ಕಾಫಿ ಮಾಂತ್ರಿಕನನ್ನು ನೆನೆದ ವಿಮಾನ ಕ್ರಾಂತಿ ಖ್ಯಾತಿಯ ಕ್ಯಾ. ಗೋಪಿನಾಥ್
ಸಿದ್ಧಾರ್ಥ್ ಎಂಬ ಕಾಫಿ ಲೋಕದ ಮಾಂತ್ರಿಕ ಬದುಕಿನ ಪಯಣ ಮುಗಿಸಿ ಹೊರಟಿದ್ದಾರೆ. ದೇಶದ ಮೂಲೆಮೂಲೆಗಳಲ್ಲೂ 1750 ಕಾಫಿ ಡೇ ಮಳಿಗೆಗಳ ಜಾಲವನ್ನು ಸೃಷ್ಟಿಸಿ ಯಾರೂ ಮಾಡದಂತ ಸಾಧನೆ ಮಾಡಿದ್ದಾರೆ.
ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ, ಮೆಚ್ಚಿನ ಜತೆಗಾರ ಉದ್ಯಮಿಯ ಬಗ್ಗೆ ಲೇಖನ ಬರೆಯಲು ಹೊರಟರೆ ಮನದೊಳಗೆ ಭಯಾನಕ ಯೋಚನೆಯೊಂದು ಹೊಂಚು ಹಾಕುತ್ತಿರುತ್ತದೆ- ‘ನಾನೂ ಅದೇ ನದಿಯಲ್ಲಿ ತೇಲುವಂತಾಗಿದ್ದರೆ. ’ಜೀವನ ಸರಳವಲ್ಲ.
ಅಮೆರಿಕ ಮಾಜಿ ಅಧ್ಯಕ್ಷ ಜಾನ್ ಕೆನಡಿ ಹೇಳಿದಂತೆ, ಜೀವನ ಅಂದುಕೊಂಡಂತೆ ನಡೆಯುವುದಿಲ್ಲ. ಕೆಲವೊಂದು ತಡೆಯಲಾಗದ ಸಂದರ್ಭಗಳು, ಮುಜುಗರಕ್ಕೆ ದೂಡುವ ಹೊಡೆತಗಳು, ಅಸಾಧ್ಯ ಎನ್ನುವಂತಹ ಸನ್ನಿವೇಶಗಳು, ಆತ್ಮೀಯರು ಹಾಗೂ ಬಂಧುಗಳು ಆಡುವ ಕ್ರೂರ ಮಾತುಗಳು ಯಾರನ್ನೇ ಆಗಲಿ ಕಟ್ಟಕಡೆಯ ಅಂಚಿಗೆ ದೂಡಿಬಿಡುತ್ತವೆ. ಎಲ್ಲ ಉದ್ಯಮಿಗಳೂ ಈ ಸಮಸ್ಯೆ ಎದುರಿಸುತ್ತಾರೆ. ಅಪನಂಬಿಕೆ ಹಾಗೂ ಹತಾಶೆಯ ಘಟ್ಟವನ್ನು ಪ್ರತಿ ಮಾನವರೂ ಹಾದು ಹೋಗುತ್ತಾರೆ. ಆತ್ಮ ಹಾಗೂ ಶರೀರ ಎರಡೂ ಸೋಲೊಪ್ಪಿಕೊಂಡುಬಿಡುತ್ತವೆ. ಆದಾಗ್ಯೂ ನಾವು ಅದನ್ನು ತಡೆದು, ಸಮಾಧಾನಪಡಿಸಿಕೊಳ್ಳುವ ಧೈರ್ಯ ತೋರುತ್ತೇವೆ. ಪುಟಿದೇಳುತ್ತೇವೆ.
ಆತ್ಮ ಕೊಂದ ಉದ್ಯಮಿಗಳು ಹಲವರು: ಸಿದ್ಧಾರ್ಥ ಅವರ ಹಾದಿಯೇ ಹಿಡಿದರು!
