹೊಸ ದಾಖಲೆ ಬರೆದಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್‌ ರೆಡ್ಡಿ, ಅಧಿಕಾರ ವಿಕೇಂದ್ರಿಕರಣದ ನಿಟ್ಟಿನಲ್ಲಿ ರಾಜ್ಯದಲ್ಲಿ ಮೂರು ರಾಜಧಾನಿ ಸೃಷ್ಟಿಸುವ ಸುಳಿವು ನೀಡಿದ್ದಾರೆ.

ವಿಧಾನಸಭೆಯಲ್ಲಿ ರಾಜಧಾನಿಗೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ, ಈಗಿರುವ ಅಮರಾವತಿ ಶಾಸಕಾಂಗ ರಾಜಧಾನಿಯಾಗಿ, ಕರಾವಳಿ ನಗರ ವಿಶಾಖ ಪಟ್ಟಣಂನ್ನು ಕಾರ್ಯಾಂಗ ರಾಜಧಾನಿಯಾಗಿ ಹಾಗೂ ಕರ್ನೂಲನ್ನು ನ್ಯಾಯಾಂಗ ರಾಜಧಾನಿಯಾಗಿ ಮಾಡಬಹುದು. ಅಗತ್ಯ ಬಿದ್ದರೆ ನಾವು ನಾವು ಮೂರು ರಾಜಧಾನಿ ಹೊಂದಬಹುದು ಎಂದು ಹೇಳಿದ್ದಾರೆ. ಇದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸುತ್ತಿದ್ದು, ಇದರ ಅಗತ್ಯ ಇರುವುದರಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಇದಕ್ಕಾಗಿ ತಜ್ಞರ ಸಮಿತಿ ನೇಮಿಸಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ಸಚಿವಾಲಯಗಳು ಹಾಗೂ ಇಲಾಖಾ ಮುಖ್ಯ ಕಚೇರಿಗಳನ್ನು ವಿಶಾಖಪಟ್ಟಣಂಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ಜೂನ್‌ನಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಜಗನ್‌, ಎಸ್‌ಸಿ, ಎಸ್‌ಟಿ, ಕಾಪು, ಅಲ್ಪಸಂಖ್ಯಾತ ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಒಂದೊಂದರಂತೆ 5 ಜನ ಉಪಮುಖ್ಯಮಂತ್ರಿಗಳನ್ನು ನೇಮಿಸಿದ್ದರು.