ಉತ್ತರ ಪ್ರದೇಶ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಓವೈಸಿಯ ಎಐಎಂಐಎಂ ಹಾಗೂ ಚಂದ್ರಶೇಖರ್ ಅಜಾದ್ ಅವರ ಅಜಾದ್ ಸಮಾಜ ಪಾರ್ಟಿ ಜಂಟಿ ಘೋಷಣೆ ಮಾಡಿದೆ. ಉತ್ತರ ಪ್ರದೇಶಕ್ಕೆ ಅಬ್ದುಲ್ಲಾ ಉಪ ಮುಖ್ಯಮಂತ್ರಿಯಾಗುತ್ತಾರೆ ಎಂದಿದೆ.
ಲಖನೌ (ನ.26) ಉತ್ತರ ಪ್ರದೇಶ ಚುನಾವಣೆಯಲ್ಲಿ ಹಲವು ಸಮೀಕರಣಗಳ ಲೆಕ್ಕಾಚಾರ ನಡೆಯುತ್ತಿದೆ. ಬಿಜೆಪಿಗೆ ಸಮಾಜವಾದಿ ಪಾರ್ಟಿ ಪ್ರಬಲ ಪೈಪೋಟಿ ನೀಡುತ್ತಿದೆ. ಇತ್ತ ಅಸಾದುದ್ದೀನ್ ಒವೈಸಿಯ ಎಐಎಂಐಎಂ ಪಾರ್ಟಿ ಚಂದ್ರಶೇಖರ್ ಅಜಾದ್ ಅವರ ಅಜಾದ್ ಸಮಾಜ್ ಪಾರ್ಟಿ ಮೈತ್ರಿ ಹೊಸ ಸಂಚಲನ ಸೃಷ್ಟಿಸಿದೆ. ಇದೀಗ ಅಜಾದ್ ಚಂದ್ರಶೇಖರ್ ಮಹತ್ವದ ಘೋಷಣೆ ಮಾಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಒವೈಸಿ ಅಜಾದ್ ಪಾರ್ಟಿ ಗೆಲುವು ಸಾಧಿಸಿದರೆ ಅಬ್ದುಲ್ಲಾ ಉತ್ತರ ಪ್ರದೇಶದ ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಿಸಿದ್ದಾರೆ.
ಮುಸ್ಲಿಂ ಸಮುದಾಯದಿಂದ ಉಪ ಮುಖ್ಯಮಂತ್ರಿ
ಉತ್ತರ ಪ್ರದೇಶದಲ್ಲಿ ಈ ಬಾರಿ AIMIM ಹಾಗೂ ಅಜಾದ್ ಸಮಾಜ್ ಪಾರ್ಟಿ ಮೊದಲ ಬಾರಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದೆ. ಮುಸ್ಲಿಂ ಮತಗಳು, ದಲಿತ ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಮತಗಳ ಸೆಳೆದು ಹೊಸ ಧ್ರುವೀಕರಣ ಮಾಡಲು ಮುಂದಾಗಿದೆ. AIMIM ಹಾಗೂ ಅಜಾದ್ ಸಮಾಜ್ ಪಾರ್ಟಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದ ವ್ಯಕ್ತಿ ಉಪ ಮುಖ್ಯಮಂತ್ರಿಯಾಗುತ್ತಾರೆ. ಇತರ ಪಾರ್ಟಿಗಳು ಮುಸ್ಲಿಂ ಸಮುದಾಯವನ್ನು ಮತ ಬ್ಯಾಂಕ್ ಆಗಿ ನೋಡುತ್ತದೆ. ಆದರೆ ಯಾವ ಸ್ಥಾನಮಾನ ನೀಡಿಲ್ಲ. ಆದರೆ ನಮ್ಮ ಮೈತ್ರಿ ಮುಸ್ಲಿಮ್ ಸಮುದಾಯಕ್ಕೆ ಮಹತ್ತರ ಜವಾಬ್ದಾರಿ ನೀಡಲಿದೆ ಎಂದು ಅಜಾದ್ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಯಾರು?
ಉತ್ತರ ಪ್ರದೇಶ ಚುನಾವಣೆಗೆ AIMIM ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವ ಅಜಾದ್ ಸಮಾಜ್ ಪಾರ್ಟಿ ಈಗಾಗಲೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿದೆ. ಈ ಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ಅಜಾದ್ ಸಮಾಜ್ ಪಾರ್ಟಿಯ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಎಂದು ಘೋಷಿಸಿದೆ. ಮುಸ್ಲಿಂ ಹಾಗೂ ದಲಿತ ಮತ ಬ್ಯಾಂಕ್ ಗುರಿಯಾಗಿಸಿಕೊಂಡು ಈ ಬಾರಿ ಈ ಮೈತ್ರಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ಈ ಮೈತ್ರಿಯಿಂದ ಇಂಡಿಯಾ ಒಕ್ಕೂಟಕ್ಕೆ ಯಾವುದೇ ಸಮಸ್ಯೆ ಇಲ್ಲ, ಆದರೆ ಬಿಜೆಪಿಗೆ ತೀವ್ರ ಸಮಸ್ಯೆಯಾಗಲಿದೆ ಎಂದು ಸಮಾಜವಾದಿ ಪಾರ್ಟಿ ಹೇಳಿತ್ತು.
2022ರಲ್ಲಿ ಶೂನ್ಯ ಸೀಟು
ಅಸಾದುದ್ದೀನ್ ಒವೈಸಿಯ AIMIM ಹಾಗೂ ಚಂದ್ರಶೇಖರ್ ಅಜಾದ್ ಅವರ ಅಜಾದ್ ಸಮಾಜ್ ಪಾರ್ಟಿ ಎರಡೂ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ ಎರಡೂ ಪಾರ್ಟಿಗಳು ಒಂದು ಸೀಟು ಗೆಲ್ಲಲಿಲ್ಲ. AIMIM ಪಾರ್ಟಿ 90 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆಜಾದ್ ಸಮಾಜ್ ಪಾರ್ಟಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. 2022ರಲ್ಲಿ ಯೋಗಿ ಆದಿತ್ಯನಾಥ್ ವಿರುದ್ದ ಚಂದ್ರಶೇಖರ್ ಅಜಾದ್ ಸ್ಪರ್ಧಿಸಿದ್ದರು. 8000 ಮತಗಳನ್ನು ಪಡೆದು ಠೇವಣಿ ಕಳೆದಕೊಂಡಿದ್ದರು. ಆದರೆ 2024ರಲ್ಲಿ ನಾಗಿನ್ ಲೋಕಸಭಾ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇದು ಅಜಾದ್ ಸಮಾಜ್ ಪಾರ್ಟಿಯ ಮೊದಲ ಗೆಲುವು.
















