ರೈಲ್ವೇ ಪ್ರಯಾಣಿಕರಿಗೆ ಅಚ್ಚರಿಯ ಸುದ್ದಿ: 'Flight-Style' ಮಾದರಿಯ ಊಟ ಪರಿಚಯಿಸಿದ ರೈಲ್ವೇ ಇಲಾಖೆ
ಭಾರತೀಯ ರೈಲ್ವೆ ತನ್ನ ದೂರದ ಪ್ರಯಾಣದ ರೈಲುಗಳಲ್ಲಿ ಊಟದ ಗುಣಮಟ್ಟ ಸುಧಾರಿಸಲು ಹೊಸ ಕಾಂಪ್ಯಾಕ್ಟ್ ಮೆನು ಪರಿಚಯಿಸುತ್ತಿದೆ. ವಿಮಾನದ ಮಾದರಿಯಲ್ಲಿ ಕ್ಲೌಡ್ ಕಿಚನ್ ಮೂಲಕ ಸಿದ್ಧಪಡಿಸಿದ ಈ ಆಹಾರವನ್ನು ಪ್ರಾಯೋಗಿಕವಾಗಿ ಮೂರು ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ನೀಡಲಾಗುತ್ತಿದೆ.

ಪ್ರಾಯೋಗಿಕ ಜಾರಿ
ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಒಂದನ್ನ ಕೇಂದ್ರ ಸರ್ಕಾರ ನೀಡಿದೆ. ಇನ್ನು ಮುಂದೆ ದೂರದ ರೈಲು ಪ್ರಯಾಣದಲ್ಲಿ ಪ್ರಯಾಣಿಕರಿಗೆ ನೀಡುವ ಊಟದ ಗುಣಮಟ್ಟ ಸುಧಾರಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದೆ. ಊಟದ ಮೆನುವಿನಲ್ಲಿ ಹೆಚ್ಚಿನ ಆಯ್ಕೆಗಳನ್ನು ನೀಡುವ ಬದಲು ಕಡಿಮೆ ಖಾದ್ಯಗಳಿರುವ ಕಾಂಪ್ಯಾಕ್ಟ್ ಮೆನು ಪರಿಚಯಿಸಿ ಉತ್ತಮ ಆಹಾರ ನೀಡಲು ಮುಂದಾಗಿದೆ. ಪ್ರಾಯೋಗಿಕವಾಗಿ ಮೂರು ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ.
ರೈಲ್ವೆ ಕ್ಯಾಟರಿಂಗ್ ಪದ್ದತಿಗೆ ಗುಡ್ಬೈ
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ವಿಮಾನಗಳಲ್ಲಿ ನೀಡುವ ಊಟದ ಮಾದರಿಯಲ್ಲೇ ಈ ಹೊಸ ಮೆನು ಇರಲಿದೆ. ಮುಂಬೈ–ಬೆಂಗಳೂರು, ಹೌರಾ–ಕಾಮಾಖ್ಯ ಮತ್ತು ನವದೆಹಲಿ–ವಾರಾಣಸಿ ಮಾರ್ಗಗಳಲ್ಲಿ ಈ ಪ್ರಯೋಗ ನಡೆಯುತ್ತಿದೆ.
ಈ ಹಿಂದೆ ಏನೆಲ್ಲ ಇರುತ್ತಿತ್ತು?
ಈ ಹಿಂದೆ ರೈಲ್ವೆ ಕ್ಯಾಟರಿಂಗ್ ವ್ಯವಸ್ಥೆಯಡಿ ಊಟ ತಯಾರಿಸುತ್ತಿತ್ತು. ಈಗ ಕ್ಲೌಡ್ ಕಿಚನ್ಗಳು ಹಾಗೂ ಹೋಟೆಲ್ ಸಂಸ್ಥೆಗಳ ಸಹಯೋಗದಲ್ಲಿ ಆಹಾರ ಸಿದ್ಧಪಡಿಸಲಾಗುತ್ತಿದೆ. ಮುಂಬೈ–ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಬೆಳಗಿನ ಉಪಾಹಾರಕ್ಕೆ ಇಡ್ಲಿ, ವಡೆ, ಚಟ್ನಿ, ಸಾಂಬಾರ್ ಅಥವಾ ಪೊಹಾ, ಉಪ್ಮಾ ನೀಡಲಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಚಪಾತಿ, ಅನ್ನ, ಬೇಳೆ ಹಾಗೂ ತರಕಾರಿ ಅಥವಾ ಚಿಕನ್ ಖಾದ್ಯ ಇರಲಿದೆ.
ಯಶಸ್ವಿಯಾದರೆ ವಿಸ್ತರಣೆ
ಹಿಂದಿನ ಮೆನುವಿನಲ್ಲಿ ಇರುತ್ತಿದ್ದ ಸೂಪ್, ಆಮ್ಲೆಟ್, ಸ್ಯಾಂಡ್ವಿಚ್, ಮಜ್ಜಿಗೆ, ಚಾಕೊಲೇಟ್, ಸಲಾಡ್, ಉಪ್ಪಿನಕಾಯಿ, ಸಿಹಿತಿಂಡಿ ಸೇರಿದಂತೆ ಹಲವು ಆಯ್ಕೆಗಳನ್ನ ಕೈಬಿಟ್ಟಿದೆ. ಊಟದ ಒಟ್ಟು ತೂಕವನ್ನು 700–750 ಗ್ರಾಂನಿಂದ 450–500 ಗ್ರಾಂಗೆ ಇಳಿಸಿದೆ. ಆದರೆ ಖಾದ್ಯದ ಪ್ರಮಾಣದಲ್ಲಿ ಬದಲಾವಣೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಆಹಾರದ ಗುಣಮಟ್ಟ ಸುಧಾರಿಸಲಿದ್ದು, ದೂರುಗಳ ಪ್ರಮಾಣ ಶೇ.10ರಷ್ಟು ಕಡಿಮೆಯಾಗಿದೆ ಎನ್ನಲಾಗಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ದೂರದ ಹಾಗೂ ಪ್ರೀಮಿಯಂ ರೈಲುಗಳಿಗೂ ಈ ಮೆನು ವಿಸ್ತರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.















