PFI Twitter Accounts Taken Down: ಪಿಎಫ್‌ಐ, ಸಿಎಫ್ಐ ನಾಯಕರ ಖಾತೆಗೆ ಟ್ವಿಟರ್ ಬೇಲಿ!
ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಪಿಎಫ್‌ಐ ಹಾಗೂ ಅದರ 8 ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿದ ಬಳಿಕ, ಸೋಷಿಯಲ್ ಮೀಡಿಯಾದಲ್ಲೂ ಈ ಸಂಘಟನೆಗೆ ಬಿಸಿ ಮುಟ್ಟಿಸುವ ಕೆಲಸ ಆರಂಭವಾಗಿದೆ. ಪಿಎಫ್‌ಐ ಹಾಗೂ ಅದರ ಸಂಸ್ಥೆಗಳಿಗೆ ಸೇರಿದ ಎಲ್ಲಾ ಖಾತೆಗಳನ್ನು ಬಂದ್ ಮಾಡುವಂತೆ ಕೇಂದ್ರ ಗೃಹ ಇಲಾಖೆ ಮನವಿ ಮಾಡಿದ ಬಳಿಕ, ಟ್ವಿಟರ್ ಕೂಡ ಕ್ರಮ ಕೈಗೊಂಡಿದೆ.
ನವದೆಹಲಿ/ಬೆಂಗಳೂರು: ಪಿಎಫ್ ಐ ನಿಷೇಧದ ಬೆನ್ನಲ್ಲೇ ನಾಯಕರ ಸೋಶಿಯಲ್ ಮೀಡಿಯಾ ಖಾತೆಗಳಿಗೂ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದ್ದು, ರಾಜ್ಯದ ಹಲವು ಪ್ರಮುಖ ನಾಯಕರ ವೈಯಕ್ತಿಕ ಟ್ವಿಟ್ಟರ್ ಖಾತೆಗಳು ಸ್ಥಬ್ದವಾಗಿದೆ. ಅದಲ್ಲದೆ, ದೇಶಾದ್ಯಂತ ಕೂಡ ಪಿಎಫ್‌ಐ ನಾಯಕರ ಟ್ವಿಟರ್ ಖಾತೆಗಳನ್ನು ವಿತ್‌ಹೆಲ್ಡ್ ಮಾಡಲಾಗಿದೆ. ಪಿಎಫ್ ಐ ಮತ್ತು ಸಿಎಫ ಐನ ರಾಜ್ಯ ಮತ್ತು ಜಿಲ್ಲಾ ನಾಯಕರ ಟ್ವಿಟ್ಟರ್ ಬ್ಲಾಕ್ ಮಾಡಲಾಗಿದ್ದು, ಮಂಗಳೂರಿನ ಹಲವು ಪಿಎಫ್ ಐ ನಾಯಕರ ಟ್ವಿಟ್ಟರ್ ಖಾತೆಗಳು ಬಂದ್ ಆಗಿದೆ. ಪಿಎಫ್ ಐ ಕರ್ನಾಟಕ ಟ್ವಿಟ್ಟರ್ ಖಾತೆಯೂ ಸ್ತಬ್ಧವಾಗಿದೆ. ಅಲ್ಲದೇ ಪಿಎಫ್ ಐ ರಾಜ್ಯಾಧ್ಯಕ್ಷ ನಾಸೀರ್ ಪಾಶಾ, ಕಾರ್ಯದರ್ಶಿ ಅಪ್ಸರ್ ಪಾಶಾ, ಎ.ಕೆ.ಅಶ್ರಫ್ ಟ್ವಿಟ್ಟರ್ ಖಾತೆಗಳನ್ನ ಬ್ಲಾಕ್ ಮಾಡಲಾಗಿದೆ. ಸಿಎಫ್ ಐ ರಾಜ್ಯಾಧ್ಯಕ್ಷ ಅಥಾವುಲ್ಲಾ, ಮುಖಂಡರಾದ ಸರ್ಫ್ರಾಜ್ ಗಂಗಾವತಿ, ಅನೀಸ್ ಕುಂಬ್ರ ಸೇರಿ ಹಲವರ ಖಾತೆ ಬಂದ್ ಆಗಿದೆ. ಇದರ ಮಧ್ಯೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಟ್ವಿಟ್ಟರ್ ಖಾತೆಯನ್ನೂ ತಡೆ ಹಿಡಿಯಲಾಗಿದ್ದು, ಕೆಲ ಎಸ್ ಡಿಪಿಐ ನಾಯಕರ ವೈಯಕ್ತಿಕ ಟ್ವಿಟ್ಟರ್ ಖಾತೆ ಬ್ಲಾಕ್ ಮಾಡಲಾಗಿದೆ. ಕರಾವಳಿ ಮತ್ತು ರಾಜ್ಯದ ಹಲವು ಪಿಎಫ್ಐ, ಸಿಎಫ್ಐ ನಾಯಕರ ವೈಯಕ್ತಿಕ ಟ್ವಿಟ್ಟರ್ ಖಾತೆಗಳು ಬ್ಲಾಕ್ ಆಗಿದೆ. ಭಾರತದಲ್ಲಿ ಇವರುಗಳ ಟ್ವಿಟ್ಟರ್ ಖಾತೆಗಳನ್ನ ತಡೆಹಿಡಿದ ಟ್ವಿಟ್ಟರ್ ಸಂಸ್ಥೆ, ಕೇಂದ್ರ ಗೃಹ ಇಲಾಖೆ ಸೂಚನೆ ಬೆನ್ನಲ್ಲೇ ಮತ್ತಷ್ಟು ಜನರ ಖಾತೆಗಳನ್ನು ಬ್ಲಾಕ್ ಮಾಡುವ ಸಾಧ್ಯತೆ ಇದೆ.
ಪಿಎಫ್ ಐ ಬ್ಯಾನ್ ಗೆ ಕಾರಣವಾಯ್ತಾ ಪ್ರವೀಣ್ ಹತ್ಯೆ ಕೇಸ್?: ಎನ್ ಐಎ ತಂಡ ಬಿಹಾರ್ನಲ್ಲಿ ಸಿಕ್ಕ ಪಿಎಫ್ ಐನ ಮಿಷನ್ 2047 ಡೈರಿಯ ಬೆನ್ನತ್ತಿದ್ದಾಗಲೇ ಪಿಎಫ್ಐ ಸಂಘಟನೆಯಿಂದ ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದ ಬಗ್ಗೆ ಸುಳಿವು ಸಿಕ್ಕಿತ್ತು. ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಆಂಡ್ ಸಿರಿಯಾ(ISIS) ಸಂಘಟನೆಯ ಜೊತೆ ಪಿಎಫ್ ಐ ನಂಟಿನ ಬಗ್ಗೆಯೂ ಮಾಹಿತಿ ಇತ್ತು. ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಪಿಎಫ್ ಐ ಬಗ್ಗು ಬಡಿಯುವ ಕಾರ್ಯ ಚುರುಕಾಗಿದ್ದು, ಬೆಳ್ಳಾರೆಯ ಪ್ರವೀಣ್ ಹತ್ಯೆಯನ್ನ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪಿಎಫ್ ಐ ನಿಷೇಧಕ್ಕೆ ರಾಜ್ಯ ಬಿಜೆಪಿ ನಾಯಕರಾದ ನಳಿನ್ ಕುಮಾರ್, ಶೋಭಾ ಕರಂದ್ಲಾಜೆ ಸೇರಿ ಹಲವರಿಂದ ಒತ್ತಡ ಇತ್ತು. ಅಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಮನವಿ ಸಲ್ಲಿಸಿದ್ದರು ರಾಜ್ಯ ನಾಯಕರು. ಹೀಗಾಗಿ ಪ್ರವೀಣ್ ಹತ್ಯೆಯೂ ಪಿಎಫ್ ಐ ನಿಷೇಧಕ್ಕೆ ಕಾರಣವಾಗಿತ್ತು ಎನ್ನಲಾಗ್ತಿದೆ.
