ಅಧಿಕಾರ ಹಿಡಿಯಲು ಮಾಡುವ ವ್ಯಭಿಚಾರ ರಾಜಕೀಯ ಅಪರಾಧ. ಪ್ರತಿಯೊಬ್ಬರೂ ಅವರವರ ಪಾಪಕ್ಕೆ ಈ ಜನ್ಮದಲ್ಲಿ ಅಥವಾ ಜನ್ಮಾಂತರದಲ್ಲಿ ಬೆಲೆ ತೆರುತ್ತಾರೆ. ಗ್ರೀಕ್‌ ಪುರಾಣಗಳ ಪ್ರಕಾರ ಅಪ್ಪಂದಿರ ಪಾಪದ ಫಲವನ್ನು ಮಕ್ಕಳು ಅನುಭವಿಸುತ್ತಾರೆ. ಭಾರತೀಯ ಕರ್ಮಸಿದ್ಧಾಂತದ ಪ್ರಕಾರ ನೀವೇ ಮುಂದಿನ ಜನ್ಮದಲ್ಲಿ ನಿಮ್ಮ ಪಾಪದ ಫಲ ಉಣ್ಣುತ್ತೀರಿ. ರಾಜಕೀಯದಲ್ಲಿ ಮುಂದಿನ ಚುನಾವಣೆಯಲ್ಲೇ ಅದಕ್ಕೆ ಬೆಲೆ ತೆರಬೇಕಾಗುತ್ತದೆ.

ರಾಜಕೀಯದಲ್ಲಿ ವಿಚಿತ್ರ ಕೂಡಿಕೆಗಳಾಗುತ್ತವೆ. ಭಾರತದ ರಾಜಕಾರಣದಲ್ಲಂತೂ ಶತ್ರುವಿನೊಂದಿಗೆ ಸಂಸಾರ ಮಾಡುವುದು ವಿಶೇಷವೇನಲ್ಲ. ‘ರಾಜಕೀಯವು ಎರಡನೇ ಅತ್ಯಂತ ಹಳೆಯ ವೃತ್ತಿ ಎಂಬ ಮಾತಿದೆ. ನನ್ನ ಪ್ರಕಾರ ಮೊದಲ ಅತ್ಯಂತ ಪುರಾತನ ವೃತ್ತಿಯ ಜೊತೆಗೆ ಇದಕ್ಕೆ ಬಹಳ ಸಾಮ್ಯತೆಯಿದೆ’ ಎಂದು ಅಮೆರಿಕದ ಅಧ್ಯಕ್ಷ ರೊನಾಲ್ಡ್‌ ರೇಗನ್‌ ಚಟಾಕಿ ಹಾರಿಸಿದ್ದರು. ಅಧಿಕಾರ ಅತಿದೊಡ್ಡ ಕಾಮೋತ್ತೇಜಕ.

ದೇಶಕ್ಕೆ ಆರ್ಥಿಕ ಸಂಕಷ್ಟವಿದೆ ಎಂಬುದನ್ನು ಮೊದಲು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲಿ

ಮಹಾರಾಷ್ಟ್ರದಲ್ಲಿ ತನ್ನ ಚುನಾವಣಾಪೂರ್ವ ಮೈತ್ರಿಪಕ್ಷವಾಗಿದ್ದ ಶಿವಸೇನೆ ತನಗೆ ಮೋಸವಾಗಿದೆ ಎಂದು ದೂರವಾಗಲು ಹೊರಟಾಗ ಅದರ ಧಾಷ್ಟ್ರ್ಯ ನೋಡಿ ಬಿಜೆಪಿ ದಿಗ್ಭ್ರಮೆಗೊಂಡಿತ್ತು. ಅದು ವಿಚ್ಛೇದನ ನೀಡಿ, ಕೊನೆಗೆ ಶತ್ರುವಿನೊಂದಿಗೆ ಬೇಕಾದರೂ ಸಂಸಾರ ಮಾಡಲು ಸಿದ್ಧವಾಗಿತ್ತು. ಶಿವಸೇನೆಯ ಸವಾಲು ಬಿಜೆಪಿಗೆ ಮೈಮೇಲೆ ಚೇಳು ಬಿಟ್ಟಂತಾಗಿತ್ತು. ಆದರೂ ತನ್ನನ್ನು ಯಾರೂ ಮಣಿಸಲಾರರು ಎಂಬ ಉತ್ಪ್ರೇಕ್ಷಿತ ಭ್ರಮೆಯಲ್ಲಿ - ಈಗ ಕೊಂಚ ಕರಗಿದೆ - ಅದು ಶಿವಸೇನೆಯ ಶಕ್ತಿ ಹಾಗೂ ಬದ್ಧತೆಯನ್ನು ಕಡೆಗಣಿಸಿತ್ತು.

