ಸುಮ್ನೆ ಮಾತಾಡೋದು ಬೇಡ; ಇಲ್ಲಿಗೆ ಬಂದು ನನ್ನ ವಿರುದ್ಧ ಹೋರಾಡಿ: ರಾಹುಲ್ ಗಾಂಧಿಗೆ ಓವೈಸಿ ನೇರ ಸವಾಲು
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್‌ನಿಂದ ಸ್ಪರ್ಧಿಸುವಂತೆ ಅಸಾದುದ್ದೀನ್ ಓವೈಸಿ ರಾಹುಲ್ ಗಾಂಧಿಗೆ ನೇರ ಸವಾಲು ಹಾಕಿದ್ದಾರೆ.

ಹೈದರಾಬಾದ್ (ಸೆಪ್ಟೆಂಬರ್ 25, 2023): ತನ್ನನ್ನು I.N.D.I.A. ಒಕ್ಕೂಟಕ್ಕೆ ಆಹ್ವಾನ ನೀಡಿದ ಬಗ್ಗೆ ಇತ್ತೀಚೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾತನಾಡಿದ್ದರು. ಈಗ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್‌ನಿಂದ ಸ್ಪರ್ಧಿಸುವಂತೆ ಬಹಿರಂಗ ಸವಾಲು ಹಾಕಿದ್ದಾರೆ.
ತಮ್ಮ ಸಂಸದೀಯ ಕ್ಷೇತ್ರವಾದ ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭಾನುವಾರ ಈ ಸವಾಲು ಹಾಕಿದ್ದಾರೆ. ಅಲ್ಲದೆ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯನ್ನು ಕಾಂಗ್ರೆಸ್ ಆಡಳಿತದಲ್ಲೇ ಕೆಡವಲಾಯ್ತು ಎಂದು ಕೈ ಪಕ್ಷದ ವಿರುದ್ಧ ಟೀಕೆ ಮಾಡಿದ್ದಾರೆ.
ಇದನ್ನು ಓದಿ: ತರಕಾರಿ ಬೆಲೆ ಏರಿಕೆಗೆ ''ಮಿಯಾ'' ಮುಸ್ಲಿಂ ವ್ಯಾಪಾರಿಗಳೇ ಕಾರಣ: ಅಸ್ಸಾಂ ಸಿಎಂ
“ನಾನು ನಿಮ್ಮ ನಾಯಕನಿಗೆ (ರಾಹುಲ್ ಗಾಂಧಿ) ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸಲು ಸವಾಲು ಹಾಕುತ್ತಿದ್ದೇನೆ ಮತ್ತು ವಯನಾಡ್‌ನಿಂದ ಅಲ್ಲ. ನೀವು ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತಿರುತ್ತೀರಿ, ಮೈದಾನಕ್ಕೆ ಬಂದು ನನ್ನ ವಿರುದ್ಧ ಹೋರಾಡಿ. ಕಾಂಗ್ರೆಸ್‌ನ ಜನರು ಬಹಳಷ್ಟು ಹೇಳುತ್ತಾರೆ, ಆದರೆ ನಾನು ಸಿದ್ಧ. .ಕಾಂಗ್ರೆಸ್ ಆಡಳಿತದಲ್ಲಿ ಬಾಬ್ರಿ ಮಸೀದಿ ಮತ್ತು ಸೆಕ್ರೆಟರಿಯೇಟ್ ಮಸೀದಿಯನ್ನು ಕೆಡವಲಾಯಿತು.." ಎಂದು ಅಸಾದುದ್ದೀನ್ ಓವೈಸಿ ಹೇಳಿದರು.
ತೆಲಂಗಾಣದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಚುಕ್ಕಾಣಿ ಹಿಡಿಯಲು ಎರಡೂ ಪಕ್ಷಗಳು ಹವಣಿಸುತ್ತಿರುವುದರಿಂದ ಕಾಂಗ್ರೆಸ್ ಮತ್ತು ಎಐಎಂಐಎಂ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಈ ತಿಂಗಳ ಆರಂಭದಲ್ಲಿ ತೆಲಂಗಾಣದ ತುಕ್ಕುಗುಡದಲ್ಲಿ ನಡೆದ ವಿಜಯಭೇರಿ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ತೆಲಂಗಾಣದಲ್ಲಿ ಭಾರತೀಯ ಜನತಾ ಪಕ್ಷ, ಭಾರತ್ ರಾಷ್ಟ್ರ ಸಮಿತಿ ಮತ್ತು ಎಐಎಂಐಎಂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ ಮತ್ತು ತಮ್ಮ ಪಕ್ಷವು ಈ ತ್ರಿಕೂಟದ ವಿರುದ್ಧ ಹೋರಾಡುತ್ತಿದೆ ಎಂದಿದ್ದರು.
ಇದನ್ನೂ ಓದಿ: "ಜೈ ಶ್ರೀ ರಾಮ್" ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ವ್ಯಕ್ತಿ ಥಳಿಸಿ ಮರಕ್ಕೆ ಕಟ್ಟಿ ಹಾಕಿದ ಪಾಪಿಗಳು: ಓವೈಸಿ ಆಕ್ರೋಶ
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಬಿಆರ್‌ಎಸ್ ವಿರುದ್ಧ ಹೋರಾಡುತ್ತಿಲ್ಲ, ಆದರೆ ಬಿಆರ್‌ಎಸ್, ಬಿಜೆಪಿ ಮತ್ತು ಎಐಎಂಐಎಂ ಜೊತೆಗೂಡಿ ಹೋರಾಡುತ್ತಿದೆ. ಅವರು ತಮ್ಮನ್ನು ಬೇರೆ ಬೇರೆ ಪಕ್ಷಗಳೆಂದು ಕರೆದುಕೊಳ್ಳುತ್ತಾರೆ. ಆದರೆ ಅವರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಹಾಗೂ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅಥವಾ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಯಾವುದೇ ಸಿಬಿಐ-ಇಡಿ ಪ್ರಕರಣಗಳಿಲ್ಲ. ಏಕೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ "ಸ್ವಂತ ಜನರು" ಎಂದು ಪರಿಗಣಿಸಿದ್ದಾರೆ ಎಂದು ವಯನಾಡ್ ಸಂಸದ ಹೇಳಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಕಾಂಗ್ರೆಸ್ ತನ್ನ "ಆರು ಭರವಸೆಗಳನ್ನು" ಘೋಷಿಸಿದ್ದು, ಅಧಿಕಾರಕ್ಕೆ ಬಂದರೆ ಅದನ್ನು ಈಡೇರಿಸಲಾಗುವುದು ಎಂದು ಪಕ್ಷ ಹೇಳುತ್ತದೆ.
ಇದನ್ನೂ ಓದಿ: ಇನ್ನೂ 300 ಮದ್ರಸಾ ಬಂದ್ ಆಗುತ್ತೆ: ಅಸಾದುದ್ದೀನ್ ಓವೈಸಿಗೆ ಅಸ್ಸಾಂ ಸಿಎಂ ಚಾಲೆಂಜ್