26/11 ಮುಂಬೈ ದಾಳಿಯಲ್ಲಿ ಸೆರೆಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್ ಪರ ಮೇಲ್ಮನವಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ಇಬ್ಬರು ವಕೀಲರಿಗೆ ಮಹಾರಾಷ್ಟ್ರ ಸರ್ಕಾರ 18 ವರ್ಷಗಳ ನಂತರವೂ ವೃತ್ತಿ ಶುಲ್ಕ ಪಾವತಿಸಿಲ್ಲ.

ನವದೆಹಲಿ (ನ.26): 26/11 ಮುಂಬೈ ಭಯೋತ್ಪಾದಕ ದಾಳಿ ನಡೆದು ಬರೋಬ್ಬರಿ 18 ವರ್ಷಗಳೇ ಕಳೆದಿದ್ದರೂ, ಜೀವಂತವಾಗಿ ಸೆರೆಸಿಕ್ಕಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ಪರ ಮೇಲ್ಮನವಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ಇಬ್ಬರು ವಕೀಲರಿಗೆ ಮಹಾರಾಷ್ಟ್ರ ಸರ್ಕಾರದಿಂದ ಇನ್ನೂ ವೃತ್ತಿ ಶುಲ್ಕ (Fees) ಪಾವತಿಯಾಗಿಲ್ಲ. 2010ರಲ್ಲಿ ಸರ್ಕಾರದಿಂದಲೇ ನೇಮಕಗೊಂಡು ಬಾಂಬೆ ಹೈಕೋರ್ಟ್‌ನಲ್ಲಿ 9 ತಿಂಗಳ ಕಾಲ ವಾದಿಸಿದ್ದ ವಕೀಲರಾದ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಇಂದಿಗೂ ತಮ್ಮ ಬಾಕಿ ಹಣಕ್ಕಾಗಿ ಕಾಯುತ್ತಿದ್ದಾರೆ. ಜೀವಂತವಾಗಿ ಸೆರೆಸಿಕ್ಕಿದ್ದ ಏಕೈಕ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್ ಪರವಾಗಿ ವಾದ ಮಂಡಿಸಲು ಈ ಇಬ್ಬರೂ ವಕೀಲರು ತಮ್ಮ ಇತರ ಎಲ್ಲಾ ಪ್ರಕರಣಗಳನ್ನು ಬದಿಗೊತ್ತಿದ್ದರು ಎಂದು ಸುದ್ದಿಸಂಸ್ಥೆ ಪಿಟಿಐ (PTI) ವರದಿ ಮಾಡಿದೆ.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಕಸಬ್ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಆತನನ್ನು ಪ್ರತಿನಿಧಿಸಲು ಹೈಕೋರ್ಟ್ ನಾಮನಿರ್ದೇಶನ ಮಾಡಿತ್ತು. ಅದರಂತೆ 2010ರ ಜೂನ್ 8ರಂದು ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (MSLSA) ಅಧಿಸೂಚನೆ ಹೊರಡಿಸಿ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಅವರನ್ನು ನೇಮಿಸಿತ್ತು.

ಅಂದಿನ ಕಾರ್ಯದರ್ಶಿ ಎ.ಕೆ. ಸೋನಾವಾನೆ ಸಹಿ ಮಾಡಿದ್ದ ಅಧಿಸೂಚನೆಯ ಪ್ರಕಾರ, ಅಮೀನ್ ಸೋಲ್ಕರ್ ಅವರಿಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ (Special Public Prosecutor) ಸಮಾನವಾದ ಶುಲ್ಕ ಮತ್ತು ಫರ್ಹಾನಾ ಶಾ ಅವರಿಗೆ ಮರಣದಂಡನೆ ದೃಢೀಕರಣ ಪ್ರಕರಣ ನಡೆಸುವ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಸಮಾನವಾದ ಗೌರವಧನ ನೀಡಬೇಕೆಂದು ನಿಗದಿಪಡಿಸಲಾಗಿತ್ತು.

