ಮುದ್ದೇಬಿಹಾಳ: ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವು
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ನಡೆದ ಘಟನೆ
ಮುದ್ದೇಬಿಹಾಳ(ಅ.28): ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಚ್ಚಿ ಗರ್ಭಿಣಿಯೊಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಕುಂಟೋಜಿಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ. ಕುಂಟೋಜಿ ಗ್ರಾಮದ ನಿರ್ಮಲಾ ಯಲ್ಲಪ್ಪ ಚಲವಾದಿ(25) ಹಾವು ಕಚ್ಚಿ ಸಾವನ್ನಪ್ಪಿದ ದುರ್ದೈವಿ. ಮನೆಗೆ ಹೊಂದಿಕೊಂಡು ಇರುವ ಹೊಲದಲ್ಲಿ ಕೆಲಸ ಮಾಡಿ ಮಲಗಿದ್ದಾಗ ಬೆಳಗಿನ ಜಾವ ಹಾವು ಕಚ್ಚಿದೆ. ಕೂಡಲೇ ಅವರನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ನಿರ್ಮಲಾ ನಾಲ್ಕು ತಿಂಗಳು ಗರ್ಭಿಣಿಯಾಗಿದ್ದು, ಓರ್ವ ಪುತ್ರ, ಓರ್ವ ಪುತ್ರಿ ಇರುವುದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಅಧಿಕಾರಿಗಳ ಭೇಟಿ:
ಕುಂಟೋಜಿಯಲ್ಲಿ ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಅಸುನೀಗಿದ ವಿಷಯ ತಿಳಿದು ಗ್ರಾಮದ ಅವರ ಮನೆಗೆ ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ, ಗ್ರಾಮ ಲೆಕ್ಕಾಧಿಕಾರಿ ಅನುಪಮಾ ಪೂಜಾರಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಮಾತನಾಡಿದ ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮುಖಂಡ ಬಸವರಾಜ ಹುಲಗಣ್ಣಿ ಇದ್ದರು.
ವಿಜಯಪುರದಲ್ಲಿ ಭೀಕರ ಅಪಘಾತ: ಸ್ವಾಮಿ ಸಮರ್ಥ ಕ್ಷೇತ್ರಕ್ಕೆ ತೆರಳುತ್ತಿದ್ದ ಇಬ್ಬರು ಭಕ್ತರ ಸಾವು
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ ಗರ್ಭಿಣಿ ನಿರ್ಮಲಾ ಚಲವಾದಿ ಕುಟುಂಬದವರನ್ನು ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ, ಗ್ರಾಮಲೆಕ್ಕಾಧಿಕಾರಿ ಅನುಪಮಾ ಪೂಜಾರಿ ಭೇಟಿ ನೀಡಿ ಸಾಂತ್ವನ ಹೇಳಿದರು.