ಕರ್ನಾಟಕದ ಡಿಜಿ ಅಜಿಪಿಯಾಗಿದ್ದ ಪ್ರವೀಣ್ ಸೂದ್ ಕಳೆದ ನಾಲ್ಕು ವರ್ಷಗಳಿಂದ ಸಿಬಿಐ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಸೂದ್ ಅವಧಿ ಮತ್ತೆ ವಿಸ್ತರಿಸಿದೆ.
ನವದೆಹಲಿ (ಮೇ.13) ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವಧಿ ಮತ್ತೆ ವಿಸ್ತರಣೆ ಮಾಡಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮತ್ತೆ ಒಂದು ವರ್ಷಕ್ಕೆ ಪ್ರವೀಣ್ ಸೂದ್ ಅವಧಿ ವಿಸ್ತರಣೆ ಮಾಡಲಾಗಿದೆ. ಕರ್ನಾಟಕದ ಡಿಜಿ-ಐಜಿಪಿಯಾಗಿದ್ದ ಪ್ರವೀಣ್ ಸೂದ್ 2022ರಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಇದೀಗ ಎರಡನೇ ಬಾರಿಗೆ ಪ್ರವೀಣ್ ಸೂದ್ ಅವಧಿ ವಿಸ್ತರಣೆಯಾಗುತ್ತಿದೆ.

ರಾಹುಲ್ ಗಾಂಧಿ ಅಸಮಾಧಾನ
ಪ್ರಧಾನಿ ಮೋದಿ ನಿವಾಸದಲ್ಲಿ ಸಿಬಿಐ ನಿರ್ದೇಶಕರ ನೇಮಕ ಹಾಗೂ ಅವಧಿ ವಿಸ್ತರಣೆ ಕುರಿತು ನಡೆದ ಸಭೆಯಲ್ಲಿ ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ಸೂರ್ಯ ಕಾಂತ್, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಪ್ರವೀಣ್ ಸೂದ್ ಅವಧಿ ವಿಸ್ತರಣೆಗೆ ರಾಹುಲ್ ಗಾಂಧಿ ಅಕ್ಷೇಪ ವ್ಯಕ್ತಪಡಿಸಿದರು. ಸಭೆ ಬಳಿಕ ಮಾತನಾಡಿದ ರಾಹುಲ್ ಗಾಂಧಿ ಆಯ್ಕೆ ಪ್ರಕ್ರಿಯೆ ಹಾಗೂ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಒಂದು ಗಂಟೆ ಸಭೆಯಲ್ಲಿ 69 ಹೆಸರು ಮುಂದಿಡಲಾಗಿತ್ತು. ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿವರ, ಅಭ್ಯರ್ಥಿಗಳ ವಿವರವನ್ನು ನಮಗೆ ಹೇಳಿಲ್ಲ. ಇದೆಲ್ಲಾ ಗೌಪ್ಯವಾಗಿ ಇಡಲಾಗುತ್ತಿದೆ. ಸಿಬಿಐ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ಹಿತದೃಷ್ಟಿಯಿಂದ, ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅಕ್ಷೇಪದ ನಡುವೆಯೂ ಪ್ರವೀಣ್ ಸೂದ್ ಅಧಿಕಾರ ವಿಸ್ತರಣೆಯಾಗಿದೆ. ಮಹತ್ವದ ಸಭೆ ಬಳಿಕ ಪ್ರವೀಣ್ ಸೂದ್ ಅಧಿಕಾರ ವಿಸ್ತರಣೆಗೆ ಕೇಂದ್ರ ಉನ್ನತಾಧಿಕಾರಿದ ಸಮಿತಿ( ನೇಮಕಾತಿ) ಒಪ್ಪಿಗೆ ನೀಡಿದೆ. 2022ರಲ್ಲಿ ಸಿಬಿಐ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡ ಪ್ರವೀಣ್ ಸೂದ್, ಇದೇ ಮೇ 24, 2026ರಂದು ನಿವೃತ್ತಿಯಾಗಬೇಕಿತ್ತು. ಇದೀಗ ಮತ್ತೆ ಒಂದು ವರ್ಷದ ಅವಧಿಗೆ ಪ್ರವೀಣ್ ಸೂದ್ ಅವಧಿ ವಿಸ್ತರಣೆ ಮಾಡಲಾಗಿದೆ. ಇದೀಗ 2027ರ ಮೇ ವರೆಗೆ ಪ್ರವೀಣ್ ಸೂದ್ ಭಾರತದ ಸಿಬಿಐ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಬಿಜೆಪಿ ವಿರುದ್ದ ಮಾತನಾಡುವ ರಾಜಕೀಯ ನಾಯಕರ ವಿರುದ್ಧ, ಪತ್ರಕರ್ತರ ವಿರುದ್ಧ ಸಿಬಿಐ ಬಳಸಿ ಪ್ರಕರಣ ದಾಖಲಿಸಲಾಗುತ್ತದೆ.ಬೆದರಿಕೆ ತಂತ್ರ ಪ್ರಯೋಗಿಸಲಾಗುತ್ತದೆ. ನಾನು ಸತತವಾಗಿ ಈ ಕುರಿತು ಪತ್ರ ಬರೆದರೂ ವಿಪಕ್ಷ ನಾಯಕರ ಮಾತುಗಳನ್ನು ಕಡೆಗಣಿಸಲಾಗುತ್ತಿದೆ. ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಪಾರದರ್ಶಕತೆ ಉಳಿದಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.