ಸವಾಲನ್ನು ಮೆಟ್ಟಿ ನಿಂತಿದ್ದರೆ
ಈಗಲೂ ನನ್ನನ್ನು ಒಂದು ಭಾವನೆ ಕಾಡುತ್ತಿದೆ. ತಮ್ಮ ಚಿಂತನೆಗಳು, ತವಕ- ತಲ್ಲಣಗಳನ್ನು ಸಿದ್ಧಾರ್ಥ ಅವರು ತಾವಾಗಿಯೇ ಆತ್ಮೀಯ ಮಿತ್ರರು ಅಥವಾ ಸಮೀಪವರ್ತಿಗಳ ಬಳಿ ಹೇಳಿಕೊಂಡಿದ್ದರೆ ಈಗ ನಡೆದಿರುವಂತಹ ದುರಂತ ಸಂಭವಿಸುತ್ತಿರಲಿಲ್ಲ.
ಸವಾಲನ್ನು ಮೆಟ್ಟಿನಿಂತು ಎದುರಿಸಿದ್ದರೆ, ಈ ಹಿಂದಿನಂತೆಯೇ ತಮ್ಮ ಸಂಕಷ್ಟದಿಂದ ಅವರು ನಿಶ್ಚಿತವಾಗಿಯೂ ಹೊರಬರುತ್ತಿದ್ದರು. ಆ ಭಯಾನಕ ಜಿಗಿತವನ್ನು ಅವರು ಕೈಗೊಳ್ಳದೇ ಇದ್ದರೆ, ಬಿಕ್ಕಟ್ಟಿನಿಂದ ಹೊರಬರುವ ದಾರಿಯನ್ನು ಅವರು ಕಂಡುಕೊಳ್ಳುತ್ತಿದ್ದರು.
ಅರ್ಧ ತಾಸು ಕಾರಲ್ಲೇ ಮಾತನಾಡಿದ್ದ ಸಿದ್ಧಾರ್ಥ!
90ರ ದಶಕದಲ್ಲಿ ಸಿದ್ಧಾರ್ಥ ಹಾಗೂ ನನ್ನ ನಡುವೆ ನಡೆದ ಮೊದಲ ಭೇಟಿ ಈಗಲೂ ಸ್ಫುಟವಾಗಿದೆ. ಮೈಂಡ್ ಟ್ರೀ ಕಂಪನಿಯಲ್ಲಿ ಮೊದಲ ಬಾರಿಗೆ ಹೂಡಿಕೆ ಮಾಡಿದ್ದ ಸಿದ್ಧಾರ್ಥ, ಬೆಂಗಳೂರಿನಲ್ಲಿ ತಮ್ಮ ಟೆಕ್‌ಪಾರ್ಕ್ನಲ್ಲಿ ನಡೆಯಲಿದ್ದ ಉದ್ಘಾಟನಾ ಸಮಾರಂಭಕ್ಕೆ ಬ್ಯಾಂಕ್ ಆಫ್ ಅಮೆರಿಕದ ಸಿಇಒ ಅವರನ್ನು ಕರೆತರಲು ಹೆಲಿಕಾಪ್ಟರ್ ಅನ್ನು ಬಾಡಿಗೆ ಪಡೆಯಲೆಂದು ನನ್ನಲ್ಲಿಗೆ ಬಂದಿದ್ದರು.
ಎತ್ತರದ, ತೆಳು ಗಾತ್ರದ, ಬುದ್ಧಿವಂತಿಕೆಯ, ಉತ್ತಮ ನಡತೆಯ ವ್ಯಕ್ತಿ. ಅವರ ಉದ್ಯಮ ಕೌಶಲ್ಯದ ಬಗ್ಗೆ ನನಗೆ ಗೊತ್ತಿಲ್ಲದೆಯೇ ಇಷ್ಟಪಟ್ಟೆ. ಅವರೊಬ್ಬ ತಂತ್ರಜ್ಞಾನ ಕ್ಷೇತ್ರದ ವ್ಯಕ್ತಿ ಆಗಿರಲಿಲ್ಲ. ಐಐಎಂನಿಂದ ಎಂಬಿಎ ಪದವಿ ಪಡೆದವರಾಗಿರಲಿಲ್ಲ.
