ಗಾಜಿಯಾಬಾದ್‌ನಲ್ಲಿ ಚರಂಡಿ ಮುಚ್ಚಳವನ್ನು ಕಳ್ಳರು ಕದ್ದಿದ್ದಾರೆ ಮತ್ತೊಂದೆಡೆ ಹತ್ರಾಸ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹಣ ಕೊಡದೆ ಪರಾರಿಯಾದ ಚಾಲಕ ಪೆಟ್ರೋಲ್ ಪೈಪನ್ನೇ ಕಿತ್ತುಕೊಂಡು ಹೋಗಿರುವ ಘಟನೆಗಳು ನಡೆದಿವೆ. ಈ ಎರಡು ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಲಕ್ನೋ: ಭಾರತದಲ್ಲಿ ಸಾರ್ವಜನಿಕ ಆಸ್ತಿಗೆ ಯಾರು ಅಪ್ಪ ಎನ್ನುವವರೇ ಇಲ್ಲವಾಗಿದೆ. ಇದೇ ಕಾರಣಕ್ಕೆ ಸಾರ್ವಜನಿಕ ಆಸ್ತಿಗಳ ಬಗ್ಗೆ ಯಾರು ಕಾಳಜಿ ವಹಿಸುವುದಿಲ್ಲ. ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣ ರೈಲು ನಿಲ್ದಾಣ ಮುಂತಾದ ಕಡೆ ಅವ್ಯವಸ್ಥೆ ಆಗುವುದಕ್ಕೆ ಜನರ ಮನಸ್ಥಿತಿಯೇ ಕಾರಣ. ಸಾರ್ವಜನಿಕ ಆಸ್ತಿಗೆ ಏನೇ ಆದರೂ ಪ್ರಶ್ನೆ ಮಾಡುವವರೇ ಇಲ್ಲವಾಗಿದೆ. ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಸ್ ನಿಲ್ದಾಣವನ್ನೇ ಕದ್ದೊಯ್ದಂತಹ ಘಟನೆ ನಡೆದಿತ್ತು. ಈ ಘಟನೆ ಇನ್ನು ನೆನಪಿನಲ್ಲಿರುವಾಗಲೇ ಉತ್ತರ ಪ್ರದೇಶ ಗಾಜಿಯಾಬಾದ್‌ನಲ್ಲಿ ಕಳ್ಳರು ಚರಂಡಿಗೆ ಮುಚ್ಚಿದ ಕಬ್ಬಿಣದ ಮುಚ್ಚಳವನ್ನೇ ಕದ್ದಿದ್ದಾರೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆ ಆಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ, ಇಬ್ಬರು ವ್ಯಕ್ತಿಗಳು ಚರಂಡಿ ಮೇಲೆ ಹಾಕಲಾದ ಕಬ್ಬಿಣದ ಕವರ್‌ ಅನ್ನು ಎತ್ತುತ್ತಿರುವುದನ್ನು ಕಾಣಬಹುದು. ಮತ್ತೊಬ್ಬ ವ್ಯಕ್ತಿ ಇ-ರಿಕ್ಷಾದಲ್ಲಿ ಬಂದಿದ್ದರು. ಇಬ್ಬರೂ ಕಳ್ಳರು ಕಬ್ಬಿಣದ ಕವರ್ ಅನ್ನು ರಿಕ್ಷಾದ ಮೇಲೆ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಆಗಸ್ಟ್ 1 ಮತ್ತು ಆಗಸ್ಟ್ 2 ರ ಮಧ್ಯರಾತ್ರಿ ಭಾರತ್ ಗ್ಯಾಸ್ ಏಜೆನ್ಸಿ ಬಳಿಯ ಲಾಲ್ ಕುಯಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಘಟನೆಯ ವಿಡಿಯೋದಲ್ಲಿ ಕಾಣುವಂತೆ ಒಟ್ಟು ಮೂವರು ಈ ಕಳ್ಳರು ಕೃತ್ಯವೆಸಗಿದ್ದಾರೆ. ಮೊದಲಿಗೆ ಇಬ್ಬರು ಬಂದು ಚರಂಡಿ ಮೇಲಿನ ಕಬ್ಬಿಣದ ಕವರನ್ನು ಎತ್ತಿದ್ದಾರೆ. ಈ ವೇಳೆ ಕೆಂಪು ಬಣ್ಣದ ಇ-ರಿಕ್ಷಾ ಅಲ್ಲಿಗೆ ಬಂದಿದ್ದು, ಆ ರಿಕ್ಷಾದೊಳಗೆ ಈ ಕಬ್ಬಿಣದ ಮುಚ್ಚಳವನ್ನು ತುಂಬಿಸಿ ಕಳ್ಳರು ತೆಗೆದುಕೊಂಡು ಹೋಗಿದ್ದಾರೆ.

ಭಾರತ್ ಗ್ಯಾಸ್ ಏಜೆನ್ಸಿ ಸಮೀಪವಿರುವ ಲಾಲ್ ಕುಯಾನ್ ಪ್ರದೇಶದ ಬಳಿ ಆಗಸ್ಟ 1 ಹಾಗೂ 2 ನಡುವೆ ರಾತ್ರಿ ಈ ಘಟನೆ ನಡೆದಿದೆ. ಕಳ್ಳರು ಪೊಲೀಸರಿಂದ ಸಿಕ್ಕಿಬೀಳುವುದನ್ನು ತಪ್ಪಿಸಲು ಇ-ರಿಕ್ಷಾದ ನಂಬರ್ ಪ್ಲೇಟ್‌ಗೆ ಕೆಂಪು ಬಣ್ಣ ಬಳಿದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ.

