Asianet Suvarna News Asianet Suvarna News

ಮಾಫಿಯಾಗೆ ಮಾತ್ರ ಬುಲ್ಡೋಜರ್, ಬಡವರಿಗೆ ಅಲ್ಲ ಎಂದ ಯೋಗಿ ಆದಿತ್ಯನಾಥ್!

ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಐಕಾನ್ ಆಗಿ ಮಾರ್ಪಟ್ಟಿದೆ. ಆದರೆ, ಇದನ್ನು ಮಾಫಿಯಾ ವಿರುದ್ಧ ಮಾತ್ರವೇ ಬಳಸಬೇಕು ಬಡವರ ಅಂಗಡಿಗಳನ್ನು, ಮನೆಗಳನ್ನು ಧ್ವಂಸ ಮಾಡಲು ಬಳಸಬಾರದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಡಕ್ ಸೂಚನೆ ನೀಡಿದ್ದಾರೆ.
 

bulldozers are not used to demolish shops and the hutments of the poor says Uttar Pradesh Chief Minister Yogi Adityanath san
Author
Bengaluru, First Published Apr 8, 2022, 6:10 PM IST | Last Updated Apr 8, 2022, 6:10 PM IST

ಲಕ್ನೋ (ಏ.8): ಅದೇನೇ ಆಗಿರಲಿ ಬಡವರ (Poors) ಅಂಗಡಿಗಳು (shops), ಗುಡಿಸಲು (hutments ), ಮನೆಗಳನ್ನು ಧ್ವಂಸ ಮಾಡಲು ಯಾವುದೇ ಕಾರಣಕ್ಕೂ ಬುಲ್ಡೋಜರ್ ಗಳನ್ನು (Bulldozer) ಬಳಸಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ಅಧಿಕಾರಿಗಳಿಗೆ ಶುಕ್ರವಾರ ಖಡಕ್ ಸೂಚನೆ ನೀಡಿದ್ದಾರೆ.

ಅಪರಾಧ ಮತ್ತು ಅಪರಾಧಿಗಳ ಬಗ್ಗೆ ತಮ್ಮ ಸರ್ಕಾರ ಶೂನ್ಯ ಸಹಿಷ್ಣುತೆಯ ಸಂಕಲ್ಪವನ್ನು ಪುನರುಚ್ಚರಿಸುವ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ್, ಬಡವರು, ಬಡತನದ ಅಂಚಿನಲ್ಲಿರುವವರು ಮತ್ತು ದೀನದಲಿತರ ಬಗ್ಗೆ ಅಧಿಕಾರಿಗಳು ಸಂವೇದನಾಶೀಲರಾಗಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.  ಇದು ತಮ್ಮ ಸರ್ಕಾರದ ಮೂಲ ಮಂತ್ರವಾಗಿದ್ದು, ಎರಡನೇ ಇನ್ನಿಂಗ್ಸ್‌ನಲ್ಲೂ ಇದೇ ರೀತಿ ಅನುಸರಿಸಲಾಗುವುದು ಎಂದು ಹೇಳಿದರು.

ಒಂದೆಡೆ ಬಡವರ ಕಲ್ಯಾಣ ಯೋಜನೆಗಳು ತಮ್ಮ ಸರ್ಕಾರ ಜಾರಿ ಮಾಡುತ್ತಿದ್ದು, ಇನ್ನೊಂದೆಡೆ ಅಪರಾಧಿಗಳಿಗೆ  ಹಾಗೂ ಅಪರಾಧಗಳನ್ನು ಕಡಿವಾಣ ಹಾಕಲು ಒಂದು ಕ್ಷಣವನ್ನು ವ್ಯಯ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಸುಮಾರು 80 ಕ್ರಿಮಿನಲ್‌ಗಳು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂಬ ಅಂಶದಿಂದ ಸರ್ಕಾರದ ಪರಿಣಾಮವನ್ನು ಕಾಣಬಹುದು ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.

ಬುಲ್ಡೋಜರ್‌ನ ಭಯವು ಮಾಫಿಯಾ ಮತ್ತು ಅಕ್ರಮ ಎಸಗುವವರ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ ಎಂದು ಸರ್ಕಾರ ಹೇಳಿದೆ. ಬುಲ್ಡೋಜರ್‌ಗಳಿಂದ ಅಕ್ರಮ ಆಸ್ತಿ ಧ್ವಂಸ ಮಾಡುವ ಕ್ರಮ ವೃತ್ತಿಪರ ಮಾಫಿಯಾ, ಕ್ರಿಮಿನಲ್‌ಗಳ ಮೇಲೆ ಮಾತ್ರ ನಡೆಯಬೇಕು ಮತ್ತು ಅದು ಏನೇ ಆಗಿರಲಿ, ಯಾವುದೇ ಬಡವರ ಮೇಲೆ ಬುಲ್ಡೋಜರ್ ಕ್ರಮಗಳನ್ನು ಬಳಕೆ ಮಾಡಬಾರದು ಎಂದು ಆದಿತ್ಯನಾಥ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಕ್ರಮ ಆಸ್ತಿ ಮಾಫಿಯಾದ ವಿರುದ್ಧ ಈ ಕ್ರಮವನ್ನು ಮುಲಾಜಿಲ್ಲದೆ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದೂ ತಿಳಿಸಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareilly) ಶಾಸಕ ಶಾಜಿಲ್ ಇಸ್ಲಾಂ ಅನ್ಸಾರಿ (MLA Shazil Islam) ಒಡೆತನದ ಪೆಟ್ರೋಲ್ ಪಂಪ್ ಅನ್ನು ಅಗತ್ಯ ಪರವಾನಿಗೆ ಇಲ್ಲದೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ವಿರುದ್ಧ ಅನ್ಸಾರಿ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು.

