ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾರತ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಅವರನ್ನು ದೆಹಲಿ ಹೈಕೋರ್ಟ್‌ ದೋಷಮುಕ್ತಗೊಳಿಸಿದೆ. ಈ ತೀರ್ಪಿನ ಬಗ್ಗೆಕುಸ್ತಿಪಟು ವಿನೇಶ್‌ ಫೋಗಟ್‌ ಅಸಮಾಧಾನ ವ್ಯಕ್ತಪಡಿಸಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ನವದೆಹಲಿ (ಆ.4): ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾರತ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಅವರನ್ನು ದೋಷಮುಕ್ತಗೊಳಿಸಿ ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಶ್ವಿನಿ ಪನ್ವಾರ್ ಅವರು, ಮಾಜಿ ಸಂಸದ ಬ್ರಿಜ್‌ಭೂಷಣ್‌ ಹಾಗೂ ಡಬ್ಲ್ಯುಎಫ್‌ಐ ಮಾಜಿ ಕಾರ್ಯದರ್ಶಿ ವಿನೋದ್‌ ತೋಮರ್‌ರನ್ನು ಖುಲಾಸೆಗೊಳಿಸಿದರು. ಇದರ ಬೆನ್ನಲ್ಲೇ ಬ್ರಿಜ್‌ ಭೂಷಣ್‌ ಪ್ರತಿಕ್ರಿಯಿಸಿದ್ದು, ‘ನನ್ನ ಮೇಲಿನ ಒಂದೇ ಒಂದು ಆರೋಪ ಸಾಬೀತಾದರೂ ಕಠಿಣ ಶಿಕ್ಷೆ ಎದುರಿಸಲು ಸಿದ್ಧನಿದ್ದೇನೆ ಎಂದು ಮೊದಲೇ ಹೇಳಿದ್ದೆ. ಈಗ ನ್ಯಾಯಾಲಯ ನನ್ನನ್ನು ಖುಲಾಸೆಗೊಳಿಸಿದೆ. ಇದು ಅತ್ಯಂತ ಸಂತಸದ ದಿನ’ ಎಂದಿದ್ದಾರೆ

ವ್ಯವಸ್ಥೆಯೇ ಅವರನ್ನು ರಕ್ಷಿಸುತ್ತಿದೆ: ವಿನೇಶ್‌

ಬ್ರಿಜ್‌ಭೂಷಣ್‌ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಾರಾ ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ದೆಹಲಿ ಹೈಕೋರ್ಟ್‌ ತೀರ್ಪು ಬೆನ್ನಲ್ಲೇ ಎಕ್ಸ್‌ನಲ್ಲಿ ಇದರ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ‘ಈ ನಿರ್ಧಾರದ ಬಗ್ಗೆ ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳು ತಮ್ಮ ವಕೀಲರಿಗೆ ಸೂಚಿಸಿದ್ದಾರೆ. ಶೀಘ್ರದಲ್ಲಿಯೇ ಮೇಲ್ಮನವಿ ಸಲ್ಲಿಸುತ್ತೇವೆ. ನಾವು ಭರವಸೆ ಕಳೆದುಕೊಂಡಿಲ್ಲ. ಕುಸ್ತಿಪಟುಗಳು ತಮ್ಮ ಹೋರಾಟ ಮುಂದುವರೆಸುತ್ತಾರೆ’ ಎಂದಿದ್ದಾರೆ. ಅಲ್ಲದೇ ಇಡೀ ವ್ಯವಸ್ಥೆಯೇ ಅವರನ್ನು ರಕ್ಷಿಸುತ್ತಿದೆ ಆರೋಪಿಸಿದ್ದಾರೆ.