* ಪ್ರಧಾನಿ ಭದ್ರತಾ ಲೋಪ ಪಂಜಾಬ್ ಪೊಲೀಸ್‌ಗೆ ಬಿಸಿ* ಲೋಪಕ್ಕೆ ಒಂದೇ ದಿನದಲ್ಲಿ ಕಾರಣ ನೀಡುವಂತೆ ಬಠಿಂಡಾ ಎಎಸ್ಪಿಗೆ ನೋಟಿಸ್* ಪಂಜಾಬಿಗೆ ಕೇಂದ್ರ ಸಮಿತಿ ಭೇಟಿ: ಫ್ಲೈಓವರ್‌ನಲ್ಲಿ 45 ನಿಮಿಷ ಪರಿಶೀಲನೆ
ಪಿಟಿಐ ಚಂಡೀಗಢ/ಫಿರೋಜ್‌ಪುರ(ಜ. 08) ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಬುಧವಾರದ ಭೇಟಿ ವೇಳೆ ಭಾರಿ ಭದ್ರತಾ ಲೋಪ ಉಂಟಾದ ಪ್ರಕರಣ ಸಂಬಂಧ ಪಂಜಾಬ್ (Punjab) ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ (Union Govt) ಬಿಸಿ ಮುಟ್ಟಿಸಲು ಆರಂಭಿಸಿದೆ. ಬಠಿಂಡಾದ ವಿಶೇಷ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಎಸ್‌ಪಿ) ಕೇಂದ್ರ ಗೃಹ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಉತ್ತರ ನೀಡುವಂತೆ ತಾಕೀತು ಮಾಡಿದೆ. ಅಲ್ಲದೆ, ‘ನಿಮ್ಮ ವಿರುದ್ಧ ಕಾನೂನಿನಡಿ ಏಕೆ ಕ್ರಮ ಆರಂಭಿಸಬಾರದು?’ ಎಂದೂ ಕೇಳಿದೆ.
ಮತ್ತೊಂದೆಡೆ, ಪ್ರಧಾನಿ ಭದ್ರತಾ ಲೋಪ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರ ರಚನೆ ಮಾಡಿರುವ ತ್ರಿಸದಸ್ಯ ಸಮಿತಿ, ಪಂಜಾಬಿಗೆ ಶುಕ್ರವಾರ ಭೇಟಿ ನೀಡಿ ತನಿಖೆ ಆರಂಭಿಸಿದೆ. ಮೋದಿ ಅವರು 20 ನಿಮಿಷ ಅತಂತ್ರರಾಗಿದ್ದ ಪ್ಯಾರಾಯಾನ ಫ್ಲೈಓವರ್ ಮೇಲೆ 45 ನಿಮಿಷಗಳ ಕಾಲ ಪರಿಶೀಲನೆ ನಡೆಸಿದೆ. ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿಗಳು, ನಾಗರಿಕ ಸೇವಾ ಅಧಿಕಾರಿಗಳ ಜತೆಗೂ ಸಮಾಲೋಚನೆ ನಡೆಸಿದೆ. ಬಳಿಕ ಸಮೀಪದ ಬಿಎಸ್‌ಎಫ್ ಕೇಂದ್ರ ಕಚೇರಿಗೆ ಮೋದಿ ಅವರ ಭದ್ರತೆಯ ಹೊಣೆ ಹೊತ್ತಿದ್ದ ಅಧಿಕಾರಿಗಳನ್ನು ಕರೆಸಿಕೊಂಡು ಸುದೀರ್ಘ ವಿಚಾರಣೆ ನಡೆಸಿದೆ.
