ರಸ್ತೆ, ರೈಲು, ವಿಮಾನಯಾನ ಸೇರಿದಂತೆ ಎಲ್ಲ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯಗಳನ್ನು ಒಂದೇ ಸೂರಿನಡಿ ತರಲು ಕೇಂದ್ರ ಸರ್ಕಾರ ಐಟಿಎಲ್‌ಎ ಸ್ಥಾಪನೆಗೆ ಅನುಮೋದನೆ.. ಈ ಪ್ರಾಧಿಕಾರ 500 ಕೋಟಿ ರೂ. ಮೇಲ್ಪಟ್ಟ ಯೋಜನೆಗಳ ಮೇಲ್ವಿಚಾರಣೆ ಮತ್ತು ಏಕೀಕೃತ ಸಾರಿಗೆ ದತ್ತಾಂಶ ಭಂಡಾರ ನಿರ್ಮಾಣದ ಕಾರ್ಯ ಮಾಡಲಿದೆ.
ನವದೆಹಲಿ(ಅ.7): ರಸ್ತೆ, ರೈಲು, ಬಂದರು, ವಿಮಾನಯಾನ, ಜಲಮಾರ್ಗ, ನಗರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ (ಸರಕು ಸಾಗಣೆ) ವಲಯಗಳ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲು ‘ಸಮಗ್ರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪ್ರಾಧಿಕಾರ’ (ಐಟಿಎಲ್‌ಎ) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.
ಎಲ್ಲ ಸಾರಿಗೆ ವ್ಯವಸ್ಥೆ ಒಂದೇ ಸೂರಿನಡಿ!
ಇದುವರೆಗೆ ರಸ್ತೆ, ರೈಲ್ವೆ, ಬಂದರು, ವಿಮಾನಯಾನ ಮತ್ತು ಜಲಮಾರ್ಗಗಳು ಬೇರೆ ಬೇರೆ ಸಚಿವಾಲಯಗಳ ಅಡಿಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈಗ ಈ ಎಲ್ಲ ಸಾರಿಗೆ ಮೂಲಸೌಕರ್ಯಗಳನ್ನು ಒಂದೇ ಸೂರಿನಡಿ ತಂದು, ಸಮಗ್ರವಾಗಿ ಅಭಿವೃದ್ಧಿಪಡಿಸಲು ಐಟಿಎಲ್‌ಎ ಸರ್ವೋಚ್ಚ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.
ಈ ಪ್ರಾಧಿಕಾರವು 500 ಕೋಟಿ ರು.ಗಿಂತ ಹೆಚ್ಚಿನ ಮೌಲ್ಯದ ಸಾರಿಗೆ ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.
ಸಾರಿಗೆ ಮತ್ತು ಸರಕುಸಾಗಣೆ ಕ್ಷೇತ್ರಗಳಲ್ಲಿ ಸಂಶೋಧನೆ, ಯೋಜನೆ, ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಪ್ರಭಾವದ ಅಂದಾಜು ಪ್ರಕ್ರಿಯೆಗಳನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಅಡಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ.
ಏಕೀಕೃತ ಸಾರಿಗೆ ದತ್ತಾಂಶ ಭಂಡಾರ
ಜಿಎಸ್‌ಟಿನ್ ಇ-ವೇ ಬಿಲ್, ಫಾಸ್ಟ್ಯಾಗ್, ವಾಹನ್, ಜಿಪಿಎಸ್-ಆಧರಿತ ವ್ಯವಸ್ಥೆಗಳು, ನಗರ ಸಂಚಾರ ನಿರ್ವಹಣಾ ವ್ಯವಸ್ಥೆಗಳು ಮತ್ತು ಇತರ ಸಂಬಂಧಿತ ಮೂಲಗಳಿಂದ ದತ್ತಾಂಶಗಳನ್ನು ಸಂಗ್ರಹಿಸಿ ಏಕೀಕೃತ ಸಾರಿಗೆ ದತ್ತಾಂಶ ಭಂಡಾರವನ್ನು ನಿರ್ಮಿಸುವುದು ಸೇರಿ, ಸಾರಿಗೆಗೆ ಸಂಬಂಧಿತ ಕೆಲಸಗಳನ್ನು ಮಾಡಲಿದೆ.


