Asianet Suvarna News Asianet Suvarna News

ನಾಲ್ಕು ತಿಂಗಳಿಂದಲೇ ಪಿಎಫ್‌ಐಗೆ ಖೆಡ್ಡಾ: ಸರ್ಜಿಕಲ್‌ ದಾಳಿಯಷ್ಟೇ ರಹಸ್ಯ ಕಾಪಾಡಿದ್ದ ಕೇಂದ್ರ ಸರ್ಕಾರ

ಭಯೋತ್ಪಾದಕ ಕೃತ್ಯ, ಹಿಂದು ಕಾರ್ಯಕರ್ತರ ಹತ್ಯೆ ಹಾಗೂ ಮೂಲಭೂತವಾದದ ಆರೋಪ ಎದುರಿಸುತ್ತಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮೂರ್ನಾಲ್ಕು ತಿಂಗಳಿನಿಂದಲೂ ಯೋಜನೆ ರೂಪಿಸಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

Central government had planned to ban the PFI organization for four months gvd
Author
First Published Sep 29, 2022, 11:41 AM IST

ಭಯೋತ್ಪಾದಕ ಕೃತ್ಯ, ಹಿಂದು ಕಾರ್ಯಕರ್ತರ ಹತ್ಯೆ ಹಾಗೂ ಮೂಲಭೂತವಾದದ ಆರೋಪ ಎದುರಿಸುತ್ತಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮೂರ್ನಾಲ್ಕು ತಿಂಗಳಿನಿಂದಲೂ ಯೋಜನೆ ರೂಪಿಸಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಕಾರ್ಯದಲ್ಲಿ ಇಸ್ಲಾಮಿಕ್‌ ನಾಯಕರ ಜತೆಗೂ ಕೇಂದ್ರ ಸರ್ಕಾರ ಚರ್ಚೆ ಮಾಡಿತ್ತು ಎಂದು ಮೂಲಗಳು ಹೇಳಿವೆ. ಕೇಂದ್ರೀಯ ತನಿಖಾ ಸಂಸ್ಥೆಗಳು ರಾಜ್ಯಗಳ ಭದ್ರತಾ ಸಂಸ್ಥೆಗಳ ಜತೆ ಯೋಜನೆ ಹಾಗೂ ಸಮನ್ವಯ ಸಾಧಿಸಿ, ಅತ್ಯಂತ ಯೋಜಿತ ರೀತಿಯಲ್ಲಿ ಬೃಹತ್‌ ಪ್ರಮಾಣದಲ್ಲಿ ದಾಳಿ ನಡೆಸಿ ಪಿಎಫ್‌ಐ ಅನ್ನು ನಿಷೇಧಿಸುವಲ್ಲಿ ಸಫಲವಾಗಿವೆ ಎಂದು ಮೂಲಗಳು ತಿಳಿಸಿವೆ.

ವಿಷಯ ಹೊರಗೆ ಬರಬಾರದು ಎಂಬ ಕಾರಣಕ್ಕೆ ಭದ್ರತಾ ಅಧಿಕಾರಿಗಳು ಸೀಮಿತ ಸಭೆಗಳನ್ನು ನಡೆಸಿದ್ದರು. ರಾಜ್ಯಗಳಿಗೂ ಹೆಚ್ಚಿನ ಮಾಹಿತಿಯನ್ನು ನೀಡಿರಲಿಲ್ಲ. ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವಾಗ ಹಾಗೂ ಉರಿ ಸರ್ಜಿಕಲ್‌ ದಾಳಿಯನ್ನು ನಡೆಸುವಾಗ ಯಾವ ರೀತಿಯ ರಹಸ್ಯವನ್ನು ಕಾಪಾಡಿಕೊಳ್ಳಲಾಗಿತ್ತೋ ಅದೇ ರೀತಿ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಜುಲೈ ಸಮಯದಲ್ಲೇ ಯೋಜನೆ ಆರಂಭಗೊಂಡರೂ ಸಾಕ್ಷ್ಯ ಸಂಗ್ರಹ ಉದ್ದೇಶದಿಂದ ವಿಳಂಬ ಮಾಡಲಾಯಿತು. ಸೆಪ್ಟೆಂಬರ್‌ನಲ್ಲಿ 2 ಬೃಹತ್‌ ದಾಳಿ ನಡೆಸಿ ಸಾಕ್ಷ್ಯ ಸಂಗ್ರಹಿಸಲಾಯಿತು. ವಿಶೇಷ ಎಂದರೆ, ಈ ಕಾರ್ಯಾಚರಣೆ ವೇಳೆ ಒಂದೇ ಒಂದು ಗುಂಡು ಕೂಡ ಹಾರಿಲ್ಲ. ಅಷ್ಟೊಂದು ಕರಾರುವಾಕ್ಕು ಪ್ಲ್ಯಾನಿಂಗ್‌ ಅನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ಮಾಡಿದ್ದವು.

