ಆರ್ಥಿಕತೆಯನ್ನು ಮುನ್ನಡೆಸುವುದು ಯಾವುದು? ಭರವಸೆ. ಭವಿಷ್ಯ ಚೆನ್ನಾಗಿದೆ ಎಂಬ ಭರವಸೆಯೇ ದೇಶದ ಆರ್ಥಿಕತೆ ಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಉದ್ಯಮಿಗಳು ತಮ್ಮ ಜೀವಮಾನದ ಉಳಿತಾಯವನ್ನು ಈ ನಂಬಿಕೆಯಲ್ಲೇ ಹೂಡಿಕೆ ಮಾಡುತ್ತಾರೆ. ಉಡುಪಿ ಹೋಟೆಲ್‌ನಿಂದ ಹಿಡಿದು ಉಬರ್ ಕ್ಯಾಬ್‌ವರೆಗೆ ಪ್ರತಿಯೊಂದು ಉದ್ಯಮವೂ ಸುರಂಗದ ಕೊನೆಯಲ್ಲಿ ಬೆಳಕಿದೆ ಎಂಬ ನಂಬಿಕೆಯಲ್ಲೇ ನಡೆಯುತ್ತವೆ. 

ಭರವಸೆಯ ಮೇಲೇ ಆರ್ಥಿಕತೆ ನಡೆಯುತ್ತೆ
ಆರ್ಥಿಕತೆ ಚೆನ್ನಾಗಿದ್ದಾಗ ನೀವು ಕೆಲಸಕ್ಕೆ ಸೇರಿದಾಕ್ಷಣ ಸಾಲ ಮಾಡಿ ಕಾರು ಕೊಳ್ಳುತ್ತೀರಿ. ಹಳ್ಳಿಯಲ್ಲಿರುವ ಸಣ್ಣ ಉದ್ಯಮಿ ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳುತ್ತಾನೆ. ಒಂದು ಕೆಲಸ ಹೋದರೆ ಇನ್ನೊಂದು ಕೆಲಸ ಸಿಗುತ್ತದೆ ಎಂಬ ಆಶಾಭಾವನೆ ನಿಮಗಿರುತ್ತದೆ. ಮುಂದೇನಾಗುತ್ತದೆಯೋ ಎಂದು ಹೆಚ್ಚು ತಲೆಕೆಡಿಸಿಕೊಳ್ಳದೆ ಸಣ್ಣ ವಯಸ್ಸಿನಲ್ಲೇ ಫ್ಲ್ಯಾಟ್ ಕೊಳ್ಳುತ್ತೀರಿ. ೩೦ ವರ್ಷದ ಹಿಂದೆ ಹೀಗಿರಲಿಲ್ಲ. ಆಗ ನೌಕರವರ್ಗದವರು ನಿವೃತ್ತಿ ಸಮೀಪಿಸಿದಾಗ ಮನೆ ಕಟ್ಟಿಸುತ್ತಿದ್ದರು. ಕಾರಿನ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ. ಈಗ ಕೆಲಸ ಹೋದರೂ, ಉದ್ದಿಮೆ ಚೆನ್ನಾಗಿ ನಡೆಯದೇ ಇದ್ದರೂ ಹೇಗೋ ತೇಲಿಕೊಂಡು ಮುಂದೆ ಸಾಗಬಹುದು ಎಂಬ ಭರವಸೆ ಜನರಲ್ಲಿದೆ.

ಈ ಭರವಸೆಯೇ ಛಿದ್ರವಾದರೆ ನೀವು ಕಾರು ಕೊಳ್ಳಲು ಅಥವಾ ಹೊಸ ಟೀವಿ ಖರೀದಿಸಲು ಹೋಗುವುದಿಲ್ಲ. ಏಕೆಂದರೆ ಆರ್ಥಿಕತೆ ಬಿದ್ದುಹೋಗುತ್ತದೆ ಎಂಬ ಭಯ ಹಾಗೂ ಅಭದ್ರತೆ ನಿಮ್ಮನ್ನು ಕಾಡುತ್ತದೆ. ಪದೇಪದೇ ಪ್ರಕೃತಿಯಿಂದ ನಷ್ಟ ಅನುಭವಿಸಿದರೂ ರೈತರು ನಾಳೆಯಲ್ಲಿ ಭರವಸೆ ಹೊಂದಿರುವುದರಿಂದಲೇ ಉತ್ತಿ ಬಿತ್ತಿ ಮಾಡುತ್ತಾರೆ. ಆರ್ಥಿಕತೆಯ ಕತೆ ಏನಾಗುತ್ತದೆಯೋ ಎಂಬ ಹೆದರಿಕೆ ಶುರುವಾದರೆ ಆ ಋಣಾತ್ಮಕತೆಯೇ ದೊಡ್ಡ ನಷ್ಟ ಉಂಟುಮಾಡುತ್ತದೆ.
 

