ಪಹಲ್ಗಾಮ್ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ದೆಹಲಿಯ ಪಾಕಿಸ್ತಾನ ಹೈ ಕಮಿಷನ್ ಕಚೇರಿಯಲ್ಲಿ ಕೇಕ್ ಕತ್ತರಿಸುತ್ತಿರುವುದು ಕಂಡುಬಂದಿದೆ, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನವದೆಹಲಿ: ಏಪ್ರಿಲ್ 22ರಂದು ಪಹಲ್ಗಾಮ್ ಉಗ್ರರ ದಾಳಿಯಲ್ಲಿ 28 ಪ್ರವಾಸಿಗರು ಮೃತರಾಗಿದ್ದು, ದೇಶದ್ಯಾಂತ ಪ್ರತೀಕಾರದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ದಾಳಿಯ ಬೆನ್ನಲ್ಲೇ ವೀಸಾದ ಮೇಲೆ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ದೇಶ ತೊರೆಯುವಂತೆ 48 ಗಂಟೆಗಳ ಗಡುವು ನೀಡಲಾಗಿದೆ. ಉಗ್ರ ದಾಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಭಾರತವು ಪಾಕಿಸ್ತಾನದ ವಿರುದ್ಧ ಮೊದಲ ಪ್ರತೀಕಾರ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ 6 ‘ರಾಜತಾಂತ್ರಿಕ ನಿರ್ಬಂಧ’ಗಳನ್ನು ಹೇರಿದೆ. ನವದೆಹಲಿಯಲ್ಲಿರುವ ಪಾಕಿಸ್ತಾನ ಹೈ ಕಮಿಷನ್ ಕಚೇರಿಗೆ ಕೇಕ್ ತರಿಸಲಾಗಿದೆ. ಈ ಸಂದರ್ಭದಲ್ಲಿ ಕೇಕ್ ತರಿಸಿದ್ದು ಏಕೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಭಾರತದಿಂದ ಹೊರಡುವ ಮುನ್ನ ಪಾಕಿಸ್ತಾನದ ಅಧಿಕಾರಿಗಳು ಕೇಕ್ ಕತ್ತರಿಸಿ ಸಂಭ್ರಮಾಚರಣೆಗೆ ಮುಂದಾದ್ರಾ ಎಂಬ ಅನುಮಾನ ಮೂಡಿದೆ.
ಇಂದು ಪಾಕಿಸ್ತಾನದ ಹೈ ಕಮಿಷನ್ ಕಚೇರಿಯೊಳಗೆ ಓರ್ವ ವ್ಯಕ್ತಿ ಕೇಕ್ ತೆಗೆದುಕೊಂಡು ಹೋಗುತ್ತಿರೋದು ಕಂಡು ಬಂತು. ಈ ವೇಳೆ ಸ್ಥಳದಲ್ಲಿದ್ದ ಮಾಧ್ಯಮದ ಸಿಬ್ಬಂದಿ, ಕೇಕ್ ಯಾವ ಕಾರಣಕ್ಕೆ ಮತ್ತು ಯಾರಿಗಾಗಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಪ್ರಶ್ನೆ ಮಾಡಲಾಯ್ತು. ಆದ್ರೆ ಯಾವುದೇ ಪ್ರಶ್ನೆಗೆ ಉತ್ತರಿಸದೇ ಆ ವ್ಯಕ್ತಿ ತೆರಳಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಪಾಕ್ ರಾಯಭಾರ ಕಚೇರಿ ಮುಂದೆ ಜಮಾಯಿಸಿರುವ ಸಾರ್ವಜನಿಕರು ಪಾಕಿಸ್ತಾನದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.
ಭಾರತದಲ್ಲಿ ಪಾಕ್ ಎಕ್ಸ್ ಖಾತೆ ಬ್ಲಾಕ್
ಉಗ್ರರ ದಾಳಿಯ ಬಳಿಕ ಮುಂಜಾಗ್ರತ ಕ್ರಮವಾಗಿ ದೆಹಲಿಯ ಪಾಕಿಸ್ತಾನ ರಾಯಭಾರಿ ಕಚೇರಿ ಬಳಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆಗೆದಿದ್ದಾರೆ. ಇದೇ ವೇಳೆ ಭಾರತ ಪಾಕಿಸ್ತಾನದ ವಿರುದ್ಧ ಮತ್ತೊಂದು ಕಠಿಣ ನಿಲುವು ತೋರಿದೆ. ಪಾಕಿಸ್ತಾನ ಸರ್ಕಾರದ ಸಾಮಾಜಿಕ ಮಾಧ್ಯಮ ವೇದಿಕೆ 'X' ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಅಷ್ಟಾಸ್ತ್ರಗಳನ್ನು ಪ್ರಯೋಗಿಸಿದೆ. ಆರು ರಾಜತಾಂತ್ರಿಕ ಅಸ್ತ್ರಗಳು ಹೀಗಿವೆ.