ಪಿಎಫ್‌ಐ ಅನ್ನು ಎನ್‌ಐಎ ಖೆಡ್ಡಾಕ್ಕೆ ಕೆಡವಿದ್ದು ಹೇಗೆ?: ದಾಳಿ ನಡೆಯುತ್ತದೆ ಅಥವಾ ನಿಷೇಧ ಹೇರಲಾಗುತ್ತದೆ ಎಂಬ ಸುಳಿವು ಸಿಕ್ಕಿದ್ದರೆ ಪಿಎಫ್‌ಐನ ಪ್ರಮುಖ ನಾಯಕರು ನಾಪತ್ತೆಯಾಗುವ ಅಥವಾ ಮಹತ್ವದ ದಾಖಲೆಗಳನ್ನು ಕಣ್ಮರೆ ಮಾಡುವ ಅಪಾಯವಿತ್ತು. ಅದಕ್ಕೆ ಅವಕಾಶವನ್ನೇ ಕೊಡದಂತೆ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ ತನಿಖಾ ಸಂಸ್ಥೆಗಳು ಇದಕ್ಕೆ ತಕ್ಕ ಯೋಜನೆಗಳನ್ನು ರೂಪಿಸಿಕೊಂಡಿದ್ದವು. ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ಪಿಎಫ್‌ಐ ವಿರುದ್ಧ ಹಿಂದು ಸಂಘಟನೆಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ನಡುವೆ, ವಿವಿಧ ಪ್ರಕರಣಗಳಲ್ಲಿ ಬಂಧಿತರಾದವರು ಪಿಎಫ್‌ಐ ಹಾಗೂ ಅದರ ನಾಯಕರ ವಿರುದ್ಧ ಸಾಕ್ಷ್ಯ ಹೇಳಿದ್ದರು.

PFI Twitter Accounts Taken Down: ಪಿಎಫ್‌ಐ, ಸಿಎಫ್‌ಐ ನಾಯಕರ ಖಾತೆಗೆ ಟ್ವಿಟರ್‌ ಬೇಲಿ!

ಈ ಹಿನ್ನೆಲೆಯಲ್ಲಿ ಪಿಎಫ್‌ಐ ಹಾಗೂ ಅದರ ಸಹವರ್ತಿ ಸಂಘಟನೆಗಳ ವಿರುದ್ಧ ಮತ್ತಷ್ಟುಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಲು, ಗಂಭೀರ ಆರೋಪ ಎದುರಿಸುತ್ತಿರುವ ಪ್ರಮುಖ ನಾಯಕರನ್ನು ಬಂಧಿಸಲು ಕೇಂದ್ರ ಸರ್ಕಾರ ಸೆ.22ರಂದು ದೇಶದ 15 ರಾಜ್ಯಗಳ 93 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸ್ಥಳೀಯ ಪೊಲೀಸರ ಸಹಕಾರದಿಂದ ದಾಳಿ ನಡೆಸಿತು. ನೂರಾರು ಮಂದಿಯನ್ನು ಬಂಧಿಸಲಾಯಿತು. ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿ, ದೆಹಲಿಗೆ ಕರೆತರಲು ವಿಮಾನಗಳನ್ನೂ ಮೊದಲೇ ಮೀಸಲಿಡಲಾಗಿತ್ತು. ಇದಾದ ಬಳಿಕ ಸೆ.27ರ ಮಂಗಳವಾರ ಮತ್ತೊಂದು ದಾಳಿಯನ್ನು ನಡೆಸಿ, ಪಿಎಫ್‌ಐ ನಿಷೇಧಕ್ಕೆ ಅಗತ್ಯವಿರುವ ಏರ್ಪಾಟುಗಳನ್ನೂ ಮಾಡಿಕೊಳ್ಳಲಾಯಿತು.

