ಮದರಸಾಗಳಲ್ಲಿ 'ವಂದೇ ಮಾತರಂ' ಕಡ್ಡಾಯಗೊಳಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕಲ್ಕತ್ತಾ ಹೈಕೋರ್ಟ್ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೋಲ್ಕತ್ತಾ (ಆ.5): ರಾಷ್ಟ್ರಗೀತೆ ಮದರಸಾಗಳಲ್ಲಿ ಮೊಳಗಿದರೆ ಹಾಗೂ 'ವಂದೇ ಮಾತರಂ'ನ ಎಲ್ಲಾ ಆರೂ ಚರಣಗಳನ್ನು ಮದರಸಾಗಳಲ್ಲಿ ಹಾಡಿದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ಮದರಸಾ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂನ ಸಂಪೂರ್ಣ ಆರೂ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ವೇಳೆ ನ್ಯಾಯಪೀಠ ಈ ಹೇಳಿಕೆ ನೀಡಿದೆ. ಪ್ರಭಾರ ಮುಖ್ಯ ನ್ಯಾಯಮೂರ್ತಿ ತಪಬ್ರತ ಚಕ್ರವರ್ತಿ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರನ್ನೊಳಗೊಂಡ ಪೀಠವು, ಹಿರಿಯ ವಕೀಲ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರು ವಾದ ಮಂಡಿಸುತ್ತಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಪ್ರಮುಖ ಅಭಿಪ್ರಾಯ ಹೇಳಿದೆ.

ವಿಚಾರಣೆ ವೇಳೆ ಧಾರ್ಮಿಕ ಚೌಕಟ್ಟುಗಳ ಕುರಿತು ಎತ್ತಲಾದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಭಾರ ಮುಖ್ಯ ನ್ಯಾಯಮೂರ್ತಿಗಳು, "ಇಲ್ಲಿ ಆಕಾಶವೇನೂ ಬಿದ್ದು ಹೋಗುವುದಿಲ್ಲ. ನನ್ನ ಧರ್ಮಕ್ಕೆ ಸೇರದೇ ಇರುವಂತಹ ಯಾವುದೋ ಒಂದು ಸಾಲನ್ನು ಉಚ್ಚರಿಸಲು ನನಗೆ ಹೇಳಿದರೆ ಏನಾಗುತ್ತದೆ? ಹಾಗಂದ ಮಾತ್ರಕ್ಕೆ ನಾನು ನನ್ನ ಧರ್ಮಕ್ಕೆ ಸೇರದವನು ಎಂದಾಗುತ್ತದೆಯೆ ಎಂದು ಪ್ರಶ್ನೆ ಮಾಡಿದ್ದಾರೆ.

ಕ್ರಿಶ್ಚಿಯನ್ ಶಾಲೆಗಳ ಉದಾಹರಣೆ ನೀಡಿದ ಹೈಕೋರ್ಟ್

ಇತರ ಧಾರ್ಮಿಕ ಸಮುದಾಯಗಳು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಅನುಸರಿಸಲಾಗುವ ಪದ್ಧತಿಗಳನ್ನು ಹೋಲಿಸಿ ಮಾತನಾಡಿದ ಪೀಠವು, "ದೇಶದಲ್ಲಿ ಸಾವಿರಾರು ಕ್ರಿಶ್ಚಿಯನ್ ಶಾಲೆಗಳಿವೆ, ಅಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ 'ದೇವರಲ್ಲಿ ಪ್ರಾರ್ಥನೆ' (Lord's Prayer) ಮಾಡಲು ಸೂಚಿಸಲಾಗುತ್ತದೆ. ಹಾಗಿರುವಾಗ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು 'ನಾವು ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆಯನ್ನು ಏಕೆ ಹಾಡಬೇಕು?' ಎಂದು ಎಂದಾದರೂ ಪ್ರಶ್ನಿಸಿದ್ದಾರೆಯೇ?" ಎಂದು ಪೀಠವು ಮಾರ್ಮಿಕವಾಗಿ ಪ್ರಶ್ನೆ ಮಾಡಿದೆ. ರಾಜ್ಯ ಸರ್ಕಾರದ ಪರವಾಗಿ ಅಡಿಷನಲ್ ಸಾಲಿಸಿಟರ್ ಜನರಲ್ ಧೀರಜ್ ಕುಮಾರ್ ತ್ರಿವೇದಿ ಹಾಜರಾಗಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲರು ವಾದ ಮಂಡಿಸಿ, "ವಂದೇ ಮಾತರಂ ದೇಶದ ರಾಷ್ಟ್ರೀಯ ಗೀತೆಯಾಗಿ ಅಂಗೀಕರಿಸಲ್ಪಟ್ಟಿದೆ. ಆದರೆ ಮದರಸಾಗಳಲ್ಲಿ ಓದುವ ಮಕ್ಕಳ ಮೇಲೆ ಇದನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ. ರಾಷ್ಟ್ರಗೀತೆಗೆ (ಜನ ಗಣ ಮನ) ಹೋಲಿಸಿದರೆ ರಾಷ್ಟ್ರೀಯ ಗೀತೆಗೆ (ವಂದೇ ಮಾತರಂ) ವಿಭಿನ್ನ ಸ್ಥಾನಮಾನವಿದೆ," ಎಂದು ವಾದಿಸಿದರು.