ಅಮೆರಿಕದ ಹಾರ್ವರ್ಡ್‌ನಂತಹ ಶಿಕ್ಷಣ ಸಂಸ್ಥೆಗಳಿಂದ ಓದಿ ಬಂದವರಾಗಿರಲಿಲ್ಲ. ಸ್ಥಳೀಯವಾಗಿ ಪದವಿ ಪಡೆದ ವ್ಯಕ್ತಿ. ವೆಂಚರ್ ಕ್ಯಾಪಿಟಲಿಸ್ಟ್‌ಗಳು ಭಾರತದಲ್ಲಿ ಇಲ್ಲದ ಕಾಲದಲ್ಲಿ ವೆಂಚರ್ ಕ್ಯಾಪಿಟಲಿಸ್ಟ್ (ಕಂಪನಿಯಲ್ಲಿ ಬಂಡವಾಳ ತೊಡಗಿಸಿ, ಅದರ ಪಾಲುದಾರರಾಗುವುದು) ಆಗುವ ಧೈರ್ಯ ಪ್ರದರ್ಶಿಸಿದವರು. ವೆಂಚರ್ ಕ್ಯಾಪಿಟಲಿಸ್ಟ್ ಮಾತ್ರವೇ ಅಲ್ಲ, ಅವರು ಉದ್ಯಮಿ ಕೂಡ ಆಗಿದ್ದರು.
ಮಹಾ ದೂರದೃಷ್ಟಿಯ ವ್ಯಕ್ತಿ
ಮುಂದಿನ ಎರಡೂವರೆ ದಶಕಗಳ ಕಾಲ ಉದ್ಯಮಿಗಳಾಗಿ, ಒಂದೇ ನಗರದವರಾಗಿ, ಒಂದೇ ಜಿಲ್ಲೆಯವರಾಗಿ ನಮ್ಮ ಹಾದಿಗಳು ಮಿಳಿತವಾದವು. ಸಾಮಾಜಿಕ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದರೆ ಸ್ವೀಕರಿಸುತ್ತಿದ್ದರು. ಆದರೆ ಅರ್ಧಗಂಟೆಗಿಂತ ಹೆಚ್ಚು ಹೊತ್ತು ನಿಲ್ಲುತ್ತಿರಲಿಲ್ಲ. ಅವರೊಬ್ಬ ಸಂಕೋಚ ಸ್ವಭಾವದ ವ್ಯಕ್ತಿ.
‘ಇವರ ಕಿರುಕುಳದಿಂದಲೇ ಕಾಫಿ ಡೇ ಕಿಂಗ್ ಸಿದ್ಧಾರ್ಥ ಆತ್ಮಹತ್ಯೆ’
ಮದ್ಯ ಸೇವಿಸುತ್ತಿರಲಿಲ್ಲ. ಇತರರ ಜತೆ ಕಾಲ ಕಳೆಯುತ್ತಾ ಕೂರುತ್ತಿರಲಿಲ್ಲ. ಆಡಂಬರ ತೋರಿಸದೇ ಸದ್ದು-ಗದ್ದಲವಿಲ್ಲದೇ ನಿರ್ಗಮಿಸಿಬಿಡುತ್ತಿದ್ದರು. ಹಲವು ವರ್ಷಗಳ ಕಾಲ ಅವರನ್ನು ಗಮನಿಸಿದ ನಂತರ ಅವರ ಬಗ್ಗೆ ನನ್ನ ಮನಸೂರೆಗೊಂಡಿದ್ದು ಏನೆಂದರೆ, ಅವರ ಉದ್ಯಮ ಕೌಶಲ್ಯ.