ಇವು ದೇಶದ ನಿಷೇಧಿತ ಸಂಘಟನೆಗಳು: ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿವೆ ಎಂಬ ಕಾರಣಕ್ಕೆ ಪಿಎಫ್‌ಐ ಹಾಗೂ ಅದಕ್ಕೆ ಸಂಬಂಧಿಸಿದ 8 ಸಂಘಟನೆಗಳನ್ನು ಕೇಂದ್ರ ಸರ್ಕಾರ ಬುಧವಾರ 5 ವರ್ಷಗಳ ಕಾಲ ನಿಷೇಧಿಸಿದೆ. ಈ ಮೂಲಕ ದೇಶದಲ್ಲಿ ನಿಷೇಧಕ್ಕೊಳಪಟ್ಟ39 ಸಂಘಟನೆಗಳ ಪಟ್ಟಿಗೆ ಪಿಎಫ್‌ಐ ಸಹ ಸೇರ್ಪಡೆಯಾಗಿದೆ. ದೇಶದಲ್ಲಿ ನಿಷೇಧಿಸಲ್ಪಟ್ಟಿರುವ ಪ್ರಮುಖ ಸಂಘಟನೆಗಳ ವಿವರ ಇಲ್ಲಿದೆ.

ಇಂಟರ್‌ನ್ಯಾಷನಲ್‌ ಸಿಖ್‌ ಯೂತ್‌ ಫೆಡೆರೇಷನ್‌ (ಐಎಸ್‌ಎಫ್‌ವೈ): ಖಲಿಸ್ತಾನ್‌ ಜಿಂದಾಬಾದ್‌ ಮತ್ತು ಖಲಿಸ್ತಾನ ಕಮಾಂಡೋ ಫೋರ್ಸ್‌ಗಳಂತೆ ಐಎಸ್‌ಎಫ್‌ವೈ ಸಹ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ ಎಂಬ ಕಾರಣಕ್ಕೆ ಈ ಸಂಘಟನೆಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿ ಈ ಸಂಘಟನೆಗೆ ಸಂಬಂಧಿಸಿದ ಯಾವುದೇ ಕಾರ‍್ಯ ಚಟುವಟಿಕೆಗಳು ನಡೆಯುವುದನ್ನು ರದ್ದು ಮಾಡಲಾಗಿದೆ. ಅಲ್ಲದೇ ಜಪಾನ್‌, ಆಸ್ಪ್ರೇಲಿಯಾ, ಕೆನಡಾ ಮತ್ತು ಐರೋಪ್ಯ ಒಕ್ಕೂಟದ ದೇಶಗಳಲ್ಲೂ ಈ ಸಂಘಟನೆಯನ್ನು ನಿಷೇಧಿಸಲಾಗಿದೆ.

ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಪ್‌ ಅಸ್ಸಾಂ (ಯುಎಲ್‌ಎಫ್‌ಎ): ಪ್ರತ್ಯೇಕವಾದಕ್ಕೆ ಬೆಂಬಲ ನೀಡುತ್ತಿದೆ ಎಂಬ ಕಾರಣಕ್ಕೆ 1990ರಲ್ಲಿ ಈ ಸಂಘಟನೆಯನ್ನು ಭಾರತ ಸರ್ಕಾರ ನಿಷೇಧಿಸಿದೆ. ವರದಿಗಳ ಪ್ರಕಾರ ಈ ಸಂಘಟನೆ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳಿಂದ ಅಕ್ರಮವಾಗಿ ಹಣ ಸಂಗ್ರಹ ಮಾಡಿದೆ. ಅಲ್ಲದೇ ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಇತರ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಈ ಸಂಘಟನೆ ಭಾಗಿಯಾಗಿತ್ತು.

ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ (ಸಿಮಿ): ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವಾಗಿ ಪರಿವರ್ತಿಸಬೇಕು ಎಂಬ ಉದ್ದೇಶವನ್ನು ಹೊಂದಿದ್ದ ಈ ಸಂಘಟನೆಯನ್ನು 2001ರಲ್ಲಿ ನಿಷೇಧಿಸಲಾಗಿತ್ತು. ಆದರೆ ಕೆಲವು ಕಾನೂನು ತೊಡಕುಗಳಿಂದಾಗಿ 2008ರಲ್ಲಿ ಈ ನಿಷೇಧವನ್ನು ಹಿಂಪಡೆಯಲಾಯಿತು. ನಂತರ ಸುಪ್ರೀಂ ಕೋರ್ಚ್‌ ಮಧ್ಯಪ್ರವೇಶದ ಬಳಿಕ ಮತ್ತೆ ಬ್ಯಾನ್‌ ಮಾಡಲಾಯಿತು. 2019ರಲ್ಲಿ ಸರ್ಕಾರ ಈ ನಿಷೇಧವನ್ನು ಮತ್ತೆ ಮುಂದುವರೆಸಿದೆ.

ದೀನ್‌ದಾರ್‌ ಅಂಜುಮನ್‌ ಚನ್ನಬಸವೇಶ್ವರ ಸಿದ್ಧಿಕಿ: ಇದೊಂದು ಹೈದರಾಬಾದ್‌ ಮೂಲದ ಇಸ್ಲಾಮಿಕ್‌ ಮತ್ತು ಲಿಂಗಾಯಿತ ಭಾವನೆಗಳನ್ನು ಆಧರಿಸಿ ಸ್ಥಾಪನೆಯಾದ ಸಂಘಟನೆಯಾಗಿದೆ. 2000ರಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಬಾಂಬ್‌ ದಾಳಿ ನಡೆಸಿದ ಕಾರಣಕ್ಕೆ 2001ರಲ್ಲಿ ನಿಷೇಧಕ್ಕೊಳಪಟ್ಟಿತು. ಆದರೆ ಈ ಆರೋಪವನ್ನು ಸಂಘಟನೆ ತಳ್ಳಿಹಾಕಿತ್ತು.

ಕಮ್ಯುನಿಷ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕಿಸ್ಟ್‌-ಲೆನಿನಿಷ್ಟ್‌) ಪೀಪಲ್ಸ್‌ ವಾರ್‌ (ಪಿಡಬ್ಲ್ಯೂ): ಭಯೋತ್ಪಾದಕ ಸಂಘಟನೆಗಳು ಎಂದು ಕರೆಯುವ ಮೂಲಕ 2004ರಲ್ಲಿ ಸಿಪಿಐ (ಎಂಎಲ್‌) ಪಿಡಬ್ಲ್ಯು ಮತ್ತು ಅದರ ಎಲ್ಲಾ ಉಪ ಸಂಘಟನೆಗಳನ್ನು ನಿಷೇಧಿಸಲಾಗಿದೆ. 1992ರಲ್ಲಿ ಈ ಸಂಘಟನೆಯನ್ನು ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ನಿಷೇಧಿಸಿದ್ದರೂ, ರಾಷ್ಟ್ರೀಯ ಮಟ್ಟದಲ್ಲಿ ಚಟುವಟಿಕೆ ನಡೆಸಲು ಅವಕಾಶ ನೀಡಲಾಗಿತ್ತು.

ಲಿಬರೇಶನ್‌ ಟೈಗ​ರ್‍ಸ್ ಆಪ್‌ ತಮಿಳು ಈಳಂ (ಎಲ್‌ಟಿಟಿಇ): ಸ್ವತಂತ್ರ್ಯ ತಮಿಳುನಾಡು ರಾಜ್ಯದ ಆಗ್ರಹ ವ್ಯಕ್ತಪಡಿಸಿದ್ದ ಹಾಗೂ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಲ್‌ಟಿಟಿಇ ಸಂಘಟನೆಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಭಾರತ ಅಷ್ಟೇ ಅಲ್ಲದೇ ಕೆನಡಾ, ಅಮೆರಿಕ, ಐರೋಪ್ಯ ಒಕ್ಕೂಟದ ದೇಶಗಳು ಸೇರಿದಂತೆ 33 ದೇಶಗಳು ಈ ಸಂಘಟನೆಯನ್ನು ನಿಷೇಧಿಸಿವೆ.

