Asianet Suvarna News Asianet Suvarna News

ಬಹುಮತ ಸಾಬೀತಿಗೆ ಮುನ್ನ ಆರ್‌ಜೆಡಿ ಸದಸ್ಯರ ಮೇಲೆ ಸಿಬಿಐ ದಾಳಿ: ರೇಡ್‌ಗೆ ಹೆದರಲ್ಲ ಎಂದ ರಾಬ್ಡಿದೇವಿ

ಬಿಹಾರದಲ್ಲಿ ಇಂದು ಆರ್‌ಜೆಡಿ ಸದಸ್ಯರ ಮೇಲೆ ಸಿಬಿಐ ರೇಡ್‌ ನಡೆಸಲಾಗಿದೆ. “ಉದ್ಯೋಗಕ್ಕಾಗಿ ಭೂಮಿ” ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೇಡ್‌ ನಡೆದಿದೆ ಎಂದು ವರದಿಯಾಗಿದೆ. 

cbi raids on rjd leaders hours before bihar floor test rabri devi alleges conspiracy ash
Author
Bangalore, First Published Aug 24, 2022, 1:55 PM IST

ಬಿಹಾರದ ಮಹಾಘಟಬಂಧನ ಸರ್ಕಾರಕ್ಕೆ ಇಂದು ಮಹತ್ವದ ದಿನವಾಗಿದ್ದು, ಸರ್ಕಾರದ ಬಹುಮತವನ್ನು ಸಾಬೀತುಪಡಿಸಬೇಕಿದೆ. ಆದರೆ, ಬಹುಮತ ಸಾಬೀತಿಗೂ ಮುನ್ನವೇ ಸಿಬಿಐ ಅಧಿಕಾರಿಗಳು ಆರ್‌ಜೆಡಿ ಸದಸ್ಯರ ಮನೆ ಮೇಲೆ ರೇಡ್‌ ನಡೆಸಿದ್ದಾರೆ. ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳದ ಮೂವರು ಹಿರಿಯ ನಾಯಕರ ಮನೆಗಳ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಇಂದು ರೇಡ್‌ ಮಾಡಿದ್ದು, ಪರಿಶೀಲನೆ ನಡೆಸುತ್ತಿದೆ. ತಂದೆ ಲಾಲು ಪ್ರಸಾದ್‌ ಯಾದವ್ ಅವರು ಯುಪಿಎ-1 ಸರಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ “ಉದ್ಯೋಗಕ್ಕಾಗಿ ಭೂಮಿ” ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೇಡ್‌ ನಡೆದಿದೆ ಎಂದು ತಿಳಿದುಬಂದಿದೆ.

ಜೆಡಿಯು, ಬಿಜೆಪಿಯಿಂದ ಬೇರ್ಪಟ್ಟು ಹಾಗೂ ಆರ್‌ಜೆಡಿಯೊಂದಿಗೆ ಕೈಜೋಡಿಸಿ 2 ವಾರಗಳ ನಂತರ, ಆರ್‌ಜೆಡಿ ಬೆಂಬಲಿತ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಬಹುಮತದ ಪರೀಕ್ಷೆಯನ್ನು ತೆಗೆದುಕೊಳ್ಳುವ ದಿನದಂದು ಸಿಬಿಐನ ಈ ರೇಡ್‌ಗಳನ್ನು ನಡೆಸಲಾಗಿದೆ. ಆರ್‌ಜೆಡಿಯ ರಾಜ್ಯಸಭಾ ಸಂಸದರಾದ ಅಹ್ಮದ್ ಅಶ್ಫಾಕ್ ಕರೀಮ್, ಡಾ. ಫಯಾಜ್ ಅಹ್ಮದ್, ಸುಬೋಧ್‌ ರಾಯ್‌ ಮತ್ತು ಬಿಹಾರದ ವಿಧಾನ ಪರಿಷತ್ ಸದಸ್ಯ ಸುನೀಲ್ ಸಿಂಗ್ ಅವರ ಮನೆಗಳಿಗೆ ಸಿಬಿಐ ತಂಡಗಳು ಇಂದು ಬೆಳಗ್ಗೆ ತಲುಪಿದ್ದು, ಪರಿಶೀಲನೆ ನಡೆಸುತ್ತಿವೆ.

