ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ಮಾತನಾಡಿದ ಸಂಸದ ಅಸಾದುದ್ದೀನ್ ಓವೈಸಿ, ಪಾಕಿಸ್ತಾನವನ್ನು 'ಇಸ್ರೇಲ್‌ನ ಕಿರಿಯ ಸಹೋದರ' ಎಂದು ಕರೆದು ತೀವ್ರ ವಾಗ್ದಾಳಿ. ಕಾಬೂಲ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 400 ಅಮಾಯಕರು ಸಾವನ್ನಪ್ಪಿದ್ದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು. 

ರಂಜಾನ್ ತಿಂಗಳ ಕೊನೆಯ ಶುಕ್ರವಾರದಂದು ಹೈದರಾಬಾದ್‌ನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ AIMIM ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಮಾತನಾಡುತ್ತಾ, ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾಕಿಸ್ತಾನವನ್ನು ಇಸ್ರೇಲ್‌ನ ಕಿರಿಯ ಸಹೋದರ ಎಂದು ಕರೆದರು. ಇದು ಸಾಮಾನ್ಯ ಹೇಳಿಕೆಯಲ್ಲ, ಒಬ್ಬ ಮುಸ್ಲಿಂ, ಮುಸ್ಲಿಂ ರಾಷ್ಟ್ರದ ವಿರುದ್ಧವೇ ಗುಡುಗಿದರು. ಮುಸ್ಲಿಮರ ಬಗ್ಗೆ ಮೃದು ಧೋರಣೆ ತೋರುವ ಕಾಂಗ್ರೆಸ್‌ನ ಹಿಂದೂ ನಾಯಕರಿಗಿಂತ ಭಿನ್ನವಾಗಿ ಕಂಡರು. ಮುಸ್ಲಿಂ ನಾಯಕನೊಬ್ಬ ಮುಸ್ಲಿಂ ದೇಶವನ್ನು ಇಷ್ಟು ಕಠಿಣ ಸ್ವರದಲ್ಲಿ ಟೀಕಿಸುವುದು ವಿರಳ. ಆದರೆ ಓವೈಸಿ ಆಕ್ರೋಶಭರಿತರಾಗಿ ಮಾತನಾಡಿದರು.

Add Asianetnews Kannada as a Preferred SourcegooglePreferred

ನೀವು ಯಾವ ರೀತಿ ಮುಸ್ಲಿಂ?

ಇಸ್ರೇಲ್, ಪಾಕಿಸ್ತಾನ ಈ ಎರಡು ದೇಶಗಳು ನೆರೆಹೊರೆಯವನ್ನು ಎಂದಿಗೂ ಶಾಂತಿಯಿಂದ ಇರಲು ಬಿಡುವುದಿಲ್ಲ. ಪಾಕಿಸ್ತಾನ ಇಸ್ಲಾಂ ಬಗ್ಗೆ ಭಾರೀ ದೊಡ್ಡ ಹೇಳಿಕೆಗಳನ್ನು ನೀಡುತ್ತದೆ, ಆದರೆ ಯಾವ ರೀತಿಯ ಇಸ್ಲಾಂ? ನಿಮಗೆ ಇಸ್ಲಾಂನ ವರ್ಣಮಾಲೆಯೂ ತಿಳಿದಿಲ್ಲ ಎಂದು ಕಿಡಿಕಾರಿದರು.

