ರಾಹುಲ್ ಶೆಹಜಾದಾ ಎನ್ನುವ ಮೋದಿ ಶೆಹೆನ್‌ಶಾ: ಪ್ರಿಯಾಂಕಾ ಗಾಂಧಿ ವಾಗ್ದಾಳಿ
‘ಅವರು (ಮೋದಿ) ನನ್ನ ಸಹೋದರನನ್ನು ‘ಶೆಹಜಾದಾ’ ಎಂದು ಕರೆಯುತ್ತಾರೆ. ಆದರೆ ಈ ‘ಶೆಹಜಾದಾ’ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4,000 ಕಿಮೀ ದೂರ ಪಾದಯಾತ್ರೆ ಮಾಡಿ ಜನರ ಕಷ್ಟ ಸುಖ ಆಲಿಸಿದರು’ ಎಂದ ಪ್ರಿಯಾಂಕಾ
ಲಖಾನಿ(ಗುಜರಾತ್)(ಮೇ.05): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಶನಿವಾರ ಕಟುವಾದ ವಾಗ್ದಾಳಿ ನಡೆಸಿದ್ದು, ತಮ್ಮ ಸೋದರ ರಾಹುಲ್ ಗಾಂಧಿ ಅವರನ್ನು ‘ಶೆಹಜಾದಾ’ (ಯುವರಾಜ) ಎನ್ನುವ ಮೋದಿ ಅವರನ್ನು ‘ಶಹನ್‌ಶಾ’ (ಚಕ್ರವರ್ತಿ) ಎಂದು ಟೀಕಿಸಿದ್ದಾರೆ. ‘ಶಹನ್‌ಶಾ ಕೋಟೆಗಳಲ್ಲಿ ವಾಸಿಸುತ್ತಾರೆ ಮತ್ತು ಸಾಮಾನ್ಯ ಜನರ ಕಷ್ಟವನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಶನಿವಾರ ಗುಜರಾತ್‌ನಲ್ಲಿ ಕಾಂಗ್ರೆಸ್ ಪ್ರಚಾರ ಭಾಷಣ ಮಾಡಿದ ಪ್ರಿಯಾಂಕಾ, ‘ಅವರು (ಮೋದಿ) ನನ್ನ ಸಹೋದರನನ್ನು ‘ಶೆಹಜಾದಾ’ ಎಂದು ಕರೆಯುತ್ತಾರೆ. ಆದರೆ ಈ ‘ಶೆಹಜಾದಾ’ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4,000 ಕಿಮೀ ದೂರ ಪಾದಯಾತ್ರೆ ಮಾಡಿ ಜನರ ಕಷ್ಟ ಸುಖ ಆಲಿಸಿದರು’ ಎಂದರು.
ಪ್ರಧಾನಿ ಮೋದಿ ಅತ್ಯಾಚಾರಿಗಳ ಪರ ನಿಲ್ಲುತ್ತಾರೆ: ಪ್ರಿಯಾಂಕಾ ಗಾಂಧಿ ಆರೋಪ
‘ಆದರೆ ಮತ್ತೊಂದೆಡೆ, ನಿಮ್ಮ ಶಹನ್‌ಶಾ (ಚಕ್ರವರ್ತಿ) ನರೇಂದ್ರ ಮೋದಿ ಅವರು ಕೋಟೆಗಳಲ್ಲಿ ವಾಸಿಸುತ್ತಿದ್ದಾರೆ. ನೀವು ಅವರನ್ನು ಟೀವಿಯಲ್ಲಿ ಮಾತ್ರ ನೋಡುತ್ತೀರಿ. ಅವರ ಮುಖವು ಸ್ವಚ್ಛವಾಗಿದೆ, ಅವರ ಬಿಳಿ ಕುರ್ತಾ ಯಾವಾಗಲೂ ಒಂದು ಕಳಂಕವಿಲ್ಲದೆ ನಿರ್ಮಲವಾಗಿರುತ್ತದೆ, ಅವರ ಕೂದಲು ಪರಿಪೂರ್ಣವಾಗಿದೆ. ಅವರು ನಿಮ್ಮ ಶ್ರಮವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ? ಪೆಟ್ರೋಲ್ ಮತ್ತು ಡೀಸೆಲ್ ಎಷ್ಟು ದುಬಾರಿಯಾಗಿದೆ ಅಥವಾ ಕೃಷಿ ಕೆಲಸ ಮಾಡುವುದು ಎಷ್ಟು ದುಬಾರಿಯಾಗಿದೆ ಎಂದು ಅವರು ಹೇಗೆ ಅರ್ಥಮಾಡಿಕೊಳ್ಳುತ್ತಾರೆ?’ ಎಂದು ಹರಿತ ವಾಗ್ದಾಳಿ ನಡೆಸಿದರು.