ನವದೆಹಲಿ(ಏ.24): ಕೊರೋನಾದಿಂದ ಆರ್ಥಿಕತೆ ಮೇಲಾಗಿರುವ ಪರಿಣಾಮಗಳನ್ನು ಎದುರಿಸುವುದಕ್ಕೆ ಸಂಪನ್ಮೂಲ ಕ್ರೋಢೀಕರಿಸಲು ಪ್ರಧಾನಿ, ಸಚಿವರು ಹಾಗೂ ಸಂಸದರ ವೇತನವನ್ನು ಶೇ.30ರಷ್ಟು ಕಡಿತ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ (ಡಿಎ)ಗೆ ಕೊಕ್‌ ನೀಡಿದೆ.

50 ಲಕ್ಷ ಹಾಲಿ ನೌಕರರು ಹಾಗೂ 61 ಲಕ್ಷ ಪಿಂಚಣಿದಾರರ ತುಟ್ಟಿಭತ್ಯೆಯನ್ನು ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ 2020ರ ಜ.1ರಿಂದ ಪೂರ್ವಾನ್ವಯವಾಗುವಂತೆ ಶೇ.17ರಿಂದ ಶೇ.21ಕ್ಕೆ ಅಂದರೆ ಶೇ.4ರಷ್ಟು ಹೆಚ್ಚಳ ಮಾಡಿತ್ತು. ಈ ನಿರ್ಧಾರದಿಂದ 2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 27,100 ಕೋಟಿ ರು. ಹೊರೆಯಾಗುತ್ತಿತ್ತು. ಇದೀಗ ಈ ಭತ್ಯೆ ಹೆಚ್ಚಳವನ್ನು ನೀಡದೇ ಇರಲು ಸರ್ಕಾರ ನಿರ್ಧರಿಸಿದೆ.

ಇದರ ಜೊತೆಗೆ 2020ರ ಜುಲೈ 1ರಿಂದ 2021ರ ಜ.1ರವರೆಗಿನ ತುಟ್ಟಿಭತ್ಯೆ ಹಾಗೂ ಪರಿಹಾರ ಭತ್ಯೆ (ಡಿಆರ್‌)ಯನ್ನೂ ನೀಡಲಾಗುವುದಿಲ್ಲ. 2021ರ ಜುಲೈ 1ರ ಬಳಿಕ ಹೊಸ ಭತ್ಯೆ ಪ್ರಕಟಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿದೆ. ಈ ಎರಡೂ ನಿರ್ಧಾರಗಳಿಂದ ಸರ್ಕಾರಕ್ಕೆ 37530 ಕೋಟಿ ರು. ಉಳಿತಾಯವಾಗಲಿದೆ. ಸಾಮಾನ್ಯವಾಗಿ ರಾಜ್ಯ ಸರ್ಕಾರಗಳೂ ಕೇಂದ್ರದ ನೀತಿಯನ್ನೇ ಪಾಲಿಸುತ್ತವೆ. ಅವು ಕೂಡ ಇದೇ ರೀತಿಯ ಕ್ರಮ ಪ್ರಕಟಿಸಿದರೆ ಒಂದು ವರ್ಷದಲ್ಲಿ 1.20 ಲಕ್ಷ ಕೋಟಿ ರುಪಾಯಿ ಉಳಿಯಲಿದೆ ಎಂದು ಅಂದಾಜಿಸಲಾಗಿದೆ.

ಕೊರೋನಾ ಎಫೆಕ್ಟ್: ಭಾರತದ ಜಿಡಿಪಿ ಶೇ.1ಕ್ಕಿಂತ ಕೆಳಕ್ಕೆ ಕುಸಿಯುವ ಸಂಭವ

ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ನೌಕರರು ತುಟ್ಟಿಭತ್ಯೆ ಹೆಚ್ಚಳಕೆ ಮುಂದಿನ ಜುಲೈವರೆಗೂ ಕಾಯುವುದು ಅನಿವಾರ್ಯ. ಮುಂದಿನ ತುಟ್ಟಿಭತ್ಯೆ ಘೋಷಣೆ ವೇಳೆ, ಈಗ ರದ್ದಾದ ಅವಧಿಯ ಅಂದರೆ 2020ರ ಜ.1ರಿಂದ 2021ರ ಜೂ.30ರ ಸಮಯದ ಹಿಂಬಾಕಿ (ಅರಿಯ​ರ್‍ಸ್) ನೀಡಲಾಗುವುದಿಲ್ಲ. ಆದರೆ ಈಗಾಗಲೇ ಜಾರಿಯಲ್ಲಿರುವ ಶೇ.17ರಷ್ಟುತುಟ್ಟಿಭತ್ಯೆ ಮುಂದುವರೆಯಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ರಾಜ್ಯ ನೌಕರರಿಗೂ ಶಾಕ್‌:

ಸಾಮಾನ್ಯವಾಗಿ ತುಟ್ಟಿಭತ್ಯೆ ಏರಿಕೆಯ ವಿಷಯದಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಕೇಂದ್ರದ ನೀತಿಯನ್ನೇ ಪಾಲಿಸಿಕೊಂಡು ಬರುತ್ತವೆ. ಕೇಂದ್ರದಂತೆ ರಾಜ್ಯ ಸರ್ಕಾರಗಳಿಗೂ ಕೊರೋನಾ ಆರ್ಥಿಕ ಹೊಡೆತ ನೀಡಿದೆ. ಹೀಗಾಗಿ ಒಂದು ವೇಳೆ ಎಲ್ಲಾ ರಾಜ್ಯ ಸರ್ಕಾರಗಳು 2021ರ ಜೂನ್‌ 30ರವರೆಗೆ ತುಟ್ಟಿಭತ್ಯೆ ಸ್ಥಗಿತಗೊಳಿಸಲು ನಿರ್ಧರಿಸಿದರೆ ಅವುಗಳ ಬೊಕ್ಕಸಕ್ಕೆ ಒಟ್ಟು 82566 ಕೋಟಿ ರು. ಉಳಿಯಲಿದೆ. ಅಂದರೆ ಡಿಎ ಸ್ಥಗಿತದಿಂದಾಗಿ ಕೇಂದ್ರ ಮತ್ತು ರಾಜ್ಯಗಳ ಬೊಕ್ಕಸಕ್ಕೆ ಒಟ್ಟಾರೆ 1.20 ಲಕ್ಷ ಕೋಟಿ ರುಪಾಯಿ ಉಳಿಯುವ ನಿರೀಕ್ಷೆ ಇದೆ.

ಕೊರೋನಾಕ್ಕೆ ಹೆದರಬೇಕಿಲ್ಲ; ಪ್ರಧಾನಿ ಮೋದಿ ಕೊಟ್ಟ 5 ಅದ್ಭುತ ಬಿಜಿನಸ್ ಐಡಿಯಾ

ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಹಣದುಬ್ಬರ ಆಧರಿಸಿ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಿಸಲಾಗುತ್ತದೆ. ಜನವರಿ ಹಾಗೂ ಜುಲೈನಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಸರ್ಕಾರ ತಡವಾಗಿ ನಿರ್ಧಾರ ಕೈಗೊಂಡರೂ ಪೂರ್ವಾನ್ವಯವಾಗುವಂತೆ ಅನುಷ್ಠಾನವಾಗುತ್ತದೆ.