ಉದ್ಯಮದ ಮೇಲಿನ ಭದ್ರವಾದ ಹಿಡಿತ. ರಾಜಕಾರಣ ಹಾಗೂ ಅದರ ಅಪಾಯಕಾರಿ ಒಳಸುಳಿಗಳನ್ನು ಅರ್ಥೈಸಿಕೊಳ್ಳುವ ಚತುರತೆ. ಸಂಸ್ಥೆಯನ್ನು ಕಟ್ಟಿ, ತನ್ನ ಸುತ್ತ ಸಮರ್ಥ ವ್ಯಕ್ತಿಗಳಿರುವಂತೆ ನೋಡಿಕೊಳ್ಳುವ ಸ್ಥಳೀಯ ಮ್ಯಾನೇಜ್‌ಮೆಂಟ್ ತೀಕ್ಷ$್ಣಬುದ್ಧಿ. ದಣಿವರಿಯದ ಶಕ್ತಿ. ಇದೆಲ್ಲಕ್ಕಿಂತ ಮುಖ್ಯವಾಗಿ, ತಾನು ಹಾಕಿಕೊಂಡ ಗುರಿಯನ್ನು ತಲುಪಲು ಬೇಕಾದ ಬದ್ಧತೆ ಹಾಗೂ ಅಪರೂಪÜವಾಗಿ ಕಾಣುವ ಮಹಾ ದೂರದೃಷ್ಟಿ.
ಒಂದೇ ತಾಸಲ್ಲಿ ಡೀಲ್ ಓಕೆ ಅಂದರು
ಯಾವುದೇ ಪ್ರಸ್ತಾವ ಅಥವಾ ಉದ್ದಿಮೆ ಆಲೋಚನೆಯನ್ನು ಸಿದ್ಧಾರ್ಥ ತಕ್ಷಣವೇ ಹಿಡಿದಿಡುತ್ತಿದ್ದರು. ವಿಷಯ ಎಲ್ಲಿ ನಿಂತಿತ್ತೋ ಅಲ್ಲಿಗೇ ನೇರವಾಗಿ ಹೋಗುತ್ತಿದ್ದರು. ಇದಕ್ಕೆ ನನ್ನದೇ ವ್ಯವಹಾರದ ಒಂದು ಉದಾಹರಣೆ ನೀಡುತ್ತೇನೆ. ಏರ್ ಡೆಕ್ಕನ್ ಎಂಬ ಅಗ್ಗದ ದರದ ವಿಮಾನಯಾನ ಸಂಸ್ಥೆಯನ್ನು ನಾನು ಪ್ರಾರಂಭಿಸಿದಾಗ, ವಿಮಾನದೊಳಗೆ ಪ್ರಯಾಣಿಕರಿಗೆ ನೀರು ಸೇರಿದಂತೆ ಎಲ್ಲ ವಸ್ತುಗಳನ್ನು ನಾನು ಮಾರಾಟ ಮಾಡಲು ಬಯಸಿದ್ದೆ.
ಆದರೆ ಆಗ ಬೇರೆ ವಿಮಾನ ಕಂಪನಿಗಳು ಊಟ ಅಥವಾ ತಿನಿಸುಗಳನ್ನು ತಾಜ್ ಆಥವಾ ಒಬೆರಾಯ್ ಎಂಬ ಫೈವ್ ಸ್ಟಾರ್ ಕೇಟರಿಂಗ್ ಸಂಸ್ಥೆಗಳಿಂದ ಖರೀದಿಸಿ ಪ್ರಯಾಣಿಕರಿಗೆ ಉಚಿತವಾಗಿ ನೀಡುತ್ತಿದ್ದವು. ಆಗ ಕೆಫೆ ಕಾಫಿ ಸಂಸ್ಥೆ ಪ್ರಾಯಶಃ 50-60ಕ್ಕಿಂತ ಕಡಿಮೆ ಮಳಿಗೆಗಳನ್ನು ಹೊಂದಿತ್ತು. ವೇಗವಾಗಿ ವಿಸ್ತರಣೆ ಹೊಂದುತ್ತಿತ್ತು. ಸಿದ್ಧಾರ್ಥಗೆ ನನ್ನ ಪ್ರಸ್ತಾವನೆ ತುಂಬಾ ಸರಳವಾಗಿತ್ತು. ಕೆಫೆ ಕಾಫಿ ಡೇಗೆ ನಾನು ಏರ್‌ಬಸ್ ವಿಮಾನವೆಂಬ ಶಾಪಿಂಗ್ ಮಾಲ್ ಅನ್ನು ಬಾಡಿಗೆ, ವಿದ್ಯುತ್ ಅಥವಾ ನೀರಿನ ಶುಲ್ಕ ಅಥವಾ ತೆರಿಗೆ ಅಥವಾ ಸೆಸ್ ಇಲ್ಲದೇ ಸಂಪೂರ್ಣ ಒಳಾಂಗಣ ವಿನ್ಯಾಸದೊಂದಿಗೆ ಶೂನ್ಯ ಬಂಡವಾಳದಲ್ಲಿ ನೀಡುತ್ತೇನೆ.