ರಾಜ್ಯಪಾಲರು ಮೊದಲಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದಾಗ ನಮ್ಮಿಂದ ಸಾಧ್ಯವಿಲ್ಲ ಎಂದು ದೇವೇಂದ್ರ ಫಡ್ನವೀಸ್‌ ಕೈಚೆಲ್ಲುವ ವೇಳೆಯಲ್ಲೂ ಶಿವಸೇನೆ ತನ್ನ ಆಜನ್ಮ ವೈರಿಗಳಾದ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಜೊತೆ ಕಳ್ಳಾಟವಾಡಲು ಯತ್ನಿಸುತ್ತಿದೆ ಎಂದು ಅಣಕಿಸಿದ್ದರು. ನಂತರ ರಾಜ್ಯಪಾಲರು ಶಿವಸೇನೆಯನ್ನೂ, ಅದಾದ ಮೇಲೆ ಎನ್‌ಸಿಪಿಯನ್ನೂ ಸರ್ಕಾರ ರಚಿಸಲು ಆಹ್ವಾನಿಸಿದಾಗ ಕೂಡ ಹತಾಶ ಪಕ್ಷಗಳು ಒಂದಾಗಲು ಯತ್ನಿಸುತ್ತಿವೆ ಎಂದು ಬಿಜೆಪಿ ತೀಕ್ಷ್ಣ ವಾಗ್ದಾಳಿ ನಡೆಸಿತ್ತು.

ಆದರೆ, ರಾಜ್ಯಪಾಲರು ಅಪ್ಪಟ ಪಕ್ಷಪಾತಿಯಂತೆ ಅತಿ ಅವಸರದಲ್ಲಿ ಎರಡನೇ ಬಾರಿ ದೇವೇಂದ್ರ ಫಡ್ನವೀಸ್‌ಗೆ ಸರ್ಕಾರ ರಚಿಸಲು ಆಹ್ವಾನ ನೀಡಿದಾಗ ಬಿಜೆಪಿ ತಾನು ಶಿವಸೇನೆಯ ಬಗ್ಗೆ ಆಡಿದ್ದ ಅಣಕವನ್ನೇ ಮರೆತು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ಗೆ ತಾಳಿ ಕಟ್ಟಲು ಹಿಂದೆಮುಂದೆ ನೋಡಲಿಲ್ಲ.

ಎನ್‌ಸಿಪಿಯ ಪರಮೋಚ್ಚ ನಾಯಕ, ಚಾಣಾಕ್ಷ ಹಾಗೂ ಕಪಟ ಕುಸ್ತಿಪಟು ಶರದ್‌ ಪವಾರ್‌ ಅವರೇ ಬೀಸಿದ ಬಲೆಯಿದು, ಇದೊಂದು ಹನಿಟ್ರ್ಯಾಪ್‌ ಎಂದು ಅನೇಕರಿಗೆ ಅನುಮಾನ ಬಂದಿತ್ತು. ಕೊನೆಗೂ ಅದು ಅವಸರದಲ್ಲಿ ಮದುವೆಯಾಗಿ ವಿರಾಮದಲ್ಲಿ ಪಶ್ಚಾತ್ತಾಪ ಪಡುವುದಕ್ಕೆ ಅತ್ಯುತ್ತಮ ನಿದರ್ಶನವಾಗಿಬಿಟ್ಟಿತು.

