ಜಾರ್ಖಂಡ್ನಲ್ಲಿ ಕೇಬಲ್ ಕಾರು ದುರಂತ, ಇಬ್ಬರು ಸಾವು, 46 ಮಂದಿಗಾಗಿ ಮುಂದುವರೆದ ರಕ್ಷಣಾ ಕಾರ್ಯ!
* ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಬಳಿ ದುರಂತ
* ತ್ರಿಕೂಟ ಬೆಟ್ಟಗಳ ರೋಪ್‌ವೇಯಲ್ಲಿ ಕೆಲವು ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ
* ಕನಿಷ್ಠ 10 ಪ್ರವಾಸಿಗರು ಗಾಯಗೊಂಡಿದ್ದು, ಇಬ್ಬರು ಮಹಿಳಾ ಪ್ರವಾಸಿಗರು ಸಾವು
ದಿಯೋಘರ್(ಏ.11): ಭಾನುವಾರ ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಬಳಿಯ ತ್ರಿಕೂಟ ಬೆಟ್ಟಗಳ ರೋಪ್‌ವೇಯಲ್ಲಿ ಕೆಲವು ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಕನಿಷ್ಠ 10 ಪ್ರವಾಸಿಗರು ಗಾಯಗೊಂಡಿದ್ದು, ಇಬ್ಬರು ಮಹಿಳಾ ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರೋಪ್‌ವೇಯಲ್ಲಿನ ಕನಿಷ್ಠ 12 ಕ್ಯಾಬಿನ್‌ಗಳಲ್ಲಿ 46 ಜನರು ಇನ್ನೂ ಸಿಲುಕಿಕೊಂಡಿದ್ದಾರೆ.
ಕೇಬಲ್ ಕಾರುಗಳಲ್ಲಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ರಕ್ಷಣಾ ಕಾರ್ಯಾಚರಣೆಗೆ ಎರಡು ಎಂಐ-17 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ITBP ಮತ್ತು NDRF ತಂಡಗಳು ಕೂಡ ಸ್ಥಳಕ್ಕೆ ಧಾವಿಸಿವೆ.
ಗಾಯಗೊಂಡ ಜನರ ಸಂಪೂರ್ಣ ಪಟ್ಟಿ
* ಗೋವಿಂದ ಭೋಕ್ತಾ, ಗಿರಿದಿಹ್
* ಭೂಪೇಂದ್ರ ಬರ್ಮನ್, ಕೊಕ್ರಜಾರ್ (ಅಸ್ಸಾಂ)
* ದೀಪಿಕಾ ಬರ್ಮನ್, ಕೊಕ್ರಜಾರ್ (ಅಸ್ಸಾಂ)
* ಅಪರಿಚಿತ ಒಂದು ವರ್ಷದ ಬಾಲಕಿ
* ರೂಪಾ ಕುಮಾರಿ (9), ಕರ್ಮತಾಂಡ್, ಜಮ್ತಾರಾ
* ಸೋನಿ ದೇವಿ, ತಿರನಗರ
* ರಮಣ್ ಕುಮಾರ್ ಶ್ರೀವಾಸ್ತವ, ದರ್ಭಾಂಗ
* ಸುಧಾ ರಾಣಿ, W/o ರಮಣ್ ಕುಮಾರ್ ಶ್ರೀವಾಸ್ತವ, ದರ್ಭಾಂಗ
* ಖುಸ್ಬು ರಾಣಿ, D/o ರಮಣ್ ಕುಮಾರ್ ಶ್ರೀವಾಸ್ತವ, ದರ್ಭಾಂಗ
ವರದಿಗಳ ಪ್ರಕಾರ, ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಎಂಟು ಮಂದಿ ದಿಯೋಘರ್ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಾರ್ಖಂಡ್‌ನ ದಿಯೋಘರ್ ಡಿಸಿ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಕಾರಣ ಇನ್ನೂ ತಿಳಿದು ಬಂದಿಲ್ಲ
ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿದ್ದು, ಕೇಬಲ್ ಕಾರುಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ನಂತರ ಕೇಬಲ್ ಕಾರಿನಿಂದ ಜಿಗಿಯಲು ಯತ್ನಿಸಿದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇಬಲ್ ಕಾರ್‌ಗಳಲ್ಲಿ ಸಿಕ್ಕಿಬಿದ್ದಿದ್ದಾರೆ
ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ದಿಯೋಘರ್ ಜಿಲ್ಲಾಧಿಕಾರಿ ಮಂಜುನಾಥ ಭಜಂತ್ರಿ ತಿಳಿಸಿದ್ದಾರೆ. ಸ್ಥಳೀಯ ಜನರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್‌ಗೆ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ವದಂತಿಗಳನ್ನು ಹರಡದಂತೆ ಜನರಿಗೆ ಮನವಿ ಮಾಡಿದ ಜಿಲ್ಲಾಧಿಕಾರಿ, “ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಇನ್ನೂ ಕೆಲವರು ರೋಪ್ ವೇಯಲ್ಲಿ ಕೇಬಲ್ ಕಾರ್ ಗಳಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸಲಾಗುತ್ತಿದೆ. ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದಿದ್ದಾರೆ.