ನಿಮ್ಮ ಸಿಮ್ ಕಾರ್ಡ್ ಸೇಫ್: ಮೋದಿ ಸರ್ಕಾರದಿಂದ ಬಿಗ್ ರಿಲೀಫ್!

ನಾನು ಎರಡು ಸಂಗತಿಗಳ ಆಧಾರದಲ್ಲಿ ಇದನ್ನು ಹೇಳುತ್ತಿದ್ದೇನೆ. ಒಂದು, ಬಲ ಅಥವಾ ಎಡಪಂಥೀಯ ದಕ್ಷ ಸರ್ವಾಧಿಕಾರಕ್ಕಿಂತ ಸುವ್ಯವಸ್ಥಿತವಲ್ಲದ ಪ್ರಜಾಪ್ರಭುತ್ವ ಒಳ್ಳೆಯದು. ಎರಡು, ಅಂತಹ ಪ್ರಜಾಪ್ರಭುತ್ವದಲ್ಲಿ ನ್ಯೂನತೆಗಳಿದ್ದರೂ ತಕ್ಕಮಟ್ಟಿಗಿನ ಸ್ಥಿರ ಆರ್ಥಿಕ ನೀತಿಗಳು ಹಾಗೂ ಬ್ಯಾಂಕಿಂಗ್, ಷೇರುಪೇಟೆ, ನ್ಯಾಯಾಂಗ ವ್ಯವಸ್ಥೆ, ಮಾಧ್ಯಮ ಮುಂತಾದವುಗಳ ನಿರ್ವಹಣೆಗೆ ಮುಕ್ತ ಮತ್ತು ಸ್ವಾಯತ್ತ ಸಂಸ್ಥೆಗಳ ಒಂದು ಚೌಕಟ್ಟಿರುತ್ತದೆ. ಅಂತಹ ಪ್ರಜಾಪ್ರಭುತ್ವದಲ್ಲಿ, ಆರ್ಥಿಕತೆ ಕೆಳಮುಖವಾಗಿ ಸಾಗತೊಡಗಿದಾಗ ಮೊದಲು ಕಾಣುವ ಲಕ್ಷಣಗಳೇ ಜನರಲ್ಲಿನ ಆತಂಕ, ಅಸಹನೆ, ನಿರಾಸೆ...

'ನಾಯಕನೆಂದರೆ ಭರವಸೆಗಳ ಡೀಲರ್' ಎಂದು ನೆಪೋಲಿಯನ್ ಬೋನಾಪಾರ್ಟೆ ಹೇಳಿದ್ದರು. ಇಂದು ಆರ್ಥಿಕತೆಯ ವಿಷಯದಲ್ಲಿ ಬಹುಪಾಲು ಜನರು ಭರವಸೆ ಕಳೆದುಕೊಂಡು ಆತಂಕ ಹಾಗೂ ಅನುಮಾನದಲ್ಲಿ ಸಿಲುಕಿದ್ದಾರೆ.