ಇದೇ ವೇಳೆ, ಪಂಜಾಬ್ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿದ್ದು, ಭದ್ರತಾ ಲೋಪ ಕುರಿತು ಎಫ್‌ಐಆರ್ ದಾಖಲಿಸಿರುವುದಾಗಿ ಮಾಹಿತಿ ನೀಡಿದೆ. ರಸ್ತೆ ತಡೆ ಮಾಡಿದ್ದ 150 ಅನಾಮಿಕರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ದೇಶದ ಪ್ರಧಾನಿಯನ್ನೇ ಸಂಕಷ್ಟಕ್ಕೆ ಸಿಲುಕಿಸಿದ್ದ ಪಂಜಾಬ್ ಸರ್ಕಾರ
ಸುಮ್ಮನಿದ್ದ ಪೊಲೀಸ್ ವಿಡಿಯೋ ವೈರಲ್ : ಫ್ಲೈಓವರ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಅತಂತ್ರರಾಗಿ ಸಿಲುಕಿದ್ದಾಗ ಪಂಜಾಬ್ ಪೊಲೀಸರು ಏನೂ ಮಾಡದೆ ಸುಮ್ಮನಿದ್ದ ವಿಡಿಯೋ ವೈರಲ್ ಆಗಿದೆ. ಭದ್ರತಾ ಲೋಪ ಉಂಟಾದ ವೇಳೆ ಪ್ರಧಾನಿಯನ್ನು ಸುರಕ್ಷಿತವಾಗಿರಿಸಲು ಎಸ್‌ಪಿಜಿ ತಂಡದವರು ಆತಂಕದಿಂದ ಯತ್ನಿಸುತ್ತಿರುವುದು ಹಾಗೂ ಪೊಲೀಸರು ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಪ್ರಯಾಣ ದಾಖಲೆ ರಕ್ಷಿಸಿಡಿ: ‘ಸುಪ್ರೀಂ’: ನವದೆಹಲಿ: ಪಂಜಾಬ್‌ನಲ್ಲಿ ಪ್ರಧಾನಿ ಭೇಟಿ ವೇಳೆ ಉಂಟಾದ ಭದ್ರತಾ ಲೋಪದ ಬಗ್ಗೆ ವಿಚಾರಣೆ ಆರಂಭಿಸಿರುವ ಸುಪ್ರೀಂಕೋರ್ಟ್, ಪ್ರಧಾನಿಯ ಪ್ರಯಾಣದ ದಾಖಲೆಗಳನ್ನು ತಕ್ಷಣ ವಶಪಡಿಸಿಕೊಂಡು ಸುರಕ್ಷಿತವಾಗಿರಿಸುವಂತೆ ಪಂಜಾಬ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿದೆ. ಅಲ್ಲದೆ ಕೇಂದ್ರ ಹಾಗೂ ರಾಜ್ಯದ ತನಿಖೆ ಸ್ಥಗಿತಕ್ಕೂ ಸೂಚಿಸಿದೆ.
ಪ್ರತಿಭಟನೆ: ಪ್ರಧಾನಿ ನರೇಂದ್ರ ಮೋದಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾದ ಪಂಜಾಬ್ ಸರ್ಕಾರದ ವಿರುದ್ಧ ರಾಯಚೂರು ಮತ್ತು ಸಿಂಧನೂರು ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಯಚೂರಿನ ಡಾ.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದರು. ಅದೇ ರೀತಿ ಸಿಂಧನೂರು ನಗರದ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡ ಬಿಜೆಪಿ ಯುವ ಮೋರ್ಚಾ ಘಟಕ, ಪಂಜಾಬ್ ಸರ್ಕಾರದ ಭದ್ರತೆ ವೈಫಲ್ಯ ಖಂಡಿಸಿ ಘೋಷಣೆ ಕೂಗಿ, ಪಂಜಾಬ್ ಸಿಎಂ ಭಾವಚಿತ್ರ ಇರುವ ಪ್ಲೇಕ್ಸ್‌ಗೆ ಬೆಂಕಿ ಹಂಚಿ ಪ್ರತಿಭಟಿಸಿತು.
ಇದೊಂದು ದೇಶದ್ರೋಹಿ ಸರ್ಕಾರವಾಗಿದೆ. ದೇಶದ ಪ್ರಧಾನಿಯನ್ನು ಪ್ರತಿಯೊಬ್ಬರು ಗೌರವಿಸಬೇಕು. ಪಂಜಾಬ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗ ಭದ್ರತೆ ಒದಗಿಸದಿರುವುದು ಅಕ್ಷಮ್ಯ ಅಪರಾಧವಾಗಿದೆ. ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಟೀಕಿಸಿದರು.
