ಅಪಘಾತದಲ್ಲಿ ಎಲೆಕ್ಷನ್ ಕಮಿಷನರ್ ತಂದೆಗೆ ಗಂಭೀರ ಗಾಯ, ಒಡಿಶಾ ಪ್ರವಾಸದಲ್ಲಿದ್ದ ಗ್ಯಾನೇಶ್ ಕುಮಾರ್ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ವಾಪಾಸ್ ಆಗಿದ್ದಾರೆ. ಬಿಎಲ್ಒ ಸಭೆಯನ್ನು ರದ್ದು ಮಾಡಿದ್ದಾರೆ

ನವದೆಹಲಿ (ಡಿ.29) ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಗ್ಯಾನೇಶ್ ಕುಮಾರ್ ತಂದೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ತಂದೆ ಆಸ್ಪತ್ರೆ ದಾಖಲಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಸಿಇಸಿ ಗ್ಯಾನೇಶ್ ಕುಮಾರ್ ತಮ್ಮ ಒಡಿಶಾ ಪ್ರವಾಸ ಅಂತ್ಯಗೊಳಿಸಿ ದೆಹಲಿಗೆ ಮರಳಿದ್ದಾರೆ. ಒಡಿಶಾದಲ್ಲಿ 700 ಬಿಎಲ್ಒ ಜೊತೆ ಇಂದು ಸಭೆ ನಿಗದಿಪಡಿಸಿದ್ದರು. ಈ ಸಭೆಯನ್ನು ರದ್ದುಗೊಳಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಗ್ಯಾನೇಶ್ ಕುಮಾರ್ 3 ದಿನಗಳ ಒಡಿಶಾ ಪ್ರವಾಸ ಕೈಗೊಂಡಿದ್ದರು.

ದೆಹಲಿಯಲ್ಲಿ ನಡೆದ ಅಪಘಾತದಲ್ಲಿ ತಂದೆಗೆ ಗಾಯ

ದೆಹಲಿಯಲ್ಲಿ ನಡೆದ ಅಪಘಾತದಲ್ಲಿ ಗ್ಯಾನೇಶ್ ಕುಮಾರ್ ತಂದೆ ಗಾಯಗೊಂಡಿದ್ದಾರೆ. ಗ್ಯಾನೇಶ್ ಕುಮಾರ್ ತಂದೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾನೇಶ್ ಕುಮಾರ್ ತಂದೆ ಸದ್ಯದ ಸ್ಥಿತಿ, ಗಾಯದ ಪ್ರಮಾಣದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಗಂಭೀರವಾಗಿ ಗಾಯಗೊಂಡಿರುವ ಕಾರಣ ಗ್ಯಾನೇಶ್ ಕುಮಾರ್ ಒಡಿಶಾ ಅಧಿಕೃತ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ಮರಳಿದ್ದಾರೆ.

ಇಂದು (ಡಿ.29) ಮಧ್ಯಾಹ್ನ 3 ಗಂಟೆಗೆ ಭುವೇಶ್ವರದಲ್ಲಿ 700 ಬಿಎಲ್ಒ (ಬೂತ್ ಲೆವಲ್ ಆಫೀಸರ್) ಜೊತೆ ಮಹತ್ವದ ಸಭೆ ಆಯೋಜಿಸಿದ್ದರು. ತುರ್ತು ಕಾರಣದಿಂದ ಪ್ರವಾಸ, ಸಭೆ ಮೊಟಕುಗೊಳಿಸಿ ಮರಳುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ತುರ್ತು ಕಾಣದಿಂದ ಮರಳುತ್ತಿದ್ದೇನೆ. ಒಡಿಶಾ ಜನರ ಪ್ರೀತಿ, ಇಲ್ಲಿನ ಆತಿಥ್ಯ, ವೈಭವದ ಸಂಸ್ಕೃತಿಗೆ ಮನಸೋತಿದ್ದೇನೆ. ಚುನಾವಣೆಯಲ್ಲಿ ಬಿಎಲ್ಒ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಅವರ ಜೊತೆ ಸಭೆ ನಡೆಸಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಒಡಿಶಾಗೆ ಪ್ರವಾಸ ಮಾಡುತ್ತೇನೆ ಎಂದು ಗ್ಯಾನೇಶ್ ಕುಮಾರ್ ಹೇಳಿದ್ದಾರೆ.