ಚೋದ್ಯವೆಂದರೆ, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಹಗರಣಗಳಿಂದಾಗಿ ಜನರು ಭರವಸೆ ಕಳೆದುಕೊಂಡಿದ್ದಾಗ ಅವರಲ್ಲಿ ಭರವಸೆ ಮೂಡಿಸಿಯೇ ಈಗಿನ ಕೇಂದ್ರ ಸರ್ಕಾರ ಅಧಿಕಾರ ಹಿಡಿದಿತ್ತು. ಜನರು ಉತ್ತಮ ನಾಯಕತ್ವ ಹಾಗೂ ಉತ್ತಮ ಆಡಳಿತಕ್ಕಾಗಿ ಸರ್ಕಾರವನ್ನು ಬದಲಿಸಿದ್ದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಅತ್ಯಂತ ಸರಳ ಘೋಷಣೆಯೊಂದಿಗೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿದ್ದರು. ದೊಡ್ಡ ನಾಯಕನಿಗೆ ದೊಡ್ಡ ದೃಷ್ಟಿಕೋನವೂ ಇರಬೇಕು. ಮೋದಿಯವರಿಗೆ ಅಂತಹ ದೃಷ್ಟಿಕೋನವಿತ್ತು. ಆದರೆ, ದೃಷ್ಟಿಕೋನ ಎಷ್ಟೇ ದೊಡ್ಡದಿದ್ದರೂ ಅದನ್ನು ಕಠಿಣ ಸುಧಾರಣಾ ಕ್ರಮಗಳ ಮೂಲಕ ಜಾರಿಗೊಳಿಸದಿದ್ದರೆ ಪ್ರಯೋಜನವಿಲ್ಲ. ಸಮಸ್ಯೆಯೇನಾಗಿದೆ ಅಂದರೆ, ಸರ್ಕಾರಕ್ಕೆ ಹತ್ತಿರವಿರುವ ಸಲಹೆಗಾರರು ಹಾಗೂ ಪ್ರಮುಖ ಸಚಿವರು ಕಠಿಣ ಸುಧಾರಣಾ ಕ್ರಮಗಳಿಗೆ ವಿರುದ್ಧವಿದ್ದಾರೆ. ಅವರಿಗೆ ಎರಡು ಸಮಸ್ಯೆ ಗಳಿವೆ. ಒಂದು ಅವರು ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ. ಮತ್ತು ತಮ್ಮ ಸುತ್ತಮುತ್ತಲ ಹೊಗಳುಭಟರಿಂದಾಗಿ ದಾರಿ ತಪ್ಪುತ್ತಿದ್ದಾರೆ.

ಆರ್ಥಿಕ ಸಂಕಷ್ಟವನ್ನು ಮೊದಲು ಒಪ್ಪಿಕೊಳ್ಳಿ
ಹಾಗಾದರೆ ಮುಂದೇನು? ನಾಯಕರು ಮೊದಲು ತಮ್ಮ ಸುತ್ತಮುತ್ತ ಇರುವ ಹೌದಪ್ಪಗಳನ್ನು ದೂರ ಓಡಿಸಬೇಕು. ಪೇಪರ್ ಟೈಗರ್‌ಗಳಾಗಿರುವ ಅಧಿಕಾರಿಗಳು ಹಾಗೂ ಅರೆಬೆಂದ ಆರ್ಥಿಕ ತಜ್ಞರನ್ನು ಹೊರಕಳಿಸಬೇಕು. ಇದು ಸುಲಭವಲ್ಲ. ಈ ಶಕ್ತಿಯಿಲ್ಲದ ರಾಜರು ತಮ್ಮ ಸಿಂಹಾಸನವನ್ನೇ ಕಳೆದುಕೊಂಡ ಉದಾಹರಣೆಗಳು ಇತಿಹಾಸದಲ್ಲಿವೆ. ಆರ್ಥಿಕತೆಯ ಸಂಕಷ್ಟಗಳನ್ನು ಸರಿಯಾದ ಮಾರ್ಗದಲ್ಲಿ ಎದುರಿಸಬೇಕು ಎಂದಾದರೆ ಅಂತಹ ಶಕ್ತಿಯಿರುವ ವೃತ್ತಿಪರರನ್ನು ಸರ್ಕಾರದ ಪ್ರಮುಖ ಜಾಗಗಳಿಗೆ ತರಬೇಕು. ಇದಕ್ಕಿರುವ ಮೊದಲ ಷರತ್ತು ಏನು ಗೊತ್ತೆ? ಏನೂ ಆಗಿಲ್ಲ, ಎಲ್ಲವೂ ಸರಿಯಿದೆ ಎಂಬ ಧೋರಣೆಯನ್ನು ಮೊದಲು ಕೈಬಿಟ್ಟು, ಆರ್ಥಿಕತೆ ಸಂಕಷ್ಟದಲ್ಲಿರುವುದನ್ನು ಒಪ್ಪಿಕೊಳ್ಳಬೇಕು. ತಪ್ಪಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಯಾರೂ ಹಿಂಜರಿಯುವ ಅಗತ್ಯವಿಲ್ಲ. ನಾಯಕರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡರೆ ಅವರ ಪ್ರಾಮಾಣಿಕತೆಯನ್ನು ಜನರು ಇಷ್ಟಪಡುತ್ತಾರೆ. ಆಗ ತ್ವರಿತವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. 