ಶಿಕ್ಷಾರ್ಹ ಕ್ರಮ ಜರುಗಿಸಲಾಗಿದೆಯೇ?: ನ್ಯಾಯಪೀಠದ ಪ್ರಶ್ನೆ

ಈ ವಾದ ಆಲಿಸಿದ ಪ್ರಭಾರ ಮುಖ್ಯ ನ್ಯಾಯಮೂರ್ತಿಗಳು, ಮದರಸಾಗಳಲ್ಲಿ 'ವಂದೇ ಮಾತರಂ' ಹಾಡುವುದನ್ನು ಕಡ್ಡಾಯಗೊಳಿಸಿ ಹೊರಡಿಸಲಾದ ಸುತ್ತೋಲೆಯನ್ನು ಉಲ್ಲಂಘಿಸಿದವರ ವಿರುದ್ಧ ಏನಾದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು.

"ಸಾಮಾಜಿಕ ಕಾರ್ಯಕರ್ತರಾಗಿ ನೀವು ಇದನ್ನು ನಮ್ಮ ಗಮನಕ್ಕೆ ತಂದಿದ್ದೀರಿ. ಈ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಏನಾದರೂ ಕಠಿಣ ಅಥವಾ ಶಿಕ್ಷಾರ್ಹ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ?" ಎಂದು ಹೈಕೋರ್ಟ್ ಕೇಳಿತು. ಇದಕ್ಕೆ ಉತ್ತರಿಸಿದ ಅರ್ಜಿದಾರರ ವಕೀಲರು, "ಸರ್ಕಾರ ಇದುವರೆಗೆ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಧೈರ್ಯ ತೋರಿಲ್ಲ," ಎಂದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪೀಠವು, "ಯಾರ ಮೇಲಾದರೂ ಶಿಕ್ಷಾರ್ಹ ಕ್ರಮ ಜರುಗಿಸಿದಾಗ ಮಾತ್ರ ಅದು ಕಡ್ಡಾಯವಾಗಿತ್ತು ಎಂದು ನೀವು ವಾದಿಸಬಹುದು. ಈವರೆಗೆ ಇದರಿಂದ ಯಾರಾದರೂ ತೊಂದರೆ ಅನುಭವಿಸಿದ್ದಾರೆಯೇ?" ಎಂದು ಮರುಪ್ರಶ್ನಿಸಿತು.

ಮುಂದುವರಿದು ಮಾತನಾಡಿದ ಪೀಠ, "ಕ್ರಿಶ್ಚಿಯನ್ ಶಾಲೆಗಳು ದೇವರಲ್ಲಿ ಪ್ರಾರ್ಥಿಸುತ್ತವೆ. ಯಾವುದೇ ಸಂಸ್ಥೆಯನ್ನು ತೆಗೆದುಕೊಳ್ಳಿ, ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳು 'ಶಾಲೆ ಏಕೆ ತಮ್ಮಿಂದ ಕ್ರಿಶ್ಚಿಯನ್ ಹಾಡುಗಳನ್ನು ಹಾಡಿಸುತ್ತಿದೆ' ಎಂದು ಪ್ರಶ್ನಿಸಿದರೆ ಏನಾಗಬಹುದು. ಆದರೆ ಅಂತಹ ಪ್ರಾರ್ಥನೆಗಳಿಂದ ಆಕಾಶವೇನೂ ಕಳಚಿ ಬಿದ್ದು ಹೋಗುವುದಿಲ್ಲ," ಎಂದು ಪುನರುಚ್ಚರಿಸಿತು.