ಕಾಬೂಲ್‌ನಲ್ಲಿ 400 ಅಮಾಯಕ ಜನರನ್ನ ಕೊಂದಿರಿ

ಪಾಕಿಸ್ತಾನದ ವಿರುದ್ಧ ಓವೈಸಿ ಇಷ್ಟು ಕಟುವಾಗಿ ವಾಗ್ದಾಳಿ ನಡೆಸಲು ಕಾರವಿದೆ. ಮೊನ್ನೆ ಮಾರ್ಚ್ 16 ರಂದು ಪಾಕಿಸ್ತಾನದ ಸೇನೆ ಕಾಬೂಲ್‌ನಲ್ಲಿರುವ ಮಾದಕವಸ್ತು ಪುನರ್ವಸತಿ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆಸಿತು. ಈ ದಾಳಿಯಲ್ಲಿ ತಾಲಿಬಾನ್ ಸರ್ಕಾರದ ಪ್ರಕಾರ, 400 ಜನರು ಸಾವನ್ನಪ್ಪಿದರು ಮತ್ತು 250 ಕ್ಕೂ ಹೆಚ್ಚು ಜನರು ಗಾಯಗೊಂಡರು. ಇಷ್ಟಾದರೂ ಪಾಕಿಸ್ತಾನ ನಾವು ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ ಇದು ಕೇವಲ ಮಿಲಿಟರಿ ಸ್ಥಾಪನೆಗಳನ್ನ ಗುರಿಯಾಗಿಸಿಕೊಂಡಿದೆ ಎಂದು ಸುಳ್ಳು ಹೇಳಿತು. ಆದಾಗ್ಯೂ, ಈ ದಾಳಿಯನ್ನು ವಿಶ್ವಾದ್ಯಂತ ಮಾಧ್ಯಮಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಬಲವಾಗಿ ಖಂಡಿಸಿದವು.

ಪ್ರಧಾನಿ ಮೋದಿ ವಿರುದ್ಧವೂ ಓವೈಸಿ ವಾಗ್ದಾಳಿ

ಕಾಬೂಲ್‌ನಲ್ಲಿ 400 ಮೃತದೇಹಗಳಿಗೆ ಸಾಮೂಹಿಕ ಅಂತ್ಯಕ್ರಿಯೆ ನಡೆಯಿತು. ಮಳೆಯಲ್ಲಿ ನೆನೆದ ಅಫ್ಘಾನ್ ರೆಡ್ ಕ್ರೆಸೆಂಟ್ ಸ್ವಯಂಸೇವಕರು, ಸರಳ ಮರದ ಶವಪೆಟ್ಟಿಗೆಯನ್ನು ಬೆಟ್ಟದ ಇಳಿಜಾರಿನಲ್ಲಿ ಅಗೆದ ಸಾಮೂಹಿಕ ಸಮಾಧಿಗೆ ಕೊಂಡೊಯ್ದರು. ಈ ಶವಪೆಟ್ಟಿಗೆಯಲ್ಲಿ ಇರಿಸಲಾದ ಶವಗಳನ್ನು ನೋಡಿದಾಗ ಓವೈಸಿಯವರ ಮಾತುಗಳು ಇನ್ನಷ್ಟು ಶಕ್ತಿಯುತವಾಗಿ ಕಾಣುತ್ತಿದ್ದವು. ಪಶ್ಚಿಮ ಏಷ್ಯಾದ ಸಂಘರ್ಷದ ಬಗ್ಗೆ ಭಾರತ ನಿಜವಾಗಿಯೂ ತಟಸ್ಥ ನಿಲುವನ್ನು ಅಳವಡಿಸಿಕೊಂಡಿದ್ದರೆ, ಜಾಗತಿಕವಾಗಿ ಅದರ ಧ್ವನಿಗೆ ಹೆಚ್ಚಿನ ತೂಕವಿರುತ್ತಿತ್ತು ಎಂದು ಓವೈಸಿ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರ ವಿರುದ್ಧವೂ ಟೀಕಿಸಿದರು.

ಪಾಕಿಸ್ತಾನ, ಅಫ್ಘಾನಿಸ್ತಾನ ಈದ್‌ಗಾಗಿ ತಾತ್ಕಾಲಿಕ ಕದನ ವಿರಾಮ ಘೋಷಿಸಿರುವ ಸಮಯದಲ್ಲಿ ಓವೈಸಿ ಪಾಕಿಸ್ತಾನದ ಬಗ್ಗೆ ಈ ಟೀಕೆ ಮಾಡಿದ್ದಾರೆ, ಆದರೆ ಯಾವುದೇ ಗಡಿಯಾಚೆಗಿನ ದಾಳಿಯು ಕಾರ್ಯಾಚರಣೆಗಳನ್ನು ಮತ್ತೆ ತೀವ್ರಗೊಳಿಸುತ್ತದೆ ಎಂದು ಪಾಕಿಸ್ತಾನ ಸ್ಪಷ್ಟವಾಗಿ ಹೇಳಿದೆ.