ಅವರು ಸ್ಪೇನ್‌ಗೆ ಹೋಗಬಹುದು, ಆದರೆ ಇಲ್ಲಿನ ಜನರ ನೋವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ವಿರುದ್ಧ ಅಧೀರ್‌ ರಂಜನ್ ಚೌಧರಿ ಟೀಕೆ ಮಾಡಿದ್ದಾರೆ. 

ಮುರ್ಷಿದಾಬಾದ್, ಪಶ್ಚಿಮ ಬಂಗಾಳ (ಸೆಪ್ಟೆಂಬರ್ 25, 2023): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲ್ಲಲೇಬೇಕು, ಮೋದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು I.N.D.I.A. ಒಕ್ಕೂಟ ರಚನೆಯಾಗಿದೆ. ಆದರೆ, ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಈ ಒಕ್ಕೂಟದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇರೋದು ಆಗಾಗ್ಗೆ ಬಹಿರಂಗವಾಗುತ್ತಿದೆ. ಇದೇ ರೀತಿ, ಈಗ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಟಿಎಂಸಿ ವಾಗ್ದಾಳಿ ನಡೆಸಿದೆ. ಪಶ್ಚಿಮ ಬಂಗಾಳದಲ್ಲಿ ಡೆಂಗ್ಯೂ ಪ್ರಕರಣಗಳು ಹರಡುತ್ತಿರುವ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಪೇನ್‌ಗೆ ತೆರಳಿದ್ದಕ್ಕೆ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ವ್ಯಂಗ್ಯವಾಡಿದ್ದಾರೆ. 

ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಪ್ರಮುಖ ಸಂಸದರೂ ಆಗಿದ್ದಾರೆ. ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಸ್ಪೇನ್‌ಗೆ ಹೋಗಬಹುದು. ಆದರೆ ಜನರ ನೋವನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ: ಸುಮ್ನೆ ಮಾತಾಡೋದು ಬೇಡ; ಇಲ್ಲಿಗೆ ಬಂದು ನನ್ನ ವಿರುದ್ಧ ಹೋರಾಡಿ: ರಾಹುಲ್‌ ಗಾಂಧಿಗೆ ಓವೈಸಿ ನೇರ ಸವಾಲು

"ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಡೆಂಗ್ಯೂ ವ್ಯಾಪಕವಾಗಿ ಹರಡುವ ಬಗ್ಗೆ ನಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇವೆ. ಆದರೆ, ಸಾಮಾನ್ಯ ಜನರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಅವರು ಸ್ಪೇನ್‌ಗೆ ಹೋಗಬಹುದು, ಆದರೆ ಇಲ್ಲಿನ ಜನರ ನೋವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಪಶ್ಚಿಮ ಬಂಗಾಳ ಸಿಎಂ ವಿರುದ್ಧ ಅಧೀರ್‌ ರಂಜನ್ ಚೌಧರಿ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥರು ಹೀಗೆ ಹೇಳಿದ್ದಾರೆ.

ಇನ್ನು, ಐರೋಪ್ಯ ರಾಷ್ಟ್ರದ ಪ್ರವಾಸದ ವೇಳೆ ಸ್ಪೇನ್‌ನ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಕ್ಕಾಗಿಯೂ ಅಧೀರ್‌ ರಂಜನ್‌ ಚೌಧರಿ ವಾಗ್ದಾಳಿ ನಡೆಸಿದ್ದಾರೆ. "ಮುಖ್ಯಮಂತ್ರಿ ಅವರ ಸಂಬಳವನ್ನು ತೆಗೆದುಕೊಳ್ಳುವುದಿಲ್ಲ ಎಂದು ನಾವು ಕೇಳಿದ್ದೇವೆ. ಅವರು ತಮ್ಮ ಪುಸ್ತಕಗಳ ಮಾರಾಟದಿಂದ ಮತ್ತು ಅವರ ಚಿತ್ರಕಲೆಗಳಿಂದ ತಮ್ಮನ್ನು ತಾವು ಸಂಭಾಳಿಸಿಕೊಳ್ಳುತ್ತಾರೆ. ಆದರೆ, ಮ್ಯಾಡ್ರಿಡ್‌ನ ಹೋಟೆಲ್‌ನಲ್ಲಿ ದಿನಕ್ಕೆ ₹ 3 ಲಕ್ಷ ವೆಚ್ಚವಾಗಲು ನಿಮಗೆ ಹೇಗೆ ಸಾಧ್ಯವಾಯಿತು?" ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ.

ಒನ್ ಇಂಡಿಯಾ ಒನ್ ಎಲೆಕ್ಷನ್‌ಗೆ ಮುಂದಾಯ್ತಾ ಕೇಂದ್ರ ಸರ್ಕಾರ? ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ!

ಈ ಭೇಟಿಯನ್ನು 'ಐಷಾರಾಮಿ ಪ್ರವಾಸ' ಎಂದು ಬಣ್ಣಿಸಿದ ಅಧೀರ್ ರಂಜನ್, "ಈ ಪ್ರವಾಸಕ್ಕೆ ನೀವು ಎಷ್ಟು ಖರ್ಚು ಮಾಡಿದ್ದೀರಿ? ನೀವು ಯಾವ ಕೈಗಾರಿಕೋದ್ಯಮಿಯನ್ನು ಇಲ್ಲಿಗೆ ಕರೆತಂದಿದ್ದೀರಿ? ಇಲ್ಲಿನ ಜನರನ್ನು ಮರುಳು ಮಾಡಬೇಡಿ" ಎಂದೂ ಕೇಳಿದ್ದಾರೆ.

"ಬಿಸ್ವಾ ಬಾಂಗ್ಲಾ ಕೈಗಾರಿಕಾ ಸಭೆಯಲ್ಲಿ ನೀವು ಖರ್ಚು ಮಾಡಿದ ಶೇಕಡಾ 10 ರಷ್ಟು ವಾಪಸ್‌ ಬಂದಿದ್ದರೆ, ಬಂಗಾಳದಲ್ಲಿ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತಿತ್ತು. ಯಾವ ಸ್ಪ್ಯಾನಿಷ್ ಕಂಪನಿಗಳು ಬಂಗಾಳದಲ್ಲಿ ಹೂಡಿಕೆ ಮಾಡಲು ಬಯಸುತ್ತವೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ" ಎಂದೂ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಪ್ರಶ್ನೆ ಮಾಡಿದ್ದಾರೆ. 

ಇದನ್ನೂ ಓದಿ: 6 ತಿಂಗಳಲ್ಲಿ ಮಮತಾ ಸರ್ಕಾರ ಪತನ: ಬಿಜೆಪಿಗರ ‘ಭವಿಷ್ಯ’; ಕನಸು ಎಂದಿಗೂ ಈಡೇರಲ್ಲ ಎಂದ ಟಿಎಂಸಿ