Asianet Suvarna News Asianet Suvarna News

ಇದೆಂಥಾ ವಿಚಿತ್ರ... 8 ವರ್ಷದ ಬಾಲಕ ಕಚ್ಚಿ ಹಾವು ಸಾವು

ಸಾಮಾನ್ಯವಾಗಿ ಹಾವು ಕಚ್ಚಿ ಮನುಷ್ಯರು ಸಾಯುವುದನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಛತ್ತೀಸ್‌ಗಡದ ರಾಯ್‌ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 8 ವರ್ಷದ ಮಗುವೊಂದು ಕಚ್ಚಿ ಹಾವೊಂದು ಸಾವಿಗೀಡಾಗಿದೆ.

Chhattisgarh Snake dies after boy bites it, which attacked boy before akb
Author
First Published Nov 3, 2022, 5:58 PM IST

ರಾಯ್‌ಪುರ: ಸಾಮಾನ್ಯವಾಗಿ ಹಾವು ಕಚ್ಚಿ ಮನುಷ್ಯರು ಸಾಯುವುದನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಛತ್ತೀಸ್‌ಗಡದ ರಾಯ್‌ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 8 ವರ್ಷದ ಮಗುವೊಂದು ಕಚ್ಚಿ ಹಾವೊಂದು ಸಾವಿಗೀಡಾಗಿದೆ. ಈ ಸುದ್ದಿ ಕೇಳಿ ಊರಿನ ಜನರು ಸೇರಿದಂತೆ ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ. 

ಜಶ್ಪುರ ಜಿಲ್ಲೆಯ (Jashpur district) ಪಂಡರಪದ್‌ (Pandarpadh) ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಹೀಗೆ ಹಾವನ್ನೇ ಕಚ್ಚಿ ಸಾಯಿಸಿದ ಬಾಲಕನನ್ನು ದೀಪಕ್ ಎಂದು ಗುರುತಿಸಲಾಗಿದೆ. ತನ್ನ ಮನೆಯ ಹಿಂಭಾಗದ ಆವರಣದಲ್ಲಿ ಆಟವಾಡುತ್ತಿದ್ದಾಗ ಹಾವೊಂದು ಈತನ ಕೈಗೆ ಸುತ್ತಿಕೊಂಡ ಹಿನ್ನೆಲೆ ಈತ ಹಾವಿಗೆ ಕಚ್ಚಿದ್ದು, ಬಳಿಕ ಹಾವು ಸತ್ತು ಹೋಗಿದೆ ಎಂದು ತಿಳಿದು ಬಂದಿದೆ. ಈತ ಹಾವಿಗೆ ಕಚ್ಚುವ ಮೊದಲು ಹಾವು ಕೂಡ ಈತನಿಗೆ ಕಚ್ಚಿದೆ ಎಂದು ತಿಳಿದು ಬಂದಿದೆ. 

ನಂತರ ಆಸ್ಪತ್ರೆಗೆ ದಾಖಲಾಗಿರುವ ಬಾಲಕ ಗುಣಮುಖನಾಗಿದ್ದಾನೆ ಎಂದು ತಿಳಿದು ಬಂದಿದೆ. ಮೊದಲಿಗೆ ಈತನಿಗೆ ಕಚ್ಚಿದ ಹಾವು ನಂತರ ಈತನ ಕೈಗಳಿಗೆ ಸುತ್ತಿಕೊಂಡಿದೆ. ಈ ಭಯಾನಕ ಅನುಭವವನ್ನು ಬಾಲಕ ಹಂಚಿಕೊಂಡಿದ್ದಾನೆ. ವಿಷಕಾರಿ ಹಾವು ಕಚ್ಚಿದ್ದರಿಂದ ತೀವ್ರವಾದ ನೋವಿನ ಅನುಭವವಾಯಿತು. ಬಾಲಕ ತನ್ನ ಕೈಯನ್ನು ಸುತ್ತಿಕೊಂಡ ಹಾವಿನಿಂದ ಬಿಡಿಸಿಕೊಳ್ಳಲು ಯತ್ನಿಸಿ ಕೈಯನ್ನು ಜೋರಾಗಿ ಅಲುಗಾಡಿಸಿದರು ಹಾವು ಹಿಡಿತ ಸಡಿಲಗೊಳಿಸಿಲ್ಲ. ನಂತರ ಬಾಲಕ ಹಾವಿಗೆ ಜೋರಾಗಿ ಕಚ್ಚಿದ್ದಾನೆ. ಬಾಲಕ ಹೇಳುವ ಪ್ರಕಾರ ಎಲ್ಲವೂ ಕೆಲ ಕ್ಷಣದಲ್ಲಿ ನಡೆದು ಹೋಗಿದೆ. 