ನನ್ನ ಕಂಪನಿಯ ಗಗನಸಖಿಯರೇ ಗ್ರಾಹಕರಿಗೆ ಸೇಲ್ಸ್ ಗಲ್‌ರ್‍ಗಳಾಗಿರುತ್ತಾರೆ. ಸಿದ್ಧಾರ್ಥ ಅವರು ತಿನಿಸು ಹಾಗೂ ಕಾಫಿಯನ್ನು ಮಾರಿಕೊಳ್ಳಬಹುದು. ಏನೇ ನಷ್ಟವಾಗಲಿ, ವ್ಯರ್ಥವಾಗಲಿ, ಲಾಭ ಬರಲಿ ಶೇ.30ರಷ್ಟುಕಮಿಷನ್ ಮಾತ್ರ ನನಗೆ ನೀಡಬೇಕು.
ಅದನ್ನು ಕೇಳಿ ಸಿದ್ಧಾರ್ಥ ಮುಖದಲ್ಲಿ ಮಂದಹಾಸ ಅರಳಿತು. ತಮ್ಮ ಸಂಸ್ಥೆ ವಿಸ್ತರಣೆಗೆ ಈ ಆಫರ್ ದೊಡ್ಡ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದೆ ಎಂಬುದನ್ನು ಅವರು ಕಂಡುಕೊಂಡರು. ಅವರ ಮನಸ್ಸಿನಲ್ಲಿ ನೂರಾರು ಕಾಫಿ ಡೇ ಮಳಿಗೆಗಳು ತಲೆ ಎತ್ತುತ್ತಿರುವ ದೃಶ್ಯ ಗೋಚರವಾಗಿರಬೇಕು. ಒಂದು ತಾಸಿನೊಳಗೆ ಡೀಲ್‌ಗೆ ಒಪ್ಪಿಗೆ ಸೂಚಿಸಿದರು.
ಅಸಾಮಾನ್ಯ ಸಾಧನೆಯದು
ದೇಶದ ಮೂಲೆಮೂಲೆಗಳಲ್ಲೂ 1750 ಕಾಫಿ ಡೇ ಮಳಿಗೆಗಳ ಜಾಲವನ್ನು ಸೃಷ್ಟಿಸಿ ಅವರು ಮಾಡಿದ ಯಾರೂ ಮಾಡದಂತ ಸಾಧನೆ ನಿಮ್ಮನ್ನು ಅಚ್ಚರಿಗೆ ದೂಡುತ್ತದೆ. ಕಾಫಿ ಡೇ ಆರಂಭವಾದ ಮೊದಲ ಏಳೆಂಟು ವರ್ಷಗಳಲ್ಲಿ ಅವರ ಬಳಿ ಆರೇಳು ಮಳಿಗೆಗಳು ಇದ್ದವು. ಅವರ ಮೊದಲ ಮಳಿಗೆ ಆರಂಭವಾಗಿದ್ದು ಬೆಂಗಳೂರಿನ ಪ್ರಸಿದ್ಧ ಬ್ರಿಗೇಡ್ ರಸ್ತೆಯಲ್ಲಿ. ಯುವಕರನ್ನು ಸೆಳೆಯುವ ಸಲುವಾಗಿ ಆರಂಭಿಕ ಮಳಿಗೆಗಳನ್ನು ಅವರು ಇಂಟರ್ನೆಟ್ ಕೆಫೆಗಳೆಂದು ಕರೆದರು.