ಕಾಫಿ ಮಾಂತ್ರಿಕನನ್ನು ನೆನೆದ ವಿಮಾನ ಕ್ರಾಂತಿ ಖ್ಯಾತಿಯ ಕ್ಯಾ. ಗೋಪಿನಾಥ್

2015 ರಲ್ಲಿ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರ ಪಿಡಿಪಿ ಜೊತೆ ಜಮ್ಮು ಕಾಶ್ಮೀರದಲ್ಲಿ ತಾನು ಮಾಡಿಕೊಂಡಿದ್ದ ಅಪವಿತ್ರ ಮೈತ್ರಿಯೂ ಬಿಜೆಪಿಗೆ ನೆನಪಾಗಲಿಲ್ಲ. ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರ ಬಗ್ಗೆ ಮುಫ್ತಿಗಿದ್ದ ಕನಿಕರ ಎಲ್ಲರಿಗೂ ಗೊತ್ತಿತ್ತು. ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಅವರು ತಮ್ಮ ಸರ್ಕಾರದಲ್ಲಿ ಪಾಲುದಾರನಾಗಿರುವ ಬಿಜೆಪಿಗೆ ಒಂದು ಮಾತನ್ನೂ ಹೇಳದೆ ಜೈಲುಶಿಕ್ಷೆ ಅನುಭವಿಸುತ್ತಿದ್ದ ಪ್ರತ್ಯೇಕತಾವಾದಿಗಳನ್ನು ಬಿಡುಗಡೆ ಮಾಡಿದ್ದರು.

ಬಿಜೆಪಿಯೂ ಇದನ್ನು ಮಾಡಿತ್ತು

ರಾಜಕೀಯವೆಂಬುದು ಕೇವಲ ಸಾಧ್ಯತೆಗಳ ಕಲೆಯಲ್ಲ, ಅಸಾಧ್ಯತೆಗಳ ಕಲೆ ಕೂಡ. ಇನ್ನೊಂದು ದಿನ ಹೋರಾಡುವುದಕ್ಕಾಗಿ ಇವತ್ತು ನೀವು ಬದುಕಬೇಕು. ಬಿಜೆಪಿಯದೇ ಆಟದಲ್ಲಿ ಶಿವಸೇನೆಯು ಬಿಜೆಪಿಯನ್ನು ನೆಲಕಚ್ಚಿಸಿದೆ. ಈ ಆಟದಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಒಮ್ಮೆ ಕೂಡ ಹಿಂದೆಗೆಯಲಿಲ್ಲ. ಜೊತೆಗೆ, ‘ಕುಸ್ತಿಯಲ್ಲಿ ನಾಯಿಯ ಗಾತ್ರ ಮುಖ್ಯವಲ್ಲ, ನಾಯಿಯಲ್ಲಿನ ಕುಸ್ತಿಯ ಗಾತ್ರ ಮುಖ್ಯ’ ಎಂಬ ಹಳೆ ಗಾದೆಗೆ ತಕ್ಕಂತೆ ನಡೆದುಕೊಂಡರು.

‘ರಾಜಕೀಯದಲ್ಲಿ ಒಂದೋ ದೇಶಕ್ಕೆ ಮೋಸ ಮಾಡಬೇಕು ಇಲ್ಲಾ ಮತದಾರರಿಗೆ ಮೋಸ ಮಾಡಬೇಕು’ ಎಂದು ಚಾರ್ಲ್ಸ್ ಡಿ ಗೌಲೆ ಹೇಳುತ್ತಿದ್ದರು. ಈಗ ಬಿಜೆಪಿ ಹಾಗೂ ಶಿವಸೇನೆ ಎರಡೂ ಪಕ್ಷಗಳು ಮತದಾರರಿಗೆ ಮೋಸ ಮಾಡಿವೆ ಎನ್ನಬಹುದು. ರೆಕ್ಕೆ ಬಿಚ್ಚಿಕೊಂಡು ಅವಕಾಶಕ್ಕಾಗಿ ಕಾಯುತ್ತಿದ್ದ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಅವಕಾಶ ಸಿಕ್ಕಾಕ್ಷಣ ಬಾಚಿಕೊಂಡು ಬಿಜೆಪಿಯನ್ನು ಮೂಲೆಗೆ ತಳ್ಳಿದವು. ಹಿಂದೆ ಗೋವಾದಲ್ಲಿ, ಇತ್ತೀಚೆಗೆ ಕರ್ನಾಟಕದಲ್ಲಿ ಹಾಗೂ ಇನ್ನೂ ಅನೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಹೀಗೇ ನಿರ್ದಾಕ್ಷಿಣ್ಯವಾಗಿ - ಒಳ್ಳೆಯ ದಾರಿಯೋ ಅಡ್ಡದಾರಿಯೋ ಏನೋ ಒಂದು - ಇನ್ನಿತರ ರಾಜಕೀಯ ಪಕ್ಷಗಳ ಕತ್ತು ಹಿಡಿದು ನೆಲಕ್ಕೆ ಮೂಗು ಉಜ್ಜಿಸಿತ್ತು.