ಇಡಿ, ಸಿಬಿಐನವರು ನನ್ನ ಮನೆಯಲ್ಲೇ ಕಚೇರಿ ತೆರೆಯಬಹುದು: ತೇಜಸ್ವಿ ಯಾದವ್

ರೇಡ್‌ಗೆ ನಾವು ಹೆದರಲ್ಲ: ರಾಬ್ಡಿ ದೇವಿ
ಇನ್ನು, ಸಿಬಿಐ ರೇಡ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಮತ್ತು ತೇಜಸ್ವಿ ಯಾದವ್ ಅವರ ತಾಯಿ ರಾಬ್ಡಿದೇವಿ ಅವರು ‘’ನಿತೀಶ್ ಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿರುವುದರಿಂದ ಅವರಿಗೆ (ಬಿಜೆಪಿ)ಗೆ ಭಯವಾಗಿದೆ. ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮೊಂದಿಗಿವೆ, ನಮಗೆ ಬಹುಮತವಿದೆ. ಸಿಬಿಐ (ದಾಳಿ) ಕೇವಲ ನಮ್ಮನ್ನು ಹೆದರಿಸಲು. ಇದಕ್ಕೆ ನಾವು ಹೆದರುವುದಿಲ್ಲ. ಇದು ಮೊದಲ ಬಾರಿಗೆ ಆಗುತ್ತಿಲ್ಲ." ಎಂದು ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

ಹಾಗೂ, "ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಈ ರೇಡ್‌ಗೆ ಯಾವುದೇ ಅರ್ಥವಿಲ್ಲ. ನಮ್ಮ ಶಾಸಕರು ಭಯದಿಂದ ಅವರನ್ನು ಸೇರುತ್ತಾರೆ ಎಂಬ ಭರವಸೆಯಿಂದ ಇದನ್ನು ಮಾಡುತ್ತಿದ್ದಾರೆ" ಎಂದು ಪಾಟ್ನಾದಲ್ಲಿ ರೇಡ್‌ಗೊಳಗಾದ ಎಂಎಲ್‌ಸಿ ಸುನೀಲ್‌ ಸಿಂಗ್ ಹೇಳಿದರು. ಈ ಮಧ್ಯೆ, ಬಿಹಾರದಲ್ಲಿ ಅಧಿಕಾರ ಕೈತಪ್ಪಿದ ಬಿಜೆಪಿ ತೀವ್ರ ಆಕ್ರೋಶಗೊಂಡಿರುವ ಕಾರಣ ಸಿಬಿಐ ಮತ್ತು ಇತರ ಕೇಂದ್ರೀಯ ಸಂಸ್ಥೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂದು ಆರ್‌ಜೆಡಿ ವಕ್ತಾರರು ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದರು. "ಬಿಹಾರದಲ್ಲಿ ಬಿಜೆಪಿ ಮಿತ್ರಪಕ್ಷಗಳಾದ ಸಿಬಿಐ, ಇಡಿ, ಐಟಿ ಶೀಘ್ರದಲ್ಲೇ ದಾಳಿಗೆ ತಯಾರಿ ನಡೆಸುತ್ತಿವೆ. ಪಾಟ್ನಾದಲ್ಲಿ ಸಭೆ ಆರಂಭವಾಗಿದೆ. ನಾಳೆ ಮಹತ್ವದ ದಿನ" ಎಂದು ಟ್ವೀಟ್ ಮಾಡಿದ್ದರು. ಹಾಗೂ, ಇದು ಬಿಜೆಪಿ ರೇಡ್‌ ಎಂದೂ ಆರ್ಜೆ‌ಡಿ ಸದಸ್ಯರೊಬ್ಬರು ಹೇಳಿದ್ದಾರೆ. 

ಈ ದಾಳಿಗಳು ಆರ್‌ಜೆಡಿ ನಾಯಕರ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಶೋಕ್ ಸಿನ್ಹಾ, "ಕೆಲವು ಕುಖ್ಯಾತ ರಾಜಕಾರಣಿಗಳ" ವಿರುದ್ಧ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. "ಆರ್‌ಜೆಡಿ ಕಾರ್ಯಕರ್ತರು ಸಹ ಇಂದು ಸಂತೋಷವಾಗಿದ್ದಾರೆ. ಈ ಜನರು ಈ ಅಂತ್ಯವನ್ನು ಪೂರೈಸಬೇಕು ಎಂದು ಅವರು ಭಾವಿಸುತ್ತಾರೆ" ಎಂದು ಅವರು ಹೇಳಿದರು.

8ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್‌ ಕುಮಾರ್‌, ಡಿಸಿಎಂ ಆದ ಲಾಲೂ ಪುತ್ರ ತೇಜಸ್ವಿ ಯಾದವ್‌

2004 ಮತ್ತು 2009 ರ ನಡುವೆ ರೈಲ್ವೆ ಉದ್ಯೋಗಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಲಾಲೂ ಪ್ರಸಾದ್‌ ಯಾದವ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಆರೋಪ ಹೊರಿಸಲಾಗಿತ್ತು. ಲಾಲೂ ಪ್ರಸಾದ್‌ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ರೈಲ್ವೆ ಉದ್ಯೋಗಗಳನ್ನು ನೀಡಲು ಲಂಚವಾಗಿ ಭೂಮಿ ಮತ್ತು ಆಸ್ತಿಗಳನ್ನು ಪಡೆದಿದ್ದಾರೆ ಎಂದು ಸಿಬಿಐ ಪ್ರಕರಣದಲ್ಲಿ ಆರೋಪಿಸಲಾಗಿದೆ.

Follow Us:
Download App:
  • android
  • ios