ಈ ಸರ್ಕಾರ ಇನ್ನು 5 ರಿಂದ 6 ತಿಂಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿರುವುದಿಲ್ಲ ಎಂದು ನಾನು ಗ್ಯಾರಂಟಿ ನೀಡಬಲ್ಲೆ ಎಂದು ಕೇಂದ್ರ ಸಚಿವ ಶಾಂತನು ಠಾಕೂರ್‌ ಹೇಳಿದ್ದಾರೆ.

ಕೋಲ್ಕತಾ (ಜುಲೈ 17, 2023): ಇನ್ನು ಐದಾರು ತಿಂಗಳಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ರಾಜ್ಯದ ಇಬ್ಬರು ಪ್ರಮುಖ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಕೇಂದ್ರ ಸಚಿವ ಶಾಂತನು ಠಾಕೂರ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್‌ ಈ ಭವಿಷ್ಯ ನುಡಿದಿರುವ ಬಿಜೆಪಿ ನಾಯಕರು.

‘ಈ ಸರ್ಕಾರ ಇನ್ನು 5 ರಿಂದ 6 ತಿಂಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿರುವುದಿಲ್ಲ ಎಂದು ನಾನು ಗ್ಯಾರಂಟಿ ನೀಡಬಲ್ಲೆ’ ಎಂದು ಠಾಕೂರ್‌ ಹೇಳಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಸುಕಾಂತ ಮಜುಂದಾರ್‌ ‘5 ರಿಂದ 6 ತಿಂಗಳೊಳಗೆ ಯಾವುದೇ ಸಮಯದಲ್ಲಾದರೂ ರಾಜ್ಯ ಸರ್ಕಾರ ಬೀಳಬಹುದು. ಯಾವುದೇ ಕ್ಷಣದಲ್ಲಾದರೂ ಶಾಸಕರ ಒಂದು ಭಾಗ ಬೆಂಬಲ ಹಿಂಪಡೆಯುವ ಸಾಧ್ಯತೆ ಇದೆ. ರಾಜಕೀಯದಲ್ಲಿ ಯಾವುದೇ ಸಾಧ್ಯತೆಗಳು ಯಾವಾಗ ಬೇಕಾದರೂ ವಿಕಸನಗೊಳ್ಳಬಹುದು’ ಎಂದಿದ್ದಾರೆ.

ಇದನ್ನು ಓದಿ: ಬಿಜೆಪಿ ಪರ ಬಿಎಸ್‌ಎಫ್‌ ಕೆಲಸ; ಮತ ಹಾಕದಂತೆ ಗಡಿ ಭಾಗದ ಜನರಿಗೆ ಬೆದರಿಕೆ: ಮಮತಾ ಬ್ಯಾನರ್ಜಿ ಆರೋಪ

ಬಿಜೆಪಿಗರ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯ ಟಿಎಂಸಿ ವಕ್ತಾರ ಕುನಾಲ್‌ ಘೋಷ್‌ ‘ಈ ಹಿಂದೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಇಂತದೇ ಹೇಳಿಕೆ ನೀಡಿದ್ದರು. ಈಗ ಅವರು ಸಮಯಾಧಾರಿತ ಭವಿಷ್ಯ ಹೇಳುತ್ತಿದ್ದಾರೆ. ಅವರು ಇಂತ ಭವಿಷ್ಯವಾಣಿಗಳೊಂದಿಗೇ ಮುಂದುವರೆಯಲಿ. ಆದರೆ ಅವರ ಕನಸುಗಳು ಎಂದಿಗೂ ಈಡೇರುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ನೆಲೆ ಇಲ್ಲ’ ಎಂದಿದ್ದಾರೆ.

ಇದನ್ನು ಓದಿ: ದೀದಿ ರಾಜ್ಯದಲ್ಲಿ ಮುಕ್ತವಾಯ್ತು ಕಾಂಗ್ರೆಸ್‌: 'ಕೈ' ಏಕೈಕ ಶಾಸಕ ಟಿಎಂಸಿಗೆ ಸೇರ್ಪಡೆ