ಅಧ್ಯಯನ ಹಾಗೂ ಚಿಂತನೆಗಳ ಮೂಲಕ ಆ ಉದ್ದಿಮೆ ಮಾದರಿಗೆ ಮರುಸ್ಪರ್ಶ ನೀಡಿದರು. ಹೊಸ ಆಲೋಚನೆಗಳೊಂದಿಗೆ ವೇಗವಾಗಿ ವಿಸ್ತರಿಸಿದರು. ಫ್ರಾಂಚೈಸಿ ಮಾದರಿಯ ಬದಲಾಗಿ ಮಾಲೀಕತ್ವದ ಮಾದರಿ ಆದಾಗಿತ್ತು. ಜಾಗ ಖರೀದಿಸಿ, ಮೂಲಸೌಕರ್ಯ ನಿರ್ಮಿಸಿ, ಸುಂದರ ವಿನ್ಯಾಸ ಹಾಗೂ ಬ್ರ್ಯಾಂಡ್ ಮಾಡಿ, ಮಾನವ ಸಂಪನ್ಮೂಲವನ್ನು ನೇಮಕ ಮಾಡಿಕೊಂಡು, ಐಟಿ ಮೂಲಸೌಕರ್ಯ ಕಲ್ಪಿಸಿ, ಸಾಗಣೆ ವ್ಯವಸ್ಥೆ ರೂಪಿಸಿ, ಬೇಗ ಹಾಳಾಗುವ ವಸ್ತುಗಳನ್ನು ಹೊಂದಿದ ಆಹಾರ ಉದ್ಯಮದಲ್ಲಿ ಸಂಕೀರ್ಣ ಸರಬರಾಜು ಸರಣಿಯನ್ನು ಸೃಷ್ಟಿಸಿದರು. ಸಾಮಾನ್ಯ ವ್ಯಕ್ತಿಗಳಿಂದ ಆಗದ ಕೆಲಸವದು.
ಸಾವಲ್ಲೂ ಎಂಥಾ ಪ್ರಾಮಾಣಿಕತೆ!
ಮತ್ತೊಮ್ಮೆ ಅದೇ ಚಿಂತೆ ಕಾಡುತ್ತಿದೆ. ಅಂತಹ ಅಸಾಧಾರಣ ವ್ಯಕ್ತಿ, ಅಪಾರ ಪ್ರತಿಕೂಲತೆಯನ್ನು ಅದಾಗಲೇ ಎದುರಿಸಿರುವ ವ್ಯಕ್ತಿ (ಅಪಾಯಕಾರಿ ಹಾದಿಯನ್ನು ಎದುರಿಸದೇ ದಿಟ್ಟತನ, ಬಲಿಷ್ಠ ಇಚ್ಛಾಶಕ್ತಿ ಹಾಗೂ ಭಂಡ ಧೈರ್ಯವಿಲ್ಲದೇ ಅಷ್ಟೊಂದು ತಲೆತಿರುಗುವ ಎತ್ತರಕ್ಕೆ ಯಾರೂ ತಲುಪಲಾಗದು) ಜೀವನ ಕೊನೆಗಾಣಿಸಿಕೊಳ್ಳುವ ನಿರ್ಧಾರ ಕೈಗೊಂಡಿದ್ದು ಏಕೆ? ಅಲ್ಪದೃಷ್ಟಿಯ ಸಂಸ್ಥೆಗಳು ಲೇವಾದೇವಾಗಾರರಾಗಿ ಬದಲಾಗಿ ಸಂಚಕಾರ ತಂದವೇ? ‘ಒಬ್ಬ ಖಾಸಗಿ ಷೇರು ಹೂಡಿಕೆದಾರ, ಒಬ್ಬ ಸ್ನೇಹಿತ ನಾನು ಹಿಂತಿರುಗಿ ನೋಡದ ಸ್ಥಳಕ್ಕೆ ನನ್ನನ್ನು ದೂಡಿದರು.