- ಸಿಂಧೂ ನದಿ ನೀರು ಒಪ್ಪಂದಕ್ಕೆ ತಡೆ.
- ಪಂಜಾಬ್‌ನ ಅಟ್ಟಾರಿ ಗಡಿ ಬಂದ್.
- ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್ ವೀಸಾ ರದ್ದು.
- ಪಾಕಿಸ್ತಾನಿಗಳ ಕರೆಂಟ್ ವೀಸಾ ತಕ್ಷಣದಿಂದ ರದ್ದು.
- ಪಾಕ್‌ನಲ್ಲಿನ ಭಾರತದ ಹೈಕಮಿಷನ್ ಸಿಬ್ಬಂದಿ ಸಂಖ್ಯೆ 55ರಿಂದ 30ಕ್ಕೆ ಇಳಿಕೆ.
- ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಪಾಕ್ ರಕ್ಷಣಾ ಇಲಾಖೆ ಸಿಬ್ಬಂದಿಗೆ ಗೇಟ್‌ಪಾಸ್.
ಇದನ್ನೂ ಓದಿ: ಸಿನಿಮಾ ಬಹಿಷ್ಕಾರ ಭೀತಿ ಬೆನ್ನಲ್ಲೇ ಪಹಲ್ಗಾಮ್ ದಾಳಿ ಖಂಡಿಸಿದ ಪಾಕ್ ನಟ ಫಾವದ್ ಖಾನ್
6 ನಿರ್ಬಂಧಗಳೇನು?
ಸಿಂಧೂ ನದಿ ನೀರು ಒಪ್ಪಂದಕ್ಕೆ ತಡೆ ನೀಡಲಾಗುತ್ತದೆ. ಪಂಜಾಬ್‌ನ ಅಟ್ಟಾರಿ ಗಡಿ ಬಂದ್ ಮಾಡಲಾಗುತ್ತದೆ. ಈಗಾಗಲೇ ಗಡಿಯನ್ನು ದಾಟಿ ಭಾರತಕ್ಕೆ ಬಂದವರಿಗೆ ದೇಶಕ್ಕೆ ಮರಳಲು ಮೇ1ರವರೆಗೆ ಅವಕಾಶ ನೀಡಲಾಗುತ್ತದೆ. ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್ ವೀಸಾ ರದ್ದು ಮಾಡಲಾಗುತ್ತದೆ. ಜತೆಗೆ ಪಾಕಿಸ್ತಾನಿಗಳಿಗೆ ವಿತರಿಸಲಾಗಿರುವ ಕರೆಂಟ್ ವೀಸಾವನ್ನೂ ತಕ್ಷಣದಿಂದ ರದ್ದು ಮಾಡಲಾಗುತ್ತದೆ.
ಪಾಕ್‌ನಲ್ಲಿನ ಭಾರತದ ಹೈಕಮಿಷನ್ ಕಚೇರಿಯಲ್ಲಿ ಸಿಬ್ಬಂದಿ ಸಂಖ್ಯೆಯನ್ನು 55ರಿಂದ 30ಕ್ಕೆ ಇಳಿಕೆ ಮಾಡಲಾಗುತ್ತದೆ. ಇವರಲ್ಲಿ ರಕ್ಷಣಾ ಇಲಾಖೆಯ ಸಿಬ್ಬಂದಿ ಇದ್ದಾರೆ. ಅಲ್ಲದೆ, ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನ್‌ನಲ್ಲಿನ ಪಾಕ್ ರಕ್ಷಣಾ ಇಲಾಖೆ ಸಿಬ್ಬಂದಿಯನ್ನು ಅವರ ದೇಶಕ್ಕೆ ವಾಪಸ್ ಹೋಗಲು ಸೂಚಿಸಲಾಗುತ್ತದೆ. ಅವರು ಭಾರತದಿಂದ ನಿರ್ಗಮಿಸಲು 1 ವಾರ ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: Pahalgam Terror Attack: ಮಲಗಿ ದಾಳಿಯಿಂದ ಪಾರಾದ ಹರಪನಹಳ್ಳಿ ಕುಟುಂಬ