ಮುದ್ದೇಬಿಹಾಳ: ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವು

ನನ್ನ ಕೈಗೆ ಸುತ್ತಿಕೊಂಡು ಹಾವು ನನಗೆ ಕಚ್ಚಿತ್ತು. ಈ ವೇಳೆ ತೀವ್ರ ನೋವಾಗಿದ್ದು, ಹಾವನ್ನು ಕೈಯಿಂದ ಕೆಳಗೆ ಬೀಳಿಸಲು ಕೈಯನ್ನು ಅಲುಗಾಡಿಸಿದರು ಹಾವು ಕೆಳಗೆ ಬಿದ್ದಿಲ್ಲ. ಈ ವೇಳೆ ನಾನು ಎರಡು ಬಾರಿ ಹಾವನ್ನು ಗಟ್ಟಿಯಾಗಿ ಕಚ್ಚಿದ್ದಾಗಿ ಬಾಲಕ ಹೇಳಿಕೊಂಡಿದ್ದಾನೆ. ಇದಾದ ನಂತರ ದೀಪಕ್ (Deepak) ಕುಟುಂಬಸ್ಥರು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು ಕೂಡಲೇ ಬಾಲಕನಿಗೆ ಹಾವಿನ ವಿಷ ನಿವಾರಕ ಔಷಧಿಯನ್ನು (anti-snake venom) ನೀಡಿದ್ದಾರೆ. ನಂತರ ಬಾಲಕನನ್ನು ಡಿಸ್ಚಾರ್ಜ್‌ಗೂ ಮೊದಲು ಒಂದು ದಿನ ಪೂರ್ತಿಯಾಗಿ ವೈದ್ಯರು ಪರಿಶೀಲನೆಗೆ ಇರಿಸಿದ್ದರು. ನಂತರ ಆತನನ್ನು ಡಿಸ್ಚಾರ್ಜ್ ಮಾಡಿದರು. 

ತನ್ನನ್ನು ಕಚ್ಚಿದ ಹಾವನ್ನು ಕೊಂದು ಸೇಡು ತೀರಿಸಿಕೊಂಡ ಟರ್ಕಿಯ 2 ವರ್ಷದ ಮಗು

ಈ ಬಗ್ಗೆ ಮಾತನಾಡಿದ ವಿಭಾಗೀಯ ಮೆಡಿಕಲ್ ಅಧಿಕಾರಿ ಜೇಮ್ಸ್ ಮಿಂಜ್ (Jems Minj), ಆತನಿಗೆ ಹಾವಿನ ವಿಷ ನಿರೋಧಕ ಔಷಧಿಯನ್ನು ನೀಡಿ ದಿನವಿಡೀ ಪರಿಶೀಲನೆಗೆ ಬಿಟ್ಟು ನಂತರ ಡಿಸ್ಚಾರ್ಜ್ ಮಾಡಿದೆವು ಎಂದು ಹೇಳಿದರು.  ಆದರೆ ಕೆಲ ವರದಿಗಳ ಪ್ರಕಾರ, ದೀಪಕ್ ದೇಹದಲ್ಲಿ ಹಾವು ಕಚ್ಚಿದ ಯಾವುದೇ ಲಕ್ಷಣಗಳಿರಲಿಲ್ಲ. ಅಲ್ಲದೇ ಆತನ ಚೇತರಿಕೆಯೂ ವೇಗವಾಗಿ ಆಯಿತು. ಉರಗತಜ್ಞ (snake expert) ಕಾಸೀರ್ ಹುಸೇನ್ (Qaiser Hussian) ಹೇಳುವಂತೆ 8 ವರ್ಷದ ಬಾಲಕ ಹಾವಿನ ಒಣ ಕಡಿತ (dry bite) ಕ್ಕೆ ಒಳಗಾಗಿದ್ದಾರೆ. ಸಾಮಾನ್ಯವಾಗಿ ವಿಷಪೂರಿತ ಹಾವು ಕಚ್ಚಿದಾಗ ವಿಷ ಬಿಡುಗಡೆಯಾಗದೇ ಇರುವುದನ್ನು ಡ್ರೈ ಬೈಟ್ ಎನ್ನುತ್ತಾರೆ. ಅಂತಹ ಸಂದರ್ಭಗಳಲ್ಲಿ ವ್ಯಕ್ತಿಗೆ ಹಾವು ಕಚ್ಚಿದ ಜಾಗದಲ್ಲಿ ಮಾತ್ರ ಕೆಲ ಸಾಮಾನ್ಯ ಲಕ್ಷಣಗಳು ಕಂಡು ಬರುತ್ತವೆ. ಡ್ರೈ ಬೈಟ್‌ನ ಕಾರಣಕ್ಕೆ ಈ ಬಾಲಕ ದೀಪಕ್‌ಗೆ ಹಾವು ಕಚ್ಚಿದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ವಿಷಕಾರಿ ಹಾವು ದಾಳಿ ನಡೆಸಿದರೂ ವಿಷ ಬಿಡುಗಡೆ ಆಗಿಲ್ಲ ಎಂದು ಹೇಳಿದರು. 

Follow Us:
Download App:
  • android
  • ios