ಇನ್ನು ಸಹಿಸಿಕೊಳ್ಳಲಾರೆ’ ಎಂದು ಸಿದ್ಧಾರ್ಥ ಅವರು ಬರೆದಿರುವ ಪತ್ರ ಹೇಳುತ್ತದೆ. ಇತರೆ ಸಾಲಗಾರರ ಪ್ರಚಂಡ ಒತ್ತಡ ಸೇರಿದ್ದು ಅವರು ಈ ಪದಗಳನ್ನು ಬಳಸುವಂತೆ ಮಾಡಿತೆ? ಅವರು ಹೆಸರಿಸಿರುವ ತೆರಿಗೆ ಇಲಾಖೆ ಇದಕ್ಕೆಲ್ಲಾ ಮೂಲವೇ? ಅವರ ವಿದಾಯ ಮಾತುಗಳು ಮನಸ್ಪರ್ಶಿ ಹಾಗೂ ನೋವು ತರಿಸುತ್ತವೆ. ‘ನನ್ನ ಉದ್ದೇಶ ಎಂದಿಗೂ ಯಾರಿಗೆ ಆಗಲೀ ಮೋಸ ಮಾಡುವುದು ಅಥವಾ ದಾರಿ ತಪ್ಪಿಸುವುದಾಗಿರಲಿಲ್ಲ’ ಎನ್ನುವ ಆ ಪತ್ರ, ಆಸ್ತಿಗಿಂತ ಅಧಿಕವಾಗಿರುವ ಸಂಪತ್ತನ್ನು ಬಳಸಿ ಎಲ್ಲರ ಸಾಲ ತೀರಿಸಿ ಎನ್ನುತ್ತದೆ. ಸಾವನ್ನು ಅಪ್ಪಿಕೊಳ್ಳುವಾಗಲೂ ಎಂತಹ ಪ್ರಾಮಾಣಿಕತೆ.
ನಾವೆಲ್ಲಾ ಮುಖವಾಡ ಧರಿಸುತ್ತೇವೆ. ಸನ್ನಿವೇಶಕ್ಕೆ ಅನುಗುಣವಾಗಿ ವಿಭಿನ್ನ ಮುಖವಾಡ. ಒಂದು ಜನರಿಗಾಗಿ. ಮತ್ತೊಂದು ಸ್ನೇಹಿತರು ಹಾಗೂ ಬಂಧುಗಳ ಜತೆ ಇದ್ದಾಗ. ‘ಪ್ರತಿಯೊಬ್ಬ ಮನುಷ್ಯ ಮೂರು ವ್ಯಕ್ತಿತ್ವ ಹೊಂದಿರುತ್ತಾನೆ’ ಎಂದು ಫ್ರೆಂಚ್ ಕಾದಂಬರಿಕಾರ ಆಲ್ಫೋನ್ಸ್ ಕಾರ್ ಹೇಳುತ್ತಾರೆ.
ಕಾಫಿಯ ಸಾಂಸ್ಕೃತಿಕ ನೋಟವನ್ನೇ ಬದಲಿಸಿದರು
ವೇಷ ಇಲ್ಲದೇ ನಾವು ಕೆಲವೊಮ್ಮೆ ಇರಬಹುದೇ? ತನಗೆ ಮುಖವಾಡ ಬೇಡ ಎಂದು ಸಿದ್ಧಾರ್ಥಗೆ ಮಾತ್ರ ಅನಿಸಿದೆಯಾ? ವಿಫಲನಾದೆ ಎಂದು ಅನಿಸಿದಾಗ ಅವರು ಯಾರ ಬಳಿಯಾದರೂ ನೋವು ತೋಡಿಕೊಂಡಿದ್ದರಾ? ಯಾರೂ ಅಸ್ತಿತ್ವದಲ್ಲಿಲ್ಲದ ಪಾನೀಯ ಗ್ರಾಹಕ ವಿಭಾಗ (ಬೀವರೇಜ್ ಕನ್ಸೂಮರ್ ಸ್ಪೇಸ್)ದಲ್ಲಿ ಹೊಸ ಮಾರುಕಟ್ಟೆಯನ್ನು ಸೃಷ್ಟಿಸುವ ಮೂಲಕ ತಾನಾಗಲೇ ಗೆದ್ದಾಗಿದೆ ಎಂದು ಅವರಿಗೆ ಅನ್ನಿಸಿದೆಯಾ? ಇವತ್ತಿನ ಯುವಕರು ಪರಸ್ಪರ ಭೇಟಿ ಮಾಡಿ, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮ ಕಾಫಿ ಮಳಿಗೆಗಳ ಮೂಲಕ ಹೊಸ ಸಾಂಸ್ಕೃತಿಕ ಸ್ಥಳ ಸೃಷ್ಟಿಸುವಲ್ಲಿ ಭಾರಿ ಯಶಸ್ವಿಯಾದೆ ಎಂದು ಅವರಿಗೆ ಅನಿಸಿದೆಯಾ? ಅವರೇನಾದರೂ ಇಂದು ನಮ್ಮ ಜತೆಗಿದ್ದರೆ, ಇದನ್ನೆಲ್ಲಾ ಅವರು ಯಾರಿಗೂ ಸಾಬೀತುಪಡಿಸಬೇಕಾಗಿರಲಿಲ್ಲ.