ಕಾನೂನು ನಿಬಂಧನೆಗಳ ಪ್ರಕಾರ, ಆರೋಪಿಯೊಬ್ಬ ವಕೀಲರನ್ನು ನೇಮಿಸಿಕೊಳ್ಳಲು ಅಸಮರ್ಥನಾದಾಗ ಆತನಿಗೆ ಕಾನೂನು ನೆರವು ಮತ್ತು ನ್ಯಾಯಯುತ ವಿಚಾರಣೆ (Fair trial) ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯಗಳು ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ವಕೀಲರನ್ನು ನೇಮಿಸುತ್ತವೆ. ಅಧಿಕೃತ ಮೂಲಗಳನ್ನು ಉಲ್ಲೇಖಿಸಿರುವ ಪಿಟಿಐ ವರದಿಯಂತೆ, ಇವರಿಗೆ ದಿನಕ್ಕೆ ₹1,500 ರಿಂದ ₹2,000 ಗೌರವಧನ ನಿಗದಿಯಾಗಿತ್ತು. ಆದರೆ ಹೈಕೋರ್ಟ್ ವಿಚಾರಣೆ ಮುಗಿದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ ಇಬ್ಬರಿಗೂ ಬಾಕಿ ಹಣ ಪಾವತಿಯಾಗಿಲ್ಲ.

ದಿನನಿತ್ಯದ ಕೋರ್ಟ್ ಗಂಟೆಗಳ ಲೆಕ್ಕ ಕೇಳುವುದು ಅವೈಜ್ಞಾನಿಕ: ವಕೀಲರ ಅಸಮಾಧಾನ

ತಮ್ಮ ಬಾಕಿ ಶುಲ್ಕ ಪಾವತಿ ವಿಳಂಬದ ಕುರಿತು ವಕೀಲರಾದ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಅಮೀನ್ ಸೋಲ್ಕರ್, ಕಸಬ್ ಪರ ವಾದಿಸಿದ್ದಕ್ಕೆ ನಮಗೆ ಇನ್ನೂ ಶುಲ್ಕ ಸಿಕ್ಕಿಲ್ಲ. ನಾನು ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಪದೇ ಪದೇ ಪತ್ರ ವ್ಯವಹಾರ ನಡೆಸುತ್ತಿದ್ದೇನೆ, ಆದರೆ ಯಾವುದೇ ಸಕಾರಾತ್ಮಕ ಪ್ರಗತಿ ಕಂಡುಬರುತ್ತಿಲ್ಲ ಎಂದಿದ್ದಾರೆ. ಹಣ ಪಾವತಿಗಾಗಿ ಪ್ರಾಧಿಕಾರವನ್ನು ಸಂಪರ್ಕಿಸಿದಾಗಲೆಲ್ಲಾ, ನ್ಯಾಯಾಲಯಕ್ಕೆ ಹಾಜರಾದ ದಿನಾಂಕಗಳು ಮತ್ತು ಗಂಟೆಗಳನ್ನು ನಿರ್ದಿಷ್ಟಪಡಿಸುವ ವಿವರವಾದ ಬಿಲ್‌ಗಳು ಮತ್ತು ಮೆಮೊಗಳನ್ನು ಸಲ್ಲಿಸುವಂತೆ ಕೇಳಲಾಗುತ್ತಿದೆ ಎಂದು ಇಬ್ಬರೂ ವಕೀಲರು ತಿಳಿಸಿದ್ದಾರೆ. "ಇಷ್ಟು ವರ್ಷಗಳ ನಂತರ ದೈನಂದಿನ ನ್ಯಾಯಾಲಯದ ಗಂಟೆಗಳ ವಿವರವಾದ ದಾಖಲೆಗಳನ್ನು ನಿರ್ವಹಿಸುವುದು ಕಷ್ಟಕರ. ನಮ್ಮ ನೇಮಕಾತಿ ಪತ್ರಗಳಲ್ಲಿಯೇ ಪಾವತಿಸಬೇಕಾದ ಗೌರವಧನವನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ; ಅದೇ ವೇತನ ಶ್ರೇಣಿಯನ್ನು ಬಳಸಿ ನಮ್ಮ ಬಾಕಿ ಹಣವನ್ನು ಲೆಕ್ಕಹಾಕಿ ಪಾವತಿಸಲು ಸರ್ಕಾರಕ್ಕೆ ಏನು ಅಡ್ಡಿಯಾಗಿದೆ?" ಎಂದು ಸೋಲ್ಕರ್ ಪ್ರಶ್ನಿಸಿದ್ದಾರೆ.