ನೋಡಿ, ನಿರುದ್ಯೋಗ ಬಹಳಷ್ಟು ಹೆಚ್ಚಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ನಿರುದ್ಯೋಗವು ಉತ್ತುಂಗಕ್ಕೇರಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವಾರದ ಆರಂಭದಲ್ಲಿ, ಮತ್ತೊಂದು ಸಿಸಿಟಿವಿ ವಿಡಿಯೋ ವೈರಲ್ ಆಗಿತ್ತು, ಅದರಲ್ಲಿ ಐಷಾರಾಮಿ ವಸತಿ ಸಮುಚ್ಚಯದಲ್ಲಿ ರಾತ್ರಿ ವೇಳೆ ವ್ಯಕ್ತಿಯೊಬ್ಬ ಡ್ರೈನ್ ಮುಚ್ಚಳವನ್ನು ಕದಿಯುವ ದೃಶ್ಯ ಸೆರೆ ಆಗಿತ್ತು. ರಾಷ್ಟ್ರ ರಾಜಧಾನಿ ದೆಹಲಿಯ ವೀಡಿಯೋ ಇದಾಗಿತ್ತು.

ಫುಲ್‌ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡು ಹಣ ಕೊಡದೇ ಎಸ್ಕೇಪ್ ಆದ ಕಾರು ಚಾಲಕ

ಹಾಗೆಯೇ ಉತ್ತರ ಪ್ರದೇಶದಿಂದ ವೈರಲ್ ಆಗಿರುವ ಮತ್ತೊಂದು ವೀಡಿಯೋದಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹಣ ಕೊಡದೇ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಕಾರು ಚಾಲಕನೋರ್ವ ಪೆಟ್ರೋಲ್ ತುಂಬುವ ಮೆಷಿನ್‌ನ ಪೈಪನ್ನೇ ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಕೊತ್ವಾಲಿ ಹತ್ರಾಸ್ ಗೇಟ್ ಪ್ರದೇಶದ ಜಲೇಶ್ವರ ರಸ್ತೆಯಲ್ಲಿರುವ ಶ್ರೀ ಬಾಲಾಜಿ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿದೆ. ಕಾರು ಚಾಲಕನೊಬ್ಬ ತನ್ನ ಕಾರಿಗೆ 31 ಲೀಟರ್ ಪೆಟ್ರೋಲ್ ತುಂಬಿಸಿ ನಂತರ ಹಣ ಪಾವತಿಸದೆ ಪರಾರಿಯಾಗಿದ್ದಲ್ಲದೆ, ವೇಗವಾಗಿ ಹೋಗುವ ರಭಸದಲ್ಲಿ ಪೆಟ್ರೋಲ್ ಪಂಪ್‌ನ ಪೆಟ್ರೋಲ್ ತುಂಬಿಸುವ ಪೈಪ್ ನಳಿಕೆಯನ್ನು ಕಿತ್ತು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾನೆ. ಈ ಸಂಪೂರ್ಣ ಘಟನೆ ಪೆಟ್ರೋಲ್ ಪಂಪ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೆಟ್ರೋಲ್ ಪಂಪ್ ಕಾರ್ಮಿಕರ ಪ್ರಕಾರ, ಕಾರು ಚಾಲಕ ತನ್ನ ಕಾರಿನ ಟ್ಯಾಂಕ್‌ಗೆ ಪೆಟ್ರೋಲ್ ತುಂಬಿಸುವಂತೆ ಸಿಬ್ಬಂದಿಗೆ ಕೇಳಿಕೊಂಡ. ಅದರಂತೆ ಪೆಟ್ರೋಲ್ ತುಂಬಿದ ತಕ್ಷಣ, ಚಾಲಕ ಇದ್ದಕ್ಕಿದ್ದಂತೆ ಪೆಟ್ರೋಲ್ ಪೈಪ್ ಕಾರಿನ ಪೆಟ್ರೋಲ್‌ ಟ್ಯಾಂಕ್‌ಗೆ ಸಿಲುಕಿಕೊಂಡಿರುವಾಗಲೇ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಈ ಹಠಾತ್ ಘಟನೆ ಪೆಟ್ರೋಲ್ ಪಂಪ್‌ನಲ್ಲಿ ಭಯ ಸೃಷ್ಟಿಸಿದೆ. ಪೆಟ್ರೋಲ್‌ ಪಂಪ್‌ನ ನೌಕರರು ತಕ್ಷಣ ಕಾರನ್ನು ಬೆನ್ನಟ್ಟಿದರಾದರೂ ಚಾಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಇತ್ತ ಪೆಟ್ರೋಲ್ ಪಂಪ್ ಕಾರ್ಮಿಕರು ತಕ್ಷಣ ಕೊತ್ವಾಲಿ ಹತ್ರಾಸ್ ಗೇಟ್ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿ ಕಾರು ಚಾಲಕನನ್ನು ಬೆನ್ನಟ್ಟಿದರು. ಆದರೆ ಸುಮಾರು 2 ಕಿ.ಮೀ ದೂರ ಹೋದಾಗ ಪೊಲೀಸರಿಗೆ ರಸ್ತೆಯಲ್ಲಿ ಪೆಟ್ರೋಲ್ ಟ್ಯಾಂಕ್‌ನ ಮುರಿದ ನಳಿಕೆ ಸಿಕ್ಕಿದೆ, ಆದರೆ ಚಾಲಕ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದ. ಈ ಸಂಬಂಧ ಪೆಟ್ರೋಲ್ ಪಂಪ್ ನಿರ್ವಾಹಕರು ಕೊತ್ವಾಲಿ ಹತ್ರಾಸ್ ಗೇಟ್‌ನಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಪೊಲೀಸರು ಈಗ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಾರು ಮತ್ತು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

Scroll to load tweet…



Scroll to load tweet…