ನವದೆಹಲಿ(ಆ.02): ಚಂದ್ರಯಾನ 2 ಉಡ್ಡಯನದ ಭಾಗವಾಗಿ ಕಳೆದ ವರ್ಷ ಇಸ್ರೋ ಹಾರಿಬಿಟ್ಟಿದ್ದ ರೋವರ್‌ ಸುರಕ್ಷಿತವಾಗಿರಬಹುದು ಎಂಬ ಸಣ್ಣ ಸುಳಿವೊಂದು ಸಿಕ್ಕಿದೆ. 

ಕಳೆದ ಮೇ ತಿಂಗಳಿನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿರುವ ಕೆಲ ಚಿತ್ರಗಳನ್ನು ವಿಶ್ಲೇಷಿಸಿ ಚೆನ್ನೈ ಮೂಲದ ಟೆಕ್ಕಿ ಷಣ್ಮುಗ ಸುಬ್ರಮಣಿ ಈ ಮಾಹಿತಿ ನೀಡಿದ್ದಾರೆ. ಅವರ ಈ ವಿಶ್ಲೇಷಣೆಯನ್ನು ಇಸ್ರೋ ಕೂಡಾ ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ ಯಾದರೂ, ಈ ಕುರಿತು ನಾಸಾದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹೇಳಿದೆ.

ಚಂದ್ರಯಾನ 2 ಯೋಜನೆಯಲ್ಲಿ ರೋವರ್‌ ಹೊತ್ತಿದ್ದ ಲ್ಯಾಂಡರ್‌ ನಿಧಾನವಾಗಿ ಚಂದ್ರನ ಮೇಲ್ಮೈ ಮೇಲೆ ನಿಗದಿತ ಸ್ಥಳದಲ್ಲಿ ಇಳಿಯಬೇಕಿತ್ತು. ಆದರೆ ಸಾಫ್ಟ್‌ವೇರ್‌ ತೊಂದರೆಯಿಂದಾಗಿ ಕಡೆಯ ಹಂತದಲ್ಲಿ ಲ್ಯಾಂಡರ್‌ ತನ್ನ ದಿಕ್ಕು ತಪ್ಪಿ ಬೇರೊಂದು ಜಾಗದ ಮೇಲೆ ಅಪ್ಪಳಿಸಿತ್ತು. ಈ ವೇಳೆ ಲ್ಯಾಂಡರ್‌ ಮತ್ತು ಇಳಿದ ಮೇಲೆ ಸಂಶೋಧನೆಗೆಂದು ಕಳುಹಿಸಿದ್ದ ರೋವರ್‌ ಛಿದ್ರವಾಗಿರಬಹುದು ಎಂದು ಎಣಿಸಲಾಗಿತ್ತು. 

ಚಂದ್ರಯಾನ-3ಗೆ ಅಧಿಕೃತ ಒಪ್ಪಿಗೆ: 2021ರಲ್ಲಿ ಮತ್ತೆ ಚಂದ್ರನ ಅಪ್ಪುಗೆ!

ಆದರೆ ಕಳೆದ ಮೇ ನಲ್ಲಿ ಇಸ್ರೋ ಬಿಡುಗಡೆ ಮಾಡಿರುವ ಚಿತ್ರದಲ್ಲಿ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಎರಡೂ ಸುಸ್ಥಿತಿಯಲ್ಲಿರುವ ರೀತಿಯಲ್ಲಿ ಕಂಡುಬಂದಿದೆ. ಜೊತೆಗೆ ರೋವರ್‌ ತಾನು ಬಿದ್ದ ಸ್ಥಳದಿಂದ ಕೆಲ ದೂರ ಸಂಚರಿಸಿರುವ ಕುರುಹೂಗಳು ಕಾಣಿಸುತ್ತಿವೆ ಎಂದು ಸುಬ್ರಮಣಿ ಹೇಳಿದ್ದಾರೆ.