ಬುಲ್ಡೋಜರ್ ಬಳಸಿ ಸಮಾಜವಾದಿ ಪಕ್ಷದ ಶಾಸಕನ ಪೆಟ್ರೋಲ್ ಪಂಪ್ ಕೆಡವಿದ ಯೋಗಿ ಸರ್ಕಾರ!

ದೆಹಲಿ-ರಾಮ್‌ಪುರ ಹೆದ್ದಾರಿಯಲ್ಲಿರುವ (Dehli-Rampur Highway) ಪೆಟ್ರೋಲ್ ಪಂಪ್ (petrol pump) ಅನ್ನು ಸರ್ಕಾರದಿಂದ ಸರಿಯಾದ ಅನುಮತಿಯನ್ನು ಪಡೆಯದೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ. ಪರಿಣಾಮವಾಗಿ, ಅದನ್ನು ಕೆಡವಲಾಗಿದೆ. ಈ ವಾರದ ಆರಂಭದಲ್ಲಿ, ಶಾಜಿಲ್ ಇಸ್ಲಾಂ ಅವರು ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕುತ್ತಿರುವ ವೀಡಿಯೊ ಕ್ಲಿಪ್ ವೈರಲ್ ಆದ ಬಳಿಕ ಅವರ ಪೆಟ್ರೋಲ್ ಪಂಪ್ ಅನ್ನು ನೆಲಸಮ ಮಾಡಲಾಗಿದೆ ಎನ್ನುವುದು ವಿಶೇಷ.

ಅಕ್ರಮ ಪ್ರದೇಶವಾದ ಸ್ಮಶಾನದ ಮೇಲೆ ಮನೆ ಕಟ್ಟಿದ್ದೇನೆ, ಬುಲ್ಡೋಜರ್ ಬಳಸಿ ಕೆಡವಿ ಯೋಗಿ ಸರ್ಕಾರಕ್ಕೆ ಪತ್ರ ಬರೆದ ವ್ಯಕ್ತಿ!

ಈ ಕುರಿತಾಗಿ ಮಾತನಾಡಿರುವ ಬರೇಲಿ ಅಭಿವೃದ್ಧಿ ಪ್ರಾಧಿಕಾರದ ( bareilly development authority ) ಉಪಾಧ್ಯಕ್ಷ ಜೋಗೇಂದ್ರ ಸಿಂಗ್, "ಬರೇಲಿ-ದೆಹಲಿ ರಾಷ್ಟ್ರೀಯ ಹೆದ್ದಾರಿಯ ಪರ್ಸಖೇಡದಲ್ಲಿ ಪೆಟ್ರೋಲ್ ಪಂಪ್ ನಿರ್ಮಾಣವಾಗಿತ್ತು. ಅದನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ. ಎಸ್ ಪಿ ಶಾಸಕ ಶಾಜಿಲ್ ಇಸ್ಲಾಂ ಅವರ ಒಡೆತನದ ಪೆಟ್ರೋಲ್ ಪಂಪ್ ಇದಾಗಿದೆ. ಪಾಸಿಂಗ್ ಮ್ಯಾಪ್ ಇಲ್ಲದೆಯೇ ಪೆಟ್ರೋಲ್ ಪಂಪ್ ಅನ್ನು ಕಟ್ಟಲಾಗಿದೆ. ಈ ಕುರಿತಾಗಿ ಸಾಕಷ್ಟು ಬಾರಿ ನೋಟಿಸ್ ಅನ್ನು ಕೂಡ ಕಳುಹಿಸಲಾಗಿತ್ತು. ಆದರೆ, ಅವರಿಂದ ಯಾವುದೇ ಉತ್ತರವೂ ಬಂದಿರಲಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ಶಾಜಿಲ್, ಪೆಟ್ರೋಲ್ ಪಂಪ್ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರವನ್ನು ಪಡೆಯಲಾಗಿತ್ತು ಎಂದಿದ್ದಾರೆ.

Latest Videos
Follow Us:
Download App:
  • android
  • ios