ದೇಶಾದ್ಯಂತ ಕೂಡ ಬಂದ್: ಪಿಎಫ್‌ಐ ಸಂಸ್ಥೆಯ ಖಾತೆ, @PFIofficial, ಸುಮಾರು 81,000 ಫಾಲೋವರ್‌ಗಳನ್ನು ಹೊಂದಿತ್ತು. ಟ್ವಿಟರ್ ತನ್ನ ಅಧ್ಯಕ್ಷ ಓಎಂಎ ಸಲಾಮ್ (@oma_salam) ಸದ್ಯದಲ್ಲೇ 50ಕೆ ಫಾಲೋವರ್ಸ್ ದಾಟುವ ಸನಿಹದಲ್ಲಿದ್ದರು. ಇನ್ನು ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ (@AnisPFI) ಅವರ ಹ್ಯಾಂಡಲ್‌ಗಳನ್ನು ಟ್ವಿಟರ್ ತಡೆಹಿಡಿದಿದೆ. ನಿಷೇಧಕ್ಕೂ ಮುನ್ನ ಕಳೆದ ಎರಡು ವಾರಗಳಲ್ಲಿ ದೇಶಾದ್ಯಂತ ನಡೆಸಿದ ದಾಳಿಗಳಲ್ಲಿ ಬಂಧಿತರಾದ 200ಕ್ಕೂ ಹೆಚ್ಚು ಪಿಎಫ್‌ಐ ನಾಯಕರಲ್ಲಿ ಇವರಿಬ್ಬರೂ ಸೇರಿದ್ದಾರೆ.
ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
"ಭಯೋತ್ಪಾದನೆ ಸಂಬಂಧ" ಆರೋಪದ ಮೇಲೆ ಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳ ಮೇಲೆ ಐದು ವರ್ಷಗಳ ನಿಷೇಧವನ್ನು ಕೇಂದ್ರ ಗೃಹ ಸಚಿವಾಲಯವು ಜಾರಿ ಮಾಡಿದ ಒಂದು ದಿನದ ನಂತರ ಪಿಎಫ್‌ಐ ಟ್ವಿಟರ್ ವಿತ್‌ಹೆಲ್ಡ್ ಪಾಲನೆಯಾಗಿದೆ. ದೇಶಹಿತದ ಪ್ರಮುಖ ಪ್ರಕರಣಗಳನ್ನು ತನಿಖೆ ಮಾಡುವ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಅಕ್ರಮ ಹಣವನ್ನು ಪತ್ತೆಹಚ್ಚುವ ಜಾರಿ ನಿರ್ದೇಶನಾಲಯ, ಪಿಎಫ್‌ಐ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದೆ ಮತ್ತು ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸಿದೆ ಎಂದು ಆರೋಪಿಸಿದೆ.
ಎನ್‌ಐಎ ತನಿಖೆಯ ಬಿಗ್ ನ್ಯೂಸ್, ಪಿಎಫ್‌ಐ ಟಾರ್ಗೆಟ್ ಆಗಿತ್ತು ಪ್ರಧಾನಿ ಮೋದಿಯ ಪಾಟ್ನಾ ಸಮಾವೇಶ..!
ನಿಷೇಧದ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಉದ್ದೇಶಿಸಿರುವ ಪಿಎಫ್‌ಐ ಈ ಆರೋಪಗಳನ್ನು ನಿರಾಕರಿಸಿತು ಆದರೆ ಸರ್ಕಾರದ ಕ್ರಮದ ನಂತರ ತನ್ನ ಘಟಕಗಳನ್ನು ವಿಸರ್ಜನೆ ಮಾಡಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ನಿಷೇಧಕ್ಕೆ ಒಳಪಡುವ ಸಂಸ್ಥೆಗಳಲ್ಲಿ ರಿಹ್ಯಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್, ಕೇರಳ ಸೇರಿವೆ.