ದೇಶದಲ್ಲಿ ಆರ್ಥಿಕ ಹಿಂಜರಿತವಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಅನೇಕ ಕ್ಷೇತ್ರಗಳು ಸಂಕಷ್ಟದಲ್ಲಿವೆ. ವಿದೇಶಿ ಹೂಡಿಕೆದಾರರು ದೇಶದಲ್ಲಿ ಉದ್ದಿಮೆಗೆ ಸಂಬಂಧಿಸಿದ ನೀತಿ ನಿಯಮಗಳು ಸ್ಥಿರವಾಗಿಲ್ಲ ಎಂದು ದೂರುತ್ತಿದ್ದಾರೆ. ಉದ್ಯಮಸ್ನೇಹಿ ವಾತಾವರಣ ಕಲ್ಪಿಸುತ್ತೇವೆ ಎಂಬ ಸರ್ಕಾರದ ಭರವಸೆ ನಂಬಿ ಇಲ್ಲಿ ಹೂಡಿಕೆ ಮಾಡಲು ಮುಂದಾದ ವಿದೇಶಿ ಬಹುರಾಷ್ಟ್ರೀಯ ಕಂಪನಿಗಳು ಇಂದು ಗೋಳು ತೋಡಿಕೊಳ್ಳುತ್ತಿವೆ. ಇದು ಒಳ್ಳೆಯದಲ್ಲ. ನ್ಯಾಯಾಂಗ, ಆರ್‌ಬಿಐನಂತಹ ಸ್ವಾಯತ್ತ ಸಂಸ್ಥೆಗಳಿಗೆ ಸ್ವಾತಂತ್ರ್ಯ ಇಲ್ಲದಿದ್ದರೆ ಆರ್ಥಿಕತೆಯ ಮೇಲೆ ಪರಿಣಾಮ ಬಿದ್ದೇ ಬೀಳುತ್ತದೆ. 

ಬೆಜೋಸ್‌ ಹಿಂದಿಕ್ಕಿದ ಬಿಲ್‌ಗೇಟ್ಸ್‌ ವಿಶ್ವದ ನಂ.1 ಸಿರಿವಂತ!, ಅಂಬಾನಿಗೆ ಯಾವ ಸ್ಥಾನ?