ಪಿಎಫ್‌ಐ ಮೇಲಿನ ಆರೋಪಗಳು ಏನು?: ದೇಶದ 17 ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿರುವ, ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದಿಂದ ಸರಿಸುಮಾರು 1300 ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆ ಹಲವು ಗುರುತರ ಆರೋಪಗಳನ್ನು ಮೊದಲಿನಿಂದಲೂ ಎದುರಿಸುತ್ತಿದೆ. ಈ ಸಂಘಟನೆಗೆ ನಿಷೇಧ ಹೇರಬೇಕು ಎಂಬ ಕೂಗಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಕಡೆಗೂ ಈ ಸಂಘಟನೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಹಾಗಾದರೆ ಪಿಎಫ್‌ಐ ವಿರುದ್ಧದ ಗಂಭೀರ ಆರೋಪಗಳು ಏನು?

PFI Ban: ಭಾವುಕರಾದ ಹೊನ್ನಾವರದ ಪರೇಶ್ ಮೇಸ್ತಾ ತಂದೆ ಕಮಲಾಕರ್

1. ಗಲಭೆಗೆ ಕುಮ್ಮಕ್ಕು: ದೇಶದಲ್ಲಿ ಅಭದ್ರತೆಯ ಭಾವ ಇದೆ ಎಂದು ಬಿಂಬಿಸಿ ಮುಸಲ್ಮಾನ ಸಮುದಾಯವನ್ನು ಮೂಲಭೂತವಾದದತ್ತ ಸೆಳೆದ, ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಗಲಭೆಗಳಿಗೆ ಕುಮ್ಮಕ್ಕು ನೀಡಿದ ಆರೋಪ ಪಿಎಫ್‌ಐ ಮೇಲಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲೂ ಈ ಸಂಘಟನೆಯ ಕೈವಾಡ ಸಾಬೀತಾಗಿತ್ತು. ಸಿಎಎ-ಎನ್‌ಆರ್‌ಸಿ ವಿರುದ್ಧ ದಿಲ್ಲಿಯಲ್ಲಿ ನಡೆದ ಹೋರಾಟ, ಪ್ರವಾದಿ ಮೊಹಮ್ಮದ್‌ ವಿರುದ್ಧ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ನೀಡಿದ ಹೇಳಿಕೆ ವಿರೋಧಿಸಿದ ಗಲಭೆಗಳು ಹಾಗೂ ರಾಮನವಮಿ ವೇಳೆ ಕಳೆದ ವರ್ಷ ದೇಶದ ವಿವಿಧ ಭಾಗಗಳಲ್ಲಿ ನಡೆದ ಗಲಭೆಗಳ ಹಿಂದೆ ಇಎಫ್‌ಐ ಪಾತ್ರವಿತ್ತು ಎಂಬ ದಟ್ಟಆರೋಪ ಕೇಳಿಬಂದಿತ್ತು. ವಿವಿಧ ಧರ್ಮಗಳ ನಡುವಣ ಶಾಂತಿ- ಸೌಹಾರ್ದಯುತ ವಾತಾವರಣಕ್ಕೆ ಭಂಗ ತರುವಂತಹ ಕಾರ್ಯಚಟುವಟಿಕೆಗಳನ್ನು ನಡೆಸುವಂತೆ ತನ್ನ ಸದಸ್ಯರಿಗೆ ಈ ಸಂಘಟನೆ ಪ್ರೋತ್ಸಾಹ ನೀಡುತ್ತಿತ್ತು. ದೇಶದ ಜಾತ್ಯತೀತ ವಾತಾವರಣಕ್ಕೆ ಕುಂದುಂಟು ಮಾಡಲು ಯತ್ನಿಸಿದ ಗುರುತರ ಆರೋಪವೂ ಈ ಸಂಘಟನೆ ಮೇಲಿದೆ.