ಸರ್ಕಾರದ ಅಧಿಸೂಚನೆ ಮತ್ತು ಅಂದಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹೊರಡಿಸಿದ ಆದೇಶದಲ್ಲಿಯೇ ತಮ್ಮ ಶುಲ್ಕದ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಸಿರುವಾಗ, ಈಗ ಬಿಡಿಬಿಡಿಯಾದ ಬಿಲ್‌ಗಳಿಗೆ ಒತ್ತಾಯಿಸುತ್ತಿರುವುದು ಏಕೆ ಎಂದು ಫರ್ಹಾನಾ ಶಾ ಪ್ರಶ್ನಿಸಿದ್ದಾರೆ. "ಈ ಪ್ರಕರಣದಲ್ಲಿ ವಾದ ಮಂಡಿಸಲು ನಾವು ಒಂಬತ್ತು ತಿಂಗಳ ಕಾಲ ನಮ್ಮ ಇಡೀ ದಿನವನ್ನು ಮೀಸಲಿಟ್ಟಿದ್ದೆವು. ವಿಚಾರಣೆಗೆ ಯಾವುದೇ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ನಮ್ಮ ಇತರ ಎಲ್ಲಾ ಪ್ರಕರಣಗಳನ್ನು ಬದಿಗೊತ್ತಿದ್ದೆವು. ಹೈಕೋರ್ಟ್ ತೀರ್ಪು ನೀಡಿದ ನಂತರ ನಮ್ಮ ಶುಲ್ಕವನ್ನು ಪಾವತಿಸಲಾಗುವುದು ಎಂದು ಅಧಿಸೂಚನೆಯಲ್ಲಿಯೇ ಹೇಳಲಾಗಿತ್ತು" ಎಂದು ಅವರು ತಿಳಿಸಿದ್ದಾರೆ.

ಪ್ರಾಧಿಕಾರದ ಸಮರ್ಥನೆ ಮತ್ತು ವಿಚಾರಣಾ ನ್ಯಾಯಾಲಯದ ವಕೀಲರಿಗೆ ಸಿಕ್ಕಿದ್ದ ಹಣ

ಸಾಮಾನ್ಯ ಪದ್ಧತಿಯ ಪ್ರಕಾರ ಹಣ ಪಾವತಿಗಾಗಿ ವಕೀಲರು ಔಪಚಾರಿಕ ಬಿಲ್‌ಗಳು ಮತ್ತು ಮೆಮೊಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ವಿಶೇಷ ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಅವರ ಮುಂದೆ ನಡೆದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಕಸಬ್ ಪರ ವಾದಿಸಿದ್ದ ವಕೀಲ ಅಬ್ಬಾಸ್ ಕಾಜ್ಮಿ ಅವರಿಗೆ ತಕ್ಷಣವೇ ಶುಲ್ಕ ಪಾವತಿಯಾಗಿತ್ತು. ವಿಚಾರಣೆ ಪೂರ್ಣಗೊಂಡ ತಕ್ಷಣವೇ ಸರ್ಕಾರ ನನ್ನ ಗೌರವಧನವನ್ನು ಪಾವತಿಸಿತ್ತು ಎಂದು ಕಾಜ್ಮಿ ತಿಳಿಸಿದ್ದಾರೆ.

ಬಾಂಬೆ ಹೈಕೋರ್ಟ್ 2010ರ ಜೂನ್‌ನಲ್ಲಿ ಕಸಬ್ ಮರಣದಂಡನೆ ದೃಢೀಕರಣ ಪ್ರಕರಣ ಮತ್ತು ಮೇಲ್ಮನವಿಯ ವಿಚಾರಣೆ ಆರಂಭಿಸಿ, 2011ರ ಫೆಬ್ರವರಿಯಲ್ಲಿ ಮರಣದಂಡನೆಯನ್ನು ಎತ್ತಿಹಿಡಿದಿತ್ತು. ನಂತರ ಸುಪ್ರೀಂ ಕೋರ್ಟ್ ಕೂಡ ಈ ತೀರ್ಪನ್ನು ದೃಢಪಡಿಸಿತ್ತು. ಸೆರೆಸಿಕ್ಕ ಬಳಿಕ ಆರ್ಥರ್ ರೋಡ್ ಜೈಲಿನಲ್ಲಿದ್ದ ಕಸಬ್‌ನನ್ನು 2012ರ ನವೆಂಬರ್ 21ರಂದು ಪುಣೆಯ ಯರವಾಡ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು.

ಮುಂಬೈ ಭಯೋತ್ಪಾದಕ ದಾಳಿಗೆ 18 ವರ್ಷ

2008ರ ನವೆಂಬರ್ 26ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯ 18ನೇ ವರ್ಷಾಚರಣೆಯನ್ನು ಮುಂಬೈ ಸ್ಮರಿಸುತ್ತಿದೆ. ವಿದೇಶಿ ಪ್ರಜೆಗಳು ಸೇರಿದಂತೆ 166 ಅಮಾಯಕರನ್ನು ಬಲಿಪಡೆದು, 300ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದ ಆ ಕರಾಳ ಘಟನೆಯ ಪ್ರಮುಖ ಅಂಶಗಳು ಇಲ್ಲಿವೆ

ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಬಂದಿದ್ದ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ 10 ಶಸ್ತ್ರಸಜ್ಜಿತ ಭಯೋತ್ಪಾದಕರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT), ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಟ್ರೈಡೆಂಟ್ ಹೋಟೆಲ್, ನಾರಿಮನ್ ಹೌಸ್ (ಚಾಬಾದ್ ಹೌಸ್), ಲಿಯೋಪೋಲ್ಡ್ ಕೆಫೆ ಮತ್ತು ಕಾಮಾ & ಆಲ್‌ಬ್ಲೆಸ್ ಆಸ್ಪತ್ರೆ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ಸಂಘಟಿತ ದಾಳಿ ನಡೆಸಿದ್ದರು. ನವೆಂಬರ್ 26ರ ರಾತ್ರಿ ಆರಂಭವಾದ ದಾಳಿ ನವೆಂಬರ್ 29ರ ಬೆಳಗಿನವರೆಗೆ ಸುಮಾರು 60 ಗಂಟೆಗಳ ಕಾಲ ನಡೆದಿತ್ತು. ಕಟ್ಟಡಗಳ ವಿನ್ಯಾಸ ಮತ್ತು ಎತ್ತರವನ್ನು ಬಳಸಿಕೊಂಡು ಒತ್ತೆಯಾಳುಗಳನ್ನು ಇರಿಸಿಕೊಂಡಿದ್ದ ಉಗ್ರರನ್ನು ಮುಂಬೈ ಪೊಲೀಸರು, ಸಶಸ್ತ್ರ ಪಡೆಗಳು, ಭಾರತೀಯ ನೌಕಾಪಡೆಯ ಮರೀನ್ ಕಮಾಂಡೋಗಳು ಮತ್ತು ರಾಷ್ಟ್ರೀಯ ಭದ್ರತಾ ಪಡೆ (NSG) ಯೋಧರು ಹೊಡೆದುರುಳಿಸಿದ್ದರು.

ಈ ದಾಳಿಯು ಕರಾವಳಿ ಭದ್ರತೆ, ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ಭದ್ರತಾ ಸಂಸ್ಥೆಗಳ ನಡುವಿನ ಸಮನ್ವಯದ ಲೋಪಗಳನ್ನು ಬಹಿರಂಗಪಡಿಸಿ, ಭಾರತದ ಭಯೋತ್ಪಾದನಾ ನಿಗ್ರಹ ಸನ್ನದ್ಧತೆಯಲ್ಲಿ ಭಾರಿ ಸುಧಾರಣೆಗೆ ಕಾರಣವಾಯಿತು. ದಾಳಿ ನಡೆಸಿದ 10 ಉಗ್ರರಲ್ಲಿ ಜೀವಂತವಾಗಿ ಸೆರೆಸಿಕ್ಕ ಕಸಬ್‌ನನ್ನು ಗಲ್ಲಿಗೇರಿಸಲಾಗಿದೆ. ದಾಳಿಗೂ ಮುನ್ನ ಮುಂಬೈನಲ್ಲಿ ರೆಕ್ಕಿ (ಸ್ಥಳ ಪರಿಶೀಲನೆ) ನಡೆಸಿದ್ದ ಪ್ರಮುಖ ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿ ಅಮೆರಿಕದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿದಿದ್ದಾನೆ. ಮತ್ತೊಬ್ಬ ಆರೋಪಿ ತಹವ್ವೂರ್ ಹುಸೇನ್ ರಾಣಾನನ್ನು ಭಾರತದಲ್ಲಿ ವಿಚಾರಣೆ ಎದುರಿಸಲು 2025ರಲ್ಲಿ ಅಮೆರಿಕದಿಂದ ಹಸ್ತಾಂತರಿಸಲಾಗಿದೆ (Extradited). ಆದರೆ, ಈ ದಾಳಿಯ ಹಲವು ಮಾಸ್ಟರ್‌ಮೈಂಡ್‌ಗಳು ಮತ್ತು ಸೂತ್ರಧಾರರು ಇಂದಿಗೂ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದು, ಭಾರತದ ಕೈಗೆ ಸಿಗದೆ ಉಳಿದಿದ್ದಾರೆ.