ಶಿವಸೇನೆಗೆ ಪ್ರಾಯಶ್ಚಿತ್ತದ ಅವಕಾಶ

ಈಗ ಶಿವಸೇನೆಗೆ ಮತದಾರರಿಗೆ ತಾನು ಕೊಟ್ಟವಾಗ್ದಾನ ಈಡೇರಿಸಲು ಅವಕಾಶ ಸಿಕ್ಕಿದೆ. ತನ್ನದೇ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಕ್ಕೂ ಅವಕಾಶ ದೊರೆತಿದೆ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಖಂಡಿತ ಅದು ಬೆಲೆ ತೆರುತ್ತದೆ. ಮೊದಲನೆಯದಾಗಿ ಅದು ತನ್ನ ಧರ್ಮಾಂಧ ರಾಜಕೀಯವನ್ನು ತ್ಯಜಿಸಬೇಕು. ಕೇವಲ ಹಿಂದು ಮತ್ತು ಮುಸ್ಲಿಮರ ಮಧ್ಯೆಯಷ್ಟೇ ಅಲ್ಲ, ಮರಾಠರು ಹಾಗೂ ಮರಾಠಿಯೇತರರ ನಡುವೆ ಕೂಡ ಬೆಂಕಿ ಹಚ್ಚಿ ವಿಭಜನೆಯ ಮತಬ್ಯಾಂಕ್‌ ರಾಜಕೀಯ ಮಾಡುವುದನ್ನು ಅದು ಬಿಡಬೇಕು.

ಮುಂಬೈ ನಿವಾಸಿಗಳು ಹಾಗೂ ಮಹಾರಾಷ್ಟ್ರದ ಮೂಲನಿವಾಸಿಗಳ ಮನದಲ್ಲಿ ಅಭದ್ರತೆ ಹುಟ್ಟಿಸಿ, ‘ಮಣ್ಣಿನ ಮಕ್ಕಳು’ ಎಂಬ ವಿನಾಶಕಾರಿ ಚಿಂತನೆಯನ್ನು ಬಿತ್ತಿ, ದೇಶದ ಬೇರೆ ಬೇರೆ ಭಾಗಗಳಿಂದ ಮುಂಬೈಗೆ ವಲಸೆ ಬರುವವರಲ್ಲಿ ಭೀತಿಯ ಬೀಜ ಎಸೆದು, ಮಹಾರಾಷ್ಟ್ರ ಮತ್ತು ವಿಶೇಷವಾಗಿ ಮುಂಬೈನ ಆರ್ಥಿಕತೆಯಲ್ಲಿ ಒಂದಾಗಿಹೋಗಿರುವ ವಿವಿಧ ಸಮುದಾಯಗಳ ನಡುವೆ ಒಡಕು ತಂದಿಡುವುದಕ್ಕೆ ಯೋಗ್ಯವಾಗಿ ಶಿವಸೈನಿಕರನ್ನು ಬೆಳೆಸಲಾಗಿದೆ.

ಬಾಲಿವುಡ್‌, ಬಿಸಿನೆಸ್‌, ಷೇರು ಮಾರುಕಟ್ಟೆಯಲ್ಲೋ ಅಥವಾ ಟ್ಯಾಕ್ಸಿ ಚಾಲಕರಾಗಿ, ಸೆಕ್ಯುರಿಟಿ ಗಾರ್ಡ್‌ಗಳಾಗಿ ಅಥವಾ ಇನ್ನಾವುದೋ ಸಣ್ಣಪುಟ್ಟಕೆಲಸದಲ್ಲೋ ಬದುಕು ಮತ್ತು ಕನಸು ಕಟ್ಟಿಕೊಂಡು ದಶಕಗಳಿಂದ ಈ ಮಾಯಾನಗರಿಯಲ್ಲಿ ಬೇರು ಬಿಟ್ಟಿರುವ ದೇಶದ ಬೇರೆ ಬೇರೆ ಭಾಗಗಳ ಜನರು ಇಂದು ಮುಂಬೈನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಪರಿಸರದ ಭಾಗವೇ ಆಗಿಹೋಗಿದ್ದಾರೆ. ವಲಸಿಗರ ಜೊತೆ ಬೆರೆಯುವ ಸ್ಥಳೀಯ ಜನರ ಬಹುಸಾಂಸ್ಕೃತಿಕ ಹಾಗೂ ಸಾಹಸಿ ಸ್ಫೂರ್ತಿಯೇ ಮುಂಬೈಯನ್ನು ದೇಶದ ವಾಣಿಜ್ಯ ರಾಜಧಾನಿಯನ್ನಾಗಿಸಿದೆ. ಶಿವಸೇನೆ ಪಾಲಿಸಿಕೊಂಡು ಬಂದಿರುವ ವಿನಾಶಕಾರಿ ನೀತಿಯು ಸಮಾಜದ ಸೂಕ್ಷ್ಮ ಸಂರಚನೆಯನ್ನೇ ಛಿದ್ರಗೊಳಿಸಿ ಮಹಾರಾಷ್ಟ್ರವನ್ನು ಹಾಳುಗೆಡವುವುದರ ಜೊತೆಗೆ ಶಿವಸೇನೆಯನ್ನು ಕೂಡ ನಾಶಪಡಿಸಬಲ್ಲುದು.

ಸಮಾಜದಲ್ಲಿ ಶಾಂತಿಯಿದ್ದರೆ ಮಾತ್ರ ರಾಜ್ಯ ಉದ್ಧಾರವಾಗುತ್ತದೆ ಎಂಬುದು ರಾಜಕೀಯಕ್ಕೆ ಹೊಸತಾಗಿ ಬಂದವರಿಗೂ ಗೊತ್ತು. 150 ವರ್ಷಗಳ ಹಿಂದೆ ಅಮೆರಿಕದಲ್ಲಿ ಗುಲಾಮಗಿರಿ ಮತ್ತು ಭ್ರಷ್ಟಾಚಾರದ ರಾಜಕಾರಣ ಉತ್ತುಂಗದಲ್ಲಿದ್ದಾಗ ರಾಲ್‌್ಫ ವಾಲ್ಡೋ ಎಮರ್ಸನ್‌ ‘ವ್ಯಾಪಾರವೆಂಬುದು ಎಲ್ಲೆಲ್ಲಿ ಶಾಂತಿಯಿದೆಯೋ ಅಲ್ಲಿ, ಶಾಂತಿ ಸ್ಥಾಪನೆಯಾದ ತಕ್ಷಣ, ಎಲ್ಲಿಯವರೆಗೆ ಶಾಂತಿಯಿರುತ್ತದೆಯೋ ಅಲ್ಲಿಯವರೆಗೆ ಬೆಳೆಯುವ ಗಿಡ’ ಎಂದಿದ್ದರು.

ಅಟಲ್‌ ನೋಡಿ ಉದ್ಧವ್‌ ಕಲಿಯಲಿ

ಚುನಾವಣೆಯಲ್ಲಿ ಮತದಾನ ಮಾಡುವಾಗ ಜನರು ಯಾರನ್ನೂ ಕ್ಷಮಿಸುವುದಿಲ್ಲ. ತಪ್ಪು ಪಕ್ಷವನ್ನು ಅಥವಾ ಅನೈತಿಕ ರಾಜಕಾರಣಿಯನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಜನರು ಅಧಿಕಾರಕ್ಕೆ ತಂದಿರಬಹುದಾದರೂ ಒಟ್ಟಾರೆಯಾಗಿ ಅವರು ದುರಾಸೆಯಿಂದ ಅಧಿಕಾರಕ್ಕೆ ಬಂದವರನ್ನು ದೂರ ತಳ್ಳುತ್ತಾರೆ. ಆಳುವ ಪಕ್ಷಗಳು ಸಮಾಜವನ್ನು ಒಡೆದು, ಧಾರ್ಮಿಕ ವಿಷಬೀಜ ಬಿತ್ತಿ ಅಥವಾ ಜಾತಿ, ಮತಗಳ ತುಷ್ಟೀಕರಣದ ರಾಜಕಾರಣ ನಡೆಸಿದಾಗ ಅಥವಾ ಎಲ್ಲೆಮೀರಿ ಭ್ರಷ್ಟಾಚಾರ ನಡೆಸಿದಾಗ ಅಥವಾ ಜನಾದೇಶವನ್ನು ಧಿಕ್ಕರಿಸಿ ಪಕ್ಷದಿಂದ ಪಕ್ಷಕ್ಕೆ ಹಾರಿದಾಗ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಿ ಜನರು ಪಾಠ ಕಲಿಸಿದ್ದಾರೆ.