ಸಂಸತ್ತಿನ ಚರ್ಚೆಯ ಉಲ್ಲೇಖ ಮಾಡಿದ ವಕೀಲ ಕಲ್ಯಾಣ್ ಬಂಡೋಪಾಧ್ಯಾಯ

ವಿಚಾರಣೆ ವೇಳೆ ಹಿರಿಯ ವಕೀಲ ಕಲ್ಯಾಣ್ ಬಂಡೋಪಾಧ್ಯಾಯ ಅವರು ವಿಷಯ ಪ್ರಸ್ತಾಪಿಸಿ, "ಈ ವಂದೇ ಮಾತರಂ ವಿಚಾರವು ಕಳೆದ ವರ್ಷ ಜುಲೈನಲ್ಲಿ (2025) ಲೋಕಸಭೆಯಲ್ಲಿ ಬರೋಬ್ಬರಿ 12 ಗಂಟೆಗಳ ಕಾಲ ಸುದೀರ್ಘ ಚರ್ಚೆಗೆ ಗ್ರಾಸವಾಗಿತ್ತು. ಅದೊಂದು ಅತ್ಯಂತ ಗಂಭೀರ ಹಾಗೂ ವಿವಾದಾತ್ಮಕ ವಿಷಯವಾಗಿತ್ತು. ಅಂತಿಮವಾಗಿ ಸಂಸತ್ತಿನಲ್ಲಿ ಯಾವುದೇ ನಿರ್ಣಯ ಅಂಗೀಕರಿಸಲು ಸಾಧ್ಯವಾಗಲಿಲ್ಲ. ನಾನು 1926 ಅಥವಾ 1936ರ ಬಗ್ಗೆ ಮಾತನಾಡುತ್ತಿಲ್ಲ, 2025ರ ಘಟನೆಯನ್ನು ಹೇಳುತ್ತಿದ್ದೇನೆ. ಸಂಸತ್ತಿನಲ್ಲೇ ನಿರ್ಣಯ ಪಾಸ್ ಮಾಡಲು ಸಾಧ್ಯವಾಗದಿರುವಾಗ, ಈಗ ಅದನ್ನು ಈ ರೀತಿಯಲ್ಲಿ ಬಲವಂತವಾಗಿ ಜಾರಿಗೆ ತರಲು ಯತ್ನಿಸಲಾಗುತ್ತಿದೆ," ಎಂದು ವಾದ ಮಂಡಿಸಿದರು.

ಸರ್ಕಾರದ ಪರ ಎಎಸ್‌ಜಿ ತ್ರಿವೇದಿ ಅವರು ವರದಿ ರೂಪದಲ್ಲಿ ಅಫಿಡವಿಟ್ ಸಲ್ಲಿಸಿ ಮಾಹಿತಿ ಪಡೆಯಲು ಕಾಲಾವಕಾಶ ಕೋರಿದರು. ಜೊತೆಗೆ, ಬರೀ ಆತಂಕದ ಆಧಾರದ ಮೇಲೆ ಅರ್ಜಿದಾರರು ಮಧ್ಯಂತರ ತಡೆಯಾಜ್ಞೆ (Injunction) ಕೋರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಅಂತಿಮವಾಗಿ, ರಾಜ್ಯ ಸರ್ಕಾರವು ತನ್ನ ವರದಿಯನ್ನು ಸಲ್ಲಿಸಿದ ನಂತರ ಈ ವಿಚಾರಣೆಯನ್ನು ಮುಂದೂಡಲು ಕಲ್ಕತ್ತಾ ಹೈಕೋರ್ಟ್ ನಿರ್ಧರಿಸಿದೆ.