ಮೂರು ದಿನಗಳ ಒಡಿಶಾ ಪ್ರವಾಸ

ಗ್ಯಾನೇಶ್ ಕುಮಾರ್ ಮೂರು ದಿನಗಳ ಒಡಿಶಾ ಪ್ರವಾಸ ಕೈಗೊಂಡಿದ್ದರು. ಶನಿವಾರ ಒಡಿಶಾಗೆ ಆಗಮಿಸಿದ ಗ್ಯಾನೇಶ್ ಕುಮಾರ್ ತಾನು ಬಿಎಲ್ಒ ಸಭೆ, ಮತದಾರ ಪಟ್ಟಿ ಪರಿಷ್ಕರಣೆ ಸಂಬಂಧ ಒಡಿಶಾಗೆ ಆಗಮಿಸಿದ್ದೇನೆ. ಸ್ಥಳೀಯ ಚನಾವಣಾಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದೇನೆ ಎಂದಿದ್ದರು. ಇದೇ ವೇಳೆ ಒಡಿಶಾ ಭೇಟಿಯಲ್ಲಿ ಮತ್ತೊಂದು ಮುಖ್ಯ ಕಾರ್ಯವೂ ಇದೆ. ಪುರಿ ಜಗನ್ನಾಥನ ದರ್ಶನ ಪಡಯಲು ಆಗಮಿಸಿದ್ದೇನೆ ಎಂದಿದ್ದರು. ಈ ಪೈಕಿ ಭಾನುವಾರ (ಡಿ.28) ಪತ್ನಿ ಜೊತೆ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದರು. ಪುರಿ ಜಿಲ್ಲೆಯ ರುಘಾರಾಜಪುರ್‌ಗೆ ಭೇಟಿ ನೀಡಿದ್ದರು. ಪಟ್ಟಚಿತ್ರ ಪೈಂಟಿಂಗ್ಸ್ ತುಸ್ಸಾರ್ ಬಟ್ಟೆಗಳು, ಕರಕುಶಳ ವಸ್ತುಗಳ ತಯಾರಿಕೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಹಲವು ಪ್ರೇಕ್ಷಣಿಯ ಸ್ಥಳಗಳಿದೆ ಗ್ಯಾನೇಶ್ ಕುಮಾರ್ ಹಾಗೂ ಕುಟುಂಬ ಭೇಟಿ ನೀಡಿತ್ತು.

ಮತದಾರ ಪಟ್ಟಿ ತೀವ್ರ ಪರಿಷ್ಕರಣೆ, ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳ ವಿಚಾರದಲ್ಲಿ ಗ್ಯಾನೇಶ್ ಕುಮಾರ್ ವಿಪಕ್ಷಗಳಿಂದ ಭಾರಿ ಟೀಕೆ ಎದುರಿಸುತ್ತಿದ್ದಾರೆ. ಪ್ರಮುಖವಾಗಿ ರಾಹುಲ್ ಗಾಂಧಿ ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ, ಬಿಜೆಪಿ ಎಜೆಂಟ್‌ನಂತೆ ಆಯೋಗ ವರ್ತಿಸುತ್ತಿದೆ ಎಂದು ಪದೇ ಪದೇ ಆರೋಪ ಮಾಡುತ್ತಲೇ ಬಂದಿದ್ದಾರೆ. ಇನ್ನು ಮತದಾರರ ಪಟ್ಟಿಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತದಾನ, ಚುನಾವಣೆ ಅಕ್ರಮ ಎಂದು ಮಾಧ್ಯಮಗಳ ಮೂಲಕ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಆರೋಪಗಳಿಗೆ ತಿರುಗೇಟು ನೀಡಿರುವ ಗ್ಯಾನೇಶ್ ಕುಮಾರ್, ನಿಮ್ಮ ಯಾವುದೇ ಆರೋಪವನ್ನು ತನಿಖೆ ನಡೆಸಲು ಸಿದ್ದ, ಲಿಖಿತ ರೂಪದಲ್ಲಿ ದೂರು ನೀಡಲು ಸೂಚಿಸಿದ್ದಾರೆ. ಆದರೆ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದ ಮುಂದೆ ಯಾವುದೇ ದೂರು ನೀಡಿಲ್ಲ. ಹಲವು ಸುದ್ದಿಗೋಷ್ಠಿ ಮೂಲಕ ಆರೋಪ ಮಾಡಿದ್ದಾರೆ.