ಅದೃಷ್ಟವಶಾತ್‌ ಈಗ ಉದ್ಧವ್‌ಗೆ ಅವಕಾಶ ದೊರೆತಿದೆ. ನಿಜವಾದ ಮುತ್ಸದ್ದಿ ನಾಯಕನಂತೆ ರಾಜ್ಯವನ್ನಾಳಿ ಬದಲಾವಣೆ ತೋರಿಸಲು ಅವರ ಕೈಗೆ ಅಧಿಕಾರ ಸಿಕ್ಕಿದೆ. ಹಿಂದಿನ ತಪ್ಪುಗಳಿಂದ ಪಾಠ ಕಲಿಯುವುದರ ಜೊತೆಗೆ ಅವರು ಮಾಜಿ ಪ್ರಧಾನಿ ವಾಜಪೇಯಿಯಂಥವರ ಉದಾಹರಣೆಯನ್ನೂ ಗಮನಿಸಬೇಕು. ಅತ್ಯಂತ ಸ್ನೇಹಶೀಲ, ಉದಾರ ಹಾಗೂ ಕನಿಕರದ ನಡವಳಿಕೆಯಿಂದ 25ಕ್ಕೂ ಹೆಚ್ಚು ಪಕ್ಷಗಳನ್ನು ಜೊತೆಗಿರಿಸಿಕೊಂಡು ಬಿಜೆಪಿಯ ಅಲ್ಪಮತದ ಸರ್ಕಾರವನ್ನು ಅವರು ಯಶಸ್ವಿಯಾಗಿ ಮುನ್ನಡೆಸಿದ್ದರು.

ರಾಮರಾಜ್ಯ ಏಕೆ ಆದರ್ಶವೆಂದರೆ

ಮಹಾರಾಷ್ಟ್ರದಲ್ಲಿ ಸಾಕಷ್ಟುಸಮಸ್ಯೆಗಳಿವೆ. ರೈತರ ಸಂಕಷ್ಟ, ಭ್ರಷ್ಟಾಚಾರ, ಮುಂಬೈನ ದಯನೀಯ ಮೂಲಸೌಕರ್ಯ ಹಾಗೂ ಸಂಕಷ್ಟದಲ್ಲಿರುವ ರಾಜ್ಯದ ಆರ್ಥಿಕತೆ, ನಕ್ಸಲ್‌ ಸಮಸ್ಯೆ... ಮುಂತಾದವುಗಳನ್ನು ಯಾವ ಸರ್ಕಾರವೂ ಸರಿಯಾಗಿ ನಿಭಾಯಿಸಿಲ್ಲ.

ರಾಮ ಒಳ್ಳೆಯ ಆಡಳಿತಗಾರನಾಗಿದ್ದ ಎಂಬ ಕಾರಣಕ್ಕೇ ರಾಮನನ್ನೂ ರಾಮರಾಜ್ಯವನ್ನೂ ಎಲ್ಲರೂ ಹೊಗಳುತ್ತಾರೆ. ಸರ್ವೇ ಭವಂತು ಸುಖಿನಃ - ಎಲ್ಲರೂ ಸಂತೋಷದಿಂದಿರಲಿ, ಯಾರಿಗೂ ಕಷ್ಟವಿಲ್ಲದಿರಲಿ, ಎಲ್ಲೆಡೆ ಶಾಂತಿ ನೆಲೆಸಲಿ - ಎಂಬ ಸಂಸ್ಕೃತದ ಉಕ್ತಿಯಂತೆ ಅವನು ರಾಜ್ಯಭಾರ ಮಾಡಿದ್ದ. ರಾಮರಾಜ್ಯದಿಂದ ಉದ್ಧವ್‌ ಠಾಕ್ರೆ ಸ್ಫೂರ್ತಿ ಪಡೆಯಬೇಕು. ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಂತೆ ನ್ಯಾಯಯುತವಾಗಿ ರಾಜ್ಯಭಾರ ಮಾಡಬೇಕು. ತನ್ಮೂಲಕ ತನ್ನನ್ನೂ ತಾನು ಬಿಡುಗಡೆಗೊಳಿಸಿಕೊಳ್ಳಬೇಕು.

- ಕ್ಯಾಪ್ಟನ್‌ ಗೋಪಿನಾಥ್‌, ಖ್ಯಾತ ಉದ್ಯಮಿ