2. ಉಗ್ರವಾದಕ್ಕೆ ಕುಮ್ಮಕ್ಕು: ಪಿಎಫ್‌ಐ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ಸ್ಫೋಟಕ ವಸ್ತುಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ನ ಹೇಯ ಅಪರಾಧ ಸೆಕ್ಷನ್‌ಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ಈ ಸಂಘಟನೆಗೆ ಭಯೋತ್ಪಾದನೆ ಮೇಲಿರುವ ತುಡಿತವನ್ನು ಬಿಂಬಿಸುತ್ತದೆ. ಪಿಎಫ್‌ಐಗೆ ಐಸಿಸ್‌ನಂತಹ ಉಗ್ರಗಾಮಿ ಸಂಘಟನೆಗಳ ಜತೆ ನಂಟು ಇದೆ. ಪಿಎಫ್‌ಐನ ಕೇರಳ ಮೂಲದ ಸದಸ್ಯರು ಐಸಿಸ್‌ ಸೇರಿ ಸಿರಿಯಾ, ಇರಾಕ್‌, ಅಷ್ಘಾನಿಸ್ತಾನದಲ್ಲಿ ಉಗ್ರಗಾಮಿಗಳಾಗಿದ್ದರು. ಈ ಪೈಕಿ ಕೆಲವರು ಹತ್ಯೆ ಕೂಡ ಆಗಿದ್ದರು. ಉಗ್ರ ನಂಟು ಹೊಂದಿರುವ ಪಿಎಫ್‌ಐ ಕಾರ್ಯಕರ್ತರ ಮೇಲೆ ಎನ್‌ಐಎ ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿ ಹಲವಾರು ಮಂದಿಯನ್ನು ಬಂಧಿಸಿದ್ದರು. 2013ರ ಏಪ್ರಿಲ್‌ನಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಅರಣ್ಯದಲ್ಲಿ ಪಿಎಫ್‌ಐನ ಶಸ್ತ್ರಾಸ್ತ್ರ ತರಬೇತಿ ಕೇಂದ್ರ ಪತ್ತೆಯಾಗಿತ್ತು. 

ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳನ್ನು ಅಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಆ ಪ್ರಕರಣದಲ್ಲಿ 41 ಮಂದಿ ಅಪರಾಧಿ ಎಂದು ಸಾಬೀತಾಗಿತ್ತು. 2021ರ ಜೂನ್‌ನಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಅರಣ್ಯದಲ್ಲಿ ಸ್ಫೋಟಕ, ಜಿಹಾದಿ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಅರಣ್ಯವನ್ನು ಪಿಎಫ್‌ಐ ಮಿಲಿಟರಿ ತರಬೇತಿ ಕೇಂದ್ರವನ್ನಾಗಿ ಮಾಡಿಕೊಂಡಿತ್ತು. ಸುಧಾರಿತ ಸ್ಫೋಟಕ (ಐಇಡಿ)ವನ್ನು ಹೇಗೆ ಮಾಡಬೇಕು ಎಂಬ ದಾಖಲೆಯೊಂದನ್ನು ಉತ್ತರಪ್ರದೇಶ ಖಾದ್ರಾದಲ್ಲಿನ ಪಿಎಫ್‌ಐ ಕಾರ್ಯಕರ್ತನಿಂದ ವಶಪಡಿಸಿಕೊಳ್ಳಲಾಗಿತ್ತು. ಇಂತಹುದೇ ಒಂದು ದಾಖಲೆ ಅದೇ ರಾಜ್ಯದ ಬಾರಾಬಂಕಿಯ ಮತ್ತೊಬ್ಬ ಕಾರ್ಯಕರ್ತನ ಬಳಿ ಸಿಕ್ಕಿತ್ತು. ಇತ್ತೀಚೆಗೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ಕರಾಟೆ ತರಬೇತಿ ಶಿಬಿರದ ನೆಪದಲ್ಲಿ ಉಗ್ರವಾದ ತರಬೇತಿ ನೀಡುವ ಸ್ಫೋಟಕ ಅಂಶ ಬಯಲಿಗೆ ಬಂದಿತ್ತು.

3. ಹಿಂದು ಕಾರ್ಯಕರ್ತರ ಹತ್ಯೆ: ಪಿಎಫ್‌ಐ ಸಂಘಟನೆಯ ಸದಸ್ಯರ ವಿರುದ್ಧ ಹಲವು ಹತ್ಯೆ ಆರೋಪಗಳು ಇವೆ. ಹಿಂದು ಸಂಘಟನೆಗಳ ಕಾರ್ಯಕರ್ತರನ್ನು ಕೊಂದ ಪ್ರಕರಣಗಳಲ್ಲಿ ಪಿಎಫ್‌ಐ ಕಾರ್ಯಕರ್ತರು ಜೈಲು ಸೇರಿದ್ದಾರೆ. 2016ರಲ್ಲಿ ಬೆಂಗಳೂರಿನ ಆರ್‌.ರುದ್ರೇಶ್‌, ಉಡುಪಿಯ ಪ್ರವೀಣ್‌ ಪೂಜಾರಿ, 2017ರಲ್ಲಿ ದಕ್ಷಿಣ ಕನ್ನಡದ ಶರತ್‌ ಮಡಿವಾಳ, 2022ರಲ್ಲಿ ದಕ್ಷಿಣ ಕನ್ನಡದ ಪ್ರವೀಣ್‌ ನೆಟ್ಟಾರು ಹತ್ಯೆ ಸೇರಿ ಕೇರಳ, ತಮಿಳುನಾಡಿನಲ್ಲಿ ನಡೆದ ಹಲವು ಹತ್ಯೆ ಪ್ರಕರಣಗಳಲ್ಲಿ ಪಿಎಫ್‌ಐ ಕಾರ್ಯಕರ್ತರ ಬಂಧನವಾಗಿದೆ. 2010ರಲ್ಲಿ ಕೇರಳದಲ್ಲಿ ಟಿ.ಜೆ.ಜೋಸೆಫ್‌ ಎಂಬ ಪ್ರಾಧ್ಯಾಪಕರೊಬ್ಬರ ಕೈಯನ್ನೇ ಪಿಎಫ್‌ಐ ಕಾರ್ಯಕರ್ತರು ಕಡಿದು ಅಮಾನುಷವಾಗಿ ವರ್ತಿಸಿಸಿದ್ದರು. ಕರ್ನಾಟಕ ಬಿಜೆಪಿ ಕಾರ್ಯಕರ್ತರ ಹತ್ಯೆ ಹಿಂದೆ ಪಿಎಫ್‌ಐ ಕೈವಾಡ ಇದೆ ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

4. ಅಕ್ರಮ ಹಣಕಾಸು ವ್ಯವಹಾರ: ಪಿಎಫ್‌ಐ ತನ್ನ ಸಂಘಟನೆಯನ್ನು ನಡೆಸಲು ದೇಶ- ವಿದೇಶಗಳಿಂದ ಅಕ್ರಮವಾಗಿ ಹಣ ಗಳಿಸಿತ್ತು. ಹಿತೈಷಿಗಳ ಬ್ಯಾಂಕ್‌ ಖಾತೆಯನ್ನು ಬಳಸಿ ದೇಣಿಗೆ ಸ್ವೀಕರಿಸಿತ್ತು. ಈ ಸಂಘಟನೆ 100 ಬ್ಯಾಂಕ್‌ ಖಾತೆಗಳನ್ನು ಹೊಂದಿತ್ತಾದರೂ ಒಂದಕ್ಕೊಂದು ತಾಳಮೇಳವೇ ಇರಲಿಲ್ಲ. ಎನ್‌ಆರ್‌ಐಗಳ ಖಾತೆಗೆ ದುಡ್ಡು ಹಾಕಿಸಿಕೊಂಡು ಆ ಹಣವನ್ನು ತಮ್ಮ ಖಾತೆಗಳಿಗೆ ಪಿಎಫ್‌ಐ ಹಾಕಿಸಿಕೊಳ್ಳುತ್ತಿತ್ತು. ಈ ಮೂಲಕ ವಿದೇಶದಿಂದ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿ ಸಕ್ರಮಗೊಳಿಸುತ್ತಿತ್ತು.

ಪ್ರತಿಭಟನೆಗೆ ಕರೆ ನೀಡಿ ತಲೆಮರೆಸಿಕೊಂಡಿದ್ದ ಪಿಎಫ್ಐ ಅಬ್ದುಲ್ ಸತ್ತಾರ್ ಬಂಧನ!

ತೆರೆಯ ಹಿಂದೆ ಅಮಿತ್‌ ಶಾ ಪಾತ್ರ: ಪಿಎಫ್‌ಐ ನಿಷೇಧದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪಾತ್ರ ದೊಡ್ಡದಿದೆ. ಪಿಎಫ್‌ಐ ಮೇಲೆ ಸೆ.22ರಂದು ದಾಳಿ ಆರಂಭವಾಗುತ್ತಿದ್ದಂತೆ ಅಮಿತ್‌ ಶಾ ಅವರು ಸಭೆಗಳನ್ನು ನಡೆಸಿ, ಮಾರ್ಗದರ್ಶನ ನೀಡಿದ್ದರು. ಜತೆಗೆ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಂಡಿದ್ದರು. ಕ್ಷಣಕ್ಷಣದ ಮಾಹಿತಿಗಳನ್ನು ಪಡೆದಿದ್ದರು. ತರಾತುರಿಯಲ್ಲಿ ಈ ಸಂಘಟನೆಯನ್ನು ನಿಷೇಧಿಸಿ, ಕಾನೂನಿನ ಮುಂದೆ ಸೋಲು ಅನುಭವಿಸುವುದನ್ನು ತಪ್ಪಿಸಲು ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲು ಅಮಿತ್‌ ಶಾ ಅಧಿಕಾರಿಗಳಿಗೆ ಸೂಚಿಸಿದ್ದರು. ನಿಷೇಧ ಹೇರುವ ಮುನ್ನ ಬಲಿಷ್ಠ ಸಾಕ್ಷ್ಯ, ದಾಖಲೆ ಕಲೆ ಹಾಕಲು ಸೂಚಿಸಿದ್ದರು.

ಅಜಿತ್‌ ದೋವಲ್‌ ಸೀಕ್ರೆಟ್‌ ಆಪರೇಷನ್‌: ಪಿಎಫ್‌ಐ ವಿರುದ್ಧದ ಕಾರ್ಯಾಚರಣೆಗೆ ಮೂರ್ನಾಲ್ಕು ತಿಂಗಳ ಹಿಂದೆಯೇ ಯೋಜನೆ ರೂಪಿತವಾದರೂ, ಅದನ್ನು ಜಾರಿಗೆ ತರುವ ಪ್ರಕ್ರಿಯೆಯನ್ನು ಪ್ರಮುಖವಾಗಿ ನಿರ್ವಹಿಸಿದವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌. ದೋವಲ್‌ ಅವರು ಕಾರಾರ‍ಯಚರಣೆ ಆರಂಭಿಸಿದ್ದು ಸೆಪ್ಟೆಂಬರ್‌ ಮೊದಲ ವಾರ. ಪ್ರಧಾನಿ ನರೇಂದ್ರ ಮೋದಿ ಅವರು ಐಎನ್‌ಎಸ್‌ ವಿಕ್ರಾಂತ್‌ ಯುದ್ಧವಿಮಾನಗಳ ನೌಕೆಯನ್ನು ಲೋಕಾರ್ಪಣೆ ಮಾಡಲು ಸೆ.2ರಂದು ಕೇರಳದ ಕೊಚ್ಚಿಗೆ ಆಗಮಿಸಿದ್ದರು. ಆ ವೇಳೆ, ಅಜಿತ್‌ ದೋವಲ್‌ ಅವರು ಪಿಎಫ್‌ಐ ಸಾಕಷ್ಟುಪ್ರಭಾವ ಹೊಂದಿರುವ ಕೇರಳದಲ್ಲಿ, ಕೇರಳ ಪೊಲೀಸರ ಜತೆ ಸಭೆಗಳನ್ನು ನಡೆಸಿ, ಪಿಎಫ್‌ಐ ಬಗ್ಗೆ ಸಮಾಲೋಚನೆ ನಡೆಸಿದ್ದರು. ಬಳಿಕ ಮಹಾರಾಷ್ಟ್ರದಲ್ಲೂ ಹಲವು ಕೃತ್ಯಕ್ಕೆ ಪಿಎಫ್‌ಐ ಸಂಚು ರೂಪಿಸಿತ್ತು ಎನ್ನಲಾಗಿದ್ದು, ಮುಂಬೈನ ರಾಜಭವನದಲ್ಲಿ ಉಳಿದುಕೊಂಡು ಅಲ್ಲೂ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದರು. ಅದು ಈಗ ಫಲ ನೀಡಿದೆ.

Follow Us:
Download App:
  • android
  • ios