ಅತಿ ಆತ್ಮವಿಶ್ವಾಸದ ಹುಂಬರು ಯಾವತ್ತೂ ದೇಶದ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಅನೇಕ ಅಧಿಕಾರಿಗಳು ಇಂತಹದ್ದೊಂದು ಅಪಾಯಕಾರಿ ಭ್ರಮೆಯಿಂದ ಬಳಲುತ್ತಿದ್ದಾರೆ.  'ಇಂದು ಎಲ್ಲ ಸಮಸ್ಯೆ ಗಳಿಗೂ ಹಲವಾರು ಪರಿಹಾರಗಳಿವೆ ಮತ್ತು ಎಲ್ಲ ಪರಿಹಾರದಿಂದಲೂ ಇನ್ನಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ' ಎಂದು ಅಮೆರಿಕಕ್ಕೆ ಅತ್ಯಂತ ಸಣ್ಣ ವಯಸ್ಸಿನಲ್ಲೇ ಅಧ್ಯಕ್ಷರಾದ ಜಾನ್ ಎಫ್ ಕೆನಡಿ ಹೇಳಿದ್ದರು. ಇದಕ್ಕಿಂತ ಜಾರ್ಜ್ ಬರ್ನಾರ್ಡ್ ಶಾ ಹೇಳಿದ ಇನ್ನೊಂದು ಮಾತು ನೆನಪಾಗುತ್ತಿದೆ. 'ಎಲ್ಲಾ ಅರ್ಥಶಾಸ್ತ್ರಜ್ಞರನ್ನು ಒಂದೇ ಕಡೆ ಸಾಲಾಗಿ ನಿಲ್ಲಿಸಿದರೂ ಅವರು ಒಮ್ಮತದ ನಿರ್ಧಾರಕ್ಕೆ ಬರುವುದಿಲ್ಲ.' ಇವರ ಮಾತುಗಳ ಅರ್ಥವೇನು? ಅರ್ಥಶಾಸ್ತ್ರಜ್ಞರ ಸೇನೆಯನ್ನೇ ಕರೆದುಕೊಂಡು ಬಂದರೂ ದೇಶದ ಎಲ್ಲ ಆರ್ಥಿಕ ಸಮಸ್ಯೆಗಳಿಗೆ ಸರಿಯಾದ ಉತ್ತರವನ್ನು ಅವರು ನೀಡಲು ಸಾಧ್ಯವಿಲ್ಲ. ದಕ್ಷ ನಾಯಕ ಅಥವಾ ಅವನ ಸಲಹೆಗಾರರು ಪರಿಹಾರ ನೀಡುವುದು ದೂರದ ಮಾತಾಯಿತು. ಅತಿಯಾದ ಆತ್ಮವಿಶ್ವಾಸ ಅಪಾಯಕಾರಿ. ಸರಿಯಾದ ಉತ್ತರ ಸಿಗಬೇಕು ಅಂದರೆ ನಾಯಕರು ತಮ್ಮ ಸುತ್ತ ಸರಿಯಾದ ಜನರನ್ನಿಟ್ಟುಕೊಳ್ಳಬೇಕು. ರಾಜಕೀಯರಹಿತ ದೃಷ್ಟಿಕೋನದಿಂದ ಸಾಕಷ್ಟು ವಿಶ್ಲೇಷಣೆ ಹಾಗೂ ಚರ್ಚೆಯ ಮೂಲಕ ವಾಸ್ತವಗಳನ್ನು ಅರ್ಥಮಾಡಿಕೊಳ್ಳಬೇಕು. ಆಗ ಸರಿಯಾದ ಪರಿಹಾರೋಪಾಯಗಳು ಕಾಣಿಸತೊಡಗುತ್ತವೆ. ಇಲ್ಲದಿದ್ದರೆ ಸೆನೆಕಾ ಹೇಳಿದಂತೆ 'ನಾವಿಕನಿಗೆ ಯಾವ ಬಂದರಿಗೆ ಹೋಗಬೇಕು ಎಂಬುದೇ ಗೊತ್ತಿಲ್ಲದಿದ್ದರೆ ಯಾವ ದಿಕ್ಕಿನಲ್ಲಿ ಬರುವ ಗಾಳಿಯೂ ಪೂರಕವಾಗಿರುವುದಿಲ್ಲ' ಎಂಬಂತಾಗುತ್ತದೆ.

ತಪ್ಪಿನಿಂದ ಪಾಠ ಕಲಿಯುವುದು ತಪ್ಪಲ್ಲ
ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವುದು ವೈಜ್ಞಾನಿಕ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಕಷ್ಟವೇ ಇರಬಹುದು. ಆದರೆ, ಸಮಾಜದ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದಕ್ಕೆ ವಿಜ್ಞಾನ ದಾರಿತೋರಲು ಸಾಧ್ಯವಿದೆ. ನೊಬೆಲ್ ವಿಜೇತ ವಿಜ್ಞಾನಿ ರಿಚರ್ಡ್ ಫೈನ್‌ಮನ್ ಹೇಳಿದಂತೆ, 'ವಿಜ್ಞಾನಿಗಳಿಗೆ ಅಜ್ಞಾನ, ಅನುಮಾನ ಹಾಗೂ ಅನಿಶ್ಚಯತೆಯಲ್ಲಿ ಬಹಳ ಅನುಭವವಿರುತ್ತದೆ. ಈ ಅನುಭವಕ್ಕೆ ತುಂಬಾ ಮಹತ್ವವಿದೆ. ಇದನ್ನು ಒಪ್ಪಿಕೊಂಡರೆ ಹೊಸ ದಾರಿ ತೆರೆದುಕೊಳ್ಳುತ್ತದೆ.'