ಕಾಫಿ ಡೇ ಉದಯಕ್ಕೂ ಮುನ್ನ ದಕ್ಷಿಣದ ಮಧ್ಯಮ ವರ್ಗ ಕಾಫಿ ಹೀರುತ್ತಾ ದಿನಪತ್ರಿಕೆಗಳನ್ನು ಓದಲು ಉಡುಪಿ ಹೋಟೆಲ್‌ಗಳಿಗೆ ಹೋಗುತ್ತಿತ್ತು. ಸ್ನೇಹಿತರ ಜತೆ ಮಾತನಾಡುತ್ತಾ ಕಾಫಿ ಸೇವಿಸುತ್ತಿತ್ತು. ಕನ್ನಡ ಲೇಖಕರಿಗೂ ಉಡುಪಿ ಹೋಟೆಲ್‌ಗಳೇ ಒಂದೆಡೆ ಸೇರುವ ತಾಣಗಳಾಗಿದ್ದವು.
ಇಂಗ್ಲಿಷ್ ಮಾಧ್ಯಮದ ಪತ್ರಕರ್ತರು ಹಾಗೂ ಲೇಖಕರು ಕಂಟೋನ್ಮೆಂಟ್ ಪ್ರದೇಶದ ಆಯ್ದ ಕಾಫಿ ಶಾಪ್‌ಗಳಿಗೆ ಹೋಗುತ್ತಿದ್ದರು. ಆಧುನಿಕ ಯುವಕರು ಅಲ್ಲಿಗೆ ಎಂದೂ ಹೋಗಿಲ್ಲ. ಎಲ್ಲೆಡೆ ಕಾಫಿ ಶಾಪ್‌ಗಳನ್ನು ತೆರೆದು ದಕ್ಷಿಣ ಭಾರತ ಹಾಗೂ ಕೆಲವೊಂದಿಷ್ಟುಮಂದಿ ಮಾತ್ರವೇ ಕಾಫಿ ಕುಡಿಯುತ್ತಿದ್ದ ಉತ್ತರ ಭಾರತದಲ್ಲೂ ಇಡೀ ಸಾಂಸ್ಕೃತಿಕ ನೋಟವನ್ನೇ ಸಿದ್ಧಾರ್ಥ ಅವರು ಬದಲಿಸಿದರು.
ಸಾಲವನ್ನೆಲ್ಲಾ ತೀರಿಸಲು ತಮ್ಮ ಇಡೀ ಸಾಮ್ರಾಜ್ಯದಿಂದಲೇ ಹೊರನಡೆದಿದ್ದರೂ, ಸಿದ್ಧಾರ್ಥ ಸಾಧಿಸಿರುವ ಎತ್ತರಕ್ಕಿಂತ ದೊಡ್ಡದಾದ ಪರ್ವತ, ದೊಡ್ಡ ಅಥವಾ ಅತ್ಯುತ್ತಮ ವೈಭವ ಕೂಡ ಇರುತ್ತಿರಲಿಲ್ಲ. ಅವರ ಪರಂಪರೆ ಉಳಿಯುತ್ತಿತ್ತು.