ಇದೇನೂ ಹೊಸ ಐಡಿಯಾ ಅಲ್ಲ. ಪ್ರಜಾಪ್ರಭುತ್ವವನ್ನು ಕಟ್ಟಿದ ದೊಡ್ಡ ವ್ಯಕ್ತಿಗಳ ಸಿದ್ಧಾಂತ ಇದೇ ಆಗಿತ್ತು. ಅವರಿಗೂ ಕೂಡ ಸರ್ಕಾರ ನಡೆಸುವುದು ಹೇಗೆಂದು ಗೊತ್ತಿರಲಿಲ್ಲ. ಹೀಗಾಗಿ ಹೊಸ ಹೊಸ ಐಡಿಯಾಗಳನ್ನು ಬೆಳೆಸಲು ಅವಕಾಶ ನೀಡುವಂತಹ ವ್ಯವಸ್ಥೆಯನ್ನು ಅವರು ನಿರ್ಮಿಸಿದರು. ಒಂದು ಐಡಿಯಾ ಪ್ರಯೋಜನಕ್ಕೆ ಬರಲಿಲ್ಲ ಅಂದರೆ ಮತ್ತೊಂದು. ತಪ್ಪು ಮಾಡಿ, ಆ ತಪ್ಪಿನಿಂದ ಪಾಠ ಕಲಿತು, ಹೊಸ ಹೆಜ್ಜೆ ಇರಿಸುವ ವ್ಯವಸ್ಥೆಯಿದು. 

ಸಾಧ್ಯತೆಗಳ ಬಗ್ಗೆ ಇರುವ ಮುಕ್ತ ಮನಸ್ಸೇ ಹೊಸ ಅವಕಾಶಗಳನ್ನು ತೋರಿಸುತ್ತದೆ. ಪ್ರಗತಿ ಸಾಧಿಸಬೇಕು ಅಂದರೆ ಅನುಮಾನ ಹಾಗೂ ಚರ್ಚೆಗಳು ಬಹಳ ಮುಖ್ಯ. ಹಿಂದೆ ಯಾವತ್ತೂ ಪರಿಹರಿಸಿರದೆ ಇದ್ದ ಸಮಸ್ಯೆಯನ್ನು ಈಗ ಪರಿಹರಿಸಬೇಕು ಅಂದರೆ ಅಪರಿಚಿತ ಸಾಧ್ಯತೆಗಳಿಗೂ ಬಾಗಿಲು ತೆರೆದಿಡಬೇಕು. 

ಹಿಂದಿನವರು ತಪ್ಪು ಮಾಡಿದ್ದರು ಎಂಬುದನ್ನೇ ತಳಹದಿಯಾಗಿಸಿಕೊಂಡು ಜನಪ್ರಿಯತೆ ಗಳಿಸಿದ ಆಧುನಿಕ ಯುಗದ ದಕ್ಷ ನಾಯಕರು ತಮ್ಮ ಸಿದ್ಧಾಂತ ಹಾಗೂ ನಂಬಿಕೆಗೆ ತಕ್ಕಂತೆ ಹೊಸ ತಂತ್ರಜ್ಞಾನಗಳ ನೆರವಿನಿಂದ ಸಮಾಜವನ್ನು ಬದಲಿಸಿಬಿಡುತ್ತೇವೆ ಎಂಬ ನಂಬಿಕೆಯಲ್ಲಿರುತ್ತಾರೆ. ನೆಪೋಲಿಯನ್ ತನ್ನ ಸೇನಾಧಿಪತಿಗಳಿಗೆ ಹೇಳಿದ್ದ ಮಾತುಗಳನ್ನು ನಾವು ನೆನಪಿಡಬೇಕು. 'ಜಗತ್ತಿನಲ್ಲಿ ಇರುವುದು ಎರಡೇ ಶಕ್ತಿ. ಒಂದು ಖಡ್ಗ, ಇನ್ನೊಂದು ಮನಸ್ಸು ಮತ್ತು ಚೈತನ್ಯ. ದೀರ್ಘಾವಧಿಯಲ್ಲಿ ಯಾವತ್ತೂ ಖಡ್ಗದ ಶಕ್ತಿಯ ಮುಂದೆ ಮನಸ್ಸು, ಚೈತನ್ಯವೇ ಗೆಲ್ಲುತ್ತದೆ.'

‘ಮಹಾರಾಜ’ನ ಮಾರಾಟ! ಸತತ ನಷ್ಟದಲ್ಲಿರುವ ಏರ್‌ಇಂಡಿಯಾವನ್ನು ಖರೀದಿಸುವವರು ಯಾರು?

- ಕ್ಯಾಪ್ಟನ್‌ ಗೋಪಿನಾಥ್‌, ಖ್ಯಾತ ಉದ್ಯಮಿ